An unconventional News Portal.

‘ಭೂರಹಿತರು ಬೆಂಗಳೂರಿಗೆ ಬಂದರು ಜಾಗ ಕೊಡಿ’: ಕಾಗದದ ಬದಲು ‘ಕಾನೂನು’ ಬದಲಾಗಲಿ!

‘ಭೂರಹಿತರು ಬೆಂಗಳೂರಿಗೆ ಬಂದರು ಜಾಗ ಕೊಡಿ’: ಕಾಗದದ ಬದಲು ‘ಕಾನೂನು’ ಬದಲಾಗಲಿ!

ದೇವರಾಜ ಅರಸು ಜಾರಿಗೆ ತಂದಿದ್ದ ‘ಭೂ ಸುಧಾರಣೆ ಕಾಯ್ದೆ’ ಪರಿಣಾಮಕಾರಿ ಜಾರಿಗೆ ಒತ್ತಾಯಿಸಿ ‘ಭೂ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಶನಿವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ವಿಧಾನಸೌಧ ಚಲೋ’ ಭೂಮಿ ಹಿನ್ನೆಲೆಯಲ್ಲಿ ಚಳವಳಿಯೊಂದಕ್ಕೆ ಮುನ್ನುಡಿ ಬರೆಯಿತು.

ಪ್ರತಿಭಟನಾ ಸಭೆಯಲ್ಲಿ ಮನವಿ ಸ್ವೀಕರಿಸಲು ಬಂದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, “ಸಮಿತಿಯ ಬೇಡಿಕೆಗಳನ್ನು ಜಾರಿ ಮಾಡುವುದಾಗಿ,” ನಗುಮುಖದಿಂದಲೇ ಭರವಸೆ ನೀಡಿದ್ದಾರೆ.

ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಜನ್ಮ ಶತಮಾನೋತ್ಸವ ದಿನವಾದ ಆಗಸ್ಟ್ 20ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸರಕಾರಿ ಕಾರ್ಯಕ್ರಮ ಆಯೋಜನೆಯಾಗಿದ್ದರೆ, ಇನ್ನೊಂದು ಕಡೆಯಲ್ಲಿ ‘ಭೂ ಸುಧಾರಣಾ ಕಾಯ್ದೆ’ ಪರಿಣಾಮಕಾರಿ ಜಾರಿಗೆ ಒತ್ತಾಯಿಸಿ ಸಂಘಟನೆಗಳು ರ್ಯಾಲಿ ಹಮ್ಮಿಕೊಂಡಿದ್ದವು. ‘ಭೂ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಹೆಸರಿನಲ್ಲಿ 30 ಕ್ಕೂ ಹೆಚ್ಚು ಸಂಘಟನೆಗಳು ನಗದ ರೈಲ್ವೇ ನಿಲ್ದಾಣದಿಂದ ‘ವಿಧಾನಸೌಧ ಚಲೋ’ ಹಮ್ಮಿಕೊಂಡಿದ್ದವು.

ಬೆಳಿಗ್ಗೆ 9 ಗಂಟೆಗೂ ಮೊದಲೇ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯ ಭೂಮಿ ಮತ್ತು ವಸತಿ ವಂಚಿತರು ಜಮಾವಣೆಯಾಗಿದ್ದರು. ರಾಜ್ಯದ ಮೂಲೆ ಮೂಲೆಯಿಂದ ಬಂದ ಜನರೂ ಇವರನ್ನು ಕೂಡಿಕೊಂಡರು. 11.30ರ ಸುಮಾರಿಗೆ ರೈಲ್ವೇ ನಿಲ್ದಾಣದಿಂದ ಮೆರವಣಿಗೆ ಆರಂಭವಾಯಿತು.

ರೈಲ್ವೇ ನಿಲ್ದಾಣದಿಂದ ಕಮ್ಯೂನಿಸ್ಟ್ ಪಕ್ಷದ ಕೆಂಬವುಟ ಸೇರಿದಂತೆ ನಾನಾ ಸಂಘಟನಗಳ ವಿವಿಧ ಬಾವುಟ ಹಿಡಿದ ಮಹಿಳೆಯರು ಮತ್ತು ಪುರುಷರ ಮೆರವಣಿಗೆ  ದಾರಿಯುದ್ಧಕ್ಕೂ ‘ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆ’ ಮೊಳಗಿಸಿತು.

