An unconventional News Portal.

ಶುಕ್ರವಾರ ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ಬಂದ್

ಶುಕ್ರವಾರ ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ಬಂದ್

ಕೆಎಸ್ಆರ್ಟಿಸಿ ಮುಷ್ಕರ ಮತ್ತು ಮಹದಾಯಿ ಹೋರಾಟದಿಂದ ಬಂದ್ ಬಿಸಿ ಅನುಭವಿಸಿದ್ದ ಸಾರ್ವಜನಿಕರು ಶುಕ್ರವಾರ ಮತ್ತೆ ಮುಷ್ಕರದ ಬಿಸಿ ಎದುರಿಸಲಿದ್ದಾರೆ.

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ಹಾಗೂ ಜನ ವಿರೋಧಿ ಧೋರಣೆಗಳನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಸೆಪ್ಪೆಂಬರ್‌ 2 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ದೇಶದಲ್ಲಿ ಜಾಗತೀಕರಣ ಜಾರಿಯಾದ ಬಳಿಕ ನಡೆಸುತ್ತಿರುವ 17ನೇ ಮುಷ್ಕರ ಇದಾಗಿದೆ.

ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಮತ್ತು ಚಾಲಕ ವೃತ್ತಿಗೆ ಮಾರಕವಾಗಲಿದೆ ಎಂದು ಆರೋಪಿಸಿ ‘ರಸ್ತೆ ಸುರಕ್ಷತಾ ಮಸೂದೆ 2016’ನ್ನು ವಿರೋಧಿಸಿ ಅಖಿಲ ಭಾರತ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿದೆ. ಶುಕ್ರವಾರದ ಬಂದ್ಗೆ ಬಹುತೇಕ ಎಲ್ಲಾ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿದ್ದು, ಸಾರ್ವಜನಿಕರು ಮತ್ತೊಂದು ಸಂಕಷ್ಟ ಎದುರಿಸಬೇಕಾಗಿದೆ.

ಹೊಸ ಕಾಯ್ದೆ ಪ್ರಕಾರ, ‘ಸಾರ್ವಜನಿಕ ಸಾರಿಗೆಯನ್ನು ಹರಾಜು ಮೂಲಕ ಬಂಡವಾಳಗಾರರು ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಗುತ್ತಿಗೆ ನೀಡಿದರೆ ಈಗಿರುವ ಪ್ರಯಾಣ ದರಕ್ಕಿಂತ ಮೂರ್ನಾಲ್ಕು ಪಟ್ಟು ದರ ಹೆಚ್ಚಿನ ಪ್ರಯಾಣಿಕರಿಗೆ ಹೊರೆಯಾಗುತ್ತದೆ. ಎಲ್ಲಾ ಪ್ರಯಾಣಿಕ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ರಾಷ್ಟ್ರೀಕರಣಗೊಳಿಸಿ ಅತ್ಯಂತ ಕಡಿಮೆ ದರದಲ್ಲಿ ಸೇವೆಯನ್ನು ನೀಡುವ ಬದಲು ದುಬಾರಿ ವೆಚ್ಚಕ್ಕೆ ದೂಡಿ ಕೇಂದ್ರ ಸರಕಾರ ಸಾರ್ವಜನಿಕರನ್ನು ಬಲಿಪಶು ಮಾಡಲು ಹೊರಟಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

ಇದಿಷ್ಟೇ ಅಲ್ಲದೇ ಜೀವನೋಪಾಯಕ್ಕಾಗಿ ಚಾಲಕ ವೃತ್ತಿಯನ್ನು ಅವಲಂಬಿಸಿ ದುಡಿಯುತ್ತಿರುವ ಕಾರ್ಮಿಕರಿಗೆ ಹೊಸ ಕಾಯ್ದೆ ಪ್ರಕಾರ ಮನಸೋ ಇಚ್ಛೆ ದಂಡ ವಿಧಿಸಲು ಮುಂದಾಗಿದೆ. ಇದನ್ನು ವಿರೋಧಿಸಿ ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಆಟೋ ಚಾಲಕರ ಸಂಘ, ಬ್ಯಾಂಕ್ ನೌಕರರ ಸಂಘ, ವರ್ತಕರ ಸಂಘಗಳು, ಕೆಲ ವಿದ್ಯಾರ್ಥಿ ಸಂಘಟನೆಗಳು ನಾಳೆ ಬೀದಿಗಿಳಿದು ಪ್ರತಿಭಟನೆ ನಡೆಸಲಿವೆ.  ಲಕ್ಷಾಂತರ ಲಾರಿಗಳು ಇಂದು ಮಧ್ಯರಾತ್ರಿಯಿಂದಲೇ ರಸ್ತೆಗಿಳಿಯುವುದಿಲ್ಲ. ಇದರಿಂದ ಸರಕು ಸಾಗಾಣಿಕೆಯ ಮೇಲೂ ಪರಿಣಾಮ ಬೀರಲಿದೆ.

ಶುಕ್ರವಾರ ಬಂದ್, ಶನಿವಾರ ಕಾರ್ಪೊರೇಟ್ ಸಂಸ್ಥೆಗಳಿಗೆ ರಜೆ, ಭಾನುವಾರ ಸಾಮಾನ್ಯ ರಜೆಯಾದರೆ, ಸೋಮವಾರ ಗಣೇಶ ಚತುರ್ಥಿ ಪ್ರಯುಕ್ತ ರಜೆ ಇದೆ. ಹೀಗಾಗಿ ಹಬ್ಬಕ್ಕೆ ತೆರಳುವವರಿಗೆ ಬಂಪರ್ ರಜೆಗಳು ಲಭ್ಯವಾಗಿವೆ. ಕೆಎಸ್ಆರ್ಟಿಸಿ ವಿವಿಧ ಊರುಗಳಿಗೆ ತೆರಳುವವರಿಗೆ ಗುರುವಾರ ರಾತ್ರಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.

ಶುಕ್ರವಾರ ವಿವಿಧ ಸಾರಿಗೆ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಲಿವೆ.

ಚಿತ್ರ ಕೃಪೆ: ಐಬಿ ಟೈಮ್ಸ್

Leave a comment

FOOT PRINT

Top