An unconventional News Portal.

‘ಪ್ಯಾರಲಂಪಿಕ್ಸ್’ನಲ್ಲಿ ರಾಷ್ಟ್ರಗೀತೆ ಮೊಳಗಿಸಿದವರು ಮತ್ತು ಪ್ರಚಾರದ ಹೊರತಾದ ಉದ್ದೇಶಗಳು!

‘ಪ್ಯಾರಲಂಪಿಕ್ಸ್’ನಲ್ಲಿ ರಾಷ್ಟ್ರಗೀತೆ ಮೊಳಗಿಸಿದವರು ಮತ್ತು ಪ್ರಚಾರದ ಹೊರತಾದ ಉದ್ದೇಶಗಳು!

ಭಾರತದ ಕ್ರೀಡಾಪಟುಗಳು ಒಲಂಪಿಕ್ಸಿನಲ್ಲಿ ಮಿಂಚದಿದ್ದರೂ ಪ್ಯಾರಲಂಪಿಕ್ಸಿನಲ್ಲಿ ಮಿಂಚುತ್ತಿದ್ದಾರೆ.

ಎರಡು ಚಿನ್ನ, ಒಂದು ಬೆಳ್ಳಿ, ಒಂದು ಕಂಚಿನೊಂದಿಗೆ ದೇಶದ ಕ್ರೀಡಾಪಟುಗಳು ಪ್ಯಾರಲಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಬಾರಿ ರಾಷ್ಟ್ರಗೀತೆ ಮೊಳಗಿಸಿದ್ದಾರೆ. ಭಾರತವನ್ನು 42ನೇ ಸ್ಥಾನದಲ್ಲಿ ತಂದು ಬಿಟ್ಟಿದ್ದಾರೆ. ಸಾಮಾನ್ಯರಿಗೆ ಸಾಧ್ಯವಾಗದ್ದನ್ನು ಈ ವಿಶೇಷ ಚೇತನರು ಸಾಧಿಸಿ ತೋರಿಸಿದ್ದಾರೆ.

ಮರಿಯಪ್ಪನ್ ತಂಗವೇಲು ಪುರುಷರ ಹೈ ಜಂಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರೆ, ಜಾವೆಲಿನ್ ಎಸೆತದಲ್ಲಿ ದೇವೇಂದ್ರ ಝಝರಿಯಾ ಚಿನ್ನ ಗೆದ್ದಿದ್ದಾರೆ. 2004ರ ಅಥೆನ್ಸ್ ಪ್ಯಾರಲಂಪಿಕ್ನಲ್ಲಿ ಚಿನ್ನ ಗೆದ್ದಿದ್ದ ದೇವೇಂದ್ರ ಈ ಬಾರಿ ಮತ್ತೆ ಈ ಸಾಧನೆ ಮಾಡಿದ್ದು, ದೇಶದ ಪರವಾಗಿ ಎರಡು ಸ್ವರ್ಣ ಗೆದ್ದ ಮೊದಲ ಪ್ಯಾರಲಂಪಿಯನ್ ಆಗಿದ್ದಾರೆ. ರಿಯೋ ಪ್ಯಾರಲಂಪಿಕ್ಸಿನಲ್ಲಿ ಅವರು 63.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ತಮ್ಮದೇ ದಾಖಲೆ ಮುರಿದಿದ್ದಾರೆ. ಇನ್ನು ಶಾಟ್ ಪುಟ್ ನಲ್ಲಿ ದೀಪಾ ಮಲಿಕ್ ಮಹಿಳೆಯರ ವಿಭಾಗದಲ್ಲಿ ದೇಶಕ್ಕೆ ಮೊದಲ ಬೆಳ್ಳಿ ಪದಕ ಗೆದ್ದಿದ್ದರೆ, ಪುರುಷರ ಹೈ ಜಂಪಿನಲ್ಲಿ ಕಂಚಿನ ಪದಕವನ್ನೂ ಭಾರತ ಗೆದ್ದುಕೊಂಡಿದ್ದು, ವರಣ್ ಭಾಟಿ ಆ ಸಾಧನೆ ಮಾಡಿದ್ದಾರೆ.

