An unconventional News Portal.

‘ಕಾಶ್ಮೀರ ಸಂಘರ್ಷಕ್ಕೆ 50 ದಿನ’: ಪೆಲ್ಲೆಟ್ ಗನ್ ಜಾಗದಲ್ಲಿ ‘ಪಾವಾ ಶೆಲ್’ ಬಳಕೆಗೆ ಚಿಂತನೆ!

‘ಕಾಶ್ಮೀರ ಸಂಘರ್ಷಕ್ಕೆ 50 ದಿನ’: ಪೆಲ್ಲೆಟ್ ಗನ್ ಜಾಗದಲ್ಲಿ ‘ಪಾವಾ ಶೆಲ್’ ಬಳಕೆಗೆ ಚಿಂತನೆ!

ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರ ಮೇಲೆ ‘ಪೆಲ್ಲೆಟ್ ಗನ್’ಗಳ ಬಳಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬದಲಿ ವ್ಯವಸ್ಥೆಗೆ ಕೇಂದ್ರ ಸರಕಾರ ಮುಂದಾಗಿದೆ.

ಗುಂಪು ಚದುರಿಸಲು ಅಮೆರಿಕಾ ಬಳಸುವ ‘ಅಕಾಸ್ಟಿಕ್ ಡಿವೈಸ್’ (ದೊಡ್ಢ ಶಬ್ದ ಹೊರಡಿಸುವ ಸ್ಪೀಕರ್) ಮತ್ತು ಚಿಲ್ಲಿ (ಮೆಣಸು) ಶೆಲ್ ಗಳನ್ನು ಬಳಸುವಂತೆ ತಜ್ಷರ ತಂಡ ಸಲಹೆಯನ್ನು ಗೃಹ ಇಲಾಖೆ ಮುಂದಿಟ್ಟಿದೆ. ತಾತ್ಕಾಲಿಕ ಕುರುಡುತನ ಉಂಟು ಮಾಡುವ ಲೇಸರ್ ಶೂಟರ್ ಗಳನ್ನು ಬಳಸುವ ಬಗ್ಗೆಯೂ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ.

ಹಿಜ್ಬುಲ್ ಕಮಾಂಡರ್ ವನಿ ಸಾವಿನ ನಂತರ ಕಾಶ್ಮೀರದಲ್ಲಿ ಹುಟ್ಟಿಕೊಂಡ ಹಿಂಸಾಚಾರ ಹತ್ತಿಕ್ಕಲು ಸೇನೆ ‘ಪೆಲ್ಲೆಟ್ ಗನ್’ ಬಳಸಲು ಆರಂಭಿಸಿತ್ತು. ಇದರಿಂದ ನೂರಾರು ಜನ ಕಣ್ಣು ಕಳೆದುಕೊಂಡಿದ್ದರು. ಈ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆ ಕೇಳಿ ಬಂದಿತ್ತು.

ಕಾಶ್ಮೀರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಗುರುವಾರ ಶ್ರೀನಗರದಲ್ಲಿ ಮಾತನಾಡಿ, “ತಜ್ಞರ ಸಮಿತಿ ಎರಡು ಮೂರು ದಿನಗಳಲ್ಲಿ ವರದಿ ನೀಡಲಿದೆ. ಇದಾದ ನಂತರ ಸರಕಾರ ಪೆಲ್ಲೆಟ್ ಗನ್ನಿಗೆ ಪರ್ಯಾಯ ಕಂಡುಕೊಳ್ಳಲಿದ್ದೇವೆ,” ಎಂದು ಹೇಳಿದ್ದಾರೆ.