ಶಾಂತಿಯುತವಾಗಿಯೇ ಮೆಜೆಸ್ಟಿಕಲ್ ಫೈಓವರ್ ಹಾದು ಬಂದ ಜನಸಾಗರವನ್ನು ತಡೆಯಲು ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಪೊಲೀಸರು ಬೃಹತ್ ಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರು. ಮೆರವಣಿಗೆ ಸ್ವಾತಂತ್ರ್ಯ ಉದ್ಯಾನವನ ತಲುಪುತ್ತಲೇ, ಅಲ್ಲಿಯೇ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ, ಸಭೆ ಉದ್ದೇಶಿಸಿ ಮಾತನಾಡಿದ ಸಂಘಟನಾಕಾರ ನೂರ್ ಶ್ರೀಧರ್, “ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಖಚಿತ ಭರವಸೆ ನೀಡದೆ, ನಾವ್ಯಾರೂ ಬೆಂಗಳೂರಿನಿಂದ ವಾಪಸ್ಸು ತೆರಳುವುದಿಲ್ಲ,” ಎಂಬ ಘೋಷಣೆ ಮೊಳಗಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಸಮಾಜ ಪರಿವರ್ತನ ಸಮುದಾಯದ ಎಸ್. ಆರ್. ಹಿರೇಮಠ್, ಸಿರಿಮನೆ ನಾಗರಾಜ್, ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಲಂಚ ಮುಕ್ತ ಕರ್ನಾಟಕದ ರವಿಕೃಷ್ಟಾ ರೆಡ್ಡಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಮುಂತಾದವರು ಈ ಸಮಯದಲ್ಲಿ ಉಪಸ್ಥಿತರಿದ್ದರು.

ಕೊನೆಗೆ ಪ್ರತಿಭಟನೆ ನಡೆಯುತ್ತಿದ್ದ ಜಾಗಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆಗಮನ ನೀಡಿ; ಅಹವಾಲು ಆಲಿಸಿದರು. ಪ್ರತಿಭಟನಾಕಾರರ 15 ಬೇಡಿಕೆಗಳಲ್ಲಿ 10 ಪ್ರಮುಖ ಬೇಡಿಕೆಗಳನ್ನು ಕಂದಾಯ ಸಚಿವರ ಮುಂದಿಡಲಾಯಿತು.


ಕಂದಾಯ ಸಚಿವರ ಮುಂದೆ ಇಡಲಾದ ಸಮಿತಿಯ ಹತ್ತು ಪ್ರಮುಖ ಬೇಡಿಕೆಗಳು: 

