An unconventional News Portal.

‘ಬದುಕು ಬದಲಿಸಿದ ಹೋರಾಟ’: 16 ವರ್ಷ ಜೈಲುವಾಸ ಮುಗಿಸಿ ಬಂದವರು ಬಿಚ್ಚಿಟ್ಟ BPL ಕತೆ!

‘ಬದುಕು ಬದಲಿಸಿದ ಹೋರಾಟ’: 16 ವರ್ಷ ಜೈಲುವಾಸ ಮುಗಿಸಿ ಬಂದವರು ಬಿಚ್ಚಿಟ್ಟ BPL ಕತೆ!

ಕೋಲಾಹಲ ಸೃಷ್ಟಿಸಿದ್ದ 1999ರ ‘ಬಿಪಿಎಲ್ ಬಸ್ ಬರ್ನಿಂಗ್ ಕೇಸ್’ನಲ್ಲಿ ಪ್ರಮುಖ ಅಪರಾಧಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರ್. ಶ್ರೀನಿವಾಸ್ ಸ್ವಾತಂತ್ರ್ಯ ದಿನಾಚರಣೆಯ ದಿನ ಬಿಡುಗಡೆ ಹೊಂದಿದ್ದಾರೆ. ಸನ್ನಡತೆಯ ಆಧಾರದಲ್ಲಿ 16 ವರ್ಷಗಳ ಜೈಲು ಶಿಕ್ಷೆಯ ನಂತರ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ.

1999ರಲ್ಲಿ ಪ್ರತಿಭಟನೆ ವೇಳೆ ಬಿಪಿಎಲ್ ಬಸ್ ಸುಟ್ಟ ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆಯನ್ನು ಸುಪ್ರಿಂ ಕೋರ್ಟ್ ಖಾಯಂಗೊಳಿಸಿತ್ತು. ಆರ್. ಶ್ರೀನಿವಾಸ್, ಟಿ.ಕೆ.ಎಸ್. ಕುಟ್ಟಿ, ಎನ್.ವಿ. ರವಿ, ಆರ್. ರಮೇಶ್ ಮತ್ತು ಧರಣೇಶ್ ಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಇವರಲ್ಲಿ ಶ್ರೀನಿವಾಸ್ ಹೊರತುಪಡಿಸಿ ಉಳಿದೆಲ್ಲರೂ ಈ ಹಿಂದೆಯೇ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾಗಿದ್ದರು.

ಅವತ್ತಿಗೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಅಂಗ ಸಂಸ್ಥೆ ‘ಸಿಐಟಿಯು’ನ ರಾಜ್ಯ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ್ ‘ಬಿಪಿಎಲ್’ ಕಂಪೆನಿ ವಿರುದ್ಧ ಸಂಘಟನೆ ಕಟ್ಟಿ ಹೋರಾಟಕ್ಕೆ ಇಳಿದಿದ್ದರು. ಸದ್ಯ ಜೈಲಿನಿಂದ ಬಿಡುಗಡೆಯಾಗಿರುವ ಅವರು ತಮ್ಮ ಹೋರಾಟದ ದಿನಗಳು, ಜೈಲು ವಾಸ ಮತ್ತಿತರ ಅವರ ಬದುಕಿನ ತಿರುವುಗಳ ಹಾದಿಯನ್ನು ‘ಸಮಾಚಾರ’ದ ಜೊತೆ ಹಂಚಿಕೊಂಡಿದ್ದಾರೆ.

ಕಾರ್ಮಿಕರ ಹೋರಾಟ, ಉದ್ಯಮ ವ್ಯವಸ್ಥೆಯೊಂದು ಎಸಗಿದ ದೌರ್ಜನ್ಯಗಳನ್ನು ಬಿಡಿಸಿಡುವ ಅವರ ಮಾತುಗಳು ಇಲ್ಲಿವೆ.

ಬಿಪಿಎಲ್

ಬೆಂಗಳೂರಿನಲ್ಲಿ ಬಿಪಿಎಲ್ ಎಂಬ ಟಿವಿ, ಟೆಲಿಫೋನ್, ಆಸ್ಪತ್ರೆಗೆ ಬೇಕಾದ ಸಲಕರಣೆಗಳನ್ನು ತಯಾರಿಸುವ ಕಂಪೆನಿ 1970-72ರ ಸುಮಾರಿಗೆ ಆರಂಭವಾಯಿತು. ಟಿ. ಪಿ. ಜಿ ನಂಬಿಯಾರ್ ಎಂಬವರಿಗೆ ಸೇರಿದ ಈ ಕಂಪೆನಿಯಲ್ಲಿ ಅವರ ಮಗ, ಈಗಿನ ರಾಜ್ಯಸಭಾ ಸದಸ್ಯರಾಗಿರುವ ರಾಜೀವ್ ಚಂದ್ರಶೇಖರ್ ಪತ್ನಿ ಉನ್ನತ ಸ್ಥಾನದಲ್ಲಿ ಇದ್ದರು. 