ಪ್ಯಾರಲಂಪಿಕ್ ಆರಂಭವಾದಾಗಿನಿಂದ ತಲಾ ಒಂದು ಬಾರಿ ಈಜು ಮತ್ತು ವೇಯ್ಟ್ ಲಿಫ್ಟಿಂಗ್ ನಲ್ಲಿ ಪದಕ ಗೆದ್ದಿದ್ದು ಬಿಟ್ಟರೆ ಭಾರತ ಈವರೆಗೆ ಎಲ್ಲಾ ಪದಕಗಳನ್ನೂ ಜಾವೆಲಿನ್, ಡಿಸ್ಕಸ್, ಶಾಟ್ ಪುಟ್ ಗಳಂಥ ‘ಎಸೆತ’ಗಳು ಮತ್ತು ಹೈಜಂಪಿನಲ್ಲಿ ಮಾತ್ರ ಪದಕ ಗೆಲ್ಲುತ್ತಾ ಬಂದಿದ್ದು ಅಚ್ಚರಿಯ ಸಂಗತಿ.

ಏನಿದು ಪ್ಯಾರಲಂಪಿಕ್?:

1948ರ ಒಲಂಪಿಕ್ಸಿಗೂ ಮುನ್ನ ವಿಶೇಷ ಚೇತನರ ತರಬೇತಿಯಲ್ಲಿ ಲುಡ್ವಿಗ್ ಗುಟ್ಮನ್ (ಚಿತ್ರ: ಡೈಲಿಮೇಲ್)

1948ರ ಒಲಂಪಿಕ್ಸಿಗೂ ಮುನ್ನ ವಿಶೇಷ ಚೇತನರ ತರಬೇತಿಯಲ್ಲಿ ಲುಡ್ವಿಗ್ ಗುಟ್ಮನ್ (ಚಿತ್ರ: ಡೈಲಿಮೇಲ್)

ವಿಶೇಷ ಚೇತನರಿಗಾಗಿಯೇ ಒಂದು ವಿಶೇಷ ಜಾಗತಿಕ ಸ್ಪರ್ಧೆ; ಅದಕ್ಕಿಟ್ಟ ಹೆಸರು ಪ್ಯಾರಲಂಪಿಕ್. ಒಲಂಪಿಕ್ಸಿಗೆ ಸಮಾನಾಂತರಾಗಿ ಇದನ್ನು ಹುಟ್ಟುಹಾಕಲಾಯಿತು.

ಇಂಥಹದ್ದೊಂದು ಕಲ್ಪನೆ ಮೊದಲ ಬಾರಿಗೆ ಹೊಳೆದಿದ್ದು ಸರ್ ಲುಡ್ವಿಗ್ ಗುಟ್ಮನ್ ಎಂಬ ವೈದ್ಯರಿಗೆ. ಯಹೂದಿ ವೈದ್ಯರಾಗಿದ್ದ ಗುಟ್ಮನ್ ಎರಡನೇ ಮಹಾಯುದ್ಧಕ್ಕೂ ಮೊದಲು ಜರ್ಮನಿಯಿಂದ ಇಂಗ್ಲೆಂಡಿಗೆ ವಲಸೆ ಬಂದಿದ್ದರು. ಬಂದವರೇ ಸೇನೆಯಲ್ಲಿದ್ದ ವಿಕಲಚೇತನರಿಗಾಗಿ ವಿಶೇಷ ಅರ್ಚರಿ ಸ್ಪರ್ಧೆಯನ್ನು ಸ್ಟಾಕ್ ಮ್ಯಾಂಡ್ವಿಲ್ಲೆಯಲ್ಲಿ ಏರ್ಪಡಿಸಿದರು. ಇದು ಒಲಂಪಿಕ್ಸ್ ಮಾದರಿಯ ಕ್ರೀಡಾಕೂಟವಲ್ಲ, ಆದರೆ ಅದಕ್ಕೆ ಬುನಾದಿಯಾಯಿತು.  ಅವತ್ತಿಗೆ ಈ ಸ್ಪರ್ಧೆಯಲ್ಲಿ ಬಾಣದಿಂದ ಗುರಿ ಇಟ್ಟವರ ಸಂಖ್ಯೆ ಕೇವಲ 16. ಆದರೆ ಅಷ್ಟೊತ್ತಿಗಾಗಳೇ ವಿಶೇಷ ಚೇತನರಿಗಾಗಿಯೇ ಸ್ಪರ್ಧೆ ಆಯೋಜಿಸಬಹುದು ಎಂಬ ಎಂಬ ಸಾಧ್ಯತೆ ಕಣ್ಣ ಮುಂದೆ ನಿಂತಿತ್ತು.

