An unconventional News Portal.

‘ಶೂಟ್ ಆ್ಯಸಿಡ್’ ಆಂದೋಲನ: ‘ನ್ಯೂಯಾರ್ಕ್ ಫ್ಯಾಷನ್ ವೀಕ್’ನಲ್ಲಿ ಸನ್ನಿ ಜೊತೆ ಸಂತ್ರಸ್ತೆ ಹೆಜ್ಜೆ!

‘ಶೂಟ್ ಆ್ಯಸಿಡ್’ ಆಂದೋಲನ: ‘ನ್ಯೂಯಾರ್ಕ್ ಫ್ಯಾಷನ್ ವೀಕ್’ನಲ್ಲಿ ಸನ್ನಿ ಜೊತೆ ಸಂತ್ರಸ್ತೆ ಹೆಜ್ಜೆ!

ಆ್ಯಸಿಡ್ ದಾಳಿಯಿಂದ ಸಂತ್ರಸ್ತರಾದವರು ‘ಶೂಟ್ ಆ್ಯಸಿಡ್’ ಹೆಸರಿನಲ್ಲಿ ಆ್ಯಸಿಡ್ ದಾಳಿಗಳ ವಿರುದ್ಧ ಸಮರ ಸಾರಿದ್ದಾರೆ. ಇದೇ ವೇಳೆ, ಆಶಾದಾಯಕ ಬೆಳವಣಿಗೆಯೊಂದರಲ್ಲಿ ರೇಷ್ಮಾ ಖುರೇಶಿ ಎಂದ ಆ್ಯಸಿಡ್ ಸಂತ್ರಸ್ತೆ ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ಅಂದ ಹಾಗೆ ಇದೇ ಫ್ರಾಷನ್ ಶೋನಲ್ಲಿ ಸನ್ನಿ ಲಿಯೋನ್ ಕೂಡಾ ಕ್ಯಾಟ್ ವಾಕ್ ಮಾಡಲಿದ್ದಾರೆ.

ಮುಕ್ತ ಮಾರುಕಟ್ಟೆಯಲ್ಲಿ ಆ್ಯಸಿಡ್ ಮಾರಾಟ ತಡೆಗಟ್ಟಲು ಆ್ಯಸಿಡ್ ದಾಳಿಯಿಂದ ಬದುಕುಳಿದವರು ಉತ್ತರ ಪ್ರದೇಶದಿಂದ ಆಂದೋಲನ ಆರಂಭಿಸಿದ್ದಾರೆ. ತಾವೇ ನೇರವಾಗಿ ಮಾರುಕಟ್ಟೆ ಪ್ರದೇಶಗಳಿಗೆ ನುಗ್ಗಿ ಆ್ಯಸಿಡ್ ಮಾರಾಟವನ್ನು ಪತ್ತೆ ಹಚ್ಚಿ ಸಂಭವನೀಯ ಅಪಾಯಗಳನ್ನು ತಡೆಗಟ್ಟುವುದು ಇವರ ಪ್ಲಾನ್.

ಆಂದೋಲನದ ಭಾಗವಾಗಿ ಸಂತ್ರಸ್ತರು ಎಲ್ಲೆಲ್ಲಾ ಆ್ಯಸಿಡ್ ಮಾರಾಟ ನಡೆಯುತ್ತಿದೆಯೋ ಅಲ್ಲಿಗೆ ಹೋಗಿ ಆ್ಯಸಿಡ್ ಮಾರಾಟದ ದಾಖಲೆಗಳನ್ನು ವೀಡಿಯೋ ಚಿತ್ರೀಕರಣ ನಡೆಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಿದ್ದಾರೆ. ಇದಲ್ಲದೆ ತಮ್ಮ ಫೇಸ್ ಬುಕ್ ಪುಟದಲ್ಲಿ ತಮ್ಮ ತಮ್ಮ ಸ್ಥಳಗಳಲ್ಲಿ ಆ್ಯಸಿಡ್ ಮಾರಾಟ ಮಾಡುವ ವೀಡಿಯೋ ಹಾಗೂ ಫೊಟೋಗಳನ್ನು ಹಂಚಿಕೊಳ್ಳುವಂತೆ ಜನರ ಬಳಿ ಕೇಳಿಕೊಂಡಿದ್ದಾರೆ.

