An unconventional News Portal.

ಉರಿ ದಾಳಿ ಸುತ್ತ: 36 ಗಂಟೆಗಳಲ್ಲಿ ಮಿಂಚಿನ ‘ಪಥ ಸಂಚಲನ!

ಉರಿ ದಾಳಿ ಸುತ್ತ: 36 ಗಂಟೆಗಳಲ್ಲಿ ಮಿಂಚಿನ ‘ಪಥ ಸಂಚಲನ!

ಉರಿ ಸೇನಾ ನೆಲೆಯ ಮೇಲೆ ದಾಳಿ ಹಿನ್ನಲೆಯಲ್ಲಿ ದೆಹಲಿ ಮಟ್ಟದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿದ್ದು, ದೇಶದ ಜನ ಕುತೂಹಲದಿಂದ ನೋಡುತ್ತಿದ್ದಾರೆ.

ಒಂದು ಹಂತದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದ ಮೇಲೆ ದಾಳಿ ನಡೆಯುವ ಮಾತುಗಳೂ ಚಾಲ್ತಿಯಲ್ಲಿರುವುದರಿಂದ ಭಾರತದ ಮುಂದಿನ ನಿರ್ಧಾರದತ್ತ ಇಡೀ ಜಗತ್ತಿನ ಚಿತ್ತ ನೆಟ್ಟಿದೆ. ಹಾಗೇನಾದರೂ ಆದಲ್ಲಿ ಎರಡೂ ರಾಷ್ಟ್ರಗಳ ನಡುವೆ ‘ಪರೋಕ್ಷ’ ಯುದ್ಧ ಆರಂಭವಾಗಲಿದ್ದು, ಜಾಗತಿಕ ಆತಂಕ ಸೃಷ್ಟಿಯಾಗಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ಭಾನುವಾರ ಬೆಳಿಗ್ಗೆ ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಸೋಮವಾರ ರಾಷ್ಟ್ರ ರಾಜಧಾನಿ ಸುತ್ತ ನಡೆದ ಬೆಳವಣಿಗೆಗಳಿಗೆ ಹೈಲೈಟ್ಸ್ ಇಲ್ಲಿದೆ.

ರಾಷ್ಟ್ರಪತಿ-ಪ್ರಧಾನಿ ಚರ್ಚೆ

ದಿನದ ಪ್ರಮುಖ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇನೆಯ ಮಹಾದಂಡನಾಯಕ ರಾಷ್ಟ್ರಪತಿಯವರನ್ನು ಭೇಟಿಯಾಗಿ ಘಟನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮೊದಲು ಪ್ರಧಾನಿಗಳು ಸಂಪುಟದ ಹಿರಿಯ ಸಚಿವರು ಮತ್ತು ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದರು.

High leven meeting inn delhi regading URI attack

ಪ್ರಧಾನಿ ನರೇಂದ್ರ ಮೋದಿಯ 7 RCR ನಲ್ಲಿರುವ ನಿವಾಸಕ್ಕೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಭೇಟಿ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಅರ್ಥ ಸಚಿವ ಅರುಣ್ ಜೇತ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭೂಸೇನೆ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಮತ್ತು ಗೃಹ ಹಾಗೂ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸಿದರು.

ಸಭೆಯಲ್ಲಿ, ಭಾರತ ಅಂತರ್ ರಾಷ್ಟ್ರೀಯ ವೇದಿಕೆಗಳಲ್ಲಿ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಹಣಿಯುವ ನಿರ್ಧಾರಕ್ಕೆ ಬಂದಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಪಾಕಿಸ್ತಾನದ ಕೈವಾಡಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನೂ ಭಾರತ ಈ ವೇದಿಕೆಗಳ ಮುಂದಿಡುವ ತೀರ್ಮಾನವನ್ನೂ ಈ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಇನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉರಿ ದಾಳಿಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಸ್ತಾಪಿಸಲಿದ್ದಾರೆ. ಸೆಪ್ಟೆಂಬರ್ 26ರಂದು ಸುಷ್ಮಾ ಸಾಮಾನ್ಯ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಪಾಕಿಸ್ತಾನದ ಕೈವಾಡವನ್ನು ತೆರೆದಿಡಲಿದ್ದಾರೆ ಎಂದು ಹೇಳಲಾಗಿದೆ.

ಘಟನೆ ಬೆನ್ನಿಗೇ ನವೆಂಬರ್ನನಲ್ಲಿ ‘ಸಾರ್ಕ್’ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭೇಟಿ ರದ್ದು ಪಡಿಸಿದ್ದಾರೆ ಎಂಬ ಮಾಹಿತಗಳೂ ಇವೆ.