ಬೆಂಗಳೂರಿನಲ್ಲಿ ಸುಮಾರು 12-15 ಘಟಕಗಳನ್ನು ಹೊಂದಿದ್ದ ಬಿಪಿಎಲ್ ಕಂಪೆನಿಯಲ್ಲಿ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ದೂರುಗಳು ಮೇಲಿಂದ ಮೇಲೆ ಬರತೊಡಗಿದವು. 1998ರಲ್ಲಿ ಕೆಲವು ಕಾರ್ಮಿಕರು ಬಂದು ನನ್ನನ್ನು ಸಂಪರ್ಕಿಸಿದರು. ಅಲ್ಲಿವರೆಗೆ ಕಂಪೆನಿಯೊಳಗೆ ಸಂಘಟನೆ ಮಾಡಲು ಬಿಟ್ಟಿರಲಿಲ್ಲ. ಹೋರಾಟ ನಡೆಸಲು ಸಂಘಟನೆ ಮಾಡುವ ನಿರ್ಧಾರ ಮಾಡಿ, ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡೆವು. ಆದರೆ ಬಿಪಿಲ್ ಕಂಪೆನಿ ನಮ್ಮ ಸಂಘಟನೆಯ ಸಿಂಧುತ್ವವನ್ನೇ ಪ್ರಶ್ನಿಸಿತು. ಆದರೆ ನಾವು ಈ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸಿದೆವು.

ಮುಷ್ಕರಕ್ಕೆ ನಿರ್ಧಾರ

ಈ ವೇಳೆಗಾಗಲೇ ಸಂಘಟನೆಯಲ್ಲಿ ತೊಡಗಿಕೊಂಡಿದ್ದವರ ಮೇಲೆ ದೌರ್ಜನ್ಯಗಳು ಆರಂಭವಾಗಿದ್ದವು. ಕೆಲಸದಿಂದ ವಜಾ, ವರ್ಗಾವಣೆ ಆರಂಭವಾದವು. ಕನಿಷ್ಟ ವೇತನವನ್ನೂ ಕಂಪೆನಿ ನೀಡುತ್ತಿರಲಿಲ್ಲ. ನಾವು ಕಂಪೆನಿಯೊಳಗಿನ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದೆವು. ಕಂಪೆನಿಗಳಲ್ಲಿ ಶೇಕಡಾ 80 ಟ್ರೇನಿಗಳು ಮತ್ತು ಶೇಕಡಾ 20 ಸಿಬ್ಬಂದಿಗಳಿರುತ್ತಿದ್ದರು. ವರ್ಷವಾಗುತ್ತಿದ್ದಂತೆ ಟ್ರೇನೀಗಳನ್ನು ಪ್ರೊಬೆಷನರಿ ಮಾಡಿ, ಕೊನೆಗೊಂದು ದಿನ ಕೆಲಸದಿಂದ ಬಿಡುಗಡೆ ಮಾಡುತ್ತಿದ್ದರು.  ಕಾರ್ಮಿಕರಿಗೆ ಒತ್ತಡ ತಡೆದುಕೊಳ್ಳಲಾಗಲಿಲ್ಲ; ಕೊನೆಗೆ ಮುಷ್ಕರಕ್ಕಾಗಿ ಒತ್ತಾಯಿಸಿದರು.

ನವೆಂಬರ್ 19 ರಂದು ಮುಷ್ಕರ ಎಂದು ತೀರ್ಮಾನಿಸಿ, 49 ದಿನಗಳ ಮೊದಲೇ ಅಂದರೆ ಅಕ್ಟೋಬರ್ 1ರಂದು ನೋಟಿಸ್ ನೀಡಿದೆವು. ‘ದೌರ್ಜನ್ಯ ನಿಲ್ಲಿಸಬೇಕು, ಕನಿಷ್ಟ ಸಂಬಳ ನೀಡಬೇಕು,’ ಎಂಬ ಬೇಡಿಕ ಮುಂದಿಟ್ಟೆವು. ತಾಳ್ಮೆಯಿಂದ ಕಾನೂನಾತ್ಮಕವಾಗಿ ನಾವು ಹೋರಾಡುತ್ತಿದ್ದೆವು.

