An unconventional News Portal.

ಬಿಜ್ನೋರ್ ಗಲಭೆ: ಹೊಣೆಗಾರಿಕೆ ಮರೆತ ಮುದ್ರಣ ಮಾಧ್ಯಮಗಳಿಂದ ‘ಕೋಮು ಗಲಭೆ’ ಯತ್ನ!

ಬಿಜ್ನೋರ್ ಗಲಭೆ: ಹೊಣೆಗಾರಿಕೆ ಮರೆತ ಮುದ್ರಣ ಮಾಧ್ಯಮಗಳಿಂದ ‘ಕೋಮು ಗಲಭೆ’ ಯತ್ನ!

ಕಾವೇರಿ ತೀರ್ಪಿನ ಸಂದರ್ಭ ಕನ್ನಡದ ಟಿವಿ ಮಾಧ್ಯಮಗಳು ನಡೆದುಕೊಂಡ ರೀತಿ ನಮ್ಮ ಕಣ್ಣ ಮುಂದಿದೆ. ಇದರ ಬೆನ್ನಲ್ಲೇ ಮಾಧ್ಯಮ ಸಂಹಿತೆಗಳ ಬಗ್ಗೆ ಚರ್ಚೆಯೊಂದು ಶುರುವಾಗಿದೆ. ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಯಾವುದು ಉತ್ತಮ ಎಂಬ ಕುರಿತು ವಾದಗಳು ಮಂಡನೆಯಾಗಿವೆ. ಇಂತಹದೊಂದು ಸನ್ನಿವೇಶವನ್ನು ನೆನಪಿಸುವ ಘಟನೆಗಳು ಉತ್ತರ ಪ್ರದೇಶದ ಮಾಧ್ಯಮ ವಲಯದಲ್ಲೂ ನಡೆದಿದೆ. ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿರುವ ರಾಜ್ಯದಿಂದ ಬಂದಿರುವ ಈ ವರದಿ ಮಾಧ್ಯಮಗಳ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತಿದೆ.

ಉತ್ತರ ಪ್ರದೇಶದ ಬಿಜ್ನೋರಿನಲ್ಲಿ ಮುಸ್ಲಿಮರು ಮತ್ತು ಜಾಟ್ ಸಮುದಾಯದ ನಡುವೆ ಗಲಭೆ ಸೃಷ್ಟಿಯಾಗಿ ಮೂವರು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿತ್ತು. ಈ ಘಟನೆಗೆ ಕಾರಣ ಒಂದೇ ಆದರೂ, ಅದನ್ನು ಬೇರೆ ಬೇರೆ ಮಾಧ್ಯಮಗಳು ಅವುಗಳಿಗೆ ಬೇಕಾದಂತೆ ವರದಿ ಮಾಡಿದ್ದು ಈಗ ಬಹಿರಂಗವಾಗಿದೆ. ಅದರಲ್ಲೂ ರಾಷ್ಟ್ರೀಯ ಮಾಧ್ಯಮಗಳಾದ ‘ದೈನಿಕ್ ಜಾಗರಣ್’ ಮತ್ತು ‘ಹಿಂದೂಸ್ಥಾನ ಟೈಮ್ಸ್’ ಮಾಡಿದ ವರದಿ ಇದೀಗ ಚರ್ಚೆಗೆ ಗ್ರಾಸವಾಗಿದೆ.

ನಡೆದಿದ್ದೇನು?:

“ಮುಸ್ಲಿಮ್ ಹುಡುಗಿಯೊಬ್ಬಳ ಮೇಲೆ ಜಾಟ್ ಸಮುದಾಯದ ಹುಡುಗನೊಬ್ಬ ದೌರ್ಜನ್ಯ ಎಸಗಿದ. ಇದಾಗುತ್ತಿದ್ದಂತೆ ಸಂಘರ್ಷ ಆರಂಭವಾಗಿ ಜಾಟ್ ಸಮುದಾಯದವರು ಸಿಡಿಸಿದ ಗುಂಡಿಗೆ ಮೂವರು ಸಾವನ್ನಪ್ಪಿದರು. 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ,” ಎನ್ನುತ್ತಾರೆ ಬಿಜ್ನೋರ್ ಎಸ್ಪಿ ಉಮೇಶ್ ಕುಮಾರ್ ಶ್ರೀವಾಸ್ತವ. ಇದೇ ಕಥೆಯನ್ನು ಅಲ್ಲಿನ ಸ್ಥಳೀಯ ಪೊಲೀಸರು ಮತ್ತು ನಿವಾಸಿಗಳು ಹೇಳುತ್ತಾರೆ.

