An unconventional News Portal.

‘ಮುದ್ದು ಕರು’ ರಕ್ಷಿಸಿದ್ದ ಮಹಿಳಾ ಪಿಎಸ್ಐ ರಾಜೀನಾಮೆ: ಭಟ್ಕಳದ ‘ಜಾತ್ಯಾತೀತ ಹವಾಲ ದಂಧೆ’ ಕಾರಣ?

‘ಮುದ್ದು ಕರು’ ರಕ್ಷಿಸಿದ್ದ ಮಹಿಳಾ ಪಿಎಸ್ಐ ರಾಜೀನಾಮೆ: ಭಟ್ಕಳದ ‘ಜಾತ್ಯಾತೀತ ಹವಾಲ ದಂಧೆ’ ಕಾರಣ?

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಯ ಮಹಿಳಾ ಪಿಎಸ್ಐ, ಇತ್ತೀಚೆಗಷ್ಟೆ ಹಾಡುಹಗಲು ಹೆದ್ದಾರಿಯಲ್ಲಿ ದನದ ಕರುವೊಂದನ್ನು ‘ಗೋ ರಕ್ಷಕ’ದಿಂದ ರಕ್ಷಿಸಿದ್ದ ರೇವತಿ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಕಾರವಾರ ಪೊಲೀಸ್ ಅಧೀಕ್ಷಕರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಅವರು, ‘ನಾನು ಯಾವುದೇ ತಪ್ಪು ಮಾಡದಿದ್ದರೂ, ಇಲ್ಲಿಯವರೆಗೆ ಅನೇಕ ಮೇಲಾಧಿಕಾರಿಗಳು ನೀಡಿರುವ ಮಾನಸಿಕ ಒತ್ತಡವನ್ನು ಸಹಿಸಲು ಅಸಾಧ್ಯವಾಗಿರುವುದಕ್ಕೆ, ಇಲಾಖೆಗೆ ನಿವೃತ್ತಿ ನೀಡಲು ಕೋರಿ ಈ ಪತ್ರ ನೀಡುತ್ತಿದ್ದೇನೆ,’ ಎಂದು ವಿಷಯ ಪ್ರಸ್ತಾಪಿಸಿದ್ದಾರೆ. ಸಾಮಾನ್ಯ ಬಿಳಿ ಹಾಳೆಯ ಮೇಲೆ, ನೀಲಿ ಪೆನ್ನಿನಲ್ಲಿ ಬರೆದಿರುವ ಹಲವು ಪುಟಗಳ ಪತ್ರದ ಆರಂಭದಲ್ಲಿಯೇ, ‘2010ರ ಅಕ್ಟೋಬರ್ 9/10ನೇ ತಾರೀಖು ಡಿವೈಎಸ್ಪಿ (ಭಟ್ಕಳ ಉಪವಿಭಾಗ) ಎಂ. ನಾರಾಯಣ ಇದರಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಸುಳ್ಳು ವರದಿ ಸಲ್ಲಿಸಿದ್ದರ ಆಧಾರದ ಮೇಲೆ ನಡೆದ ಇಲಾಖೆ ವಿಚಾರಣೆಯಿಂದ ಮಾನಸಿಕವಾಗಿ ಸತ್ತು ಹೋಗಿದ್ದೆ,’ ಎಂದು ಪ್ರಸ್ತಾಪಿಸಿದ್ದಾರೆ.

