An unconventional News Portal.

ದೇಶದ ಅತೀ ದೊಡ್ಡ ರಾಜ್ಯದಲ್ಲಿ ಭಾರಿ ಹೈ ಡ್ರಾಮಾ: ಮಗನನ್ನು ಪಟ್ಟದಿಂದ ಕಿತ್ತು ಹಾಕಿದ ಮುಲಾಯಂ!

ದೇಶದ ಅತೀ ದೊಡ್ಡ ರಾಜ್ಯದಲ್ಲಿ ಭಾರಿ ಹೈ ಡ್ರಾಮಾ: ಮಗನನ್ನು ಪಟ್ಟದಿಂದ ಕಿತ್ತು ಹಾಕಿದ ಮುಲಾಯಂ!

ಉತ್ತರ ಪ್ರದೇಶ ರಾಜಕಾರಣದಲ್ಲಿ ನಡೆದ ಹೈ ಡ್ರಾಮಾವೊಂದರಲ್ಲಿ ಪ್ರಮುಖ ಪಲ್ಲಟವೊಂದು ಘಟಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಅಖಿಲೇಶ್ ಯಾದವ್ರನ್ನು, ತಂದೆ ಮುಲಾಯಂ ಸಿಂಗ್ ಗುರುವಾರ ಏಕಾಏಕಿ ಕಿತ್ತೊಗೆದಿದ್ದಾರೆ. 2017ರ ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ವಿಶಾಲ ರಾಜ್ಯದ ಈ ರಾಜಕೀಯ ಬೆಳವಣಿಗೆ ಸಹಜವಾಗಿಯೇ ಕುತೂಹಲ ಮೂಡಿಸಿದೆ.

‘ಸಿಟ್ಟಿನಲ್ಲಿ’ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್, ಮಗ ಅಖಿಲೇಶ್ ಯಾದವ್ರನ್ನು ಕಿತ್ತೊಗೆದಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅವರ ಜಾಗಕ್ಕೆ ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್ರನ್ನು ಕರೆತರಲಾಗುತ್ತದೆ ಎಂಬ ಸುದ್ದಿ ಹರಡಿತ್ತು. ಆದರೆ, ದಿನದ ಅಂತ್ಯದ ವೇಳೆಗೆ ಶಿವಪಾಲ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೇ ರಾಜೀನಾಮೆ ನೀಡಿದ್ದಾರೆ.

ಭಾರಿ ರಾಜಕೀಯ ಪಲ್ಲಟಕ್ಕೆ ಕಾರಣವಾಗಿರುವ ಮುಲಾಯಂ ನಿರ್ಧಾರದ ಹಿಂದೆ ಅವರ ಆಪ್ತ ಅಮರ್ ಸಿಂಗ್ ನೆರಳಿದೆ ಎಂಬ ಮಾತುಗಳು ಓಡಾಡುತ್ತಿವೆ. ಅಮರ್ ಸಿಂಗ್ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, 2010ರಲ್ಲಿ ಮುಲಾಯಂ ಜೊತೆಗಿನ ಜಗಳದ ನಂತರ ಹೊರ ಬಂದು, ರಾಜಕಾರಣಕ್ಕೇ ನಿವೃತ್ತಿ ಘೋಷಿಸಿದ್ದರು. ಇದರ ಮಧ್ಯೆ 2011ರಲ್ಲಿ ಲಂಚ ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನಕ್ಕೂ ಒಳಪಟ್ಟಿದ್ದರು. ತದನಂತರ ಇದೇ ಜೂನಿನಲ್ಲಿ ಮತ್ತೆ ಅವರನ್ನು ಪಕ್ಷಕ್ಕೆ ಕರೆಸಿಕೊಂಡು ರಾಜ್ಯಸಭೆಗೆ ಕಳುಹಿಸಿಕೊಡಲಾಗಿತ್ತು.