ಶುಕ್ರವಾರ ರಾತ್ರಿ ಇಲ್ಲಿನ ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, “ಪೆದ್ದಾ ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಹುಡುಗಿಯ ಮೇಲೆ ದೌರ್ಜನ್ಯ ನಡೆಸಲಾಯಿತು. ಇದು ದೌರ್ಜನ್ಯ ನಡೆಸಿದವರು ಮತ್ತು ಹುಡುಗಿಯ ಸಹೋದರರ ನಡುವೆ ಸಂಘರ್ಷಕ್ಕೆ ಕಾರಣವಾಯಿತು,” ಎಂದು ಹೇಳಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ ಇಷ್ಟೆಲ್ಲಾ ನಡೆದ ನಂತರ ಹುಡುಗಿಯ ಮನೆಯವರು ಪ್ರತಿಭಟನೆಗೆ ಇಳಿಯುತ್ತಾರೆ. ಈ ಸಂದರ್ಭ ಜಾಟ್ ಸಮುದಾಯದವರು ಹುಡುಗಿಯ ಮನೆ ಛಾವಣಿಯ ಮೇಲೆ ಪೊಸಿಷನ್ ತೆಗೆದುಕೊಂಡು ಫೈರಿಂಗ್ ಮಾಡಿದ್ದರಿಂದ ಮೂವರು ಸಾವನ್ನಪ್ಪಿದ್ದರು ಎನ್ನುತ್ತವೆ ಪೊಲೀಸ್ ಮೂಲಗಳು.

ತಿರುಚಿದ ವರದಿ: 

ಆದರೆ ವರದಿ ಬರುವ ಹೊತಿಗೆ ಎಲ್ಲವೂ ಬದಲಾಗಿತ್ತು. ಉತ್ತರ ಪ್ರದೇಶದ ನಂಬರ್ ವನ್ ಹಾಗೂ ದೇಶದ ಟಾಪ್ 2 ದಿನಪತ್ರಿಕೆ ‘ದೈನಿಕ್ ಜಾಗರಣ್’ ಮುಸ್ಲಿಂ ಯುವಕರಿಂದ ಜಾಟ್ ಹುಡುಗಿಗೆ ದೌರ್ಜನ್ಯ ಎಂಬುದಾಗಿ ಬರೆಯಿತು. ಆದರೆ ನೈಜ ಘಟನೆ ಅದಕ್ಕೆ ವಿರುದ್ಧವಾಗಿತ್ತು.

“ಬಿಜ್ನೂರಿನ ಕಚ್ಚಪುರ ಮತ್ತು ನಯ ಗ್ರಾಮದ ಹುಡುಗಿಯರು ‘ಪೆದ್ದ’ದಿಂದ ಬಸ್ಸು ಹತ್ತಿ ಶಾಲೆಗೆ ಹೊರಟಿದ್ದರು. ಅಲ್ಲಿನ ಜನರು ಹೇಳುವಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಯುವಕರು ಶಾಲೆಗೆ ಹೋಗುವ ಹುಡುಗಿಯರ ಮೇಲೆ ಕೆಲವು ದಿನಗಳಿಂದ ದೌರ್ಜನ್ಯ ಎಸಗುತ್ತಾ ಬಂದಿದ್ದಾರೆ. ಶುಕ್ರವಾರ ಬೆಳಿಗ್ಗೆ ಯುವಕರು ಚುಡಾಯಿಸುತ್ತಿದ್ದುದು ವಾಗ್ವಾದಕ್ಕೆ ಕಾರಣವಾಗಿದೆ. ಬೆನ್ನಿಗೇ ವಾಗ್ವಾದಗಳು ನಿಯಂತ್ರಣ ಕಳೆದುಕೊಂಡು ಕಲ್ಲೆಸೆತ ಮತ್ತು ಗುಂಡಿನ ದಾಳಿಗೆ ಕಾರಣವಾಯಿತು,” ಎಂದು ದೈನಿಕ್ ಜಾಗರಣ್ ಬರೆಯಿತು. ನಂತರ ವರದಿಯನ್ನು ಅಪ್ಡೇಟ್ ಮಾಡಿದ ಜಾಗರಣ್ ಸರಿಯಾದ ಸುದ್ದಿಯನ್ನು ಪ್ರಕಟಿಸಿತು.