ನಮ್ಮ ಸಂಘನಟೆಯ ನೋಂದಣಿಯೇ ಅಸಿಂಧು ಎಂದು ಹೇಳಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದೆವು. ನವೆಂಬರಿನಿಂದ ಮುಷ್ಕರ ಆರಂಭವಾಗಿದ್ದು, ಒಂದು, ಎರಡು, ಮೂರು ತಿಂಗಳು ಹೀಗೆ ಮುಂದುವರಿಯಿತು.

ಅವತ್ತಿಗೆ 7-8 ಸಾವಿರ ಕೋಟಿ ವಹಿವಾಟು ನಡೆಸುವ ಕಂಪೆನಿ ಅದಾಗಿತ್ತು. ತಮ್ಮ ಪ್ರಭಾವ ಬಳಸಿ ನಮಗೆ ಸಪೋರ್ಟ್ ಮಾಡಿ ಎಂದು ಕಾರ್ಮಿಕ ಇಲಾಖೆ ಮುಂದೆ ತಮ್ಮ ಬೇಡಿಕೆ ಇಟ್ಟಿತು ಬಿಪಿಎಲ್. ಹೀಗಿದ್ದೂ, ಇವತ್ತಿನ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅವತ್ತಿನ ಕಾರ್ಮಿಕ ಸಚಿವರಾಗಿದ್ದರು. ಕಾನೂನು ಜಾರಿ ಮಾಡುತ್ತೇವೆ ಕಂಪೆನಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಕುಳಿತು ಬಿಟ್ಟರು.

ನಮ್ಮ ನಿರಂತರ ಮುಷ್ಕರದಿಂದ ಕಂಗೆಟ್ಟ ಮಾಲೀಕರು, ಸರಕಾರದ ಮೂಲಕ ನಮ್ಮ ಮುಷ್ಕರವನ್ನೇ ಬ್ಯಾನ್ ಮಾಡಿಸಿದರು. ಇದನ್ನೂ ಸೇರಿದಂತೆ, ನಮ್ಮ ನೋಂದಣಿ ವಿವಾದವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದೆವು. ನಮ್ಮ ಮುಷ್ಕರವನ್ನು ಬ್ಯಾನ್ ಮಾಡಿದ ಸರಕಾರದ ನಿರ್ಧಾರಕ್ಕೆ ಹೈಕೋರ್ಟು ಮಾರ್ಚ್ 11ರಂದು ತಡೆಯಾಜ್ಞೆ ನೀಡಿತು. ಅನಗತ್ಯ ಕಾರ್ಮಿಕ ಇಲಾಖೆಯಲ್ಲಿ ಮೂಗು ತೂರಿಸಿದ ಸುಮಾರು 7 ಜನ ಹಿರಿಯ ಅಧಿಕಾರಿಗಳಿಗೆ ಛೀಮಾರಿ ಹಾಕಿತು. ಮುಂದೆ ಮಾರ್ಚ್ 24ರಂದು ನಮ್ಮ ಸಂಘಟನೆಗಳ ನೋಂದಣಿ ಸರಿಯಾಗಿದೆ, ಸಿಂಧು ಎಂದು ಹೈಕೋರ್ಟ್ ಆದೇಶ ನೀಡಿತು.