ಗುಟ್ಮನ್ ತಡ ಮಾಡಲಿಲ್ಲ. 1948ರ ಲಂಡನ್ ಒಲಂಪಿಕ್ಸಿನಲ್ಲೇ ವಿಕಲಚೇತನರಿಗೆ ವೀಲ್ ಚೇರ್ ರೇಸ್ ನಡೆಸಿದರು. ಮುಂದೆ 1960ರಲ್ಲಿ ರೋಮ್ ನಗರದಲ್ಲಿ 23 ದೇಶಗಳ, 400 ಅಥ್ಲೀಟ್ಗಳಿಂದ ಕೂಡಿದ ನಿಜವಾದ ಪ್ಯಾರಲಂಪಿಕ್ ಜಾತ್ರೆ ನಡೆಯಿತು. ಒಲಂಪಿಕ್ಸಿಗೆ ಹೋಲಿಸಿದರೆ ಇದು ತೀರಾ ಸಣ್ಣ ಕ್ರೀಡಾಕೂಟ. ಆದರೆ ಮುಂದೆ ಪ್ರತಿ ಸಮ್ಮರ್ ಒಲಂಪಿಕ್ಸ್ ಮುಗಿದ ನಂತರ ಪ್ಯಾರಲಂಪಿಕ್ ನಡೆಯುವ ಪರಿಪಾಠ ಆರಂಭವಾಯಿತು. ವರ್ಷದಿಂದ ವರ್ಷಕ್ಕೆ ಕ್ರೀಡಾಪಟುಗಳ ಸಂಖ್ಯೆ ಬೆಳೆಯುತ್ತಾ ಹೋಯಿತು. ಪ್ರಾಯೋಜಕರು ಮುಂದೆ ಬಂದರು. ವಿಕಲಚೇತನ ಕ್ರೀಡಾಪಟುಗಳೂ ಬ್ರಾಂಡ್ ಅಂಬಾಸಿರ್ಗಳಾದರು. ಹಣ ಹರಿದು ಬರಲಾರಂಭಿಸಿತು. ಸಮಾಜದಿಂದ ಬೆಂಬಲಗಳು ದಕ್ಕತೊಡಗಿದವು. ಸ್ವಂತ ಸಾಮರ್ಥ್ಯದಿಂದ ಕ್ರೀಡಾಕೂಟಕ್ಕೆ ಹರಿದು ಬರುತ್ತಿದ್ದವರ ಜಾಗದಲ್ಲಿ, ವಿಶೇಷ ತರಬೇತಿ ಸಂಸ್ಥೆಗಳಲ್ಲಿ ಟ್ರೇನಿಂಗ್ ಪಡೆದು ಬರುವವರ ಸಂಖ್ಯೆ ಹೆಚ್ಚಾಯಿತು. ಪ್ರತಿ ದೇಶ, ಪಟ್ಟಣ ಹಳ್ಳಿಗಳಲೆಲ್ಲಾ ಇಂಥಹ ಸಂಸ್ಥೆಗಳು ಹುಟ್ಟಿಕೊಂಡವು.

