An unconventional News Portal.

ಮತ್ತೆ ‘ಐತಿಹಾಸಿಕ ಜಲ ವಿವಾದ’ದ ಸದ್ದು: ಮಳೆ ಅಭಾವದ ಗಾಯದ ಮೇಲೆ ಸುಪ್ರಿಂ ಬಾಸುಂಡೆ!

ಮತ್ತೆ ‘ಐತಿಹಾಸಿಕ ಜಲ ವಿವಾದ’ದ ಸದ್ದು: ಮಳೆ ಅಭಾವದ ಗಾಯದ ಮೇಲೆ ಸುಪ್ರಿಂ ಬಾಸುಂಡೆ!

ಒಂದೆಡೆ ರಾಜ್ಯದಲ್ಲಿ ಮಳೆಯ ಅಭಾವ, ಮೇಲಾಗಿ ಕಾವೇರಿ ನೀರು ಬಿಡುವಂತೆ ಸುಪ್ರಿಂ ಕೋರ್ಟ್ ಆದೇಶ.

ದೇಶದ ಅತ್ಯಂತ ಹಳೆಯ ಜಲವಿವಾದಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ರಾಜ್ಯದ ಜನ ಕೆರಳುವಂತಹ ತೀರ್ಪು ಹೊರಬಿದ್ದಿದೆ. ಗೌರಿ ಗಣೇಶ ಹಬ್ಬದ ಸಂಭ್ರಮಾಚರಣೆಯ ಹೊತ್ತಿನಲ್ಲಿಯೇ, ಪ್ರತಿ ದಿನ 15,000 ಕ್ಯೂಸೆಕ್ಸ್ ನೀರಿನಂತೆ ಮುಂದಿನ 10 ದಿನಗಳ ಕಾಲ (12.96 ಟಿಎಂಸಿ) ತಮಿಳುನಾಡಿನ ರೈತರಿಗೆ ನೀರು ಹರಿಸುವಂತೆ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಈಗಾಗಲೇ ಪ್ರತಿಭಟನೆಗಳು ಆರಂಭವಾಗಿವೆ.

1 ಕ್ಯೂಸೆಕ್ = 28.317 ಲೀ/ಸೆ (ಹರಿವು)

ಒಂದು ದಿನಕ್ಕೆ 11,000 ಕ್ಯೂಸೆಕ್ಸ್ ನೀರು ಹರಿಯುವಿಕೆ = 1 ಟಿಎಂಸಿ

1 ಟಿಎಂಸಿ = 28,316,846,592 ಲೀ

ಕಳೆದ ವಾರವೇ ರಾಜ್ಯದ ಪರವಾಗಿ ಕಾವೇರಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ನಲ್ಲಿ ನ್ಯಾಯಾಂಗ ಹೋರಾಟ ನಡೆಸುತ್ತಿರುವ ಹಿರಿಯ ವಕೀಲ ಫಾಲಿ ನಾರಿಮನ್ (ಯಾರು?) ಹೀಗೊಂದು ತೀರ್ಪಿನ ನಿರೀಕ್ಷೆಯಲ್ಲಿರಿ ಎಂದು ತಿಳಿಸಿದ್ದರು ಎಂಬ ಸುದ್ದಿ ಹೊರಬಿದ್ದಿತ್ತು. ಇದಾದ ಬೆನ್ನಿಗೇ ಸೋಮವಾರ ಕೋರ್ಟ್ ಆದೇಶ ನೀಡಿದೆ.

‘ನ್ಯಾಯಾಧಿಕರಣದ ಅಂತಿಮ ಆದೇಶವನ್ನು ಕರ್ನಾಟಕ ಸರಕಾರ ಉಲ್ಲಂಘಿಸಿದೆ. ಒಂದು ವೇಳೆ ಕರ್ನಾಟಕ ಸರಕಾರ ನೀರು ಬಿಡದೇ ಇದ್ದಲ್ಲಿ ತಮಿಳುನಾಡು ರೈತರ ಮುಂಗಾರು ಹಂಗಾಮಿನ ಬೆಳೆ ಪೂರ್ತಿಯಾಗಿ ನಾಶವಾಗುತ್ತದೆ. ಕರ್ನಾಟಕ ಸರಕಾರಕ್ಕೆ ನೀರು ಬಿಡಲು ಸೂಚನೆ ನೀಡಿ’ ಎಂದು ಸುಪ್ರೀಂ ಕೋರ್ಟ್ ಮೊರೆಹೊಗಿತ್ತು ತಮಿಳುನಾಡು. ಈ ಮನವಿಯನ್ನು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಉದಯ್ ಉಮೇಶ್ ಲಲಿತ್ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ, ಕರ್ನಾಟಕ ಸರಕಾರ ತಾನು ದಿನಕ್ಕೆ 10 ಸಾವಿರ ಕ್ಯೂಸೆಕ್ಸ್ (0.86 ಟಿಎಂಸಿ) ನಂತೆ ಸೆಪ್ಟೆಂಬರ್ 7 ರಿಂದ 12 ರವರೆಗೆ 6 ದಿನ ನೀರು ಬಿಡುವುದಾಗಿ ಹೇಳಿತ್ತು. ಆದರೆ ಇದಕ್ಕೊಪ್ಪದ ತಮಿಳುನಾಡು, ರೈತರನ್ನು ಗಮನದಲ್ಲಿಟ್ಟುಕೊಂಡು ದಿನಕ್ಕೆ 10 ಸಾವಿರ ಕ್ಯೂಸೆಕ್ಸ್ ಬದಲಾಗಿ 20 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಕೋರಿಕೊಂಡಿತ್ತು.

