An unconventional News Portal.

ಸರಕಾರಿ ಸ್ವಾಮ್ಯದ BSNL ಉದ್ಧಾರ ಮಾಡಲು ಪ್ರಧಾನಿ ಮೋದಿ ಇಷ್ಟು ಮಾಡಿದ್ದರೆ ಸಾಕಿತ್ತು!

ಸರಕಾರಿ ಸ್ವಾಮ್ಯದ BSNL ಉದ್ಧಾರ ಮಾಡಲು ಪ್ರಧಾನಿ ಮೋದಿ ಇಷ್ಟು ಮಾಡಿದ್ದರೆ ಸಾಕಿತ್ತು!

‘ರಿಲಯನ್ಸ್ ಜಿಯೋ’ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡ ಬೆನ್ನಿಗೆ ಟೀಕೆಗಳು ಶುರುವಾಗಿವೆ. ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಪ್ರಚಾರ ಮಾಡುವುದು ಬಿಟ್ಟು ಖಾಸಗಿ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇಕೆ ಎಂಬ ಪ್ರಶ್ನೆಸಹಜವಾಗಿಯೇ ಕೇಳಿಬರುತ್ತಿದೆ.

ಇವತ್ತು ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ನಷ್ಟದಲ್ಲಿ ಮುಳುಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಸರಕಾರಗಳ ನಿರ್ಲಕ್ಷ, ಅಧಿಕಾರಿ ವರ್ಗದ ಅಸಡ್ಡೆ ಮತ್ತು ಭ್ರಷ್ಟಾಚಾರಗಳು ಕಣ್ಣಿಗೆ ರಾಚುತ್ತವೆ. ಜತೆಗೆ, ದೂರ ಸಂಪರ್ಕ ಕ್ಷೇತ್ರದಲ್ಲಿ ಸರಕಾರಿ ಸ್ವಾಮ್ಯದ ಖಾಸಗಿ ಕಂಪೆನಿಗಳ ಉದ್ಧಾರಕ್ಕೆ ನೀರು ಗೊಬ್ಬರ ಸುರಿದಿರುವುದು ಕಾಣಿಸುತ್ತದೆ.

ಬಿಎಸ್ಎನ್ಎಲ್ ಕಳೆದ ಕೆಲವು ವರ್ಷಗಳಿಂದ ಸತತ ನಷ್ಟದಲ್ಲಿದೆ. 2014-15ರ ಆರ್ಥಿಕ ವರ್ಷದಲ್ಲಿ 7,020 ಕೋಟಿ ಇದ್ದ ನಷ್ಟದ ಪ್ರಮಾಣ, 2015-16ರಲ್ಲಿ 8,234 ಕೋಟಿಗೆ ಏರಿಕೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಬಿಎಸ್ಎನ್ಎಲ್ಗೆ ಸೇವೆಯಿಂದ ಬಂದ ಆದಾಯ ಒಟ್ಟು 28,645 ಕೋಟಿ ರೂಪಾಯಿಗಳು. ಇದರಲ್ಲಿ ಸಿಬ್ಬಂದಿಗಳ ಸಂಬಳ 14,963 ಕೋಟಿ ಖರ್ಚಾದರೆ, ಅಧಿಕಾರಿ ವಲಯಕ್ಕೆ 10,840 ಕೋಟಿ ವೆಚ್ಚವಾಗಿದೆ. ಉಳಿದ ಹಣ ಸಲಕರಣೆಗಳ ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಬಳಕೆಯಾಗಿದೆ.

ಜಿಯೋಗೆ ಸಡ್ಡು ಹೊಡೆಯಲು ಸಜ್ಜಾದ ಬಿಎಸ್ಎನ್ಎಲ್

ಒಂದೆಡೆ ಜಿಯೋ ಸದ್ದು ಮಾಡುತ್ತಿದ್ದರೆ ಎಲ್ಲಾ ಸಮಸ್ಯೆಗಳ ಮಧ್ಯೆಯೂ ಬಿಎಸ್ಎನ್ಎಲ್ ಹೊಸ ಪ್ಲಾನ್ ಘೋಷಣೆ ಮಾಡಿದೆ. ‘ಎಕ್ಸ್ಪೀರಿಯನ್ಸ್ ಅನ್ಲಿಮಿಟೆಡ್ ಬಿಬಿ-249’ ಹೆಸರಿನಲ್ಲಿಮೊದಲ ಆರು ತಿಂಗಳು 2 ಎಂಬಿಪಿಎಸ್ ವೇಗದಲ್ಲಿ 249 ರೂಪಾಯಿಗೆ 300 ಜಿಬಿ ಡೇಟಾ ನೀಡುವ ಘೋಷಣೆ ಮಾಡಿದೆ. 6 ತಿಂಗಳ ನಂತರ ಜನರಲ್ ಪ್ಲಾನುಗಳಲ್ಲಿ ಒಂದನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು.