  1. ಘನತೆಯಿಂದ ಬದುಕುವಷ್ಟು ಭೂಮಿ-ಗೌರವದಿಂದ ಬಾಳುವಂಥ ವಸತಿ ಎಂಬುದು ಈ ಸಂದರ್ಭದ ಸರ್ಕಾರದ ಧ್ಯೇಯ ಘೋಷಣೆಯಾಗಬೇಕು.
  2. ಈ ಘೋಷಣೆಯನ್ನು ೨ ವರ್ಷದೊಳಗೆ ಅನುಷ್ಠಾನಕ್ಕಿಳಿಸುವ ಗುರಿಯೊಂದಿಗೆ ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳ ನೇತೃತ್ವದಲ್ಲಿ ‘ಹೈ ಪವರ್ ಕಮಿಟಿ’ಯನ್ನು ರಚಿಸಬೇಕು. ಈ ಸಮಿತಿಯು ಜನ ಚಳವಳಿಗಳ ಪ್ರತಿನಿಧಿಗಳನ್ನು ಸಹ ಒಳಗೊಂಡಿರಬೇಕು.
  3. ಈ ಸಮಿತಿಯು ಕರ್ನಾಟಕದ ಎಲ್ಲಾ ರೀತಿಯ ಭೂಮಿಯ ಕುರಿತು ಸಮಗ್ರ ಲ್ಯಾಂಡ್ ಆಡಿಟಿಂಗ್ ನಡೆಸಬೇಕು. ಒಟ್ಟು ಲಭ್ಯವಿರುವ ಭೂಮಿ, ಬಲಾಢ್ಯರ ಒಡೆತನ ಮತ್ತು ಕಬಳಿಕೆ, ಬಲಹೀನ ಒಡೆತನಗಳು ಮತ್ತು ಆಸ್ತಿಹೀನರ ಖಚಿತ ಚಿತ್ರಣವನ್ನು ಜನತೆಯ ಮುಂದಿಡಬೇಕು.
  4. ಅಲ್ಲದೆ ಜನಸಾಮಾನ್ಯರ ಹಿತವನ್ನು ಆದ್ಯತೆ ಮಾಡಿಕೊಂಡಿರುವಂಥ ಭೂ ಬಳಕೆ ನೀತಿಯನ್ನು ಜಾರಿಗೆ ತರಬೇಕು. ಬಡವರಿಗೆ ಮನೆ, ಉಳುಮೆ ಮಾಡಿ ಬದುಕುವವರಿಗೆ ಭೂಮಿ, ಗ್ರಾಮೀಣ ಸಣ್ಣ ಕೈಗಾರಿಕೆ, ಸಾಮುದಾಯಿಕ ಅಗತ್ಯ, ಪರಿಸರ ಸಮತೋಲನ ಭೂ ಬಳಕೆ ನೀತಿಯ ಆದ್ಯತೆಗಳಾಗಿರಬೇಕು.
  5. ಮೇಲೆ ಉಲ್ಲೇಖಿತ ‘ಹೈ ಪವರ್ ಕಮಿಟಿ’ಯ ಮೇಲ್ವಿಚಾರಣೆಯಲ್ಲಿ ಭೂನ್ಯಾಯ ಮಂಡಳಿಗಳನ್ನು ಪುನರ್ರಚಿಸಬೇಕು. ಅದರಲ್ಲೂ ಚಳವಳಿಗಳ ಪ್ರಾತಿನಿಧ್ಯ ಇರಬೇಕು.
  6. ಯಾವುದೇ ಕಾರಣಕ್ಕೂ ಸಣ್ಣ ರೈತರನ್ನು ಹಾಗೂ ಬಡವರನ್ನು ಅವರ ನೆಲ ಮತ್ತು ನೆಲೆಯಿಂದ ಒಕ್ಕಲೆಬ್ಬಿಸುವುದಿಲ್ಲ ಎಂದು ಸರ್ಕಾರ ಘೋಷಿಸಬೇಕು.
  7. ಎಕರೆ ಒಳಗಿನ ಬಗರ್ ಹುಕುಂ ರೈತರಿಗೆ ಕಡ್ಡಾಯವಾಗಿ ತಕ್ಷಣವೇ ಭೂಮಿಯನ್ನು ಮಂಜೂರು ಮಾಡಬೇಕು. ದಾಖಲೆ ಪತ್ರಗಳ ಸಬೂಬು ನೀಡಿ ಅವರನ್ನು ಹಕ್ಕುವಂಚಿತರನ್ನಾಗಿ ಮಾಡಬಾರದು. ಅರ್ಜಿ ಹಾಕದವರಿಗೆ ಅರ್ಜಿ ಹಾಕಲು ಮತ್ತೆ ಆರು ತಿಂಗಳ ಕಾಲಾವಕಾಶ ನೀಡಬೇಕು. ಅದೇ ಸಂದರ್ಭದಲ್ಲಿ ೩೦ ಎಕರೆಗಿಂತ ಹೆಚ್ಚಿನ ಒತ್ತುವರಿ ಮಾಡಿರುವವರ ಭೂಮಿಯನ್ನು ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಳ್ಳಬೇಕು. ಅದನ್ನು ಬಡವರಿಗೆ ಹಂಚಲಿಕ್ಕೆ ಮತ್ತು ಅರಣ್ಯ ಅಭಿವೃದ್ಧಿಗೆ ಬಳಸಬೇಕು.
  8. ಯಾವ ರೀತಿಯ ಭೂಮಿಯೂ ಇಲ್ಲದ, ಆದರೆ ಸ್ವಯಂ ಕೃಷಿ ಮಾಡಿ ಬದುಕಲು ಬಯಸುವ ಭೂಹೀನ ಕೃಷಿ ಕೂಲಿ ಕುಟುಂಬಗಳಿಗೆ ಘನತೆಯಿಂದ ಬದುಕುವಷ್ಟು ಭೂಮಿಯನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಈ ಹಂಚಿಕೆಯಲ್ಲಿ ಸಮಾಜದ ’ಅಂತ್ಯಜ’ ಸಮುದಾಯಗಳಾದ ಅಸ್ಪಶ್ಯ, ಆದಿವಾಸಿ, ಅಲೆಮಾರಿ, ಅತಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಜನರಿಗೆ ಆದ್ಯತೆ ಇರಬೇಕು.
  9. ನಗರ ಮತ್ತು ಗ್ರಾಮಗಳ ಪ್ರತಿ ಕುಟುಂಬವೂ ಸ್ವಂತದ ನಿವೇಶನ ಸಹಿತ ಮನೆ ಹೊಂದುವ ಹಕ್ಕನ್ನು ಸರ್ಕಾರ ಮಾನ್ಯಗೊಳಿಸಬೇಕು.
  10. ಬಲಾಢ್ಯರು ಕಾನೂನುಬಾಹಿರವಾಗಿ ಕಬಳಿಸಿರುವ ಲಕ್ಷಾಂತರ ಎಕರೆ ಭೂಮಿಯನ್ನು ಈ ಕೂಡಲೇ ಮರುವಶಪಡಿಸಿಕೊಳ್ಳಬೇಕು. ಅಭಿವೃದ್ಧಿಯ ಮುಸುಕಿನಲ್ಲಿ ಕಾರ್ಪೊರೇಟ್, ರಿಯಲ್ ಎಸ್ಟೇಟ್ ಭೂ ಮಾಫಿಯಾಗಳು ಕಬಳಿಸಿರುವ ಭೂಮಿಯನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು. ಭೂ ಮಿತಿ ಕಾಯ್ದೆಯನ್ನು ಇಂದಿನ ಅಗತ್ಯಕ್ಕನುಸಾರ ಮರುಪರಿಷ್ಕರಿಸಬೇಕು. ಭೂಮಿತಿಯನ್ನು ಇಳಿಸಬೇಕು. ಇದರಿಂದ ದೊರಕುವ ಹೆಚ್ಚುವರಿ ಭೂಮಿಯನ್ನು ಕ್ರೋಢೀಕರಿಸಿ ಬಡವರಿಗೆ ಹಂಚುವ ದಿಟ್ಟ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಬೇಕು.