ಮುಂದೆ 22 ಸೆಪ್ಟೆಂಬರ್ 1989ರಲ್ಲಿ ‘ಅಂತರ್ ರಾಷ್ಟ್ರೀಯ ಪ್ಯಾರಲಂಪಿಕ್ ಸಮಿತಿ’ ಆರಂಭವಾಯಿತು. ಇಡೀ ವಿಷೇಶ ಚೇತನ ಕ್ರೀಡಾಕೂಟಕ್ಕೆ ಸಾಂಸ್ಥಿಕ ರೂಪ ಸಿಕ್ಕಿದ ಮೈಲುಗಲ್ಲು ಅದು.  ಅಲ್ಲಿಂದ ಮುಂದೆ ಪ್ಯಾರಲಂಪಿಕ್ಸ್ ನಲ್ಲಿ ವೃತ್ತಿಪರತೆ ಆರಂಭವಾಯಿತು. ಮುಂದೆ ನಡೆದಿದ್ದೆಲ್ಲಾ ಇವತ್ತಿಗೆ ಇತಿಹಾಸ.

ಇವತ್ತು ಪ್ಯಾರಲಂಪಿಕ್ ಜಗತ್ತಿನ ಮೂರನೇ ಅತೀ ದೊಡ್ಡ ಕ್ರೀಡಾಕೂಟವಾಗಿ ಜನಪ್ರಿಯವಾಗಿದೆ. 2016ರ ರಿಯೋ ಪ್ಯಾರಲಂಪಿಕ್ಸಿನಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆ ಸುಮಾರು 4,300. ಒಟ್ಟು 22 ವಿಭಾಗಗಳಲ್ಲಿ, 528 ಸ್ಪರ್ಧೆಗಳು ಇಲ್ಲಿ ನಡೆಯುತ್ತಿವೆ. ಇನ್ನು 2012ರ ಲಂಡನ್ ಪ್ಯಾರಲಂಪಿಕ್ಸಿನ 28 ಲಕ್ಷ ಟಿಕೆಟ್ಗಳು ಬಿಕರಿಯಾಗಿದ್ದವು. 380 ಕೋಟಿ ಟಿವಿ ವೀಕ್ಷಕರು ಈ ಮಹಾನ್ ಕ್ರೀಡಾಕೂಟವನ್ನು ಕಣ್ತುಂಬಿಕೊಂಡಿದ್ದರು. ಅಷ್ಟರಮಟ್ಟಿಗೆ ಇವತ್ತು ಪ್ಯಾರಲಂಪಿಕ್ ಬೆಳೆದಿದೆ.

ಒಲಂಪಿಕ್ಸಿಗೆ ಹೋಲಿಸಿದರೆ ಪ್ಯಾರಲಂಪಿಕ್ ಜನಪ್ರಿಯತೆ ಕಡಿಮೆಯೇ. ಆದರೂ ಇದನ್ನು ಕೇವಲ ಜನಪ್ರಿಯತೆಗಾಗಿ ನಡೆಸುತ್ತಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಹೇಗೆ ಕ್ರೀಡೆ ಎನ್ನುವುದು ಸ್ಪರ್ಧೆಯ ಪ್ರತೀಕವೋ ಹಾಗೆಯೇ ಕ್ರೀಡೆಯಿಂದ ವಿಶೇಷ ಚೇತನರೆಡೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವುದೇ ಇದರ ಉದ್ದೇಶ. ಪ್ಯಾರಲಂಪಿಕ್ ಅಂಥಹ ಗಟ್ಟಿ ಪರಂಪರೆಯನ್ನು ಹುಟ್ಟು ಹಾಕಿದೆ ಎಂಬ ಹೆಮ್ಮೆ ಈ ಆಂದೋಲನ ನಡೆಸುತ್ತಿರುವ ಪ್ಯಾರಲಂಪಿಕ್ ಸಂಸ್ಥೆಗೆ ಇದೆ.