ಇಷ್ಟೊಂದು ಆದಾಯವಿದ್ದೂ ಸಂಸ್ಥೆ ನಷ್ಟದಲ್ಲಿರುವುದಕ್ಕೆ ಹಲವು ಕಾರಣಗಳನ್ನು ಬಿಎಸ್ಎನ್ಎಲ್ ಸಿಬ್ಬಂದಿಗಳ ಯೂನಿಯನ್ಗಳು ಮುಂದಿಡುತ್ತವೆ. ಹೆಚ್ಚುವರಿ ಕಾರ್ಯನಿರ್ವಹಣೆ (ಅಧಿಕಾರಿ) ಖರ್ಚು ಅವುಗಳಲ್ಲಿ ಪ್ರಮುಖವಾದುದು. ಸದ್ಯ ಬಿಎಸ್ಎನ್ಎಲ್ ನಲ್ಲಿ 2.25 ಲಕ್ಷ ನೌಕರರಿದ್ದಾರೆ. ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಕಳೆದೊಂದು ವರ್ಷದಲ್ಲಿ 10 ಸಾವಿರ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆದರೆ ಇದರಲ್ಲಿ ಅಧಿಕಾರಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂಬುದನ್ನು ಗಮನಿಸಬೇಕಿದೆ. ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತಗೊಳಿಸಿದರೆ, ಗ್ರಾಹಕರಿಗೆ ಸೇವೆ ನೀಡುವುದು ಹೇಗೆ? ಎಂಬ ಪ್ರಶ್ನೆಯನ್ನು ಯೂನಿಯನ್ಗಳು ಮುಂದಿಡುತ್ತವೆ.

ಸೇವೆ ವಿಚಾರದಲ್ಲಿ ಬಿಎಸ್ಎನ್ಎಲ್ ಮೇಲೆ ನಿರಂತರ ದೂರುಗಳು ಕೇಳಿ ಬರುತ್ತಿವೆ. ಅದರಲ್ಲೂ ಬ್ರಾಂಡ್ ಬ್ಯಾಂಡ್ ಮತ್ತು ಲ್ಯಾಂಡ್ ಫೋನ್ ಗುಣಮಟ್ಟ ಸರಿಯಾಗಿಲ್ಲ, ಸರ್ವಿಸ್ ನೀಡುವಲ್ಲಿ ವಿಳಂಬ ಮಾಡುತ್ತಾರೆ ಎಂಬ ಆಪಾದನೆಗಳಿವೆ. ಈ ಕಾರಣಕ್ಕೆ ಜನ ಖಾಸಗಿ ಕಂಪೆನಿಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ. ಹಾಳಾದರೆ ಬೇಗ ರಿಪೇರಿಗೆ ಬರುವುದಿಲ್ಲ ಎಂಬ ದೂರಿದೆ. ಇದಕ್ಕೆ ಕಾರಣ ಮತ್ತದೇ ಸಿಬ್ಬಂದಿಗಳ ಕೊರತೆ. “ನಷ್ಟದಲ್ಲಿದೆ ಎಂಬ ಕಾರಣ ಮುಂದೂಡಿ ಕೆಲವು ವರ್ಷಗಳಿಂದ ಹೊಸ ಸಿಬ್ಬಂದಿಗಳ ನೇಮಕವಾಗುತ್ತಿಲ್ಲ. ಆದರೆ ಅದೇ ವೇಳೆಗೆ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಜನರಿಗೆ ಸೇವೆ ನೀಡಲು ಹೇಗೆ ಸಾಧ್ಯ? ಅದಲ್ಲದೇ ನಷ್ಟದಲ್ಲಿದೆ ಎಂದು ನಿರಂತರವಾಗ ಬೋನಸ್ ನೀಡುತ್ತಿಲ್ಲ,” ಎನ್ನುತ್ತಾರೆ ಬಿಎಸ್ಎನ್ಎಲ್ ಲೈನ್ ಆಪರೇಟರ್ ಒಬ್ಬರು.

