An unconventional News Portal.

‘ನನ್ನ ಮೊದಲ ಕರ್ಫ್ಯೂ’: ಬಿಕೋ ಎಂದ ಬೆಂಗಳೂರನ್ನು ನೋಡಿದ್ದು ಇದೇ ಮೊದಲು!

‘ನನ್ನ ಮೊದಲ ಕರ್ಫ್ಯೂ’: ಬಿಕೋ ಎಂದ ಬೆಂಗಳೂರನ್ನು ನೋಡಿದ್ದು ಇದೇ ಮೊದಲು!

  • ರವಿಕುಮಾರ್, ಶಿವಮೊಗ್ಗ

bengaluru-protest-eps

ಬೆಂಗಳೂರಿಗೆ ಬಂದು ಒಂದು ದಶಕದ ನಂತರ ‘ಕರ್ಫ್ಯೂ’ ಎಂದರೆ ಹೇಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗುತ್ತಿದ್ದೇನೆ.

ನಾನು ಬೆಂಗಳೂರಿಗೆ ಬಂದ ದಿನದಿಂದಲೂ ಹೆಚ್ಚು ಒಡನಾಟ ಒಟ್ಟುಕೊಂಡ ಏರಿಯಾಗಳೀಗ ಹೊತ್ತಿ ಉರಿಯುತ್ತಿವೆ. ಅಲ್ಲೆಲ್ಲಾ ‘ಕಂಡಲ್ಲಿ ಗುಂಡು’ ಜಾರಿಯಾಗಿದೆ. ಲಗ್ಗೆರೆಯ ರಿಂಗ್ ರೋಡಿನಲ್ಲಿ ಮೊದಲ ಬಾರಿಗೆ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಚಿತ್ರಣ ಕಾಣಿಸುತ್ತಿದೆ. ರಸ್ತೆಯ ಡಿವೈಡರ್ ಮೇಲೆ ನೀಟಾಗಿ ಜೋಡಿಸಿಟ್ಟಿದ್ದ ಹೂವಿನ ಕುಂಡಗಳು ಮಧ್ಯೆದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸುಟ್ಟು ಕರಕಲಾದ ಬಸ್ಗಳು, ಅಗ್ನಿ ಶಾಮಕ ದಳದ ವಾಹನಗಳು ಪಳಯುಳಿಕೆಗಳಂತೆ ಇನ್ನೂ ಅಲ್ಲಿಯೇ ನಿಂತಿವೆ. ಅಂಗಡಿ ಮುಗ್ಗಟ್ಟುಗಳು ಬಾಗಿಲು ಹಾಕಿಕೊಂಡಿವೆ. ರಸ್ತೆಯಲ್ಲಿ ಮೀಡಿಯಾದವರು ಮತ್ತು ಪೊಲೀಸರನ್ನು ಬಿಟ್ಟರೆ, ಜನರ ಸುಳಿವಿಲ್ಲ. ಹೀಗೊಂದು ಸ್ಥಿತಿ ನಾನು ಬದುಕುತ್ತಿದ್ದ ಊರಿಗೆ ಬರಬಹುದು ಎಂದು ಊಹೆ ಕೂಡ ಇರಲಿಲ್ಲ.