ಕೊನೆಗೆ ವಾದ ವಿವಾದಗಳನ್ನು ಆಲಿಸಿದ ನ್ಯಾಯಪೀಠ ಕರ್ನಾಟಕ ಬಿಲಿಗುಂಡುವಿಲಿನಿಂದ (KRS) ದಿನಕ್ಕೆ 15 ಸಾವಿರ ಕ್ಯೂಸೆಕ್ಸ್ನಂತೆ 10 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿದೆ. ಇದೇ ವೇಳೆ ಸಮನಾಂತರವಾಗಿ ತಮಿಳುನಾಡು ಪುದುಚೇರಿಗೆ ನೀರು ಬಿಡುವಂತೆಯೂ ಆದೇಶದಲ್ಲಿ ಹೇಳಲಾಗಿದೆ. ಒಂದು ವೇಳೆ ಕರ್ನಾಟಕ ಮೂರು ದಿನಗಳೊಳಗೆ ನೀರು ಬಿಡಲು ವಿಫಲವಾದಲ್ಲಿ, ಇಂದಿನಿಂದ ಆರಂಭಿಸಿ ಮೂರು ದಿನಗಳ ಒಳಗೆ ಸೂಪರ್ ವೈಸರಿ ಕಮಿಟಿಗೆ ಮೊರೆ ಹೋಗುವಂತೆ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಅಲ್ಲದೇ ಸೂಪರ್ ವೈಸರಿ ಕಮಿಟಿ ಮೊರೆ ಹೋದಲ್ಲಿ ನಾಲ್ಕು ದಿನಗಳ ಒಳಗೆ ನಿರ್ದೇಶನವನ್ನು ನೀಡುವಂತೆಯೂ ಆದೇಶದಲ್ಲೇ ತಿಳಿಸಿದೆ.

ಪರಿಸ್ಥಿತಿ ಹೇಗಿದೆ?: 

ದಕ್ಷಿಣ ಒಳನಾಡಿನ ವ್ಯಾಪ್ತಿಯಲ್ಲಿ ಒಟ್ಟು 16 ಜಿಲ್ಲೆಗಳು ಬರುತ್ತವೆ. ಅದರಲ್ಲಿ ಕಾವೇರಿ ಕಣಿವೆ ಪ್ರದೇಶ ಕೇವಲ ಶೇಕಡಾ 37. ಈ ಪ್ರದೇಶದಲ್ಲಿ ಮುಂಗಾರು ಪೂರ್ವ ಮಳೆ ಶೇಕಡಾ 35 ರಷ್ಟು ಕೊರತೆಯಾಗಿದೆ. ಕೃಷ್ಣರಾಜ ಸಾಗರ ಪ್ರದೇಶದಲ್ಲಿ ಜುಲೈನಲ್ಲಿ ಶೇಕಡಾ 28 ಹಾಗೂ ಆಗಸ್ಟ್ನಲ್ಲಿ ಶೇಕಡಾ 42 ರಷ್ಟು ಮಳೆ ಕಡಿಮೆಯಾಗಿದೆ. ಜೂನ್ 1 ರಿಂದ ಆಗಸ್ಟ್ 26 ರ ಅವಧಿಯಲ್ಲಿನ 12 ವಾರಗಳಲ್ಲಿ 10 ವಾರಗಳಲ್ಲಿ ವಾಡಿಕೆಗಿಂತಲೂ ಮಳೆ ಕಡಿಮೆಯಾಗಿದೆ. ಇದರ ಪರಿಣಾಮ ಕಾವೇರಿ ಕಣಿವೆಯ ಜಲಾಶಯಗಳಲ್ಲಿನ ನೀರು ಸಂಗ್ರಹದಲ್ಲಿ ತೀವ್ರ ಕುಸಿತ ಉಂಟಾಗಿದೆ. ಈ ಪ್ರದೇಶದಲ್ಲಿ 63,000 ಹೆಕ್ಟೇರ್ ಭತ್ತದ ಬೆಳೆಗೆ ಪ್ರತಿಯಾಗಿ ಕೇವಲ ಶೇಕಡಾ 8 ರಷ್ಟು ಪ್ರದೇಶದಲ್ಲಿ ನಾಟಿಯಾಗಿದೆ. ಅಲ್ಲದೆ, 24,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲು ಸಿದ್ಧತೆ ನಡೆದಿದೆ. ಶೇಕಡಾ 52 ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಿಲ್ಲ. ಕಬ್ಬು ಬೆಳೆಯ ಪರಿಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿಲ್ಲ. ಮುಂಗಾರು ವೈಫಲ್ಯದಿಂದ ರಾಜ್ಯವು ತೀವ್ರ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಕುಡಿಯುವ ನೀರು ಪೂರೈಕೆಗೆ ಆಧ್ಯತೆ ನೀಡಬೇಕು ಎಂಬುದು ರಾಜ್ಯ ಸರಕಾರದ ಕಾಳಜಿಯಾಗಿತ್ತು.cauvery water feature copy-2

