An unconventional News Portal.

‘ಗೋ ರಾಜಕೀಯ’- ಭಾಗ 1: ಪುರಾಣದ ‘ಕಾಮಧೇನು’; ಕ್ಷೀರ ಕ್ರಾಂತಿಯ ‘ಜೆರ್ಸಿ’ ಮತ್ತು ಗೋ ರಾಜಕೀಯಕ್ಕೆ ಮುನ್ನುಡಿ!

‘ಗೋ ರಾಜಕೀಯ’- ಭಾಗ 1: ಪುರಾಣದ ‘ಕಾಮಧೇನು’; ಕ್ಷೀರ ಕ್ರಾಂತಿಯ ‘ಜೆರ್ಸಿ’ ಮತ್ತು ಗೋ ರಾಜಕೀಯಕ್ಕೆ ಮುನ್ನುಡಿ!

ಗೋವು ಅಂದರೇನೇ ಹಾಗೆ. ಅದು ಎಲ್ಲರನ್ನೂ ಸಲಹುವ ಕಾಮಧೇನು. ರೈತರಿಗೆ ಉಪ ಕಸುಬಾಗಿ, ಹೈನುಗಾರರಿಗೆ ಉದ್ಯೋಗವಾಗಿ, ಆಹಾರ ಪ್ರಿಯರಿಗೆ ಖಾದ್ಯವಾಗಿ, ಚರ್ಮೋದ್ಯಮದ ಪಾಲಿಗೆ ‘ಪಕ್ಕಾ ಲೆದರ್’ ಆಗಿ, ರಾಜಕಾರಣಿಗಳಿಗೆ ಓಟ್ ಬ್ಯಾಂಕ್ ಗಿಟ್ಟಿಸುವ ‘ಭಾವನಾತ್ಮಕ ವಸ್ತು’ವಾಗಿ ಗೋಮಾತೆ ಎಲ್ಲರನ್ನೂ ಸಲಹುತ್ತಾ ಬಂದಿದ್ದಾಳೆ. ಈ ದಿಕ್ಕಿನಲ್ಲಿ ಪುಣ್ಯಕೋಟಿಯ ಕೊಡುಗೆ ಅಪರಿಮಿತ.

ಕಳೆದೊಂದು ವರ್ಷದಿಂದ ದೇಶದ ಪ್ರಮುಖ ಚರ್ಚೆಗಳೆಲ್ಲಾ ಈ ಗೋವಿನ ಸುತ್ತ-ಮುತ್ತಲೇ ಗಿರಕಿ ಹೊಡೆಯುತ್ತಿವೆ. ಉತ್ತರ ಪ್ರದೇಶದ ದಾದ್ರಿಯ ಮಹಮ್ಮದ್ ಇಕ್ಲಾಖ್ ಹತ್ಯೆಯಿಂದ ಆರಂಭವಾಗಿ ತೀರಾ ಇತ್ತೀಚೆಗೆ ಗುಜರಾತಿನ ಉನಾದಲ್ಲಿ ನಡೆದ ನಾಲ್ವರು ದಲಿತರ ಮೇಲಿನ ಹಲ್ಲೆವರೆಗೆ, ಗೋವಿನ ಸುತ್ತ ನಡೆದ ಘಟನಾವಳಿಗಳು ಬಿಸಿ ಬಿಸಿ ಚರ್ಚೆಯನ್ನು ಹುಟ್ಟು ಹಾಕಿವೆ. ಕೊನೆಗೆ, ‘ನ್ಯೂಯಾರ್ಕ್ ಟೈಮ್ಸ್’ನಂತಹ ಅಂತಾರಾಷ್ಟ್ರೀಯ ಪತ್ರಿಕೆ ಸಂಪಾದಕೀಯ ಬರೆಯುವ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿ ಗೋವಿನ ಸುತ್ತ ನಡೆದುಕೊಂಡು ಬಂದ ಘಟನೆಗಳ ಕುರಿತು ಮೌನ ಮುರಿಯುವಂತಾಗಿದೆ. ಎರಡೆರಡು ಬಾರಿ ಪ್ರಧಾನಿ ‘ನಕಲಿ ಗೋರಕ್ಷಕ’ರ ವಿರುದ್ಧ ಹರಿಹಾಯ್ದಿದ್ದಾರೆ. ಚರ್ಚೆ ನಕಲಿ, ಗೋ ರಕ್ಷಣೆ, ದಲಿತರ ವಿಚಾರ, ಆಹಾರದ ಹಕ್ಕುಗಳ ಕಡೆಗೆ ಹೊರಳಿಕೊಂಡಿದೆ. ಈ ನಡುವೆ ಕರ್ನಾಟಕ ಸರಕಾರ ‘ಗೋ ರಕ್ಷಕ’ರ ಕುರಿತು ಸುಪ್ರಿಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡವಿಟ್ ಸದ್ದು ಮಾತ್ತಿದೆ.

