An unconventional News Portal.

ಸುದ್ದಿಕೇಂದ್ರದಲ್ಲಿ ಮನೋಹರ್ ಪರಿಕ್ಕರ್: ಗೋವಾದಿಂದ ರಕ್ಷಣಾ ಖಾತೆವರೆಗೆ ಬಂದ ‘ಸರಳ ಜೀವಿ’!

ಸುದ್ದಿಕೇಂದ್ರದಲ್ಲಿ ಮನೋಹರ್ ಪರಿಕ್ಕರ್: ಗೋವಾದಿಂದ ರಕ್ಷಣಾ ಖಾತೆವರೆಗೆ ಬಂದ ‘ಸರಳ ಜೀವಿ’!

ಮನೋಹರ್ ಪರಿಕ್ಕರ್…

ಕಳೆದ ಒಂದು ವಾರದಿಂದ ದೇಶದಲ್ಲಿ ನಡೆಯುತ್ತಿರುವ ಚರ್ಚೆಗಳ ಕೇಂದ್ರಬಿಂದುವಾಗಿರುವ ವ್ಯಕ್ತಿ. ‘ಪಾಕಿಸ್ತಾನ ನರಕ’ ಎಂದು ಹೇಳಿದ್ದಕ್ಕೆ, ನಟಿ ಕಮ್ ರಾಜಕಾರಣಿ ರಮ್ಯಾ ಪ್ರತಿ ಹೇಳಿಕೆ ನೀಡಿದ್ದರಿಂದ ಹಿಡಿದು, ಸಬ್ ಮೆರೀನ್ ಮಾಹಿತಿ ಸೋರಿಕೆಯವರೆಗೆ ಪರಿಕ್ಕರ್ ಸುದ್ದಿಗೆ ಗ್ರಾಸವಾಗಿದ್ದಾರೆ.

ಪರಿಕ್ಕರ್ ಆರ್.ಎಸ್.ಎಸ್ ಜೊತೆಗೆ ಹತ್ತಿರದ ನಂಟನ್ನು ಹೊಂದಿರುವ ರಾಜಕಾರಣಿ. ಕೊಂಕಣಿ ಸಮುದಾಯದವರೇ ತುಂಬಿಕೊಂಡಿರುವ, ಬಿಜೆಪಿಯ ‘ಫಂಡ್ ಬ್ಯಾಂಕ್’ ಗೋವಾ ಮೂಲದವರು. ಸಂಘಕ್ಕೆ ಬೇಕಾದ ಸರಳ ಜೀವನ, ಶಿಸ್ತು, ಹಗಲಿರುಳು ದುಡಿಮೆ, ಬುದ್ಧಿವಂತಿಕೆ ಎಲ್ಲಾ ಇರುವ ಏಕೈಕ ವ್ಯಕ್ತಿ ಪರಿಕ್ಕರ್. ಹಿಂದೆ ಗೋವಾ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್ ಈಗ ಕೇಂದ್ರ ರಕ್ಷಣಾ ಸಚಿವರಾಗಿದ್ದಾರೆ. ಮುಖ್ಯಮಂತ್ರಿಯಾಗಿ, ಸಚಿವರಾಗಿ ಅವರು ಪಾಲಿಸಿಕೊಂಡು ಬಂದಿರುವ ಜೀವನ ಶೈಲಿಯೇ ಇವತ್ತಿನ ರಾಜಕಾರಣದ ಮಟ್ಟಿಗೆ ಕುತೂಹಲಕಾರಿಯಾದುದು.

ಆಗಿನ್ನೂ 2012. ಮನೋಹರ್ ಪರಿಕ್ಕರ್ ಗೋವಾ ರಾಜ್ಯದ ಮುಖ್ಯಂತ್ರಿಯಾಗಿದ್ದರು. ಅವತ್ತೊಂದು ದಿನ ರಾಜಧಾನಿ ಪಣಜಿಯ ಫೈವ್ ಸ್ಟಾರ್ ಹೊಟೇಲಿಗೆಂದು ಹೋದವರನ್ನು ಭದ್ರತಾ ಸಿಬ್ಬಂದಿ ತಡೆದಿದ್ದು ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಭಿತ್ತರವಾಗಿತ್ತು. ಅಷ್ಟಕ್ಕೆಲ್ಲಾ ಕಾರಣವಾಗಿದ್ದು ಪರಿಕ್ಕರ್ ಸರಳ ಜೀವನ ಶೈಲಿ. ಮಾಸಲು ಬಟ್ಟೆಯ, ಅರ್ಧ ತೋಳಿನ ಮುಂಡು ಅಂಗಿ ತೊಟ್ಟು, ಸಿಂಪಲ್ ಚಪ್ಪಲಿ ತೊಟ್ಟಿದ್ದ ಅವರನ್ನು ಗುರುತಿಸುವಲ್ಲಿ ಭದ್ರತಾ ಸಿಬ್ಬಂದಿಯೂ ಸೋತಿದ್ದ.