ಭಾನುವಾರವಷ್ಟೆ ರೇವತಿ ಅವರನ್ನು ದೂರುದಾರರೊಬ್ಬರು ನೀಡಿದ ದೂರನ್ನು ದಾಖಲಿಸಲು ವಿಳಂಬ ಮಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಅಮಾನತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಅಮಾನತು ಆದೇಶದ ನೋಟಿಸ್ ಪಡೆಯಲು ಒಪ್ಪದ ರೇವತಿ ತಮ್ಮ ಮೇಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಪ್ರಸನ್ನ ಅವರ ಜತೆ ಮಾತನಾಡುವ ಪ್ರಯತ್ನ ನಡೆಸಿದ್ದಾರೆ. ಅವರು ಕಡೆಯಿಂದಲೂ, ರೇವತಿ ನೀಡುತ್ತಿದ್ದ ಕಾರಣಗಳಿಗೆ ಅವಕಾಶ ಸಿಕ್ಕಿರಲಿಲ್ಲ ಎಂಬ ಕಾರಣಕ್ಕೆ ಅವರೀಗ ಇಲಾಖೆಗೆಯಿಂದ ನಿವೃತ್ತಿ ಬಯಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಸಂಜೆ ವೇಳೆಗೆ, ರೇವತಿ ಅವರ ರಾಜೀನಾಮೆ ಮತ್ತು ಅಮಾನತ್ತು ವಿಚಾರಗಳು ಕನ್ನಡದ ಸುದ್ದಿ ವಾಹಿನಿ, ‘ರಾಜ್ ನ್ಯೂಸ್ ಕನ್ನಡ’ದಲ್ಲಿ ಭಿತ್ತರವಾಗಿತ್ತು. ಈ ಸಮಯದಲ್ಲಿ ವಾಹಿನಿಯು, ರೇವತಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ, ರೇವತಿ ಮಾನಾಡಿರಲಿಲ್ಲ. ನಂತರ, ಇತರೆ ಸುದ್ದಿ ವಾಹಿನಿಗಳಲ್ಲೂ ರೇವತಿ ಸುದ್ದಿ ಪ್ರಸಾರ ವಾಗಿತ್ತು. ‘ಸುವರ್ಣ 24/7’ನಲ್ಲಿ ರೇವತಿ ರಾಜೀನಾಮೆ ಕುರಿತು, ಜಿಲ್ಲಾ ಎಸ್ಪಿ ವಂಶಿ ಕೃಷ್ಣ ಪ್ರತಿಕ್ರಿಯೆ ಸಹಿತ ವರದಿ ಪ್ರಸಾರವಾಗಿತ್ತು.

ಸುವರ್ಣ ನ್ಯೂಸ್ ಸ್ಕೀನ್ ಗ್ರಾಬ್.

ಸುವರ್ಣ ನ್ಯೂಸ್ ಸ್ಕೀನ್ ಗ್ರಾಬ್.

ಹವಾಲಾ ನಂಟು?:

vamshi-krishnaಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ‘ಭಯೋತ್ಪಾದನೆ ವಿರುದ್ಧ ಜಾಗತಿಕ ಹೋರಾಟ’ದ ವಿಚಾರದಲ್ಲಿ ಪದೇ ಪದೇ ಕೇಳಿ ಬರುತ್ತಿರುವ ಊರು. ಇತ್ತೀಚೆಗಷ್ಟೆ ಭಟ್ಕಳದಲ್ಲಿ ದನದ ಕರುವನ್ನು ಕಳ್ಳತನದಲ್ಲಿ ಸಾಗಣೆ ಮಾಡುತ್ತಿದ್ದ ನೆಪದಲ್ಲಿ ‘ಗೋ ರಕ್ಷಣೆ’ಯ ‘ಹೈ ಡ್ರಾಮಾ’ವೊಂದು ಇಲ್ಲಿನ ಹೆದ್ದಾರಿಯಲ್ಲಿ ನಡೆದಿತ್ತು. ಇದಕ್ಕೂ ಮೊದಲೇ, ಇಲ್ಲಿನ ನಾಗರಕಟ್ಟೆಗಳ ಬಳಿ ಪ್ರಾಣಿಯ ಮಾಂಸ ಸಿಕ್ಕ ಕಾರಣಕ್ಕೆ ಭಟ್ಕಳ ಸುದ್ದಿಯಾಗಿತ್ತು. ಇದನ್ನು ಹೊರತು ಪಡಿಸಿದರೆ, ಇಲ್ಲಿ ತೆರೆಮರೆಯಲ್ಲಿಯೇ ನಡೆಯುವ ‘ಹವಾಲ’ ಮಾದರಿಯ ದಂಧೆಗಳು ಸುದ್ದಿಕೇಂದ್ರದಿಂದ ದೂರವೇ ಉಳಿದಿದ್ದವು.