“ಮನುಷ್ಯದ ದೇಹಕ್ಕೆ ಹಾನಿಯಾಗದಂಥ ಉಪಾಯವನ್ನು ಸೂಚಿಸಿದ್ದೇವೆ,” ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ. “ಬೇರೆ ಬೇರೆ ಪರಿಸ್ಥಿಗಳಲ್ಲಿ ಗುಂಪು ನಿಯಂತ್ರಣಕ್ಕೆ ಭಿನ್ನ ವಿಧಾನಗಳಿರುತ್ತವೆ. ಭಾರತದಲ್ಲಿಯೂ ಹಲವು ತಂತ್ರಜ್ಞಾನಗಳಿವೆ. ವಿದೇಶಗಳಲ್ಲಿಯೂ ಬೇರೆ ಬೇರೆ ತಂತ್ರಜ್ಷಾನಗಳಿದ್ದು ಪೆಲ್ಲೆಟ್ ಗನ್ನಿಗೆ ಪರ್ಯಾಯವಾಗಿ ಬಳಸಬಹುದಾಗಿದೆ. ಆದರೆ, ಪರ್ಯಾಯ ಬಳಕೆಗೆ ಭದ್ರತಾ ಪಡೆಗಳಿಗೆ ವಿಶೇಷ ತರಬೇತಿ ಅಗತ್ಯವಿದೆ,” ಎಂದು ತಿಳಿಸಿದ್ದಾರೆ.

ಅದು ಪಾವಾ ಶೆಲ್:

ಪೆಲ್ಲೆಟ್ ಗನ್ ಬದಲಿಗೆ ಸಮಿತಿಯು ಮುಂದಿಟ್ಟಿರುವುದು, ‘ಪಾವಾ ಶೆಲ್’. ಮೆಣಸಿನಿಂದ ಪುಡಿಯಿಂದ ‘ಪಾವಾ ಶೆಲ್’ ಅಭಿವೃದ್ಧಿ ಪಡಿಸಲಾಗಿದೆ. ‘ಪಾವಾ’ (ಪೆಲಾರ್ಗಾನಿಕ್ ಆ್ಯಸಿಡ್ ವಿನೈಲ್ ಅಮೈಡ್) ಮೆಣಸಿನಲ್ಲಿ ನೈಸರ್ಗಿಕವಾಗಿ ಇರುವ ರಾಸಾಯನಿಕ ವಸ್ತುವಾಗಿದೆ.

ಕೇಂದ್ರ ಮೀಸಲು ರಕ್ಷಣಾ ಪಡೆ ಕಳೆದ ಕೆಲವು ದಿನಗಳಿಂದ ‘ಪಾವಾ ಬಾಲ್’ಗಳನ್ನು ಕಾಶ್ಮೀರ ಕಣಿವೆಯಲ್ಲಿ ಬಳಸುತ್ತಿದೆ. ರಕ್ಷಣಾ ಇಲಾಖೆ ಅಧಿಕಾರಿಯ ಪ್ರಕಾರ ಅಶ್ರುವಾಯುಗಿಂತಲೂ, ‘ಪಾವಾ’ ಪ್ರತಿಭಟನಾಕಾರನ್ನು ಚದುರಿಸಲು ಸಹಾಯ ಮಾಡುತ್ತದೆ. “ನಾವು ಮಿಶ್ರ ಫಲಿತಾಂಶಗಳನ್ನು ಪಡೆದಿದ್ದೇವೆ. ಸೀಮಿತ ಪ್ರದೇಶಗಳಲ್ಲಿ ‘ಪಾವಾ’ ಉತ್ತಮ ಕೆಲಸ ಮಾಡಿದೆ, ಆದರೆ ಬಯಲು ಪ್ರದೇಶದಲ್ಲಿ ಗುಂಪು ಚದುರಿಸುವಲ್ಲಿ ಇದು ಅಷ್ಟೇನೂ ಪರಿಣಾಮಕಾರಿಯಾಗಿಲ್ಲ,” ಎನ್ನುತ್ತಾರೆ ರಕ್ಷಣಾ ಇಲಾಖೆ ಅಧಿಕಾರಿಯೊಬ್ಬರು.