ಒಂದೆಡೆ ಜಾಗರಣ್ ಕಥೆ ಹೀಗಾದರೆ ಇನ್ನೊಂದು ಪ್ರಮುಖ ಪತ್ರಿಕೆ ಹಿಂದೂಸ್ಥಾನ್ ಟೈಮ್ಸ್ ವರದಿಯೂ ಇದೇ ರೀತಿ ಹಾದಿ ತಪ್ಪಿಸುವಂತಿತ್ತು.

“ತಾವು ಬಿಜ್ನೋರಿಗೆ ಬಸ್ಸು ಹತ್ತುವಾಗ ‘ಪೆದ್ದ’ದ ಹುಡುಗರು ದೌರ್ಜನ್ಯ ನಡೆಸಿದರು. ಹೀಗಂಥ ನಾಯಗಾನ್’ಗೆ ಸೇರಿದ ಹುಡುಗಿಯರು ಅಲ್ಲಿನ ಗ್ರಾಮಸ್ಥರ ಬಳಿ ಹೇಳಿಕೊಂಡಿದ್ದರು ಎಂಬುದಾಗಿ ಪೊಲೀಸ್ ಮೂಲಗಳು ಹೇಳಿವೆ. ನಂತರ ಗ್ರಾಮದ ಗಂಡಸರು ಒಂದಷ್ಟು ಜನ ಹುಡುಗಿಯರೊಂದಿಗೆ ತೆರಳಿ ಹುಡುಗಿಯೊಬ್ಬಳಿಗೆ ದೌರ್ಜನ್ಯವೆಸಗುತ್ತಿದ್ದ ತಾಲಿಬ್ ಎನ್ನುವ ಹುಡುಗನಿಗೆ ಹಲ್ಲೆ ನಡೆಸಿದರು ಎಂದು ವರದಿಯಾಗಿದೆ. ಆದರೆ ತಾಲಿಬ್ ತನ್ನ ಗ್ರಾಮದಿಂದ ಮತ್ತಷ್ಟು ಗ್ರಾಮಸ್ಥರೊಂದಿಗೆ ಬಂದು ನಾಯಗಾನ್ ಜನರ ಮೇಲೆ ಪ್ರತಿ ದಾಳಿ ನಡೆಸಿದ್ದಾನೆ. ಗಾಯಗೊಂಡ ಹುಡುಗರು ಆಗ ತಮ್ಮ ಗ್ರಾಮಕ್ಕೆ ಓಡಿ ಹೋಗಿದ್ದಾರೆ. ಇದಾದ ಬೆನ್ನಿಗೇ ನಾಯಗಾನ್ ಮತ್ತು ಹತ್ತಿರದ ಗ್ರಾಮದ ನಾಗರಿಕರು ಗನ್ ಮತ್ತು ಕೋಲುಗಳೊಂದಿಗೆ ಪೆದ್ದ ತಲುಪಿದ್ದು ಅಲ್ಲಿನ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಎರಡೂ ಕಡೆಯವರು ಗುಂಡು ಹಾರಿಸಿದ್ದು ಒಬ್ಬರಿಗೊಬ್ಬರು ಕಲ್ಲೆಸೆದಿದ್ದಾರೆ,” ಎಂಬುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಅಲ್ಲಿನ ಎಸ್ಪಿಯೇ ಮುಸ್ಲಿಂ ಹುಡುಗಿಯ ಮೇಲೆ ಜಾಟ್ ಸಮುದಾಯದವರು ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಈ ತಾಲಿಬ್ ಎನ್ನುವ ಯುವಕ ಎಲ್ಲಿಂದ ಬಂದ? ಈ ಪ್ರಶ್ನೆಗೆ ಉತ್ತರವಿಲ್ಲ. ಇದಾದ ನಂತರ ಎನ್.ಡಿಟಿವಿ ಜೊತೆ ಮಾತನಾಡಿದ ಉತ್ತರ ಪ್ರದೇಶ ಡಿಜಿಪಿ ಜಾವೆದ್ ಅಹಮದ್ ಮುಸ್ಲಿಂ ಯುವಕ “ಅಪ್ರಚೋದಿತ ಗುಂಡಿನ ದಾಳಿ”ಯಲ್ಲಿ ಅಸುನೀಗಿದ ಎಂದು ಹೇಳಿದ್ದಾರೆ. ಹೀಗಾಗಿ ಇಲ್ಲಿ ಎರಡೂ ಕಡೆಯಿಂದ ಗುಂಡಿನ ದಾಳಿ ನಡೆದಿದೆ ಎನ್ನುವುದೂ ಸುಳ್ಳಾಗುತ್ತದೆ. ಹೀಗೆ ಒಟ್ಟಾರೆ ವರದಿಯೇ ದಾರಿ ತಪ್ಪಿಸುವಂತಿದೆ.