ಕಾವೇರಿ ಕಣಿವೆಯ 4 ಜಲಾಶಯಗಳ (ಕೆಆರ್‌ಎಸ್‌,  ಕಬಿನಿ, ಹಾರಂಗಿ  ಮತ್ತು  ಹೇಮಾವತಿ) ಒಟ್ಟು ಸಂಗ್ರಹ ಸಾಮರ್ಥ್ಯ 114 ಟಿಎಂಸಿ ಅಡಿ ಆಗಿದೆ. ಆಗಸ್ಟ್‌ ಅಂತ್ಯದವರೆಗೆ ಜಲಾಶಯಗಳಿಗೆ 195.25 ಟಿಎಂಸಿ ಅಡಿ ಹರಿದು ಬರಬೇಕಿತ್ತು. ಆದರೆ ಅಷ್ಟು ನೀರು ಹರಿದು ಬಂದಿಲ್ಲ. ಒಂದೊಮ್ಮೆ ಸಾಮಾನ್ಯ ಮಳೆಯಾಗಿ, ಹರಿವೆಲ್ಲಾ ಹೋಗಿ ಕೊನೆಗೆ ಬಳಕೆಗೆ 104 ಟಿಎಂಸಿ ಅಡಿ ನೀರು ಲಭ್ಯವಾಗುತ್ತದೆ. ಆದರೆ ಈ ಬಾರಿ ಅಷ್ಟೂ ನೀರು ಬಳಕೆಗೆ ಲಭ್ಯವಾಗುವಂತೆ ತೋರುತ್ತಿಲ್ಲ. ಕರ್ನಾಟಕದಲ್ಲಿ ಸುರಿದಿರುವ ಮಳೆಯ ಪ್ರಮಾಣ ಇದಕ್ಕೆ ಕಾರಣವಾಗಿದೆ.

ಇದೇ ವೇಳೆ ತಮಿಳುನಾಡಿನಲ್ಲಿ ಕರ್ನಾಟಕ್ಕಿಂತ ಹೆಚ್ಚುವರಿ ಮಳೆ ಸುರಿದಿರುವುದನ್ನು ಭಾರತೀಯ ಹವಾಮಾನ ಇಲಾಖೆಯ ದಾಖಲೆಗಳು ಹೇಳುತ್ತಿವೆ.

statewise rainfall TN and KAR

ಪರಿಸ್ಥಿತಿ ಹೀಗಿರುವಾಗಲೇ, ತಮಿಳುನಾಡು ಸರಕಾರದ ಕೋರಿಕೆಯ ಅರ್ಧದಷ್ಟ ನೀರು ಬಿಡಲು ಹೇಳಿದೆ. ಈ ಮೂಲಕ ಐತಿಹಾಸಿಕ ಅಂತರಾಜ್ಯ ಜಲವಿವಾದ ಮತ್ತೊಮ್ಮೆ ರಾಜ್ಯದಲ್ಲಿ ಸುದ್ದಿಕೇಂದ್ರಕ್ಕೆ ಬಂದಿದೆ.

ಕೃಪೆ: ಎನ್ಐಇ (ಸಾಂದರ್ಭಿಕ ಚಿತ್ರ)

Leave a comment

FOOT PRINT

Top