“ಉತ್ತರ ಪ್ರದೇಶದ ಆ್ಯಸಿಡ್ ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿಗೆ ನೆರವು ನೀಡುವುದರಲ್ಲಿ ಮುಂಚೂಣಿಯಲ್ಲಿದೆ.  ಆದರೆ ಆ್ಯಸಿಡ್ ಮಾರಾಟದ ಬಗ್ಗೆ ಯಾರೂ ಗಮನ ಹರಿಸಿಲ್ಲ. ನಾವು ಮುಖ್ಯಮಂತ್ರಿಗೂ ಪತ್ರ ಬರೆದು ನಮ್ಮ ಆಂದೋಲನಕ್ಕೆ ಬೆಂಬಲ ಸೂಚಿಸುವಂತೆ ಕೇಳಿಕೊಂಡಿದ್ದೇವೆ. ನಾವು ದಾಖಲೆಗಳನ್ನು ಸಂಗ್ರಹಿಸಿ ಸರಕಾರದಿಂದ ಕ್ರಮವನ್ನು ನಿರೀಕ್ಷಿಸುತ್ತೇವೆ,” ಎಂದು ಆಂದೋಲನದ ಆಯೋಜಕಿ ಮತ್ತು ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ತಿಳಿಸಿದ್ದಾರೆ.

ಸದ್ಯ ಆಂದೋಲನ ಆರಂಭಿಸಿ ಮೂರು ದಿನಗಳಾಗಿದ್ದು ಬೇರೆ ಬೇರೆ ಮಾರುಕಟ್ಟೆ ಮತ್ತು ನಿವಾಸಗಳಿರುವೆಡೆ ಆ್ಯಸಿಡ್ ಮಾರಾಟ ಮಾಡುವ ದಾಖಲೆಗಳು ಸಿಕ್ಕಿವೆ. ಬಹುಶಃ ಆ್ಯಸಿಡ್ ಮಾರಟದ ಬಗ್ಗೆ ಯಾವುದೇ ನಿಗಾ ಇಲ್ಲ,” ಎನ್ನುತ್ತಾರೆ ಲಕ್ಷ್ಮಿಯ ಪತಿ ಅಲೋಕ್ ದೀಕ್ಷಿತ್.

“ನಾವು ಕಾನ್ಪುರ ಜಿಲ್ಲಾಧಿಕಾರಿ ಜತೆ ಮಾತನಾಡಿದ್ದು ಉತ್ತಮ ಪ್ರತಿಕ್ರೀಯೆ ದೊರೆತಿದೆ. ಕ್ರಮ ಕೈಗೊಳ್ಳುವ ಬಗ್ಗೆ ಅವರು ಭರವಸೆ ನೀಡಿದ್ದಾರೆ,” ಎನ್ನುತ್ತಾರೆ ಅವರು. ಸದ್ಯ ಕಾನ್ಪುರದಿಂದ ಆರಂಭವಾದ ಈ ಆಂದೋಲನ ಈಗ ಉತ್ತರ ಪ್ರದೇಶದಾದ್ಯಂತ ವ್ಯಾಪಿಸಿದೆ.

ಪಾಲನೆಯಾಗದ ‘ಸುಪ್ರೀಂ’ ಆದೇಶ

2013ರ ಸುಪ್ರಿಂ ಕೋರ್ಟ್ ಆದೇಶದಂತೆ ಪರವಾನಿಗೆ ಪಡೆದ ಮಾರಟಗಾರರು ಮಾತ್ರ ಆ್ಯಸಿಡ್ ಮಾರಾಟ ಮಾಡಬೇಕು. ಮಾತ್ರವಲ್ಲ 18 ವರ್ಷ ಕೆಳಗಿನವರಿಗೆ ಆ್ಯಸಿಡ್ ಕೊಡುವಂತಿಲ್ಲ.