ಇಲ್ಲಿನ ಪೊಲೀಸ್ ಇಲಾಖೆ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿರುವ ಮಾಹಿತಿ ಪ್ರಕಾರ, “ಭಟ್ಕಳದಲ್ಲಿ ಹವಾಲ ಮಾದರಿಯ ದಂಧೆಯನ್ನು ನಡೆಸುವವರು ಮುಸ್ಲಿಂರಾದರೂ, ಬೆಂಬಲವಾಗಿ ನಿಂತವರು ಹಿಂದೂ ಸಂಘಟನೆಗಳ ಕೆಲವು ನಾಯಕರು. ಈ ಕಾರಣಕ್ಕೆ ಇದು ಹೆಚ್ಚು ಸುದ್ದಿಯಾಗುವುದಿಲ್ಲ. ಇತ್ತೀಚೆಗಷ್ಟೆ ದುಬೈನಿಂದ 2. 5 ಕೋಟಿ ಹಣ ಭಟ್ಕಳಕ್ಕೆ ಬಂದಿತ್ತು. ಇದರ ಹಿಂದೆ ನಾನಾ ಕತೆಗಳಿದ್ದರೂ, ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳಿಂದ ಹಿಡಿದು, ಕೆಳಮಟ್ಟದ ಸಿಬ್ಬಂದಿಗಳಲ್ಲಿ ಬಹುತೇಕರಿಗೆ ಹಣ ಹೋಗಿತ್ತು. ಜತೆಗೆ, ಬೆಂಗಳೂರು ಮೂಲದ ಬಿಜೆಪಿ ಸಂದಸದರೊಬ್ಬರು ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರು. ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದ ಹಿರಿಯ ಅಧಿಕಾರಿಗಳು, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಮುಸ್ಲಿಂ ಯುವಕನ್ನು ಹಾಗೂ ಮತ್ತೊಬ್ಬನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು,” ಎನ್ನಲಾಗುತ್ತಿದೆ. ಈ ಕುರಿತು ದಾಖಲೆಗಳನ್ನು ಪರಿಶೀಲಿಸಲು ‘ಸಮಾಚಾರ’ ಪರಿಶೀಲಿಸುವ ಪ್ರಯತ್ನವನ್ನು ನಡೆಸಿತು.

ಇದೇ ಪ್ರಕರಣದಲ್ಲಿ, ಇದೀಗ ಪಿಎಸ್ಐ ರೇವತಿ ಅವರನ್ನೂ ಅಮಾನತ್ತು ಮಾಡಲಾಗಿದೆ. “ನೀವು ನನ್ನ ನಂಬಿಕೆಯನ್ನು ಕಳೆದುಕೊಂಡಿದ್ದೀರಿ,” ಎಂದು ಎಸ್ಪಿ ವಂಶಿ ಕೃಷ್ಣ ರೇವತಿ ಅವರಿಗೆ ದೂರವಾಣಿ ಮೂಲಕ ಅಮಾನತ್ತು ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

ಏನಿದು ಹಣದ ಹಗರಣ?:

amjada-kumuta-bhatkal

ಆರೋಪಿ ಕುಮುಟಾ ಅಮ್ಜದ್.

ಕಳೆದ ಜುಲೈ ತಿಂಗಳಿನ 7ನೇ ತಾರೀಖು, ದುಬೈನಲ್ಲಿ ಉದ್ಯಮಿಯಾಗಿವುದಾಗಿ ಹೇಳಿಕೊಳ್ಳುವ ಭಟ್ಕಳ ಮೂಲದ ಸಲೀಂ ಮೌಸೀನ್, ‘ತನಗೆ ಅಮ್ಜದ್ ಕುಮುಟಾ ಮತ್ತಿತರರ ತಂಡವು 20 ಲಕ್ಷದ ಹಣದ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸುದ್ದಿವಾಹಿನಿಯೊಂದರ ವರದಿಗಾರರೊಬ್ಬರ ಪ್ರಕಾರ, “ಮೌಸೀನ್ ದೂರು ನೀಡಿದರು ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಬದಲಿಗೆ ಪಿಎಸ್ಐ ರೇವತಿ ಎರಡೂ ಕಡೆಯವರನ್ನು ಕರೆಯಿಸಿ, ಠಾಣೆಯಲ್ಲಿಯೇ ವಿಚಾರಣೆ ನಡೆಸಿ ಕಳುಹಿಸಿದ್ದರು. ಎರಡು ದಿನಗಳ ನಂತರ ನಂತರ ಅಮ್ಜದ್ ಕುಮುಟಾ ಮತ್ತು ತಂಡ ಮತ್ತೆ ಮೌಸೀನ್ನನ್ನು ಹಣಕ್ಕಾಗಿ ಬೆದರಿಸಿದೆ. ಈ ಸಮಯದಲ್ಲಿ ಆತ ಎಎಸ್ಪಿ ಅನೂಪ್ ಕುಮಾರ್ ಶೆಟ್ಟಿ ಅವರಿಗೆ ದೂರು ನೀಡಿದ್ದಾನೆ. ಅವರು ರೇವತಿ ಅವರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಿದರೂ, ಪಿಎಸ್ಐ ದೂರು ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದಾರೆ ಎಂಬ ಆರೋಪ ಬಂದಿದೆ. ಈ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ,” ಎಂದು ಮಾಹಿತಿ ನೀಡಿದರು.

