An unconventional News Portal.

ಸರ್ವಾಧಿಕಾರಿ ಕೈಯಲ್ಲಿ ಬ್ರಹ್ಮಾಸ್ತ್ರ: ಅಣ್ವಸ್ತ್ರ ದೇಶಗಳ ಸಾಲಿನಲ್ಲಿ ಉತ್ತರ ಕೊರಿಯಾ; ಜಾಗತಿಕ ಆತಂಕ

ಸರ್ವಾಧಿಕಾರಿ ಕೈಯಲ್ಲಿ ಬ್ರಹ್ಮಾಸ್ತ್ರ: ಅಣ್ವಸ್ತ್ರ ದೇಶಗಳ ಸಾಲಿನಲ್ಲಿ ಉತ್ತರ ಕೊರಿಯಾ; ಜಾಗತಿಕ ಆತಂಕ

ಮನುಕುಲದ ವಿರೋಧಿ ಅಣ್ವಸ್ತ್ರಗಳನ್ನು ಹೊಂದಿರುವ ದೇಶಗಳ ಸಾಲಿಗೆ ಉತ್ತರ ಕೊರಿಯಾ ಹೊಸದಾಗಿ ಸೇರ್ಪಡೆಯಾಗಿದೆ. ‘ಅಣ್ವಸ್ತ್ರ ಸಿಡಿತಲೆಯ ಪರೀಕ್ಷೆ ಯಶಸ್ವಿಯಾಗಿದೆ’ ಎಂದು ಉತ್ತರ ಕೊರಿಯಾದ ಸರಕಾರಿ ವಾಹಿನಿ ಶುಕ್ರವಾರ ವರದಿ ಮಾಡಿದ್ದು, ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ.

ಉತ್ತರ ಕೊರಿಯಾದ ಚಾನೆಲ್ಲುಗಳಲ್ಲಿ ಅಣ್ವಸ್ತ್ರ ಸ್ಪೋಟದ ಸುದ್ದಿ (ಚಿತ್ರ: ಗಾರ್ಡಿಯನ್)

ಉತ್ತರ ಕೊರಿಯಾದ ಚಾನೆಲ್ಲುಗಳಲ್ಲಿ ಅಣ್ವಸ್ತ್ರ ಸ್ಪೋಟದ ಸುದ್ದಿ (ಚಿತ್ರ: ಗಾರ್ಡಿಯನ್)

ಶುಕ್ರವಾರ ದಕ್ಷಿಣ ಕೊರಿಯಾದ ಉತ್ತರ ಭಾಗದಲ್ಲಿ 5.3 ತೀವ್ರತೆಯ ಭೂ ಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಇದೇ ರೀತಿಯ ಭೂಮಿ ಕಂಪಿಸಿದ ವಾರ್ತೆಗಳು ಅಮೆರಿಕಾದ ಭೂಗರ್ಭ ಇಲಾಖೆ ಮತ್ತು ಜಪಾನಿನ ಭೂಕಂಪ ಮತ್ತು ಸುನಾಮಿ ಪರಿವೀಕ್ಷಣಾ ಕೇಂದ್ರಗಳಿಗೂ ತಲುಪಿದೆ. ಭಾರಿ ಬಾಂಬ್ ಸ್ಪೋಟ ಸಂಭವಿಸಿದಾಗ ಮಾತ್ರ ಇಂಥಹ ಕೃತಕ ಕಂಪನಗಳು ಸಂಭವಿಸುತ್ತವೆ. ಇದಾದ ಬೆನ್ನಿಗೆ ಉತ್ತರ ಕೊರಿಯಾದ ಸರಕಾರಿ ಚಾನೆಲ್ಲುಗಳು ಅಣ್ವಸ್ತ್ರ ಸ್ಪೋಟದ ಯಶಸ್ಸಿನ ಸುದ್ದಿಯನ್ನು ಬಿತ್ತರಿಸಿವೆ.

ಸರ್ವಾಧಿಕಾರಿಯ ಹುಚ್ಚಾಟ: 

‘ಡೆಮಾಕ್ರಾಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ’ ಎಂದು ಕರೆದುಕೊಳ್ಳುವ ಉತ್ತರ ಕೊರಿಯಾದಲ್ಲಿ ನಿರಂಕುಶ ಪ್ರಭುತ್ವವಿದೆ. ಅಲ್ಲಿನ ಯುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ವಿಕ್ಷಿಪ್ತ ನಿರ್ಧಾರಗಳಿಂದ ಆಗಾಗ ಜಾಗತಿಕ ಸುದ್ದಿ ಕೇಂದ್ರಕ್ಕೆ ಬರುತ್ತಿರುತ್ತಾರೆ. ಪಕ್ಕದ ದಕ್ಷಿಣ ಕೊರಿಯಾದ ಮೇಲೆ ಯುದ್ಧ ಮಾಡುತ್ತೇನೆ ಎಂದು ಬೆದರಿಕೆ ಹಾಕುವುದು, ಅಮೆರಿಕಾವನ್ನು ಧ್ವಂಸ ಮಾಡುತ್ತೇನೆಂದು ಗರ್ಜಿಸುವುದು ಇವೇ ಮುಂತಾದ ಕೆಲಸಗಳಿಂದ ಅಲ್ಲಿನ ಅಧ್ಯಕ್ಷರು ನಿರಂತರವಾಗಿ ಗುರುತಿಸಿಕೊಂಡು ಬಂದಿರುವುದರಿಂದ ಅವರ ಈ ಅಣ್ವಸ್ತ್ರ ಯೋಜನೆ ಆತಂಕ ಹುಟ್ಟುಹಾಕಿದೆ.

