An unconventional News Portal.

ಪ್ರತಾಪ್ ಸಿಂಹ ಮತ್ತಿತರರ ‘ಕೊಲೆ ಸಂಚು ಪ್ರಕರಣ’: ವಿಳಂಬಕ್ಕೆ ಬೇಸತ್ತು ತಪ್ಪೊಪ್ಪಿಕೊಂಡ ಅಪರಾಧಿಗಳಿಗೆ 5 ವರ್ಷ ಸಜೆ!

ಪ್ರತಾಪ್ ಸಿಂಹ ಮತ್ತಿತರರ ‘ಕೊಲೆ ಸಂಚು ಪ್ರಕರಣ’: ವಿಳಂಬಕ್ಕೆ ಬೇಸತ್ತು ತಪ್ಪೊಪ್ಪಿಕೊಂಡ ಅಪರಾಧಿಗಳಿಗೆ 5 ವರ್ಷ ಸಜೆ!

ನ್ಯಾಯದಾನ ವಿಳಂಬದಿಂದ ಬೇಸತ್ತು ಭಯೋತ್ಪಾದನಾ ಪ್ರಕರಣವೊಂದರ ಆರೋಪಿಗಳು ವಿಚಾರಣೆ ನಡುವೆಯೇ ತಪ್ಪೊಪ್ಪಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು ಸಿಟಿ ಸಿವಿಲ್ ಹಾಗೂ ಸೆಶನ್ಸ್ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಾಲ್ಕು ವರ್ಷಗಳ ಹಿಂದೆ ದಾಖಲಿಸಿದ್ದ ಪ್ರಕರಣ (RC No 04/2012)ಕ್ಕೆ ಸೆ. 1 ರಂದು ವಿಚಾರಣೆ ನಡುವೆಯೇ ಹೀಗೊಂದು ವಿಚಿತ್ರ ತಿರುವು ಸಿಕ್ಕಿದೆ. ನ್ಯಾಯಾಂಗ ಬಂಧನದಲ್ಲಿದ್ದ 13 ಆರೋಪಿಗಳೂ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣದ ಅಂತಿಮ ತೀರ್ಪನ್ನು ಸೆ. 15 (ಇಂದು)ಕ್ಕೆ ನ್ಯಾಯಾಲಯ ಕಾಯ್ದಿರಿಸಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣೆ ವಿಳಂಬದಿಂದ ಬೇಸತ್ತು ನ್ಯಾಯದಾನ ಪ್ರಕ್ರಿಯೆಗೆ ಆರೋಪಿಗಳು ಶರಣಾಗಿರುವ ಮೊದಲ ಪ್ರಕರಣ ಇದು ಎಂದು ವಕೀಲರ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?:

2012ರ ಆಗಸ್ಟ್ 29ರಂದು ಬೆಂಗಳೂರಿನ ಬಸವೇಶ್ವರನಗರ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದ್ದರು. ಅವತ್ತಿಗೆ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ, ಆಗಾಗ್ಗೆ ಭೇಟಿ ನೀಡುತ್ತಿದ್ದ ಮನೆಯ ಮುಂದೆಯೇ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂಬುದು ಆರೋಪವಾಗಿತ್ತು. ಬಂಧಿತರಿಂದ 7. 6ಎಂಎಂ ಪಿಸ್ತೂಲು ಹಾಗೂ ಐದು ಸುತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜೆಸಿ ನಗರದ ಮುಬಾರಕ್ ಮೊಹಲ್ಲಾದಿಂದ ನಾಲ್ವರು ಯುವಕರನ್ನು ಹಾಗೂ ಹುಬ್ಬಳ್ಳಿಯಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದರು. ವಾರದ ಅಂತರದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಇನ್ನೂ ಐವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

ಬಂಧಿತರಲ್ಲಿ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಮತಿ ಉರ್ ರೆಹ್ಮಾನ್ ಸಿದ್ದಿಕಿ ಹಾಗೂ ಡಿಆರ್ಡಿಓದಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದ ಎಜಾಝ್ ಅಹ್ಮದ್ ಮಿರ್ಜಾ ಕೂಡ ಸೇರಿದ್ದರು. ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಇದಾದ ಎರಡು ತಿಂಗಳ ಅಂತರದಲ್ಲಿ ಪ್ರಕರಣವು ಸಿಸಿಬಿ ಪೊಲೀಸರಿಂದ ಎನ್ಐಎಗೆ ವರ್ಗಾವಣೆಯಾಗಿತ್ತು.