ರೇವತಿ, ಇದೇ ಪ್ರಕರಣದಲ್ಲಿ ಮೌಸೀನ್ಗೆ ಬಂದ ಹಣದ ಮೂಲವನ್ನು ಹುಡುಕುವ ಪ್ರಯತ್ನ ನಡೆಸಿದ್ದರು. ದೂರು ನೀಡಿದವರು ಮತ್ತು ಆರೋಪಿಗಳನ್ನು ಠಾಣೆಗೆ ಕರೆಯಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ಅದನ್ನು ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಿಸಿದ್ದರು. ಆ ಸಮಯದಲ್ಲಿ ಮೌಸೀನ್ ನೀಡಿದ ದೂರಿಗೂ, ಠಾಣೆಗೂ ನೀಡಿದ ಹೇಳಿಕೆಗಳ ನಡುವೆ ವ್ಯತ್ಯಾಸವಿತ್ತು ಎಂದು ಭಟ್ಕಳ ಠಾಣೆಯ ಮೂಲಗಳು ಹೇಳುತ್ತಿವೆ.

ಭಟ್ಕಳದ ಅಂತರಾಳವನ್ನು ಬಲ್ಲವರು, “ಇಲ್ಲಿರುವ ಹವಾಲ ಮಾದರಿಯ ದಂಧೆಯಿಂದ ರಾತ್ರೋರಾತ್ರಿ ಶ್ರೀಮಂತರಾದವರ ದೊಡ್ಡ ಪಟ್ಟಿಯೇ ಇದೆ. ಇವರಿಗೆಲ್ಲಾ ಹಣ ಬಂದ ಮೂಲವನ್ನು ಯಾರೂ ಹುಡುಕುವುದಿಲ್ಲ. ಮೌಸೀನ್ ಪ್ರಕರಣದಲ್ಲಿಯೂ ಆತ ಸೌಧಿಯಲ್ಲಿ ನೈಜೀರಿಯಾ ಮೂಲದವನಿಗೆ ಮೋಸ ಮಾಡಿ 2 ಕೋಟಿ ತಂದಿದ್ದಾನೆ ಎನ್ನಲಾಗಿದೆ. ಇದರಲ್ಲಿ ಒಂದಷ್ಟು ಜನ ತಲಾ 5 ಲಕ್ಷರೂಪಾಯಿಗಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಹಣದ ಮೂಲವನ್ನು ಯಾರೂ ಹುಡುಕಾಡಲು ಹೋಗಿಲ್ಲ,” ಎನ್ನುತ್ತಾರೆ. ಪ್ರಕರಣದಲ್ಲಿ ಬೆಂಗಳೂರು ಮೂಲದ ಭಾರತೀಯ ಜನತಾಪಕ್ಷದ ಸಂಸದರೊಬ್ಬರಿಂದ ಉತ್ತರ ಕನ್ನಡದ ಹಿರಿಯ ಅಧಿಕಾರಿಗಳಿಗೆ ಕರೆ ಹೋಗಿದೆ,” ಎಂಬ ಮಾಹಿತಿಯನ್ನು ಕೆಲವರು ಹೊರಗೆಡವುತ್ತಾರೆ.

