An unconventional News Portal.

ಉತ್ತರ ಭಾರತದಲ್ಲಿ ನಡುಗಿದ ಭೂಮಿ; ಇಟಲಿಯ ಕಂಪನಕ್ಕೆ 37ಕ್ಕೂ ಹೆಚ್ಚು ಸಾವು, 150 ಜನ ನಾಪತ್ತೆ

ಉತ್ತರ ಭಾರತದಲ್ಲಿ ನಡುಗಿದ ಭೂಮಿ; ಇಟಲಿಯ ಕಂಪನಕ್ಕೆ 37ಕ್ಕೂ ಹೆಚ್ಚು ಸಾವು, 150 ಜನ ನಾಪತ್ತೆ

ಇಟಲಿಯಲ್ಲಿ ಬುಧವಾರ (ಅಲ್ಲಿನ ಕಾಲಮಾನ ಮುಂಜಾನೆ 3. 36ಕ್ಕೆ) ಸಂಭವಿಸಿದ ಭೂಕಂಪ 37ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.

ಇನ್ನೂ 150 ಜನ ನಾಪತ್ತೆಯಾಗಿದ್ದು ಅವಶೇಷಗಳಡಿಯಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಇಟಲಿ ಸರಕಾರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು ಸಾವಿನ ಸಂಖ್ಯೆ ಹೆಚ್ಚುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.Italy earth quake

ರೋಮ್ ನಗರದಿಂದ 100 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರವಿದ್ದು ಪಸ್ಕಾರಾ ಡೆಲ್ ಟ್ರೋಂಟೋ, ಅಮಟ್ರಿಸ್, ಅಕ್ಮೊಲಿ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 3:36ಕ್ಕೆ ಭೂಕಂಪ ಸಂಭವಿಸಿದೆ. ರೋಮ್ ನಗರದಲ್ಲೇ ಸುಮಾರು 20 ಸೆಕೆಂಡುಗಳವರೆಗೆ ಕಟ್ಟಡಗಳು ಕಂಪಿಸಿವೆ ಎಂದು ವರದಿಗಳು ಪ್ರಸಾರವಾಗುತ್ತಿವೆ.

ಸತ್ತವರಲ್ಲಿ ಭಯದಿಂದ ಸಾವಿಗೀಡಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮನೆ, ಕಟ್ಟಡಗಳ ಕುಸಿತ ನೋಡಿಯೇ ಹೆದರಿಕೆಯಲ್ಲಿ ಜನರು ಪ್ರಾಣ ಬಿಟ್ಟಿದ್ದಾರೆ. ಸತ್ತವರಲ್ಲಿ ನವ ದಂಪತಿಗಳೂ ಸೇರಿದ್ದಾರೆ ಎಂದು ವರದಿಯಾಗಿದೆ. ಹಲವರು ಗಾಯಗೊಂಡಿದ್ದು ಆಸ್ಪತ್ರೆಗಳಿಗೆ ಸಾಗಿಸುವ ಕೆಲಸ ಭರದಿಂದ ಸಾಗಿದೆ. ಇನ್ನೂ 150ಕ್ಕೂ ಹೆಚ್ಚು ಜನರ ಸುಳಿವು ಸಿಕ್ಕಿಲ್ಲ. ಇವರೆಲ್ಲಾ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಗಳಿವೆ.

ನೆಲ ನಡುಗಿದ ರಭಸಕ್ಕೆ ಸೇತುವೆಗಳು ಕುಸಿದಿದ್ದು ರಸ್ತೆ ಸಂಪರ್ಕ ತುಂಡಾಗಿದೆ. ಅಲ್ಲಲ್ಲಿ ಭೂಕುಸಿತವೂ ಸಂಭವಿಸಿ ರಸ್ತೆಗಳ ಮೇಲೆಲ್ಲಾ ಮಣ್ಣು ಬಿದ್ದಿದೆ. ಬಹುಮಹಡಿ ಕಟ್ಟಡಗಳಿಗೂ ಧರೆಗುಳಿದಿದ್ದು ಕಟ್ಟಡಗಳಡಿಯಿಂದ ಜನರನ್ನು ಮೇಲೆತ್ತುವ ಕೆಲಸದಲ್ಲಿ ತುರ್ತು ಕಾರ್ಯಾಚರಣೆ ಪಡೆಗಳು ನಿರತವಾಗಿವೆ. ಕೆಲವು ಮನೆಗಳು, ರಸ್ತೆಗಳು ಬಿರುಕು ಬಿಟ್ಟಿದ್ದು ಭೂಕಂಪದ ತೀವ್ರತೆಯನ್ನು ಸಾರಿ ಹೇಳುತ್ತಿವೆ.

“ಭೂಕಂಪದ ತೀವ್ರವಾಗಿತ್ತು. ಮಲಗಿದ್ದ ಮಂಚಗಳು ಆಚೀಚೆ ಚಲಿಸಿದವು,” ಎಂದು ಪ್ರತ್ಯಕ್ಷ ಅನುಭವಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಹಾನಿಯಾದ ಭಾಗಗಳಿಗೆ ಪರಿಹಾರ ತಂಡಗಳನ್ನು ರವಾನಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇನ್ನೂ ಹೆಚ್ಚಿನ ಸಾವು ಸಂಭವಿಸುವ ಸಾಧ್ಯತೆಗಳೂ ಇವೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಉತ್ತರ ಭಾರತ, ಮ್ಯಾನ್ಮಾರಿನಲ್ಲಿ ನಡುಗಿದ ಭೂಮಿ

CqnohTIXgAAJ6_7ಇತ್ತ ಕೇಂದ್ರ ಮ್ಯಾನ್ಮಾರಿನಲ್ಲೂ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಗೆ ಉತ್ತರ ಭಾರತದಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಆದರೆ ಎಲ್ಲೂ ಜೀವಹಾನಿಯಾದ ವರದಿಗಳು ಬಂದಿಲ್ಲ.

ಕೊಲ್ಕೊತ್ತಾ, ಪಾಟ್ನಾ, ಗುವಾಹಟಿ, ತ್ರಿಪುರಾದಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಭೂಮಿ ನಡುಗುತ್ತಿದ್ದಂತೆ ಜನ ಮನೆ ಕಟ್ಟಡಗಳಿಂದ ಹೊರ ಬಂದಿದ್ದಾರೆ. ಕೊಲ್ಕೊತ್ತಾದಲ್ಲಿ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇವಿಷ್ಟು ಪ್ರಾಥಮಿಕ ಮಾಹಿತಿಗಳು ತಕ್ಷಣಕ್ಕೆ ಲಭ್ಯವಾಗಿವೆ.

ಚಿತ್ರ ಕೃಪೆ: ಸಿಎನ್ಎನ್, ಅಲ್ ಜಝೀರಾ, ಸಿಎನ್ಎನ್-ನ್ಯೂಸ್18

Leave a comment

FOOT PRINT

Top