ಆರೋಪಗಳೇನಿದ್ದವು?:

ಪ್ರಕರಣಕ್ಕೆ ಸಂಬಂಧಿಸಿದಂತೆ 2013ರ ಫೆಬ್ರವರಿಯಲ್ಲಿ ದೋಷಾರೋಪ ಪಟ್ಟಿಯನ್ನು ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಸಮಯದಲ್ಲಿ ಮತಿ ಉರ್ ರೆಹ್ಮಾನ್ ಸಿದ್ದಿಕಿ, ಎಜಾಝ್ ಅಹ್ಮದ್ ಮಿರ್ಜಾ ಹಾಗೂ ಯೂಸುಫ್ ಅಹ್ಮದ್ ಅವರುಗಳ ಹೆಸರುಗಳನ್ನು ಕೈಬಿಡಲಾಗಿತ್ತು. ಉಳಿದವರ ಮೇಲೆ ಪ್ರತಾಪ್ ಸಿಂಹ, ವಿಶ್ವೇಶ್ವರ ಭಟ್, ಪೊಲೀಸ್ ಅಧಿಕಾರಿಗಳಾದ ಬಿ. ದಯಾನಂದ್, ಡಿ. ಎಂ. ಕೃಷ್ಣಂರಾಜು, ನ್ಯಾಮಗೌಡ, ಬಿಜೆಪಿ ಮುಖಂಡ ಪ್ರಹ್ಲಾದ್ ಜೋಷಿ, ಉದ್ಯಮಿ ವಿಜಯ್ ಸಂಕೇಶ್ವರ್, ಭಜರಂಗದಳದ ಗನು ಜರ್ತಾರ್ಕರ್ ಸೇರಿದಂತೆ ಹೈದ್ರಾಬಾದಿನಲ್ಲಿ ಇನ್ನೊಂದಿಷ್ಟು ಜನರ ಕೊಲೆಗೆ ಸಂಚು ರೂಪಿಸಿದ್ದ ಆರೋಪವನ್ನು ಹೊರಿಸಲಾಗಿತ್ತು. ಬಂಧಿತರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯೂ ಸೇರಿದಂತೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.

ವಿಚಾರಣೆ ನಿದಾನಗತಿ:

ಪ್ರಕರಣದ ವಿಚಾರಣೆಗಾಗಿ ಸಿಟಿ ಸಿವಿಲ್ ಹಾಗೂ ಸೆಶನ್ಸ್ ನ್ಯಾಯಾಲಯದಲ್ಲಿಯೇ ಎನ್ಐಎ ವಿಶೇಷ ನ್ಯಾಯಾಲಯವನ್ನು ತೆರೆದಿತ್ತು. ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಸುಮಾರು 350 ಸಾಕ್ಷಿಗಳನ್ನು ಹೆಸರಿಸಿತ್ತು. ವಿಚಾರಣೆ ಆರಂಭವಾಗಿ ಹೆಚ್ಚು ಕಡಿಮೆ ನಾಲ್ಕು ವರ್ಷಗಳು ಕಳೆಯುತ್ತಾ ಬಂದರೂ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲು ನ್ಯಾಯಾಲಯಗಳು ಒಪ್ಪಿರಲಿಲ್ಲ. ಜತೆಗೆ, ಈವರೆಗೆ ಕೇವಲ 23 ಸಾಕ್ಷಿಗಳನ್ನಷ್ಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