2012ರ ಲಂಡನ್ ಪ್ಯಾರಲಂಪಿಕ್ಸ್ ನಂತರ ಅಲ್ಲಿನ ಜನರಲ್ಲಿ ಮೂರರಲ್ಲಿ ಇಬ್ಬರು ವಿಕಲಚೇತರನ್ನು ನೋಡುವ ದೃಷ್ಟಿಕೋನ ಬದಲಾಯಿಸಿದ್ದರು. ಅದಕ್ಕೆ ಕಾರಣವಾಗಿದ್ದು ಇದೇ ಪ್ಯಾರಲಂಪಿಕ್ ಗೇಮ್ಸ್.

ಒಲಂಪಿಕ್ಸ್ ಹೋಲಿಕೆ ಸಲ್ಲ: 

ಪ್ಯಾರಲಂಪಿಕ್ಸಿನಲ್ಲಿ ಭಾಗವಹಿಸುತ್ತಲೇ ಒಲಂಪಿಕ್ಸಿಗೂ ಕಾಲಿಟ್ಟು ಎಲ್ಲಾ ಸರಿ ಇದ್ದವರಿಗೆ ಚಾಲಂಜ್ ಮಾಡಿದ ಆಸ್ಕರ್ ಪಿಸ್ಟೋರಿಯಸ್

ಪ್ಯಾರಲಂಪಿಕ್ಸಿನಲ್ಲಿ ಭಾಗವಹಿಸುತ್ತಲೇ ಒಲಂಪಿಕ್ಸಿಗೂ ಕಾಲಿಟ್ಟು ಎಲ್ಲಾ ಸರಿ ಇದ್ದವರಿಗೆ ಚಾಲಂಜ್ ಮಾಡಿದ ಆಸ್ಕರ್ ಪಿಸ್ಟೋರಿಯಸ್

ಪ್ಯಾರಲಂಪಿಕ್ಸಿಗೂ, ಒಲಂಪಿಕ್ಸಿಗೂ ವ್ಯತ್ಯಾಸಗಳಿವೆ. ಪ್ಯಾರಲಂಪಿಕ್ಸಿನಲ್ಲಿ ಪದಕ ಗೆಲ್ಲುವುದಕ್ಕಿಂತ ಸ್ಪರ್ಧಿಸುವುದೇ ದೊಡ್ಡ ವಿಚಾರ. ಇಲ್ಲಿ ಪದಕಗಳಿಗೆ ಏನಿದ್ದರೂ ನಂತರದ ಸ್ಥಾನ. ಇಲ್ಲಿ ಸ್ಪರ್ಧಿಸುವ ಎಲ್ಲರೂ ಸಮಾನಾರಾಗಿ ವಿಕಲರಾಗಿರುವುದಿಲ್ಲ ಎನ್ನುವುದೂ ಅದಕ್ಕಿರುವುವ ಕಾರಣಗಳಲ್ಲಿ ಒಂದು. ಇಲ್ಲಿ ಬರುವ ಕೆಲವರಿಗೆ ಕಾಲಿರುವುದಿಲ್ಲ, ಇನ್ನು ಕೆಲವರಿಗೆ ಕೈ ಇರುವುದಿಲ್ಲ; ಹೀಗೆ ಒಬ್ಬೊಬ್ಬರದು ಒಂದೊಂದು ವಿಕಲತೆಗಳು. ಹೀಗಿದ್ದೂ ಕ್ರೀಡಾ ಸ್ಪೂರ್ಥಿಯಿಂದ ಇವರೆಲ್ಲಾ ಇಲ್ಲಿ ಸ್ಪರ್ಧಿಸುತ್ತಾರೆ, ಅಷ್ಟೆ.

