An unconventional News Portal.

‘ದುಶ್ಮನ್ ಕೆ ಬಚ್ಚೋಂಕೊ…’: ಪ್ರತೀಕಾರವನ್ನು ಶಿಕ್ಷಣದ ಮೂಲಕ ತೆಗೆದುಕೊಳ್ಳುತ್ತೇವೆ ಅಂದ ಪಾಕಿಸ್ತಾನದ ಮಕ್ಕಳು!

‘ದುಶ್ಮನ್ ಕೆ ಬಚ್ಚೋಂಕೊ…’: ಪ್ರತೀಕಾರವನ್ನು ಶಿಕ್ಷಣದ ಮೂಲಕ ತೆಗೆದುಕೊಳ್ಳುತ್ತೇವೆ ಅಂದ ಪಾಕಿಸ್ತಾನದ ಮಕ್ಕಳು!

ಹೀಗೊಂದು ವಿಡಿಯೋ ನೋಡುತ್ತಿದ್ದರೆ, ಪೇಶಾವರದಲ್ಲಿ ಮಡಿದ ಮುದ್ದು ಕಂದಮ್ಮಗಳ ಚಿತ್ರವೊಂದು ಕಣ್ಮುಂದೆ ಹಾದು ಹೋಗುತ್ತದೆ.

2014ರ ಡಿಸೆಂಬರ್ 16ನೇ ತಾರೀಖು. ಪಾಕಿಸ್ತಾನದ ಸೇನಾ ನೆಲೆ ಎಂದು ಕರೆಸಿಕೊಳ್ಳುವ ಪೇಶಾವರದ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. 132 ಮಕ್ಕಳು ಸೇರಿದಂತೆ ಒಟ್ಟು 145 ಜನ ಅವತ್ತಿನ ದಾಳಿಯಲ್ಲಿ ಅಸುನೀಗಿದ್ದರು. ರಕ್ತಸಿಕ್ತ ಶಾಲೆಯ ಡೆಸ್ಕ್ ಹಾಗೂ ಗೋಡೆಗಳೇ, ಭೀಬತ್ಸ ವಾತಾವರಣವನ್ನು ಸಾರಿ ಹೇಳುತ್ತಿದ್ದವು. ಇದಾದ ನಂತರ, ‘ದುಶ್ಮನ್ ಕೆ ಬಚ್ಚೋಂಕೆ ಪರ್ಹಾನಾ ಹೇ’ (ಶತ್ರುವಿನ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕಿದೆ) ಎಂಬ ಹಾಡೊಂದು ಬಿಡುಗಡೆಗೊಂಡು, ನೋಡುವವರ ಕಣ್ಣಂಚನ್ನೂ ಒದ್ದೆ ಮಾಡಿತ್ತು. ನಮ್ಮಲ್ಲಿಯೂ ‘ಪಾಕಿಸ್ತಾನ ನರಕ ಅಲ್ಲ’ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಅದೇ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಲಯ ಕಂಡುಕೊಂಡಿತು.

ಈ ಹಾಡಿನ ಹಿನ್ನೆಲೆಯನ್ನು ಹುಡುಕಿಕೊಂಡು ಹೊರಟರೆ ಪಾಕಿಸ್ತಾನ ಸೇನೆಯ ಗಮನಾರ್ಹ ನಡೆಯೊಂದು ತೆರೆದುಕೊಳ್ಳುತ್ತದೆ. ಅದು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡ ಪಾಕಿಸ್ತಾನ. ಪಾಕ್ ಸೇನೆಯ ಮೊದಲ ಮಹಾ ನಿರ್ದೇಶಕ ಶಹಬಾಸ್ ಖಾನ್, ‘ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್’ (ಐಎಸ್ಪಿಆರ್) ಎಂಬ ನಿರ್ದೇಶನಾಲಯವೊಂದನ್ನು 1949ರಲ್ಲಿ ಹುಟ್ಟು ಹಾಕುತ್ತಾರೆ. ಪಾಕ್ ಭೂ ಸೇನೆ, ವಾಯು ಸೇನೆ, ನೌಕಾ ಪಡೆ ಮತ್ತು ಮೆರೈನ್ಸ್ ಪಡೆಗಳ ಪ್ರಚಾರ ಕಾರ್ಯವನ್ನು, ಸಾರ್ವಜನಿಕ ಸಂಪರ್ಕವನ್ನು ಐಎಸ್ಪಿಆರ್ ನಿರ್ದೇಶಾನಲಯದ ಹೆಗಲಿಗೆ ಹಾಕಲಾಗುತ್ತದೆ.

ಅಲ್ಲಿಂದ ಇಲ್ಲೀವರೆಗೆ ಐಎಸ್ಪಿಆರ್ ಸಾಕಷ್ಟು ವಿಡಿಯೋಗಳನ್ನು, ಸಿನೆಮಾಗಳನ್ನು, ಹಾಡುಗಳನ್ನು ತಯಾರಿಸಿದೆ. ಪೇಶಾವರದ ಸೇನಾ ಶಾಲೆಯ ಮೇಲೆ ನಡೆದ ದಾಳಿಗೆ ವರ್ಷ ತುಂಬುತ್ತಿದ್ದ ಸಮಯದಲ್ಲಿ ಐಎಸ್ಪಿಆರ್ ಈ ಹಾಡನ್ನು ಬಿಡುಗಡೆ ಮಾಡಿತ್ತು. ಈ ಸಮಯದಲ್ಲಿ, “ಮಡಿದ ಮಕ್ಕಳಿಗೆ ಐಎಸ್ಪಿಆರ್ ಶ್ರದ್ಧಾಂಜಲಿಯನ್ನು ಅರ್ಪಿಸಿದೆ,” ಎಂದು ಜಿಯೋ ನ್ಯೂಸ್ ವರದಿ ಮಾಡಿತ್ತು. ಫ್ರಾನ್ಸ್ 24 ಸೇರಿದಂತೆ ಅನೇಕ ಅಂತರಾಷ್ಟ್ರೀಯ ವಾಹಿನಿಗಳು ಈ ಹಾಡನ್ನು ಗುರುತಿಸಿ, ವರದಿ ಮಾಡಿದ್ದವು.