ವಿಮಾನ ನಿಲ್ದಾಣದಲ್ಲಿ ಮನೋಹರ್ ಪರಿಕ್ಕರ್.

ವಿಮಾನ ನಿಲ್ದಾಣದಲ್ಲಿ ಮನೋಹರ್ ಪರಿಕ್ಕರ್.

ಪರಿಕ್ಕರ್ ಹೊರಗೆ ಹೊರಡುತ್ತಿದ್ದುದೇ ಹಾಗೆ. ಓರ್ವ ಪೊಲೀಸ್ ಅಧಿಕಾರಿ ಬಿಟ್ಟರೆ ಅವರೆಂದಿಗೂ ಪೊಲೀಸ್ ಬೆಂಗಾವಲಿನಲ್ಲಿ ತೆರಳುತ್ತಿರಲಿಲ್ಲ. ಅವತ್ತು ಹೊಟೇಲ್ ಮುಂಭಾಗ ಮಾಧ್ಯಮಗಳನ್ನುದ್ದೇಶಿ ಮಾತನಾಡಿದ ಪರಿಕ್ಕರ್, “ನನ್ನನ್ನು ಈ ಸೆಕ್ಯೂರಿಟಿ ಬಾಗಿಲಿನಲ್ಲಿ ತಡೆಯುತ್ತಿರುವುದು ಇದು ಐದನೇ ಬಾರಿ. ನಂತರ ನಾನು ಹಿಂದಕ್ಕೆ ನಡೆದು ಬಂದು ನನ್ನ ಸೆಕ್ರೆಟರಿಗೆ ಕರೆ ಮಾಡಿ ಸೆಕ್ಯೂರಿಟಿಗೆ ನಾನು ಮುಖ್ಯಮಂತ್ರಿ ಎಂಬುದನ್ನು ತಿಳಿಸು ಎಂದೆ” ಎಂದು ಹೇಳಿಕೆ ನೀಡಿದ್ದರು. ಅದಕ್ಕೂ ಮೊದಲೇ ಐದು ವರ್ಷಗಳ ಪೂರ್ಣ ಆಡಳಿತ ನಡೆಸಿದ್ದ, ಎರಡನೇ ಬಾರಿಗೂ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್ ಅವರನ್ನು ಸೆಕ್ರೆಟರಿಯೇ ಬಂದು ಮುಖ್ಯಮಂತ್ರಿ ಎಂದು ಪರಿಚಯಿಸುವ ಪರಿಸ್ಥಿತಿ ಇತ್ತು.

ಹಾಗಂತ ಘಟನೆ ನಂತರ ಪರಿಕ್ಕರ್ ಹೊಟೇಲಿನ ಆಡಳಿತ ಮಂಡಳಿ ಮೇಲೆ ಸಿಟ್ಟಾಗಲೂ ಇಲ್ಲ; ಕಿಡಿಕಾರಲೂ ಇಲ್ಲ. ಬದಲಿಗೆ ಪ್ರವಾಸೋದ್ಯಮವನ್ನೇ ನಂಬಿ ಬದುಕುವ ಗೋವಾದ ಹೊಟೇಲಿನ ಸುರಕ್ಷತೆ ನೋಡಿ ಹೊಟೇಲಿನ ಮ್ಯಾನೇಜರನ್ನು ಹೊಗಳಿ ಹೊರ ಬಂದಿದ್ದರು.