ನಂತರ ಮಾತನಾಡಿದ ಸಚಿವ ಕಾಗೋಡು ತಿಮ್ಮಪ್ಪ, “ಈಗಾಗಲೇ ಬಹರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ನಾನು ಕಾರ್ಯೋನ್ಮುಖನಾಗಿದ್ದೇನೆ. ಡಿಸೆಂಬರ್ ಮೊದಲು ಎಲ್ಲಾ ಹಕ್ಕು ಪತ್ರ ನೀಡಲು ಗಡುವು ಹಾಕಿಕೊಳ್ಳಲಾಗಿದೆ. ನೀವು ಹೇಳಿದ ಬೇಡಿಕೆಗಳಲ್ಲಿ ನನ್ನಿಂದ ಸಾಧ್ಯವಿರುವ ಬೇಡಿಕೆಗಳನ್ನು ಪರಿಹರಿಸುತ್ತೇನೆ. ಉಳಿದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗುವುದು. ನೀವು ಕೇಳುತ್ತಿರವ ಬೇಡಿಕೆಗಳನ್ನು ಈಡೇರಿಸಬೇಕಾದುದು ಸರಕಾರ ಆದ್ಯ ಕರ್ತವ್ಯ; ಜನರ ಹಕ್ಕು. ಎಲ್ಲಾ ತಾಲೂಕುಗಳಲ್ಲಿಯೂ ಜನರು ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವಂತೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾದ ಕೆಲಸವನ್ನು ಹೋರಾಟಗಾರರು ಮಾಡಬೇಕಾಗಿದೆ. ಇಂತಹದ್ದೊಂದು ಹೋರಾಟ ಮಾಡಿ ಜನರಲ್ಲಿ ಅರಿವು ಮೂಡಿಸಿದ್ದಕ್ಕಾಗಿ ಆಯೋಜಕರಿಗೆ ಧನ್ಯವಾದ ಹೇಳುತ್ತೇನೆ. ಎಲ್ಲರಿಗೂ ವಸತಿ, ಸ್ಮಶಾನಕ್ಕೆ ಜಾಗ ನೀಡಲು ಸರಕಾರ ಬದ್ದವಾಗಿದೆ,” ಎಂದರು.