ಅಮರ್ ಸಿಂಗ್ ಅವರಿಗೆ ಯಾದವ್ ಕುಟುಂಬದೊಳಗೆ ಜಗಳ ಹುಟ್ಟು ಹಾಕುವುದು ಬೇಕಿತ್ತು. ಅದಕ್ಕಾಗಿ ಸ್ವತಃ ಮುಲಾಯಂ ತಲೆಯನ್ನು ಪರೋಕ್ಷವಾಗಿ ಕೆಡಿಸಿ ಈ ನಿರ್ಧಾರಕ್ಕೆ ಬರುವಂತೆ ಮಾಡಿದ್ದಾರೆ ಎಂದು ಆರಂಭಿಕ ಅಹಂತದ ವಿಶ್ಲೇಷಣೆಗಳು ಜಾಗ ಪಡೆದುಕೊಂಡಿವೆ.

ಅಮರ್ ಸಿಂಗ್ ಮತ್ತು ಮುಲಾಯಂ ಸಿಂಗ್ ಯಾದವ್

ಅಮರ್ ಸಿಂಗ್ ಮತ್ತು ಮುಲಾಯಂ ಸಿಂಗ್ ಯಾದವ್

ಇದಕ್ಕೆ ಪುಷ್ಠಿ ನೀಡುವಂತೆ ಕುಟುಂಬದ ಒಳಗೆ “ಹೊರಗಿನವರು ಮಧ್ಯಪ್ರವೇಶ ಮಾಡುತ್ತಿದ್ದಾರೆ,” ಎಂದು ಸ್ವತಃ ಅಖಿಲೇಶ್ ಯಾದವ್ ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದರು. ಇದಾದ ಬೆನ್ನಿಗೆ ಗುರುವಾರ ಅವರ ತಂದೆ ಮುಲಾಯಂ ಮಗನ ಪದಚ್ಯುತಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಗುರುವಾರ ಪಕ್ಷದ ಸಂಸದೀಯ ಮಂಡಳಿ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರಿಗೆ ಮುಲಾಯಂ ಸಿಂಗ್ ಕರೆ ಮಾಡಿ ಅಖಿಲೇಶ್ ಯಾದವ್ ರನ್ನು ತೆಗೆದು, ಅವರ ಜಾಗಕ್ಕೆ ಶಿವಪಾಲ್ ಯಾದವ್ ಅವರನ್ನು ನೇಮಿಸುವಂತೆ ಹೇಳಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ದೇಶದ ಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಅಖಿಲೇಶ್ ಅವರನ್ನು ಪದವಿಯಿಂದ ಪದಚ್ಯುತಗೊಳಿಸಿದ ಸುದ್ದಿ ಹೊರಗೆ ಬಿದ್ದಿತ್ತು.

ಹಾಗೆ ನೋಡಿದರೆ, ಮುಲಾಯಂ ಬಿಟ್ಟರೆ ಉಳಿದ ಪಕ್ಷದೊಳಗಿನ ನಾಯಕರಿಗೆ ಅಮರ್ ಸಿಂಗ್ ಅಂದರೆ ಅಷ್ಟಕಷ್ಟೆ.

ಈ ಹಿಂದೆ ಸ್ಥಳೀಯ ವಾಹಿನಿಯೊಂದಕ್ಕೆ ಮಾತನಾಡಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅಖಿಲೇಶ್ ಯಾದವ್ ಇನ್ನೊಬ್ಬ ಚಿಕ್ಕಪ್ಪ ರಾಮ್ ಗೋಪಾಲ್ ಯಾದವ್, “ನೇತಾಜಿ (ಮುಲಾಯಂ) ಪಕ್ಷವನ್ನು ತಳಮಟ್ಟದಿಂದ ಕಟ್ಟಿದವರು, ಕೆಲವರು (ಅಮರ್ ಸಿಂಗ್) ಇದರ ಪ್ರಯೋಜನ ಪಡೆದುಕೊಂಡರು,” ಎಂದು ಪರೋಕ್ಷ ವಾಗ್ಧಾಳಿ ನಡೆಸಿದ್ದರು. ಇತ್ತೀಚೆಗೆ ಮತ್ತೆ ಮುಲಾಯಂ ಸಿಂಗರನ್ಜು ಪಕ್ಷಕ್ಕೆ ಕರೆತಂದು ರಾಜ್ಯ ಸದಸ್ಯರನ್ನಾಗಿ ಮಾಡುವುದಕ್ಕೆ ಇದೇ ರಾಮ್ ಗೋಪಾಲ್ ಯಾದವ್ ಮತ್ತು ಸಮಾಜವಾದಿ ಪಕ್ಷದ ಪ್ರಮುಖ ಮುಸ್ಲಿಂ ಮುಖಂಡ ಅಜಂ ಖಾನ್ ವಿರೋಧ ವ್ಯಕ್ತಪಡಿಸಿದ್ದರು. ಹೀಗಿದ್ದೂ ಮುಲಾಯಂ, ತಮ್ಮ ಮಾತೇ ನಡೆಯಬೇಕು ಎಂದು ಅಮರ್ ಸಿಂಗರನ್ನು ಮೇಲ್ಮನೆಗೆ ಕಳುಹಿಸಿದ್ದರು.