ಮನೋಹರ್ ಪರಿಕ್ಕರ್ ಇರುತ್ತಿದ್ದುದೇ ಹಾಗೆ. ಅವರಿರುವ ಮನೆ ಸಾಮಾನ್ಯ ಡಬಲ್ ಬೆಡ್ ರೂಂ ಅಪಾರ್ಟ್ಮೆಂಟ್; ಅದಕ್ಕೂ ಕಂತಿನಲ್ಲಿ ಹಣ ಕಟ್ಟುತ್ತಿದ್ದಾರೆ. ಇಂತಹ ‘ಸರಳ ಜೀವನ’ದ ಹಲವು ಕತೆಗಳು ಮನೋಹರ್ ಪರಿಕ್ಕರ್ ಸುತ್ತ ಕೇಳಿ ಬರುತ್ತವೆ. ಸಾಮಾನ್ಯ ಹೊಟೇಲಿಗೆ ಹೋಗಿ ಊಟ ಮಾಡುವುದನ್ನು, ಆಟೋ ರಿಕ್ಷಾದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮುಖ್ಯಮಂತ್ರಿಯನ್ನು ಕಂಡವರಿದ್ದಾರೆ. ಮಂತ್ರಿಗಳ ಸ್ವಾಗತಕ್ಕೆಂದು ಕಾಯುತ್ತಾ ನಿಂತಿದ್ದವರ ಮುಂದೆಯೇ ರಕ್ಷಣಾ ಸಚಿವರು ಹಾದು ಹೋದಾಗಲೂ ಗುರುತಿಸದೆ ಹೋದ ಉದಾಹರಣೆಗಳಿವೆ. ರಕ್ಷಣಾ ಸಚಿವರಾದಾಗಲೂ ಮದುವೆ ಮನೆಯಲ್ಲಿ ಶುಭ ಕೋರಲು ಸಾಮಾನ್ಯರಂತೆ ಸಾಲಿನಲ್ಲಿ ನಿಂತವರಿವರು.

ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ಕೂಟರ್ ಹತ್ತಿ ಗೋವಾದ ಬೀದಿಗಳಲ್ಲಿ ಸುತ್ತಾಡುತ್ತಿದ್ದರು. ಮನೆಯಿಂದ ವಿಧಾನಸಭೆಗೆ ಸೈಕಲ್ ಹತ್ತಿ ಬರುತ್ತಿದ್ದರು. ಮುಖ್ಯಮಂತ್ರಿಯಾದಾಗಲೂ ಅವರ ಹಳೆಯ ಇನ್ನೋವಾ ಕಾರನ್ನೇ ಬಳಸುವಂತೆ ಸೂಚನೆ ನೀಡಿದ್ದರು.

1955ರ ಡಿಸೆಂಬರ್ 13ರಂದು ಗೋವಾದ ಮಪುಸಾದಲ್ಲಿ ಹುಟ್ಟಿದ ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ಗೆ ಈಗ 60 ವಯಸ್ಸು. 1978ರಲ್ಲಿ ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದುಕೊಂಡರು. ಐಐಟಿ ಪದವೀಧರರಾಗಿ ಮುಖ್ಯಮಂತ್ರಿಯಾದ ಮೊದಲಿಗರು ಪರಿಕ್ಕರ್.

ಶಾಲಾ ದಿನಗಳಲ್ಲೇ ಪರಿಕ್ಕರ್’ಗೆ ಆರ್.ಎಸ್.ಎಸ್ ಜೊತೆ ಸಂಪರ್ಕ ಬೆಳೆಯಿತು. ಆರ್.ಎಸ್.ಎಸ್ ಪೂರ್ಣಕಾಲಿಕ ಕಾರ್ಯಕರ್ತರಾದರು. ಅಷ್ಟೊತ್ತಿಗಾಗಲೇ ಜೀವನೋಪಾಯಕ್ಕೆ ಸಣ್ಣ ಉದ್ಯಮವನ್ನೂ ನಡೆಸುತ್ತಿದ್ದರು ಪರಿಕ್ಕರ್. ರಾಮ ಜನ್ಮಭೂಮಿ ಹೋರಾಟ ಆರಂಭವಾದಾಗ ಮುಂಚೂಣಿಯಲ್ಲಿ ಕಾಣಿಸಿಕೊಂಡರು. 1994ರಲ್ಲಿ ಮೊದಲ ಬಾರಿಗೆ ಗೋವಾ ವಿಧಾನಸಭೆಗೆ ಆಯ್ಕೆಯಾದರು. ಅವತ್ತಿಗೆ ಇಡೀ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲವಿದ್ದಿದ್ದು ಕೇವಲ ನಾಲ್ಕು. 1999ರಲ್ಲಿ ವಿರೋಧ ಪಕ್ಷದ ನಾಯಕರಾದ ಪರಿಕ್ಕರ್, 24, ಅಕ್ಟೋಬರ್ 2000ದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದರು. ಅಧಿಕಾರಕ್ಕೆ ಏರಿದ್ದು ಮಾತ್ರವಲ್ಲ ಗೋವಾ ರಾಜ್ಯವನ್ನು ಬಿಜೆಪಿಯ ಭದ್ರ ಕೋಟೆಯಾಗಿ ಕಟ್ಟಿ ಬೆಳೆಸಿದ್ದರು ಮನೋಹರ್ ಪರಿಕ್ಕರ್.