“ಹೀಗೆ ಮುಂದುವರಿದರೆ ಮುಂದಿನ ಹತ್ತು ವರ್ಷವಾದರೂ ಪ್ರಕರಣ ಮುಗಿಯುವುದಿಲ್ಲ. ಅಲ್ಲಿಯವರೆಗೂ ಜೈಲು ಶಿಕ್ಷಯನ್ನಷ್ಟೆ ಅನುಭವಿಸಬೇಕು. ಅದರ ಬದಲು ತಪ್ಪನ್ನು ಒಪ್ಪಿಕೊಂಡರೆ ಐದರಿಂದ ಆರು ವರ್ಷಗಳ ಜೈಲು ಶಿಕ್ಷೆ ಆಗಬಹುದು. ಈಗಾಗಲೇ ನಾಲ್ಕು ವರ್ಷಗಳನ್ನು ಜೈಲಿನಲ್ಲಿಯೇ ಕಳೆದಿದ್ದೇವೆ. ನಮ್ಮ ಜೀವನಮಾನ ಪೂರ್ತಿ ಇಲ್ಲಿಯೇ (ಜೈಲಿನಲ್ಲಿ) ಕೊಳೆಯುವ ಬದಲು ನ್ಯಾಯಾಲಯದಲ್ಲಿ ತಪ್ಪನ್ನು ಒಪ್ಪಿಕೊಂಡು ಹೊರಗೆ ಬರುತ್ತೇವೆ,” ಎಂಬುದಾಗಿ ಆರೋಪಿಗಳು ತಮ್ಮ ಸಂಬಂಧಿಕರ ಬಳಿ ಹೇಳಿಕೊಂಡಿದ್ದರು.

ಅದರ ಭಾಗವಾಗಿಯೇ, ಸೆ. 1ರಂದು ವಿಚಾರಣೆ ವೇಳೆಯಲ್ಲಿ ನ್ಯಾಯಾಧೀಶರ ಮುಂದೆಯೇ ಕಣ್ಣೀರು ಹಾಕಿದ ಆರೋಪಿಗಳು ರಾಷ್ಟ್ರೀಯ ತನಿಖಾ ದಳ ಹೊರಿಸಿರುವ ತಪ್ಪನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದರು. ಹೀಗಾಗಿ, ನ್ಯಾಯಾಲಯ ಅಂತಿಮ ತೀರ್ಪನ್ನು ಇವತ್ತಿಗೆ ಕಾಯ್ದಿರಿಸಿದೆ.

ಅಪರೂಪದ ಪ್ರಕರಣ: 

ಹೀಗೆ ವಿಚಾರಣೆ ನಡುವೆಯೇ ನ್ಯಾಯದಾನದ ವಿಳಂಬ ಗತಿಗೆ ಬೇಸತ್ತು ಆರೋಪಿಗಳು ತಪ್ಪೊಪ್ಪಿಗೆಗೆ ಮುಂದಾಗಿರುವ ಈ ಪ್ರಕರಣ ಅಪರೂಪದ್ದು ಎಂಬುದು ವಕೀಲರ ಹೇಳಿಕೆ. 2013ರಲ್ಲಿ, ಆರು ತಿಂಗಳು ಇದೇ ಪ್ರಕರಣದಲ್ಲಿ ಜೈಲಿನಲ್ಲಿದ್ದು ಸಾಕ್ಷಿಗಳ ಕೊರತೆ ಹಿನ್ನೆಲೆಯಲ್ಲಿ ಹೊರ ಬಂದಿದ್ದ ಯೂಸುಫ್ ನಾಲಾಬಂದ್, “ಜೈಲಿನೊಳಗೆ ಆಲೋಚನೆಗಳೇ ನಮ್ಮನ್ನು ಕೊಂದು ಹಾಕುತ್ತವೆ,” ಎಂದು ದಿನಪತ್ರಿಕೆಯೊಂದರ ಸಂದರ್ಶನದಲ್ಲಿ ಅಳಲು ತೋಡಿಕೊಂಡಿದ್ದ. ಇದೀಗ ನಾಲ್ಕು ವರ್ಷಗಳ ನಂತರ, 13 ಜನ ಆರೋಪಿಗಳು ಜೈಲುವಾಸ ಸಾಕು ಎಂದು, ತಮ್ಮದೇ ರೀತಿಯಲ್ಲಿ ನ್ಯಾಯದ ಮೊರೆ ಹೋಗಿದ್ದಾರೆ. ಹೆಚ್ಚು ಕಡಿಮೆ ದೇಶದ ಉದ್ದಗಲಗಳಲ್ಲಿ ದಾಖಲಾಗಿರುವ ಭಯೋತ್ಪಾದನಾ ಪ್ರಕರಣಗಳಲ್ಲಿ ನ್ಯಾಯದಾನಕ್ಕೆ ವರ್ಷಗಟ್ಟಲೆ ಸಮಯವನ್ನು ತೆಗೆದುಕೊಳ್ಳಲಾಗುತ್ತಿದೆ. ನೂರಾರು ಸಾಕ್ಷಿಗಳು, ಸಾವಿರಾರು ಪುಟಗಳ ದೋಷಾರೋಪ ಪಟ್ಟಿಗಳ ಸಲ್ಲಿಕೆ ಎಲ್ಲಾ ಪ್ರಕರಣಗಳಲ್ಲಿ ಕಂಡು ಬರುವ ಸಾಮಾನ್ಯ ವಿದ್ಯಮಾನವಾಗಿದೆ. ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸಲು ತಯಾರಿಲ್ಲದ ಪೊಲೀಸರು ಹೀಗೊಂದು ತಂತ್ರವನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ ಎಂಬ ಆರೋಪಗಳೂ ಇವೆ.