ಯಾವುದೇ ವಿಶವನ್ನು ಮಾರಾಟ ಮಾಡಬೇಕೆಂದರೂ, ಖರೀದಿಸುವವರ ಹೆಸರು, ಫೋನ್ ನಂಬರ್, ಮತ್ತು ವಿಳಾಸವನ್ನು ದಾಖಲಿಸಿಕೊಳ್ಳಬೇಕು. ತಮ್ಮಲ್ಲಿರುವ ಸಂಗ್ರಹದ ಮಾಹಿತಿಯನ್ನು ಉಪವಿಭಾಗಾಧಿಕಾರಿಗೆ 15 ದಿನಗಳಿಗೊಮ್ಮೆ ಮಾಹಿತಿ ನೀಡಬೇಕು. ಒಂದೊಮ್ಮೆ ಸಂಗ್ರಹದ ಬಗ್ಗೆ ಸರಿಯಾದ ಮಾಹಿತಿ ನೀಡದಿದ್ದಲ್ಲಿ 50 ಸಾವಿರ ದಂಡ ಹಾಕಲೂ ಅವಕಾಶಗಳಿವೆ. ಆದರೆ ಇದು ಯಾವುದೂ ಪಾಲನೆಯಾಗುತ್ತಿಲ್ಲ ಎನ್ನುತ್ತಾರೆ ಅಲೋಕ್.

ಆ್ಯಸಿಡ್ ದಾಳಿಗಳಲ್ಲಿ ಏರಿಕೆ

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಮಾಹಿತಿಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಆ್ಯಸಿಡ್ ದಾಳಿಗಳ ಪ್ರಮಾಣ ಶೇಕಡಾ 9 ರಷ್ಟು ಹೆಚ್ಚಾಗಿದೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಉತ್ತರ ಪ್ರದೇಶದಿಂದಲೇ ವರದಿಯಾಗಿವೆ.

ಒಟ್ಟಾರೆ ಕಳೆದೊಂದು ವರ್ಷದಲ್ಲಿ ದೇಶದಲ್ಲಿ 222 ಆ್ಯಸಿಡ್ ದಾಳಿ ಪ್ರಕರಣಗಳು ನಡೆದಿದ್ದರೆ, 55 ಉತ್ತರ ಪ್ರದೇಶವೊಂದರಲ್ಲೇ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ 39, ನವದೆಹಲಿಯಲ್ಲಿ 21 ಪ್ರಕರಣಗಳು ವರದಿಯಾಗಿವೆ. 2014ರಲ್ಲಿ ಇದೇ ವೇಳೆ 203 ಆ್ಯಸಿಡ್ ದಾಳಿ ಘಟನೆಗಳು ನಡೆದಿದ್ದವು.

ಹೆಚ್ಚಿನ ಘಟನೆಗಳಲ್ಲಿ ಒಂದಕ್ಕಿಂತ ಹೆಚ್ಚು ಜನ ಸೇರಿ ಆ್ಯಸಿಡ್ ಎರಚಿದ್ದಾರೆ. “ಭಗ್ನ ಪ್ರೇಮ, ಗಂಡಂದಿರನ್ನು ಹೊರತಾಗಿಯೂ ಶತ್ರುಗಳ ಮೇಲೆ ಆ್ಯಸಿಡ್ ಎರಚಿರುವ ಉದಾಹರಣೆಗಳಿವೆ,” ಎನ್ನುತ್ತಾರೆ ಅಲೋಕ್ ದೀಕ್ಷಿತ್.

ಅಪರಾಧ ದಾಖಲೆಗಳ ಪ್ರಕಾರ, ಬಿಹಾರದಲ್ಲಿ 15, ಆಂಧ್ರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ತಲಾ 14, ಹರ್ಯಾಣದಲ್ಲಿ 10, ಕೇರಳ ಮತ್ತು ಮಹಾರಾಷ್ಟ್ರದಲ್ಲ ತಲಾ 7, ಒಡಿಶಾದಲ್ಲಿ ಮತ್ತು ತಮಿಳುನಾಡಿನಲ್ಲಿ ತಲಾ 8, ತ್ರಿಪುರಾ ಹಾಗೂ ಗುಜರಾತಿನಲ್ಲಿ ತಲಾ 4, ಅಸ್ಸಾಂನಲ್ಲಿ ಮೂರು, ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಸಂತೋಷದ ವಿಚಾರವೆಂದರೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಒಂದೂ ಆ್ಯಸಿಡ್ ದಾಳಿ ಪ್ರಕರಣಗಳು ದಾಖಲಾಗಿಲ್ಲ.