ಮಾರ್ಚ್ 25, 1999

ಬಿಪಿಎಲ್ ವಿರುದ್ಧದ ಹೋರಾಟದ ಅಪರೂಪದ ಚಿತ್ರ

‘ಬಿಪಿಎಲ್’ ವಿರುದ್ಧದ ಹೋರಾಟದ ಅಪರೂಪದ ಚಿತ್ರ

ತೀರ್ಪು ನೀಡಿದ ಮರುದಿನ ಕೆ.ಆರ್ ವೃತ್ತದಲ್ಲಿ ಪ್ರತಿಭನೆ ನಡೆಸುತ್ತಿದ್ದೆವು. ಈ ವೇಳೆ ಆಗಮಿಸಿದ ಬಿಪಿಎಲ್ ಬಸ್ಸಿನ ಚಕ್ರಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಯಿತು. ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಯುವತಿಯರು (ಸಿನಿಜಾ ಮತ್ತು ನಾಗರತ್ನ) ಶೇಕಡಾ 75 ಸುಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದವರು; ನಂತರ ಡಿ. ಜಿ ಆಸ್ಪತ್ರೆಯಲ್ಲಿ ಒಂದು ತಿಂಗಳ ನಂತರ ಅಸು ನೀಗಿದರು. ಈ ಎಲ್ಲಾ ಬೆಳವಣಿಗೆಗಳಲ್ಲಿ ನಮ್ಮ ಕೈವಾಡ ಇಲ್ಲದಿದ್ದರೂ, ಇದರ ಅಪವಾದವನ್ನು ನಮ್ಮ ತಲೆ ಮೇಲೆ ಹೊರಿಸಲಾಯಿತು. ಒಟ್ಟು 50 (49 ಜನ ಬಿಪಿಎಲ್ ಸಿಬ್ಬಂದಿಗಳು ಮತ್ತು ಆರ್ ಶ್ರೀನಿವಾಸ್) ಜನರ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು.

ಎರಡು ವರ್ಷ ಜಾಮೀನು ಕೂಡಾ ಸಿಗಲಿಲ್ಲ. ಗಾಯಗೊಂಡು ಸತ್ತವರು ಚಿಕಿತ್ಸೆಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದರು ಎಂಬುದಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದರು. ಆದರೆ ಬೇಕೆಂದೇ ಸರಕಾರ ಮತ್ತು ಮಾಲೀಕರು ಇಬ್ಬರೂ ಸಾವನ್ನು ನಮ್ಮ ತಲೆಗೆ ಕಟ್ಟಿ; ನಮ್ಮ ವಿರುದ್ಧ ನಿಂತು ಬಿಟ್ಟರು.

ಅಧೀನ ನ್ಯಾಯಾಲಯ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸರಕಾರ ಪ್ರಕರಣ ಸಂಬಂಧ ಹೈಕೋರ್ಟಿಗೆ ಹೋದಾಗ ಮತ್ತೆ ಐವರು ಸೇರಿ 12 ಜನರಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಮುಂದೆ ಪ್ರಕರಣವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದಾಗ 2010ರಲ್ಲಿ ನಾನು ಸೇರಿ ಐವರಿಗಷ್ಟೇ ಜೀವಾವಧಿ ಶಿಕ್ಷೆ ಖಾಯಂ ಆಯಿತು.

ನಾವೆಲ್ಲಾ ಜೈಲು ಪಾಲಾದ ನಂತರವೂ, ಸಂಘಟನೆಯ ವಕೀಲರು ಕಾನೂನು ಹೋರಾಟ ಮುಂದುವರಿಸಿದರು. ಮುಷ್ಕರ ನಿರತರಿಗೆ ಶೇಕಡಾ 50 ಸಂಬಳವೂ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿತು. ಕೆಲವು ಕಡೆಗಳಲ್ಲಿ ಕಂಪೆನಿ ಪರಿಹಾರ ನೀಡಿ, ಇನ್ನು ಕೆಲವು ಕಡೆ ಕೈತೊಳೆದುಕೊಂಡಿತು ಎಂಬ ಸುದ್ದಿ ನಾವು ಜೈಲಿನಲ್ಲಿ ಇರುವಾಗಲೇ ಬಂತು. 

ನಾವು ಯಾರ ವಿರುದ್ಧವೂ ಸೇಡು ತೀರಿಸಿಕೊಂಡವರಲ್ಲ, ಹೀಗಿದ್ದೂ 16 ವರ್ಷ ಜೈಲು ಶಿಕ್ಷೆ ಅನಭವಿಸಬೇಕಾಯಿತು. ಸದ್ಯ ಸ್ವಾತಂತ್ರ್ಯ ದಿನದಂದು ಸಿದ್ಧರಾಮಯ್ಯ ಸರಕಾರ ನಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಿದೆ.

ಮಾತು ಮುಗಿಸಿದಾಗ ಅವರ ಧ್ವನಿ ಸೋತಿತ್ತು. ಮತ್ತೆಂದಾದರೂ ಜೈಲಿನ ಅನುಭವಗಳನ್ನು ಹಂಚಿಕೊಳ್ತೀನಿ ಎಂದು ಮಾತು ಮುಗಿಸಿದರು ಕಾಮ್ರೆಡ್ ಆರ್. ಶ್ರೀನಿವಾಸ್.

Leave a comment

FOOT PRINT

Top