ನನ್ನ ಸ್ನೇಹಿತನೊಬ್ಬ ಶನಿವಾರ ಊರಿಗೆ ಹೋದವನು ಸೋಮವಾರ ಮಧ್ಯಾಹ್ನ ಶಿವಮೊಗ್ಗದಿಂದ ವಾಪಾಸಾಗುತ್ತಿದ್ದ. ಆತನಿಗೆ ಇಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಮಾಹಿತಿ ತಲುಪಿಸುವ ಹೊತ್ತಿಗೆ ಆತ ಅರಸೀಕೆರೆ ದಾಟಿದ್ದ. ಅಲ್ಲಿಂದ ತುಮಕೂರಿಗೆ ಆತ ಬರುವ ಹೊತ್ತಿಗೆ ರೈಲು ಸಂಚಾರ ಸ್ಥಗಿತಗೊಂಡಿತು. ಕೊನೆಗೆ ಅಲ್ಲಿಯೇ ಲಾಡ್ಜ್ ಒಂದರಲ್ಲಿ ಉಳಿದುಕೊಳ್ಳುವುದು ಸೇಫು ಅಂತ ನಾವೆಲ್ಲ ಹೇಳಿದೆವು. ಕೊನೆಗೆ, ಇವತ್ತು ಬೆಳಗ್ಗೆ 4 ಗಂಟೆಗೆ ಆತ ತುಮಕೂರಿನಿಂದ ಯಶವಂತಪುರಕ್ಕೆ ಬಂದ. ಅಲ್ಲಿಂದ ಆತನನ್ನು ಕರೆದುಕೊಂಡು ಬರಲು ನಾನು ಸುಮ್ಮನಹಳ್ಳಿ ವೃತ್ತದಿಂದ ಹೊರಟಾಗ 5 ಗಂಟೆಯಾಗಿರಬಹುದು. ಇದೇ ಮೊದಲ ಬಾರಿಗೆ ಆತಂಕದಿಂದ ಬೆಂಗಳೂರಿನ ರಸ್ತೆಗೆ ಇಳಿದಿದ್ದೆ. ಸುಮ್ಮನಹಳ್ಳಿ ದಾಟಿ ಮುಂದೆ ಹೋದರೆ, ಪೊಲೀಸರು ಬೇಕರಿಯೊಂದರ ಬಾಗಿಲು ತೆಗೆಸಿ ಟೀ ಮಾಡಿಸಿಕೊಳ್ಳುತ್ತಿದ್ದರು. ನಾನೂ ಅವರ ಜತೆಗೆ ಸೇರಿಕೊಂಡು ಬೆಳಗ್ಗೆ ಟೀ ಕುಡಿದು ಯಶವಂತಪುರಕ್ಕೆ ಹೋದೆ. ಅಲ್ಲಿಂದ ಸ್ನೇಹಿತನನ್ನು ಮನೆಗೆ ಕರೆದುಕೊಂಡು ಬರುವಾಗ ಇಬ್ಬರೂ ಆತಂಕದಲ್ಲಿದ್ದೆವು.

ಹಿಂದೆಲ್ಲಾ ಯಶವಂತಪುರದಿಂದ ಸುಮ್ಮನಹಳ್ಳಿಗೆ ಬರುವುದು ಎಂದರೆ ಕನಿಷ್ಟ ಮುಕ್ಕಾಲು ಗಂಟೆಯ ಹಾದಿ ಅದು. ಆದರೆ, ಇವತ್ತು ಬೆಳಗ್ಗೆ ನಾವು 10 ನಿಮಿಷದಲ್ಲಿ ಮನೆ ಸೇರಿದ್ದೆವು. ರಸ್ತೆಯುದ್ದಕ್ಕೂ ಸೋಮವಾರ ನಡೆದ ಗಲಭೆಗೆ ದಾರಾಳವಾಗಿ ಸಾಕ್ಷಿಗಳು ಸಿಕ್ಕವು. ಹಾಗೆ ನೋಡದರೆ, ಇಡೀ ಬೆಂಗಳೂರಿನಲ್ಲಿ ನಮ್ಮ ಏರಿಯಾ ಮಾತ್ರವೇ ಇಷ್ಟು ಪ್ರಕ್ಷುಬ್ಧವಾಗಿದೆ. ಇದಕ್ಕೆ ಕಾರಣವೂ ಇದೆ. ಸುಮ್ಮನಹಳ್ಳಿ, ಲಗ್ಗೆರೆ ಮತ್ತು ಸುತ್ತಮುತ್ತಲಿನ ಏರಿಯಾಗಳಲ್ಲಿ ವಾಸಿಸುವವರಲ್ಲಿ ಕನ್ನಡಿಗರ ಸಂಖ್ಯೆಯೇ ಜಾಸ್ತಿ. ಮಂಡ್ಯ, ಮದ್ದೂರು, ತುಮಕೂರು, ರಾಮನಗರಗಳಿಂದ ವಲಸೆ ಬಂದವರೇ ಇಲ್ಲಿ ಹೆಚ್ಚು. ಸಾಮಾನ್ಯ ಮಧ್ಯಮ ವರ್ಗದಿಂದ ಬಂದ ಇಲ್ಲಿನ ಕನ್ನಡಿಗರು ಕಷ್ಟಜೀವಿಗಳು. ದಿನದ ದುಡಿಮೆಯನ್ನು ನೆಚ್ಚಿಕೊಂಡು ಇರುವವರು. ಇವರಲ್ಲಿ ಎಷ್ಟೋ ಜನ ದಿನದ ರೇಷನ್ ಕೊಂಡು, ಅಡುಗೆ ಮಾಡಿ ಊಟ ಮಾಡುವವರು. ಅಂತವರ ಪರಿಸ್ಥಿತಿ ನಿನ್ನೆಯಿಂದ ಇಲ್ಲಿ ಬಿಗಡಾಯಿಸಿದೆ. ಇವತ್ತು ಮನೆಗಳ ಒಳಗಡೆಯೇ ಉಳಿದುಕೊಂಡಿದ್ದಾರೆ. ಎಷ್ಟೋ ಮನೆಗಳಲ್ಲಿ ಇವತ್ತು ರಾತ್ರಿಗೆ ಅಡುಗೆ ಮಾಡುವುದಕ್ಕೆ ಏನಾದರೂ ಇದೆ ಎಂಬುದರ ಬಗ್ಗೆ ನನಗೆ ಸಂದೇಹವಿದೆ.