ಇದು ನಮ್ಮ ಪಾಲಿಗೆ ಸೂಕ್ಷ್ಮ ವಿಚಾರ. ನಾವು ಇಲ್ಲಿ ಐಸಿಸ್ ಮೇಲೇಳೆದಂತೆ ರಕ್ಷಣೆ ನೀಡಬೇಕಾಗಿದೆ. ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸರಿಯಾದ ಸಮಯ ಬಂದಿದೆ. ಉರಿ ದಾಳಿಯ ನಂತರ ಪಾಕಿಸ್ತಾನದಲ್ಲಿರುವ ಶಾಂತಿ ಕದಡುವ ಶಕ್ತಿಗಳಿಗೆ ಯೋಗ್ಯ ಉತ್ತರ ನೀಡಬೇಕಾಗಿದೆ. – ಯಶವಂತ್ ಸಿನ್ಹಾ, ಮಾಜಿ ವಿದೇಶಾಂತ ಸಚಿವ

ಉಗ್ರರ ಮೇಲೆ ಪ್ರತಿದಾಳಿ

ಸರಿಯಾದ ಯೋಜನೆ, ಸಮನ್ವಯ, ಮತ್ತು ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಳ್ಳುವ ಯೋಜನೆ ರೂಪಿಸಿಕೊಂಡು ದಾಳಿಗೆ ಪ್ರತ್ಯುತ್ತರ ನೀಡುವುದಾಗಿ ಸರಕಾರದ ಉನ್ನತ ಮೂಲಗಳು ಹೇಳಿವೆ ಎಂದು ಪಿಟಿಐ ವರದಿ ಮಾಡಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್, ‘ದಾಳಿಕೋರರನ್ನು ಶಿಕ್ಷಿಸದೇ ಬಿಡುವುದಿಲ್ಲ,’ ಎಂದು ಗುಡುಗಿದ್ದಾರೆ. ಇತ್ತೀಚಿಗಿನ 3-4 ವರ್ಷಗಳಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಜಾಸ್ತಿಯಾಗಿದೆ ಎಂಬುದನ್ನೂ ಅವರು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದ್ದಾರೆ.

ಇನ್ನು ದಾಳಿಯನ್ನು ಅಂತರ್ ರಾಷ್ಟ್ರೀಯ ಸಮುದಾಯಗಳೂ ಖಂಡಿಸಿವೆ. ಭಾರತದ ಮಿತ್ರ ರಾಷ್ಟ್ರ ರಷ್ಯಾ ಪ್ರತಿಕ್ರಿಯೆ ನೀಡಿದ್ದು ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಭಾರತ ಪರವಾಗಿ ನಿಲ್ಲಲಿದ್ದೇವೆ ಎಂದು ತಿಳಿಸಿದೆ. ಇನ್ನು ನೆರೆಯ ರಾಷ್ಟ್ರ ಬಾಂಗ್ಲಾದೇಶ ಕೂಡಾ ಭಾರತದ ಬೆನ್ನಿಗೆ ನಿಂತಿದೆ. ಹೀಗೆ ಹಲವು ರಾಷ್ಟ್ರಗಳು ಉಗ್ರರ ವಿರುದ್ಧ ಕಿಡಿಕಾರಿವೆ.

ಭಾನುವಾರದ ದಾಳಿಗೆ ಸಂಬಂಧಿಸಿದಂತೆ ಸೇನೆ ಉಗ್ರರ ಕೂಬಿಂಗ್ ಆಪರೇಷನ್ ಸ್ಥಗಿತಗೊಳಿಸಿದೆ. ದಾಳಿ ನಡೆಸಿದ ಸ್ಥಳದ ಸುತ್ತ ಮುತ್ತ ಹುಡುಕಾಟ ನಡೆಸಿ, ನಂತರ ಈ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಪಾಕಿಸ್ತಾನದ ಮೇಲೆ ಆರೋಪ

ಇಡೀ ಘಟನೆಗೆ ಪಾಕಿಸ್ತಾನವೇ ಕಾರಣ ಎಂಬ ಅಭಿಪ್ರಾಯ ಜನರಲ್ಲಿ ಬೇರೂರುತ್ತಿದೆ. ಅದಕ್ಕೆ ತಕ್ಕಂತೆ ಹೇಳಿಕೆಗಳನ್ನೂ ರಾಜಕೀಯ ನಾಯಕರು ನೀಡುತ್ತಿದ್ದಾರೆ. “ಪಾಕಿಸ್ತಾನದ ಜತೆಗಿನ ನಮ್ಮ ಸಂಬಂಧ ಬದಲಾಗಲಿದೆ,” ಎನ್ನುತ್ತಾರೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್. ದಾಳಿಯಲ್ಲಿ ಪಾಕಿಸ್ತಾನದ ಕೈವಾಡವನ್ನು ನಿರೂಪಿಸುವ ಸಾಕ್ಷ್ಯಗಳು ಭಾರತದ ಬಳಿ ಇವೆ ಎಂದು ಅವರು ಹೇಳಿದ್ದಾರೆ.