ಸೇನಾ ಶಾಲೆಯ ಮೇಲಿನ ದಾಳಿಯ ಹೊಣೆಯಲ್ಲಿ ತೆಹರಿಕ್- ಇ- ತಾಲಿಬಾನ್- ಪಾಕಿಸ್ತಾನ್ (ಟಿಟಿಪಿ) ಸಂಘಟನೆ ಹೊತ್ತುಕೊಂಡಿತ್ತು. 2014ರಲ್ಲಿ ಉತ್ತರ ವಜೀರಿಸ್ತಾನದಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಕಾರ್ಯಚರಣೆಗೆ ಪ್ರತೀಕಾರವಾಗಿ ಮಕ್ಕಳನ್ನು ಕೊಂದು ಹಾಕಿರುವುದಾಗಿ ಸಂಘಟನೆ ಹೇಳಿಕೊಂಡಿತ್ತು. ಇದಾದ ವರ್ಷಕ್ಕೆ ಹಾಡನ್ನು ಬಿಡುಗಡೆ ಮಾಡಿದ ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ಐಎಸ್ಪಿಆರ್, ‘ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ,’ ಎಂದು ಪೇಶಾವರ ಶಾಲೆಯ ಮಕ್ಕಳ ಬಾಯಲ್ಲಿಯೇ ಹೇಳಿಸಿತ್ತು. ಆದರೆ “ಶತ್ರುವಿನ ಮಕ್ಕಳಿಗೆ ಪಾಠ ಹೇಳಿ (ಶಿಕ್ಷಣ) ಸೇಡು ತೀರಿಸಿಕೊಳ್ಳುತ್ತೇವೆ,” ಎಂಬ ಹಾಡಿನ ಸಾಲುಗಳು ಜಾಗತಿಕ ವೀಕ್ಷಕರ ಮನಸೂರೆಗೊಂಡವು. ಅಲ್ಲಿನ ಆರ್ಮಿಯೂ ಹೀಗೊಂದು ಶಾಂತಿ ಸಂದೇಶ ಸಾರಿದ್ದು ಅಚ್ಚರಿಯನ್ನು ಹುಟ್ಟುಹಾಕಿತ್ತು.

ಪಾಕಿಸ್ತಾನದಲ್ಲಿ ಸಂಗೀತವೇ ಅಪಾಯದಲ್ಲಿದೆ. ಗಾಯಕ, ಗಾಯಕರ ಮೇಲೆ ದಾಳಿಗಳಾಗುತ್ತಿವೆ. ಈ ಸಮಯದಲ್ಲಿ ಐಎಸ್ಪಿಆರ್ ಅದೇ ಸಂಗೀತದ ಮಾಧ್ಯಮವನ್ನು ಬಳಸಿಕೊಂಡು, ‘ಶತ್ರು’ಗಳಿಗೆ ಶಾಂತಿ ಸಂದೇಶ ನೀಡಲು ಮುಂದಾಗಿತ್ತು. ಇದರ ಜತೆಗೆ, ಐಎಸ್ಪಿಆರ್ ಮೇಲೆ ಪಾಕಿಸ್ತಾನ ಮಾಧ್ಯಮಗಳ ಸ್ವಾತಂತ್ರ್ಯ ಹರಣದ ಆರೋಪಗಳು ಕೇಳಿ ಬಂದಿದ್ದವು. ಇವೆಲ್ಲವನ್ನೂ ತಳ್ಳಿ ಹಾಕಿದ್ದ ಐಎಸ್ಪಿಆರ್, ಪಾಕ್ ಪ್ರಖ್ಯಾತ ಪತ್ರಕರ್ತ ಹಮೀದ್ ಮೀರ್ ಮೇಲೆ ದಾಳಿ ನಡೆದಾಗ ಖಂಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.

ಸಂಗೀತಕ್ಕೆ ಗಡಿಗಳಿಲ್ಲ; ಭಾಷೆಯ ಹಂಗೂ ಇಲ್ಲ. ಭಾವನೆಗಳನ್ನು ಬೆಸೆಯುವ ಮಾಧ್ಯಮವಾಗಿ ಅದು ಕಾರ್ಯನಿರ್ವಹಿಸುತ್ತದೆ. ಹೀಗಾಗಿಯೇ, ಪೇಶಾವರ ಸೇನಾ ಶಾಲೆಯ ಮಕ್ಕಳ ಹಾಡು, ಅದರ ಪ್ರಾಯೋಜಕರನ್ನು ಮೀರಿ ಜನರನ್ನು ತಲುಪಿದೆ. ಭಯೋತ್ಪಾದನೆ ವಿರುದ್ಧ, ಶಾಂತಿ ಮತ್ತು ಸಹೋದರತ್ವಕ್ಕಾಗಿ ಹಂಬಲಿಸುವಂತೆ ಪ್ರೇರೆಪಿಸುತ್ತಿದೆ; ಅದಷ್ಟೆ ಈ ಸಮಯದಲ್ಲಿ ಮುಖ್ಯವಾಗಬೇಕಿದೆ.

Leave a comment

FOOT PRINT

Top