ವಾದ- ಪ್ರತಿವಾದ:

ಈ ಎಲ್ಲಾ ವಿಚಾರಗಳಿಗೆ ಪ್ರತಿಕ್ರಿಯಿಸಬೇಕಾದ ಪಿಎಸ್ಐ ರೇವತಿ ಸಂಪರ್ಕಕ್ಕೆ ಸಿಗಲಿಲ್ಲ. ‘ಸಮಾಚಾರ’ ಜತೆ ವಿಸ್ತಾರವಾಗಿ ಮಾತನಾಡಿದ ಡಿಜಿಪಿ ಓಂ ಪ್ರಕಾಶ್, “ಉತ್ತರ ಕನ್ನಡ ಜಿಲ್ಲೆಯ ಎಸ್ಪಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಎಎಸ್ಪಿ ಕಡೆಯಿಂದ ತನಿಖೆ ನಡೆಸಿದ ವರದಿ ತರಿಸಿಕೊಳ್ಳಲಾಗಿದೆ. ವರದಿ ಆಧಾರದ ಮೇಲೆ ಎಸ್ಪಿ ಪಿಎಸ್ಐ (ರೇವತಿ) ಅವರನ್ನು ಅಮಾನತು ಮಾಡಲಾಗಿದೆ. ಅವರು ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇಲಾಖಾ ತನಿಖೆ ನಡೆಸಬೇಕಾದ ಸಮಯದಲ್ಲಿ ಅದನ್ನು ಸ್ವೀಕರಿಸುವ ಕುರಿತು ಆಲೋಚನೆ ಮಾಡಬೇಕಿದೆ. ಸದ್ಯ ಮೈಸೂರಿಗೆ ಹೋಗುತ್ತಿದ್ದೇನೆ,” ಎಂದರು.

“ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಇಲ್ಲಿ ಶಿಸ್ತಿಕ್ರಮಗಳು ಸಾಮಾನ್ಯವಾಗಿರುತ್ತವೆ. ತಪ್ಪು ಮಾಡಿಲ್ಲ ಎಂದರೆ ಗಟ್ಟಿಯಾಗಿ ನಿಂತು ಎದುರಿಸಬೇಕು. ನಾನು ಈಗಾಗಲೇ ರಾಜ್ಯಾದ್ಯಂತ 100 ಆಪ್ತ ಸಮಾಲೋಚಕರನ್ನು ನೇಮಿಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದೇನೆ,” ಎಂದರು. ಅಧಿಕಾರಿಗಳಾದ ಗಣಪತಿ ಮತ್ತು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಇಲಾಖೆ ಒಳಗಿನ ಒತ್ತಡವನ್ನು ಕಡಿಮೆ ಮಾಡುವ ಮತ್ತು ಪರ್ಯಾಯ ಮಾನಸಿಕ ನೆರವು ನೀಡುವ ಕುರಿತು ಆಲೋಚನೆ ಇದೆ ಎಂಬ ಕುರಿತು ಮಾತನಾಡಿದರು. ಅದಿನ್ನೂ ಆಲೋಚನಾ ಮಟ್ಟದಲ್ಲಿಯೇ ಇದೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಂಶಿ ಕೃಷ್ಣ ಹಾಗೂ ಎಎಸ್ಪಿ ಅನೂಪ್ ಕುಮಾರ್ ಶೆಟ್ಟಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ. ಒಟ್ಟಾರೆ, ಭಟ್ಕಳದಲ್ಲಿ ಮತ್ತೊಂದು ‘ಹವಾಲಾ ಮಾದರಿ’ಯ ಹಗರಣವೊಂದು ಬೆಳಕಿಗೆ ಬರುವ ಮುನ್ನವೇ ಅಂತ್ಯಗೊಂಡಿದೆ. ಜತೆಗೆ, ಮಹಿಳಾ ಪಿಎಸ್ಐ ಒಬ್ಬರು ಇಲಾಖೆ ಬಿಡುವಂತೆ ಮಾಡಿದೆ. ಇದರ ಫಲಾನುಭವಿಗಳು ಮತ್ತು ಆರೋಪಿಗಳ ವಿರುದ್ಧ ಸರಿಯಾದೊಂದು ತನಿಖೆ ನಡೆಯಬೇಕಿದೆ. ಆದರೆ, ಆ ತನಿಖೆಯನ್ನು ಯಾರು ನಡೆಸುತ್ತಾರೆ ಎಂಬುದರ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.

Leave a comment

FOOT PRINT

Top