ಇನ್ನು ಆಧುನಿಕ ಒಲಂಪಿಕ್ಸ್ ಕ್ರೀಡಾಕೂಟ ಆರಂಭವಾಗಿದ್ದೇ 1612ರ ಸುಮಾರಿಗೆ. ಇದಕ್ಕೆ ಹೋಲಿಸಿದರೆ ಪ್ಯಾರಲಂಪಿಕ್ ಆರಂಭವಾಗಿದ್ದು 1960ರಲ್ಲಿ; ತೀರಾ ತಡವಾಗಿ. ಪ್ಯಾರಲಂಪಿಕ್ಸಿನ ಕ್ರೀಡೆಗಳೂ ಅಷ್ಟೊಂದು ಆಕರ್ಷಕವಾಗಿ ಕಾಣದೇ ಇರಬಹುದು. ಕಾರಣ ವಿಕಲಚೇತನರಿಗಾಗಿ ಇಲ್ಲಿನ ಸ್ಪರ್ಧೆಯ ನಿಯಮಗಳನ್ನೇ ಬದಲಾವಣೆ ಮಾಡಲಾಗಿರುತ್ತದೆ. ಹೀಗಾಗಿ ಇದಿನ್ನೂ ಜನಪ್ರಿಯ ಹಾದಿಯಲ್ಲಿದೆ ಅಷ್ಟೇ.

ಬದಲಾಗುತ್ತಿರುವ ತಂತ್ರಜ್ಞಾನಗಳೂ ಪ್ಯಾರಲಂಪಿಕ್ ಸ್ವರೂಪವನ್ನೇ ಬದಲಾಯಿಸುತ್ತಿವೆ. 1948ರ ರೇಸ್ನ ವೀಲ್ ಚೇರ್ ಜಾಗದಲ್ಲಿ ಇವತ್ತು ಬ್ಲೇಡ್ ರನ್ನರ್ಗಳು ಕಾಲಿಟ್ಟಿದ್ದಾರೆ. ಹೀಗೆ ತಂತ್ರಜ್ಞಾನದ ಸ್ಪರ್ಶದೊಂದಿಗೆ ಒಟ್ಟಾರೆ ಪ್ಯಾರಲಂಪಿಕ್ ಬದಲಾವಣೆಗೆ ಒಡ್ಡಿಕೊಳ್ಳುತ್ತಾ ಮುಂದೆ ಸಾಗುತ್ತಿದೆ.

ಇನ್ನು ಸಮಾಜದಲ್ಲಿ ವಿಶೇಷ ಚೇತನರ ಸಂಖ್ಯೆಯೂ ಕಡಿಮೆ. ಹೀಗಾಗಿ ಅಂಥಹ ಜನಪ್ರಿಯತೆ ಸಿಕ್ಕಿಲ್ಲ ಎಂಬುದೂ ನಿಜ. ಹೀಗಿದ್ದೂ ತಮ್ಮ ಸಾಧನೆಗಳ ಮೂಲಕ ಈ ವಿಶೇಷ ಚೇತನರು ಒಮ್ಮೊಮ್ಮೆ ಎಲ್ಲಾ ಸರಿ ಇದ್ದವರಿಗೂ ಚಾಲೆಂಜ್ ಮಾಡಿ ತಮ್ಮ ತಲೆಮಾರಿಗೇ ಸ್ಪೂರ್ಥಿ ಹಂಚಿಹೋಗುತ್ತಾರೆ.

ಆಸ್ಕರ್ ಪಿಸ್ಟೋರಿಯಸ್ ಅಂಥಹ ದೈತ್ಯ ಪ್ರತಿಭೆಗಳಲ್ಲಿ ಒಬ್ಬ. ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಇಂಥಹವರು ಮತ್ತೆ ಮತ್ತೆ ಸಾರುತ್ತಲೇ ಇರುತ್ತಾರೆ. ಒಟ್ಟಾರೆ, ಪ್ಯಾರಲಂಪಿಕ್ ಉದ್ದೇಶವೂ ಅದೇ; ಪ್ರಚಾರ ಪ್ರಿಯತೆ ಮಾತ್ರವೇ ಅಲ್ಲ.

Leave a comment

FOOT PRINT

Top