Update:

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸೆ. 15ರಂದು 13 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಆರೋಪಿಗಳು ಇನ್ನೂ ಯುವಕರಾಗಿರುವ ಹಿನ್ನೆಲೆಯಲ್ಲಿ ಭಿವಿಷ್ಯದ ದೃಷ್ಟಿಯಿಂದ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂದು ಆರೋಪಿ ಪರ ವಕೀಲರು ವಿನಂತಿ ಮಾಡಿಕೊಂಡರು.

ಆದರೆ, ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, “ಆರೋಪಿಗಳಾದ ಶೋಹೇಬ್ ಅಹ್ಮದ್ ಮಿರ್ಜಾ (ಎ1), ಅಬ್ದುಲ್ ಹಕೀಮ್ ಜಮಾದಾರ್ (ಎ2), ಜಾಫರ್ ಇಕ್ಬಾಲ್ ಶೋಲಾಪುರ್ (ಎ7) ಹಾಗೂ ಮೊಹಮದ್ ಸಾದಿಕ್ ಲಷ್ಕರ್ (ಎ8) ಉದ್ದೇಶಪೂರ್ವಕವಾಗಿ ಗಣ್ಯರ ಕೊಲೆ ಸಂಚನ್ನು ರೂಪಿಸಿದ್ದರು. ಒಟ್ಟು 13 ಆರೋಪಿಗಳ ಪೈಕಿ ಈ ನಾಲ್ವರಿಗೆ ಹೆಚ್ಚಿನ ಶಿಕ್ಷೆಯನ್ನು ನ್ಯಾಯಾಲಯ ನೀಡಬೇಕು,” ಎಂದು ಕೋರಿದರು. ಪ್ರಕರಣದ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು.

ಮತ್ತೆ ಮಧ್ಯಾಹ್ನ ಮೂರು ಗಂಟೆಗೆ ವಿಚಾರಣೆ ಆರಂಭವಾದ ನಂತರ ಆದೇಶವನ್ನು ನಾಳೆ (ಸೆ. 16) ನೀಡುವುದಾಗಿ ನ್ಯಾಯಾಧೀಶರು ಪ್ರಕರಣವನ್ನು ಮುಂದೂಡಿದರು.

Sep 16 UPDATE :

ಪ್ರಕರಣದಲ್ಲಿ ತೀರ್ಪು ನೀಡಿರುವ ನ್ಯಾಯಾಲಯ ಎಲ್ಲಾ 13 ಆರೋಪಿಗಳಿಗೆ 5 ವರ್ಷಗಳ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಜೊತೆಗೆ ಒಟ್ಟಾರೆ 31 ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಿದೆ.

Leave a comment

FOOT PRINT

Top