ಇದೆಲ್ಲಾ ಶುರುವಾಗುವ ಹೊತ್ತಿಗೆ ನಾನು ನಮ್ಮ ಏರಿಯಾದ ಪಕ್ಕದಲ್ಲಿರುವ ರಾಜಗೋಪಾಲನಗರದಲ್ಲಿದ್ದೆ. ಸೋಮವಾರ ಬೆಳಗ್ಗೆ ಅಲ್ಲಿ ಟಿವಿಗಳನ್ನು ನೋಡುತ್ತಿದ್ದವರು ಕೆರಳಿ ಹೋದರು. ಕನ್ನಡಿಗರಿಗೆ ತಮಿಳುನಾಡಿನಲ್ಲಿ ಹಲ್ಲೆ ನಡೆಯುತ್ತಿದೆ ಎಂಬ ವಿಚಾರವನ್ನು ನೋಡಿ ಅವರು ದಾಂಧಲೆ ಶುರು ಮಾಡಿದರು. ಅದೊಂದು ನೆಪ ಆಗಿತ್ತು ಅಂತ ಈಗ ಅನ್ನಿಸುತ್ತದೆ. ಹಾಗೆ ನೋಡಿದರೆ, ಈ ಭಾಗಗಳಲ್ಲಿ ಇಂತಹ ದಾಂಧಲೆಗಳು ನಡೆಯುತ್ತಲೇ ಇರುತ್ತವೆ. ಬಂದ್ ನಡೆದಾಗಲಂತೂ ಇಲ್ಲಿ ಕನ್ನಡ ಹೆಸರು ಹೇಳದೆ ಹೊರಗೆ ಹೋಗುವುದು ಕಷ್ಟ ಎಂಬ ಪರಿಸ್ಥಿತಿ ಇದೆ. ಅದಕ್ಕಿಂತ ಹೆಚ್ಚಾಗಿ ಇಲ್ಲಿರುವ ಬಡ ಮಧ್ಯಮ ವರ್ಗದ ಜನರಿಗೆ ಇವತ್ತಿಗೂ ಕೃಷಿಯ ಬಗ್ಗೆ ಒಂದು ಭಾವನಾತ್ಮಕ ಸಂಬಂಧ ಇದೆ. ಇಲ್ಲಿನ ಹಲವು ಮನೆಗಳಲ್ಲಿ ಇವತ್ತಿಗೂ ತರಕಾರಿ ಬೆಳೆಯುವುದು ಕಾಣಿಸುತ್ತದೆ. ನೀರಿನ ವಿಚಾರದಲ್ಲಿ, ಅದರಲ್ಲೂ ಕಾವೇರಿ ವಿಚಾರದಲ್ಲಿ ಅವರು ತಮ್ಮ ಮೂಲ ಊರಿನ ಪರಿಸ್ಥಿತಿಗಳ ಜತೆ ತಾಳೆ ಹಾಕಿ ನೋಡುತ್ತಾರೆ. ಹೀಗಾಗಿ, ಸೋಮವಾರ ಬೆಳಗ್ಗೆಯಿಂದ ಒಂದಾದ ನಂತರ ಒಂದು ಉದ್ರೇಕಕಾರಿ ಸುದ್ದಿಗಳನ್ನು ಟಿವಿಗಳಲ್ಲಿ ನೋಡಿದವರಿಗೆ ಸಹಜವಾಗಿಯೇ ಕೋಪ ಬಂದಿತ್ತು. ಹಾಗಂತ ಅವರೆಲ್ಲರೂ ಬೀದಿಗೆ ಇಳಿದು ದಾಂಧಲೆ ಮಾಡಿದರು ಅಂತಲ್ಲ. ಆದರೆ, ದಾಂಧಲೆ ಮಾಡುವವರನ್ನು ನೋಡಿಯೂ ಅಂತರಂಗದಲ್ಲಿ ಬೆಂಬಲ ನೀಡಿದರು.