ಆದರೆ ಅಮರ್ ಸಿಂಗ್ ಮೇಲಿನ ಆರೋಪಗಳನ್ನು ಶಿವಪಾಲ್ ಸಿಂಗ್ ನಿರಾಕರಿಸುತ್ತಾರೆ. “ಒಂದು ಸಂಸ್ಥೆ ಗಟ್ಟಿಯಾಗಬೇಕಾದರೆ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು,” ಎನ್ನುವುದು ಅವರ ಸಮಜಾಯಿಷಿಯಾಗಿತ್ತು. ಇದಕ್ಕೆ ಬಳುವಳಿ ರೂಪದಲ್ಲಿ ಮುಖ್ಯಮಂತ್ರಿ ಪದವಿ ಶಿವಪಾಲರಿಗೆ ಸಿಗುತ್ತೆ ಎಂಬುದು ತರ್ಕವಾಗಿತ್ತು.

ಸದ್ಯ ದೇಶದಲ್ಲಿ ಅತೀ ಹೆಚ್ಚು ವಿಧಾನಸಭೆ ಮತ್ತು ಲೋಕಸಭೆ ಸೀಟುಗಳಿರುವ ಉತ್ತರ ಪ್ರದೇಶ ವಿಧಾನಸಭೆಗೆ 2017ರಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಈ ಕುರಿತು ಬಿಜೆಪಿ, ಕಾಂಗ್ರೆಸ್, ಮಾಯಾವತಿಯ ಬಿಎಸ್ಪಿಯೂ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಈ ಸಂದರ್ಭ ಎಸ್ಪಿಯ ಈ ನಿರ್ಧಾರ ಚುನಾವಣೆಯ ಮೇಲೆ ಯಾವ ಪರಿಣಾಮ ಬೀಳಲಿದೆ ಎಂಬುದನ್ನು ಮುಂದೆ ನೋಡಬೇಕಷ್ಟೆ.

ಭರವಸೆ ಕಳೆದುಕೊಂಡ ಯುವ ಮುಖ:

akhilesh yadav2012ರಲ್ಲಿ ಉತ್ತರ ಪ್ರದೇಶದಂತ ಅಭಿವೃದ್ಧಿ ಕೆಲಸಗಳಿಗೆ ವಿಶಾಲ ಅವಕಾಶವಿದ್ದ ರಾಜ್ಯದಲ್ಲಿ ಅಖಿಲೇಶ್ ಯಾದವ್ ಎಂಬ 38ರ ತರುಣ ಮುಖ್ಯಮಂತ್ರಿಯಾದಾಗ ದೇಶಾದ್ಯಂತ ಅಪಾರ  ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಈ ನೀಳ ಮೂಗಿನ ಯುವಕ ಅಧಿಕಾರದ ಗದ್ದುಗೆ ಏರಿದಾಗ ಮುಂದಿಂದು ದಿನ ಈತ ಪ್ರಧಾನಿಯಾದರೂ ಅಚ್ಚರಿ ಇಲ್ಲ ಎಂದೇ ರಾಜಕೀಯ ವಿಶ್ಲೇಷಣೆಗಳು ಆರಂಭವಾಗಿದ್ದವು. ಅದಕ್ಕೆ ಅಖಿಲೇಶ್ ಹಿನ್ನಲೆಯೂ ಕಾರಣವಾಗಿತ್ತು. ನಮ್ಮದೇ ಮೈಸೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ, ಸಿಡ್ನಿಯಲ್ಲಿ ಉನ್ನತ ವ್ಯಾಸಾಂಗ ಮಾಡಿಕೊಂಡಿದ್ದರು ಅಖಿಲೇಶ್. 2012ರ ವಿಧಾನಸಭೆ ಚುನಾವಣೆಯಲ್ಲಿ ತಂದೆ ಮುಲಾಯಂರನ್ನು ಸೈಡ್ ಲೈನ್ ಮಾಡಿ ‘ಸಮಾಜವಾದಿ ವಿಕಾಸ ರಥ ಯಾತ್ರೆ’ಯನ್ನು ರಾಜ್ಯದ ಉದ್ದಗಲಕ್ಕೆ ಕೊಂಡೊಯ್ದರು. 5,000 ಕಿಲೋಮೀಟರ್ ಕ್ರಮಿಸಿದ ಈ ಯಾತ್ರೆಯಿಂದಾಗಿ ಪಕ್ಷ ಅಭೂತಪೂರ್ವ ಬಹುಮತದೊಂದಿದೆ ಅಧಿಕಾರಕ್ಕೆ ಬಂದಿತ್ತು.

ಚುನಾವಣೆಯಲ್ಲಿ ಅಖಿಲೇಶ್ ಸಾಧನೆ ನೋಡಿ ಮುಲಾಯಂ ತಮಗಿನ್ನೂ ಮುಖ್ಯಮಂತ್ರಿಯಾಗುವ ವಯಸ್ಸಿದ್ದರೂ ಮಗನಿಗೆ ಪಟ್ಟ ಬಿಟ್ಟುಕೊಟ್ಟರು. ಅಖಿಲೇಶ್ ಯೂತ್ ಐಕಾನ್ ಆದರು. ಆದರೆ ಮುಂದೆ ರಾಜ್ಯದ ಬೆಳವಣಿಗೆಯಲ್ಲಿ ಅಂಥ ಮಹತ್ವದ ಬದಲಾವಣೆ ಏನೂ ನಡೆಯಲಿಲ್ಲ.

ಮೇಲಿಂದ ಮೇಲೆ ಹಗರಣ ಮತ್ತು ವಿವಾದಗಳ ಮೂಲಕವಷ್ಟೇ ಅಖಿಲೇಶ್ ಚಾಲ್ತಿಯಲ್ಲಿ ಉಳಿದು ಬಿಟ್ಟರು. ದುರ್ಗಾ ಶಕ್ತಿ ನಾಗ್ಪಾಲ್ ಎಂಬ ಐಎಎಸ್ ಅಧಿಕಾರಿಯನ್ನು ಕಿತ್ತೊಗೆದಿದ್ದು, ಭ್ರಷ್ಟರಿಗೆ ಅಖಿಲೇಶ್ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಸಂದೇಶ ರವಾನಿಸಿತು. ಮುಝಾಫುರ್ ನಗರದಲ್ಲಿ ಕೋಮುಗಲಭೆ ನಡೆದಿದ್ದೂ ಇದೇ ಅಖಿಲೇಶ್ ಯಾದವ್ ಸಮಯದಲ್ಲಿ ಎನ್ನುವುದು ಅವರ ಆಡಳಿತದ ದೊಡ್ಡ ಕಪ್ಪು ಚುಕ್ಕೆ. 2014ರ ಬದುವಾನ್ ಗ್ಯಾಂಗ್ ರೇಪ್ ಮೊದಲಾದವೂ ಅಖಿಲೇಶ್ ಮೇಲಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿತು. ‘ಪಿಕೆ’ ಚಿತ್ರವನ್ನು ಆನ್ಲೈನ್ ನಿಂದ ಡೌನ್ಲೋಡ್ ಮಾಡಿದ್ದೇನೆ ಎನ್ನುವಲ್ಲಿಂದ ಹಿಡಿದು ಹಲವು ವಿವಾದಗಳು ಅವರನ್ನು ಸುತ್ತಿಕೊಂಡವು.