ಪೆಲ್ಲೆಟ್ ಗನ್ಗೆ ಪರ್ಯಾಯಗಳ ಕುರಿತು ಹೇಳಿಕೆ ನೀಡಿರುವ ಉತ್ತರ ವಲಯ ಭೂಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಟಿಎಸ್ ಹೂಡಾ, “ರಕ್ಷಣಾ ಪಡೆಗಳು ಲೋಹರಹಿತ ಆಯುಧಗಳನ್ನು ಬಳಸಲಿದೆ. ಇವುಗಳಲ್ಲಿ ಸೌಂಡ್ ಕ್ಯಾನಾನ್ಸ್, ಪೆಪ್ಪರ್ ಗನ್ ಮತ್ತು ಚಿಲ್ಲಿ ಗ್ರೆನೇಡ್ಗಳು ಸೇರಿವೆ,” ಎಂದಿದ್ದಾರೆ. “ಗುಂಪು ಚದುರಿಸಲು ಲೋಹರಹಿತ ಆಯುಧಗಳನ್ನು ಬಳಸಲಿದ್ದೇವೆ. ಸಮಿತಿ ನಮ್ಮಿಂದ ಮಾಹಿತಿ ಪಡೆದು, ಕಡಿಮೆ ಹಾನಿ ಉಂಟು ಮಾಡುವ ಶಬ್ದ ಆಯುಧಗಳು, ಪೆಪ್ಪರ್ ಮತ್ತು ಮೆಣಸಿನ (ಚಿಲ್ಲಿ) ಗ್ರೆನೇಡ್ ಗಳ ಸಲಹೆ ನೀಡಿದೆ.  ಸರಕಾರ ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ,” ಎಂದಿದ್ದಾರೆ.

ಸದ್ಯ ಲಕ್ನೋ ಪ್ರಯೋಗಾಲಯದಲ್ಲಿ ಸಿಎಸ್ಐಆರ್ ಸಂಶೋಧಕರು ‘ಪಾವಾ ಶೆಲ್’ಗಳ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಭೂ ಸೇನೆಗೆ ಸೇರಿದ ಗ್ವಾಲಿಯರ್ ನಲ್ಲಿರುವ ‘ಅಶ್ರುವಾಯು ಘಟಕ (ಟಿಎಸ್ಯು)’ ಈ ಪಾವಾ ಶೆಲ್ಗಳನ್ನು ತಯಾರಿಸಲಿದೆ.

2014ರಲ್ಲಿ ಕರಿಯ ಜನಾಂಗದ ಯುವಕರನ್ನು ಪೊಲೀಸರು ಕೊಂದ ವಿಚಾರದಲ್ಲಿ ಫರ್ಗ್ಯುಸನ್ ನಗರದಲ್ಲಿ ಹುಟ್ಟಿಕೊಂಡ ಹಿಂಸಾತ್ಮಕ ಪ್ರತಿಭಟನೆ ಹತ್ತಿಕ್ಕಲು ಅಮೆರಿಕಾ ‘ಅಕೋಸ್ಟಿಕ್ ಡಿವೈಸ್’ ಗಳನ್ನು ಬಳಸಿತ್ತು. ಸದ್ಯ ಇದರ ಬಳಕೆಯ ವಿಚಾರವೂ ಚರ್ಚೆಯಲ್ಲಿದೆ.

ಇದೇ ಭಾನುವಾರ ಕಾಶ್ಮೀರಿ ಜನರ ಪ್ರತಿಭಟನೆಗೆ 50 ದಿನಗಳು ತುಂಬುತ್ತಿರುವ ಹೊತ್ತಿನಲ್ಲಿ, ಗೃಹ ಇಲಾಖೆ, ಸಿಆರ್ಪಿಎಫ್, ಸೇನೆ ಮತ್ತು ಐಐಟಿ ತಜ್ಞರ ಸಮಿತಿಯು ಪೆಲ್ಲೆಟ್ ಗನ್ಗೆ ಪರ್ಯಾಯ ಹುಡುಕುವ ತಯಾರಿಯಲ್ಲಿದೆ. ಈಗಾಗಲೇ ಪೆಲ್ಲೆಟ್ ಗನ್ನಿಂದಾಗಿ ಕಾಶ್ಮೀರದ ನೂರಕ್ಕೂ ಹೆಚ್ಚು ಜನ ದೃಷ್ಟಿ ಕಳೆದುಕೊಂಡು, ಶಾಶ್ವತ ಕುರುಡುತನಕ್ಕೆ ಗುರಿಯಾಗಿದ್ದಾರೆ.

ಚಿತ್ರ ಕೃಪೆ: ಐಬಿಎಲ್ ಲೈವ್

Leave a comment

FOOT PRINT

Top