ಸೇವೆಗಳ ಸಮಸ್ಯೆಗಳಾಚೆಗೆ, ನಿಗಮದೊಳಗಿನ ಹಗರಣಗಳ ಕಡೆಗೂ ಯೂನಿಯನ್ ನಾಯಕರು ಬೆಟ್ಟು ಮಾಡುತ್ತಾರೆ. ದೂರ ಸಂಚಾರ ನಿಗಮದ ಹಿರಿಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ ಎಂಬ ಆರೋಪಗಳನ್ನು ಅವರು ಮಾಡುತ್ತಾರೆ. ಸಿಮ್, ಮಾರ್ಕೆಟಿಂಗ್ ವಿಚಾರದಲ್ಲಿ ಸ್ಕ್ಯಾಮ್ ಗಳಾಗಿವೆ ಎಂಬುದು ಅವರ ಪ್ರಮುಖ ಆಪಾದನೆಗಳು. ಆದರೆ ಈ ಕುರಿತು ಬಿಎಸ್ಎನ್ಎಲ್ ಅಧ್ಯಕ್ಯ ಕಮ್ ಮ್ಯಾನೇಜಿಂಗ್ ಡೈರೆಕ್ಷರ್ ಅನುಪಮ್ ಶ್ರೀವಾಸ್ತವ ಆಗಲೀ, ದೂರ ಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಇಲ್ಲಿವರೆಗೆ ಚಕಾರವೆತ್ತಿಲ್ಲ.

ಹಗರಣ, ಸೇವೆಗಳಾಚೆಗೆ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು, ಸರಕಾರ ನಿಗಮದ ಬೆಂಬಲಕ್ಕೆ ನಿಲ್ಲಬೇಕು ಎಂದು ಸಿಬ್ಬಂದಿಗಳು ಆಗ್ರಹಿಸಿಕೊಂಡು ಬಂದಿದ್ದಾರೆ. ಉಳಿದೆಲ್ಲಾ ಖಾಸಗಿ ಕಂಪೆನಿಗಳು ಚೀನಾದಿಂದ ಸಲಕರಣೆಗಳನ್ನು ಆಮದು ಮಾಡಿಕೊಂಡರೆ, ಬಿಎಸ್ಎನ್ಎಲ್ಗೆ ಚೀನಾದಿಂದ ಆಮದು ಮಾಡಿಕೊಳ್ಳಲು ನಿರ್ಭಂಧವಿದೆ. ಇದರಿಂದ ಖರ್ಚು ಹೆಚ್ಚುತ್ತದೆ. ಇದು ಬದಲಾಗಬೇಕು ಇಲ್ಲದಿದ್ದಲ್ಲಿ ಪ್ರತಿಸ್ಪರ್ಧಿಗಳೊಂದಿಗೆ ಮಾರುಕಟ್ಟೆಯಲ್ಲಿ ಉಳಿಯಲು ಅಸಾಧ್ಯ ಎನ್ನುತ್ತಾರೆ ಯೂನಿಯನ್ ಮುಖಂಡರೊಬ್ಬರು. ಇದರ ಜೊತೆಗೆ ಇವತ್ತು ಬ್ರಾಡ್ ಬ್ಯಾಂಡ್, 4ಜಿ ಸೇವೆಗಳನ್ನು ನೀಡಬೇಕಾದ ಅಗತ್ಯವಿದೆ. ಇದಕ್ಕೆ ಹೆಚ್ಚಿನ ಬಂಡವಾಳ ಹೂಡಬೇಕು. ಆದರೆ 4ಜಿ ಮತ್ತು ಡೇಟಾದ ಮಾರುಕಟ್ಟೆಯನ್ನೇ ಬಿಎಸ್ಎನ್ಎಲ್ ತೀರಾ ತಡವಾಗಿ ಅಂದರೆ ಕಳೆದ ಮಾರ್ಚಿನಿಂದ ಆರಂಭಿಸಿದೆ. ಅಷ್ಟೊತ್ತಿಗಾಗಲೇ ಉಳಿದ ಕಂಪೆನಿಗಳು ಮಾರುಕಟ್ಟೆಗೆ ಬಂದು ಧೂಳೆಬ್ಬಿಸಿ ಆಗಿತ್ತು. ಇದೀಗ ಎಚ್ಚಿತ್ತುಕೊಂಡಿರುವ ಸರಕಾರ 2016-17ನೇ ವರ್ಷದಲ್ಲಿ ಬಿಎಸ್ಎನ್ಎಲ್ಗಾಗಿ 7,700 ಕೋಟಿಯನ್ನು ಸಂಪರ್ಕ ಜಾಲ ವಿಸ್ತರಣೆಗೆ ಸುರಿಯುತ್ತಿದೆ.