ಉರಿ ಮೇಲೆ ನಡೆದ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದಕ್ಕೆ ದಾಖಲೆಗಳು ಲಭ್ಯವಾಗಿವೆ ಎಂದು ಸೇನೆ ಹೇಳಿದೆ. ಉಗ್ರರ ಬಳಿ ಸಿಕ್ಕಿದ ಜಿಪಿಎಸ್ ಮಾಹಿಗಳಲ್ಲಿ ಪಾಕಿಸ್ತಾನದಿಂದ ಬಂದಿರುವುದು ಗೊತ್ತಾಗುತ್ತಿದೆ ಎಂದು ಸೇನೆ ಹೇಳಿದೆ.

ಆದರೆ ಭಾರತದ ಎಲ್ಲಾ ಹೇಳಿಕೆಗಳಿಗೆ ಪಾಕಿಸ್ತಾನ ತಣ್ಣಗೆ ಪ್ರತಿಕ್ರಿಯೆ ನೀಡುತ್ತಿದ್ದು ಎಲ್ಲಾ ರೀತಿಯ ಪ್ರತ್ಯಕ್ಷ ಮತ್ತು ಪರೋಕ್ಷ ದಾಳಿಗಳನ್ನು ಹಿಮ್ಮೆಟ್ಟಿಸಲು ನಮ್ಮ ಸೇನೆ ಸಿದ್ಧವಾಗಿದೆ ಎಂದು ಜನರಲ್ ರಹೀಲ್ ಶರೀಫ್ ತಿಳಿಸಿದ್ದಾರೆ. ಭಾರತ ಸುಳ್ಳಿನಿಂದ ಅಂತರ್ ರಾಷ್ಟ್ರೀಯ ಅಭಿಪ್ರಾಯವನ್ನೇ ಬದಲಾಯಿಸಲು ಹೊರಟಿದೆ ಎಂದು ವಿದೇಶಾಂಗ ಇಲಾಖೆ ಸಲಹೆಗಾರ ಸರ್ತಾಜ್ ಅಜೀಜ್ ದೂರಿದ್ದಾರೆ.

ಘಟನೆ ಸಂಬಂಧ ದೇಶಾದ್ಯಂತ ಪ್ರತಿಭಟನೆಗಳು ಆರಂಭವಾಗಿವೆ. ಮಾಧ್ಯಮಗಳು ಪಾಕಿಸ್ತಾನದ ಮೇಲೆ ಯುದ್ಧ ಸಾರಬೇಕು ಎಂದು ಪದೇ ಪದೇ ಹೇಳುತ್ತಾ ‘ಅಭಿಪ್ರಾಯ ರೂಪಿಸು’ವಲ್ಲಿ ನಿರತರವಾಗಿವೆ.

ಸಾವಿನ ಸಂಖ್ಯೆ 18ಕ್ಕೆ ಏರಿಕೆ

ಉರಿ ದಾಳಿಯಲ್ಲಿ ಸಾವಿಗೀಡಾದ ಸೈನಿಕರ ಒಟ್ಟು ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಭಾನುವಾರದ ದಾಳಿಯಲ್ಲಿ ಗಾಯಗೊಂಡಿದ್ದ ಓರ್ವ ಯೋಧ ನವದೆಹಲಿಯ ಆರ್ ಆ್ಯಂಡ್ ಆರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇನ್ನು ಮೃತ ದೇಹಗಳನ್ನು ಆಯಾ ರಾಜ್ಯಗಳಿಗೆ ರವಾನಿಸಲಾಯಿತು. ಮೃತರಲ್ಲಿ ಮಹಾರಾಷ್ಟ್ರ, ಛತ್ತೀಸ್ಘಡ, ಬಿಹಾರ, ಉತ್ತರ ಪ್ರದೇಶದ ಸೈನಿಕರು ಸೇರಿದ್ದರು.

ಚಿತ್ರ ಕೃಪೆ: ಬಿಸಿನೆಸ್ ಸ್ಟಾಂಡರ್ಡ್

Leave a comment

FOOT PRINT

Top