‘ನ್ಯೂಯಾರ್ಕ್ ಫ್ಯಾಷನ್ ವೀಕ್’ನಲ್ಲಿ ಆ್ಯಸಿಡ್ ಸಂತ್ರಸ್ತೆಯ ಕ್ಯಾಟ್ ವಾಕ್

ಒಂದು ಕಡೆ ಆಂದೋಲನಗಳು ನಡೆಯುತ್ತಿದ್ದರೆ ಇನ್ನೊಂದು ಕಡೆ ಆ್ಯಸಿಡ್ ಸಂತ್ರಸ್ತೆಯೊಬ್ಬರು ಪ್ರತಿಷ್ಠಿತ ‘ನ್ಯೂಯಾರ್ಕ್ ಫ್ಯಾಷನ್ ವೀಕ್’ ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಅವಕಾಶ ಗಿಟ್ಟಿಸಿದ್ದಾರೆ. 2014ರಲ್ಲಿ ಭಾವನಿಂದ ಆ್ಯಸಿಡ್ ದಾಳಿಗೆ ಒಳಗಾಗಿ, ಒಂದು ಕಣ್ಣನ್ನೂ ಕಳೆದುಕೊಂಡಿರುವ ರೇಷ್ಮಾ ಖುರೇಶಿ ಈ ಮನ್ನಣೆಗೆ ಪಾತ್ರವಾಗಿದ್ದಾರೆ. ಅಂದ ಹಾಗೆ ಇದೇ ರ್ಯಾಂಪ್ ಮೇಲೆ ಮೊದಲ ಬಾರಿಗೆ ಸನ್ನಿ ಲಿಯೋನ್ ಕ್ಯಾಟ್ ವಾಕ್ ಮಾಡಲಿದ್ದಾರೆ.

“ನನ್ನ ತಂಗಿಯ ಮೇಲೆ ದೌರ್ಜನ್ಯ ಮಾಡುತ್ತಿದ್ದ ನನ್ನ ಭಾವ ನನ್ನ ಮೇಲೆ ಆ್ಯಸಿಡ್ ಹಾಕಿ, ತಂಗಿಯ ಕೈ ಮೇಲೆ ಆ್ಯಸಿಡ್ ಸುರಿದರು. ಅವತ್ತಿಗೆ ಚಿಕಿತ್ಸೆ ಮುಗಿಸಿ ನನ್ನ ಮುಖ ಕನ್ನಡಿಯಲ್ಲಿ ನೋಡಿದಾಗ ನನಗೇ ನಂಬಲಾಗಲಿಲ್ಲ. ನನ್ನನ್ನೇ ನಾನು ಕೊಲ್ಲಬೇಕು ಎಂದು ಕೊಂಡಿದ್ದೆ. ಆದರೆ ನಾನು ಬದುಕಬೇಕೆಂದು ಮತ್ತೆ ಗೊತ್ತಾಯ್ತು. ಈಗ ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ಭಾಗವಹಿಸುತ್ತರುವುದಕ್ಕೆ ತುಂಬಾ ಖುಷಿಯಾಗುತ್ತದೆ,” ಎನ್ನುತ್ತಾರೆ ರೇಷ್ಮಾ.

ಸದ್ಯ ಈಕೆ ‘ಮೇಕ್ ಲವ್ ನಾಟ್ ಸ್ಕೇರ್ಸ್’ ಎನ್ನುವ ಸ್ವಯಂ ಸೇವಾ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಉಳಿದ ಆ್ಯಸಿಡ್ ಸಂತ್ರಸ್ತರಿಗೂ ನೆರವಾಗುತ್ತಿದ್ದಾರೆ. ಮಾಡೆಲಿಂಗ್ನಲ್ಲಿಯೂ ಈಕೆ ತೊಡಗಿಸಿಕೊಂಡಿದ್ದು ಹಲವರಿಗೆ ಸ್ಪೂರ್ಥಿಯಾಗಿದ್ದಾರೆ.

Leave a comment

FOOT PRINT

Top