ಭೂ ಕಳ್ಳರ ಕೈಯಿಂದ ಭೂಮಿ ವಶಪಡಿಸಿಕೊಳ್ಳಬೇಕು ಎಂಬ ಎಸ್. ಆರ್ ಹಿರೇಮಠ್ ಬೇಡಿಕೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಕಂದಾಯ ಸಚಿವರು, “ನಾನು ಆರಾಮವಾಗಿ ಕೂತಿದ್ದೇನೆ ಎಂದುಕೊಳ್ಳಬೇಡಿ. ಈಗಾಗಲೇ ವರದಿ ತರಿಸಿಕೊಳ್ಳುತ್ತಿದ್ದೇನೆ. 7 ಲಕ್ಷ ಎಕರೆಯಷ್ಟು ಸರಕಾರಿ ಭೂಮಿ ಒತ್ತುವರಿಯಾಗಿರುವುದ ಬೆಂಗಳೂರಿನಲ್ಲಿ ಗೊತ್ತಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾನು ಹಿಂಜರಿಯುತ್ತೇನೆ ಎಂದುಕೊಳ್ಳಬೇಡಿ,” ಎಂದು ಭರವಸೆ ನೀಡಿದರು.

ಮಾತಿನ ಮಧ್ಯೆಯೇ “ಅರ್ಜಿ ಸಲ್ಲಿಸಲು ಅರ್ಜಿ ಮುಗಿದಿದೆ ಎನ್ನುತ್ತಿದ್ದಾರೆ,” ಎಂದು ದಾವಣಗೆರೆ ಮಹಿಳೆಯೊಬ್ಬರ ದೂರಿದರು. ಆಗ ಕಂದಾಯ ಮಂತ್ರಿಗಳು ನೇರವಾಗಿ ಅಲ್ಲಿನ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾತಿನ ಮಧ್ಯೆಯೇ, “ಸರಿಯಾಗಿ ಎಲ್ಲ ಕಡೆ ಅರ್ಜಿ ಸಿಗುವಂತೆ ನೋಡಿಕೊಳ್ಳಿ. ಯಾರಿಗೂ ಅರ್ಜಿ ಸಿಗಲಿಲ್ಲ ಎಂದಾಗಬಾರದು,” ಎಂದು ಖಡಕ್ಕಾಗಿಯೇ ಸೂಚನೆ ನೀಡಿದರು.

ಸದ್ಯ ಕಾಗೋಡು ತಿಮ್ಮಪ್ಪ ಅವರು ಬಾಯಿ ಮಾತಿನ ಭರವಸೆ ನೀಡಿದ್ದಾರೆ. ಇದೀಗ ಲಿಖಿತ ತೀರ್ಮಾನ ಆಗಬೇಕು. ದೇವರಾಜ ಅರಸು ಅವರಿಗೆ ಇವರು ಗೌರವ ನೀಡಲಿಲ್ಲ. ಕನಿಷ್ಟ ಗಾಂಧೀಜಿಗೆ ಆದರೂ ಗೌರವ ನೀಡಿ ಅಕ್ಟೋಬರ್ 2ರ ಮೊದಲ ಕ್ಯಾಬಿನೆಟಿನಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು.  ಇಲ್ಲದಿದ್ದಲ್ಲಿ ಅಕ್ಟೋಬರ್ 2ರಿಂದ ಎರಡನೇ ಹಂತದ ಮುಷ್ಕರ ಆರಂಭಿಸುತ್ತೇವೆ. ದಿನಕ್ಕೊಂದು ಜಿಲ್ಲೆಯವರಂತೆ ಒಂದು ತಿಂಗಳು ಪೂರ್ತಿ ಹೋರಾಟ ನಡೆಯಲಿದೆ.                                                                                                               – ನೂರ್ ಶ್ರೀಧರ್

Leave a comment

FOOT PRINT

Top