ಇಡಿ ದೇಶವೇ ಬಡತನದಲ್ಲಿ ನಲುಗುತ್ತಿದ್ದರೂ, ಈ ದೇಶದ ಸರ್ವಾಧಿಕಾರಿ ಮಾತ್ರ ಮಿಲಿಟರಿ ಯೋಜನೆಯನ್ನೇ ಅಭಿವೃದ್ಧಿ ಎಂದು ಬಿಂಬಿಸುತ್ತಿದ್ದಾರೆ. ಮೇಲಿಂದ ಮೇಲೆ ಮಿಸೈಲ್ ಮತ್ತು ಅಣ್ವಸ್ತ್ರಗಳ ಸಿದ್ಧತೆ, ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚೆಗೆ ನಾಲ್ಕು ಮಿಸೈಲ್ಗಳ ಪರೀಕ್ಷೆ ವಿಫಲವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಜಪಾನ್, ಕೊರಿಯಾದ ಮೇಲೆ ತೂಗುಗತ್ತಿ: 

ಬಾಂಬ್ ಸ್ಪೋಟದ ತೀವ್ರತೆ ವಿವಿರಿಸುವ ಚಿತ್ರ (ಚಿತ್ರ: ಟುಡೇ ನ್ಯೂಸ್)

ಬಾಂಬ್ ಸ್ಪೋಟದ ತೀವ್ರತೆ ವಿವರಿಸುವ ಚಿತ್ರ (ಚಿತ್ರ: ಟುಡೇ ನ್ಯೂಸ್)

21 ಶತಮಾನದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಮೊದಲ ರಾಷ್ಟ್ರ ಉತ್ತರ ಕೊರಿಯವಾಗಿದ್ದು, ಅದರ ಈ ನಿರ್ಧಾರ ಪಕ್ಕದ ರಾಷ್ಟ್ರ ದಕ್ಷಿಣ ಕೊರಿಯಾದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಗನ್ ಹೈ ಇದೊಂದು “ಮತಾಂಧರ ಅಜಾಗರೂಕತೆ,” ಎಂದು ಕರೆದಿದ್ದಾರೆ. ಮಾತ್ರವಲ್ಲ ತಮ್ಮ ಆತಂಕವನ್ನು ಅವರು ಮಿತ್ರ ರಾಷ್ಟ್ರ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಜತೆಗೂ ಹಂಚಿಕೊಂಡಿದ್ದಾರೆ. ಇದು “ವಿಶ್ವಸಂಸ್ಥೆಯ ರಕ್ಷಣಾ ಸಮಿತಿಯ ಘೋಷಣೆಯ ಸ್ಪಷ್ಟ ಉಲ್ಲಂಘನೆ,” ಎಂದು ಅಧ್ಯಕ್ಷರು ಹೇಳಿದ್ದಾರೆ.

“ಉತ್ತರ ಕೊರಿಯಾದ ಈ ಯೋಜನೆಯಿಂದ ಜಪಾನ್ ರಕ್ಷಣೆಯ ಮೇಲೂ ಕರಿನೆರಳು ಬಿದ್ದಿದೆ,” ಎಂದು ಜಪಾನ್ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿಹಿದೆ ಶುಗಾ ಹೇಳಿದ್ದಾರೆ.

ಉತ್ತರ ಕೊರಿಯಾದ ಅಣ್ವಸ್ತ್ರ ಯತ್ನ ನಿಜವಾಗಿಯೂ ಯಶಸ್ವಿಯಾಗಿದ್ದೇ ಆದಲ್ಲಿ ಅಣ್ವಸ್ತ್ರ ಹೊಂದಿರುವ ವಿಶ್ವದ ಎಂಟನೇ ದೇಶವಾಗಿ ಗುರುತಿಸಿಕೊಳ್ಳಲಿದೆ. ಈಗಾಗಲೇ ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರಗಳನ್ನು ಅಭಿವೃದ್ಧಿ ಪಡಿಸಿವೆ. ಇನ್ನು ಇಸ್ರೇಲ್ ಕೂಡಾ ಅಣ್ವಸ್ತ್ರ ಅಭಿವೃದ್ಧಿ ಪಡಿಸಿದ್ದರೂ, ಎಲ್ಲೂ ಅದು ತಾನು ಅಣ್ವಸ್ತ್ರ ಅಭಿವೃದ್ಧಿ ಪಡಿಸಿದ್ದೇನೆ ಎಂಬುದನ್ನು ಘೋಷಿಸಿಲ್ಲ. ಇರಾನ್ ಇತ್ತೀಚೆಗೆ ಅಣ್ವಸ್ತ್ರ ಅಭಿವೃದ್ಧಿ ಕೆಲಸಕ್ಕೆ ಕೈ ಹಾಕಿತ್ತಾದರೂ, ಜಾಗತಿಕ ಒತ್ತಡದಿಂದಾಗಿ ಅದನ್ನು ಕೈ ಬಿಟ್ಟಿತ್ತು.

Leave a comment

FOOT PRINT

Top