ಹಾಗೆ ನೋಡಿದರೆ, ಬಿಎಸ್ಎನ್ಎಲ್ ಬಳಿ ಎಲ್ಲವೂ ಇದೆ. ದೇಶಾದ್ಯಂತ 64,500 ಟವರ್ಗಳು ನಿಗಮದ ಒಡೆತನದಲ್ಲಿವೆ. ಇತ್ತೀಚೆಗಷ್ಟೇ ಅವುಗಳನ್ನು ಖಾಸಗಿಯವರಿಗೆ ಬಾಡಿಗೆಗೆ ನೀಡಲಾಗುತ್ತಿದೆ. ಅದರಿಂದ ವಿಶೇಷ ಆದಾಯ ಪಡೆಯಲು ಟವರ್ ಗಳಿಗಾಗಿಯೇ ಪ್ರತ್ಯೇಕ ಕಂಪೆನಿ ಸ್ಥಾಪಿಸುವ ಯೋಚನೆಯೂ ಬಿಎಸ್ಎನ್ಎಲ್ ಮುಂದಿದೆ. ಟವರುಗಳಿಂದಲೇ ಈ ವರ್ಷ 2,200 ಕೋಟಿ ಆದಾಯದ ನಿರೀಕ್ಷೆ ಇಟ್ಟುಕೊಂಡಿದೆ. ಇದನ್ನು ಹಿಂದೆಯೇ ಮಾಡಿದ್ದರೆ ಸಾಕಷ್ಟು ಆದಾಯ ಗಳಿಸಬಹುದಾಗಿತ್ತು. ಇದಲ್ಲದೇ ನಷ್ಟ ಸರಿದೂಗಿಸಲು ತನ್ನ ಬಳಿ ಇರುವ ಭೂಮಿಯನ್ನು ಅಡವಿಟ್ಟು 2,500 ಕೋಟಿ ಹಣ ಎತ್ತಲು ಯೋಜಿಸಿದೆ.

ಇದನ್ನೆಲ್ಲಾ ಹೊರತಾಗಿ ಗ್ರಾಹಕರನ್ನು ತೃಪ್ತಿಯಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಬಿಎಸ್ಎನ್ಎಲ್ ಮುಂದಿದೆ. ಕಳೆದೊಂದು ವರ್ಷದಲ್ಲಿ 1,57,564 ಬಳಕೆದಾರರು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡಿಕೊಂಡಿದ್ದರೆ, 1,24,158 ಜನ ಹೊರ ಹೋಗಿದ್ದಾರೆ. ಒಳಬಂದವರ ಸಂಖ್ಯೆ ಹೆಚ್ಚಿದ್ದು ಸೂಕ್ತ ಗ್ರಾಹಕ ಸೇವಾ ಪ್ರತಿನಿಧಿಗಳ ಸೇವೆ, ಉತ್ತಮ ಸಿಗ್ನಲ್ಗಳನ್ನೂ ನೀಡಬೇಕಾಗಿದೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ರೂಪದರ್ಶಿಯಾಗುವ ಬದಲು, ನಮ್ಮದೇ ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬೆಳೆಸಲು ಪ್ರಧಾನಿ ಮತ್ತವರ ಸಂಪುಟ ಸಹೋದ್ಯೋಗಿಗಳು ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕಿದೆ. ಇದು ಇವತ್ತು ಬಿಎಸ್ಎನ್ಎಲ್ ತಳಮಟ್ಟದಲ್ಲಿ ಕೇಳಿ ಬರುತ್ತಿರುವ ಆಗ್ರಹಗಳು.

 

Leave a comment

FOOT PRINT

Top