ಅತ್ತ ರಾಜ್ಯವೂ ಅಭಿವೃದ್ದಿಯ ಗ್ರಾಫಿನಲ್ಲಿ ನಾಪತ್ತೆಯಾಗಿತ್ತು. ಇಂಥ ಸಂದರ್ಭದಲ್ಲೇ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅದೂ ಸ್ವತಃ ತಂದೆಯೇ ಪದಚ್ಯುತಿಗೊಳಿಸಿದ್ದಾರೆ. ಆಗಾಗ ತಮ್ಮ ಪಕ್ಷದ ಚಿನ್ಹೆ ಸೈಕಲ್ ಹತ್ತಿ ಜನರ ಮಧ್ಯೆ ಯಾತ್ರೆ ಹೊರಡುವ ಅಖಿಲೇಶ್, ಮತ್ತೆ ಅಕ್ಟೋಬರ್ 3ರಿಂದ ರಥಯಾತ್ರೆ ಹೊರಡುವುದಾಗಿ ಘೋಷಿಸಿದ್ದಾರೆ. ಸದ್ಯಕ್ಕೆ ಎಲ್ಲರೂ ಈ ರಥಯಾತ್ರೆಯತ್ತ ಕುತೂಹಲದಿಂದ ನೋಡುತ್ತಿದ್ದಾರೆ.

ಮಗನ ಪದತ್ಯಾಗದ ಹಿಂದೆ ಮುಲಾಯಂರ ಯಾವ ರಾಜಕಾರಣ ಅಡಗಿದೆಯೋ ಗೊತ್ತಿಲ್ಲ. ಮಗನ ಮೇಲಿನ ಜನರ ಸಿಂಪತಿಯನ್ನೆ ಮುಂದಿನ ಚುನಾವಣೆಯ ಅಸ್ತ್ರ ಮಾಡಿಕೊಳ್ಳುವ ದೂ(ದು)ರಾಲೋಚನೆಯೂ ಇರಬಹುದು.

ಸಮಾಜವಾದಿ ಪಕ್ಷದೊಳಗೆ ಹೈಡ್ರಾಮಾ

ಈ ಎಲ್ಲಾ ಘಟನೆಗಳ ಬೆನ್ನಿಗೆ ಮುಖ್ಯಮಂತ್ರಿಯೆಂದು ನಿಯೋಜಿತರಾಗಿದ್ದ ಶಿವಪಾಲ್ ಯಾದವ್ ಸಮಾಜವಾದಿ ಪಕ್ಷಕ್ಕೇ ರಾಜೀನಾಮೆ ನೀಡಿದ್ದಾರೆ. ಅವರ ಪತ್ನಿ ಮತ್ತು ಮಗ ಕೂಡಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೇ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಕ್ಯಾಬಿನೆಟ್ ಮಂತ್ರಿ ಮತ್ತು ಪಕ್ಷದ ಉತ್ತರ ಪ್ರದೇಶ ರಾಜ್ಯ ಅಧ್ಯಕ್ಷರೂ ಆಗಿದ್ದ ಶಿವಪಾಲ್ ಯಾದವ್ ರಾಜೀನಾಮೆಯನ್ನು ಅಖಿಲೇಶ್ ಯಾದವ್ ಅಂಗೀಕರಿಸಿಲ್ಲ ಎಂದು ತಿಳಿದು ಬಂದಿದೆ. ಇನ್ನು ಗುರುವಾರ ರಾತ್ರಿಯೇ ಶಿವಪಾಲ್ ಸಿಂಗ್ ಅಭಿಮಾನಿಗಳು ಅವರ ಲಕ್ನೋ ಮನೆ ಮುಂದೆ ನೆರೆದಿದ್ದು ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಚಿತ್ರ ಕೃಪೆ: ಇಂಡಿಯಾ ಟುಡೇ

Leave a comment

FOOT PRINT

Top