ಬೆಳಗ್ಗೆ ಬಂದ ಗೆಳೆಯನ ಜತೆ ಇದನ್ನೇ ಮಾತನಾಡುತ್ತಿದ್ದೆ. ನಾವು ಬೆಂಗಳೂರಿಗೆ ಬಂದ ನಂತರದ ಮೊದಲ ಕರ್ಫ್ಯೂ ಇದು. ಹೊರಗೆ ಓಡಾಡುವಂತಿಲ್ಲ. ಬೆಳಗ್ಗೆ ಹಾಲು ಇಲ್ಲ, ಅಂಗಡಿಗಳಿಲ್ಲ. ಬೆಳಗ್ಗೆಯಿಂದ ಮನೆಯೊಳಗೆ ಇದ್ದುಕೊಂಡು ದಿನ ನೂಕುತ್ತಿದ್ದೇವೆ. ಹೀಗಿರುವಾಗಲೇ, ಬ್ಯಾಚುಲರ್ ಆಗಿರುವ ಮತ್ತೊಬ್ಬ ಗೆಳೆಯ ಕರೆ ಮಾಡಿ, ಮನೆಯಲ್ಲಿ ತಿನ್ನೋಕೆ ಏನೂ ಇಲ್ಲ. ಹೊರಗೂ ಬರುವ ಹಾಗಿಲ್ಲ ಎಂದ. ಸದ್ಯ ನಮ್ಮ ಬಳಿ ಇನ್ನೂ ಒಂದೆರಡು ದಿನಕ್ಕೆ ಆಗುವಷ್ಟು ರೇಷನ್ ಇದೆ. 1991ರಲ್ಲಿ ಬೆಂಗಳೂರಿನಲ್ಲಿ ಹೀಗೊಂದು ಪರಿಸ್ಥಿತಿ ನಿರ್ಮಾಣವಾದ ಸಮಯದಲ್ಲಿ ನನ್ನ ಹಿರಿಯ ಸಂಬಂಧಿಕರೊಬ್ಬರು ಇಲ್ಲಿದ್ದರು. ಅವರು ಒಂದು ವಾರ ಲಾಡ್ಜ್ ರೂಮಿನಲ್ಲಿ ಬರೀ ಒಣ ಅನ್ನವನ್ನು ತಿಂದುಕೊಂಡು ಬದುಕಿದ್ದ ಕತೆ ಹೇಳುತ್ತಿದ್ದಾರೆ. ಅದಕ್ಕೆ ಹೋಲಿಸಿದರೆ ಈ ಬಾರಿ ನಾವು ಅಷ್ಟು ಪರದಾಡುವ ಅಗತ್ಯವಿಲ್ಲ ಅನ್ನಿಸುತ್ತಿದೆ. ಹೊರಗೆ ಪರಿಸ್ಥಿತಿ ಈಗ ಪೊಲೀಸರ ಹತೋಟಿಯಲ್ಲಿದೆ. ಆದರೆ ವಾತಾವರಣ ಬೂದಿ ಮುಚ್ಚಿದ ಕೆಂಡಂತಿದೆ. ಮೇಲ್ಮಟ್ಟಕ್ಕೆ ಕಾಣಿಸುತ್ತಿರುವ ಈ ಶಾಂತ ಪರಿಸ್ಥಿತಿ ಯಾವ ಸಮಯದಲ್ಲಿಯೂ ಕದಡಬಹುದು.

ನನಗೆ ಈ ಕಾವೇರಿ, ಸುಪ್ರಿಂ ಕೋರ್ಟ್ ತೀರ್ಪು, ಸರಕಾರದ ನಿರ್ಧಾರಗಳು ಎಲ್ಲವುಗಳ ಬಗ್ಗೆಯೂ ಕುತೂಹಲ ಇದೆ. ಆದರೆ, ಇವತ್ತಿಗೆ ಅದನ್ನು ಮೀರಿ ಹೊಸ ಬೆಂಗಳೂರನ್ನು ನೋಡುತ್ತಿದ್ದೇನೆ. ನನ್ನ ಪಾಲಿಗಿದು ಮೊದಲ ಕರ್ಫ್ಯೂ ಅನುಭವ. ಇಂತಹದೊಂದು ಪರಿಸ್ಥಿತಿ ಮತ್ತೆಂದೂ ಬಾರದಿರಲಿ.

(ಲೇಖಕರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು)

Leave a comment

FOOT PRINT

Top