ಕತೆಗಳ ಜತೆ ಮಸಾಲೆ: 

ಮುಖ್ಯವಾಹಿನಿ ಮಾಧ್ಯಮಗಳೇ ಈ ರೀತಿ ಕಥೆ ಕಟ್ಟಿರಬೇಕಾದರೆ, ಇದಕ್ಕೇ ಇನ್ನೊಂದಷ್ಟು ಮಸಾಲೆ ಸೇರಿಸಿ ಬಲಪಂಥೀಯ ವೆಬ್ಸೈಟ್ಗಳು ವರದಿ ಪ್ರಕಟಿಸಿದವು. ‘ಹಿಂದು ಪೋಸ್ಟ್ ಡಾಟ್ ಇನ್’, ‘ಹಿಂದು ಎಗ್ಸಿಸ್ಟೆನ್ಸ್ ಡಾಟ್ ಆರ್ಗ್’ ಮುಂತಾದ ವೆಬ್ಸೈಟ್ಗಳು ಮೂಲ ವರದಿಗೆ ತಮ್ಮದೂ ಒಂದಷ್ಟು ಪಕ್ಕಾ ಮಸಾಲೆ ಬೆರೆಸಿ ಪ್ರಚೋದಿಸುವಂತ ವರದಿಗಳನ್ನು ಪ್ರಕಟಿಸಿದವು.

ಇಡೀ ಘಟನೆಯ ವರದಿಯ ಬಗ್ಗೆ ಇದೀಗ ಆಕ್ಷೇಪ ವ್ಯಕ್ತವಾಗಿದ್ದು, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂಬುದಾಗಿ ಟೀಕೆಗಳು ಕೇಳಿ ಬರುತ್ತಿವೆ. 2014ರ ಲೋಕಸಭಾ ಚುನಾವಣೆಯ ವೇಳೆ ಇದೇ ರೀತಿ ಕ್ಷುಲ್ಲಕ ಕಾರಣ ಇಟ್ಟುಕೊಂಡು ಆರಂಭವಾದ ‘ಮುಝಾಫರ್ ನಗರ ಗಲಭೆ’ ದೊಡ್ಡ ಸ್ವರೂಪ ಪಡೆದುಕೊಂಡಿತ್ತು. ಆ ಚುನಾವಣೆಯಲ್ಲಿ ಉತ್ತರ ಪ್ರದೇಶ ಯಾರ ಪಾಲಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅಂಥಹದ್ದೇ ಕೋಮು ದಳ್ಳುರಿ ಪ್ರಯತ್ನಗಳು ಯುಪಿಯಲ್ಲಿ ಚಾಲ್ತಿಯಲ್ಲಿದ್ದು, ಅದಕ್ಕೆ ಇವೇ ಮಾಧ್ಯಮಗಳು ಬೆಂಬಲವಾಗಿ ನಿಂತಿರುವುದು ಮಾತ್ರ ವಿಪರ್ಯಾಸ.

ಚಿತ್ರ ಕೃಪೆ: ಕ್ಯಾಚ್ ನ್ಯೂಸ್

Leave a comment

FOOT PRINT

Top