ಗೋವಾ ಪ್ರವಾಸೋದ್ಯಮದ ಹಬ್ ಆಗಿ ಮೂಡಿ ಬರುವಲ್ಲಿಯೂ ಪರಿಕ್ಕರ್ ಪಾತ್ರವಿತ್ತು. ಪೆಟ್ರೋಲಿನ ಎಲ್ಲಾ ತೆರಿಗೆಗಳನ್ನು ಕಳೆದು ದೇಶದಲ್ಲೇ ಅತ್ಯಂತ ಕಡಿಮೆ ದರಕ್ಕೆ ಪೆಟ್ರೋಲ್ ದೊರೆಯುವಂತೆ ಮಾಡಿದರು. ವಿಮಾನ ಇಂಧನದ ತೆರಿಗೆಯನ್ನೂ ಅರ್ಧಕರ್ಧ ಕಡಿತಗೊಳಿಸಿ, ಹೆಚ್ಚಿನ ವಿಮಾನಗಳು ಗೋವಾದಲ್ಲಿ ಇಂಧನ ತುಂಬಿಸಲಿಕ್ಕಾದರೂ ಇಳಿಯುವಂತೆ ನೋಡಿಕೊಂಡರು. ಇದರಿಂದ ಗೋವಾಗೆ ಬರುವ ಪ್ರಯಾಣ ದರಗಳು ಕುಸಿದು ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಇದರ ಹಿಂದೆ ಪರಿಕ್ಕರ್ ಚಾಣಾಕ್ಷ ತಲೆ ಕೆಲಸ ಮಾಡಿತ್ತು.

ಮುಂದೆ ಸೋಲು ಗೆಲುವು ನಡೆದು ಮತ್ತೆ 2012ರಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇ ಏರಿದರು. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚಾಣಾಕ್ಷ, ಶಿಸ್ತಿನ ಸಿಪಾಯಿ, ಸರಳ ಸಜ್ಜನ ಮನುಷ್ಯ ಎಂದು ಕರೆಸಿಕೊಂಡಿದ್ದ ಮನೋಹರ್ ಪರಿಕರ್ ರನ್ನು ಕೇಂದ್ರಕ್ಕೆ ಕರೆಸಿಕೊಂಡು ರಕ್ಷಣಾ ಇಲಾಖೆಯ ಹೊಣೆ ನೀಡಲಾಯಿತು. ಗೋವಾದಿಂದ ಕ್ಯಾಬಿನೆಟ್ ಮಂತ್ರಿಯಾದ ಮೊದಲಿಗರು ಎಂಬ ಹೆಚ್ಚುಗಾರಿಕೆಗೆ ಪರಿಕ್ಕರ್ ಪಾತ್ರರಾದರು.

ಪರಿಕ್ಕರ್ ರಕ್ಷಣಾ ಸಚಿವರಾಗುತ್ತಿದ್ದಂತೆ ಧೂಳು ಹಿಡುತ್ತಿದ್ದ ಫೈಲ್ಗಳಿಗೆ ಮರು ಜೀವ ನೀಡಿದರು. ಹಲವು ಡೀಲ್ಗಳು ಕಾರ್ಯರೂಪಕ್ಕೆ ಬಂದವು. ರಕ್ಷಣಾ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗಳಾದವು. ಸದ್ಯ ಇವರ ಕಾರ್ಯಚಟುವಟಿಕೆಗಳು ಸಬ್ ಮೆರೀನ್ ದಾಖಲೆಗಳ ಸೋರಿಕೆಯವರೆಗೆ ಬಂದು ನಿಂತಿದೆ. ಪರಿಕ್ಕರ್ ಚಾಣಾಕ್ಷತೆ, ಜನಪ್ರಿಯತೆಗಾದ ದೊಡ್ಡ ಹೊಡೆತ ಇದು. ಇದರಿಂದ ಪರಿಕ್ಕರ್ ಹೇಗೆ ಹೊರಗೆ ಬರುತ್ತಾರೆ ಎಂಬುದೂ ಅವರ ಭವಿಷ್ಯವನ್ನು ನಿರ್ಧರಿಸಲಿದೆ.

Leave a comment

FOOT PRINT

Top