‘ಕೆಎಂಎಫ್’ ಹಾಲಿನಿಂದ ಹಿಡಿದು ‘ಬೀಫ್’ವರೆಗೆ ಕೋಟಿ ಕೋಟಿ ಮೊಗೆಯುವ ಗೋ ಉದ್ಯಮ, ಗೋರಕ್ಷಕರು, ಈ ನೆಲದ ಕಾನೂನುಗಳು, ಭಾವನಾತ್ಮಕ ಸಂಬಂಧ, ರಾಜಕೀಯ, ದಲಿತರು, ಆಹಾರದ ಹಕ್ಕು… ಹೀಗೆ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುವ ತಂತುಗಳೇ. ಈ ಎಲ್ಲಾ ಎಳೆಗಳನ್ನೂ ಜೊತೆಗೆ ಬದಲಾದ ಆಧುನಿಕ ಕಾಲಘಟ್ಟದ ‘ಗೋ ಸಂಸ್ಕೃತಿ’ಯ ನಾನಾ ಮಜಲುಗಳನ್ನು ನಿಮ್ಮ ಮುಂದಿಡಲಿದೆ; ‘ಸಮಾಚಾರ’ದ ಈ ಹೊಸ ಸರಣಿ ‘ಗೋ ರಾಜಕೀಯ’.


ಭಾಗ- 1: 

ಭಾರತದಲ್ಲಿ ಗೋವು ‘ವೈದಿಕ’ರ ಪ್ರಾಣಿ. ಹಿಂದೂಗಳಿಗೆ ಪವಿತ್ರವಾದುದು; ದೇವರ ಸಮಾನ; 33 ಕೋಟಿ ದೇವ-ದೇವತೆಗಳ ಆವಾಸ ಸ್ಥಾನ. ಇದರ ಜತೆಗೆ ಹಿಂದೂಗಳಿಗೆ ದೈವಿಕವಾದ ಪ್ರಾಣಿಗಳ ಪಟ್ಟಿ ದೊಡ್ಡದೇ ಇದೆ; ಸದ್ಯಕ್ಕೆ ಅವನ್ನೆಲ್ಲಾ ಬದಿಗಿಡೋಣ. ಗೋವಿನ ಸುತ್ತ ನಡೆದು ಬಂದ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಳ್ಳೊಣ.

ಗೋವಿನ ಮೂತ್ರ ವಿಸರ್ಜನೆ ಅಮೃತ ಸಮಾನ ಎಂಬ ನಂಬಿಕೆ ಹಿಂದಿನಿಂದಲೂ ಬೆಳೆದು ಬಂದಿದೆ. ಹಾಲು ಮನುಷ್ಯನ ಹಸಿವನ್ನು ತೀರಿಸುತ್ತೆ, ಕೃಷಿ ಮುಂತಾದ ಚಟುವಟಿಕೆಗಳಿಗೆ ಬೆನ್ನೆಲುಬಾಗಿ, ಬದುಕಿನ ಆಸರೆಯಾಗಿ, ಮನುಷ್ಯನ ನಾಗರೀಕತೆ ಉದ್ದಕ್ಕೂ ಗೋವು ಸಾಗಿ ಬಂದ ಹಾದಿ ದೊಡ್ಡದಿದೆ. ಹಸು ಮತ್ತು ಹಾಲನ್ನು ಉಳಿಸಿಕೊಳ್ಳುವ ಕಥಾನಕವಾಗಿ ಪುರಾಣ ಕತೆಗಳು ಹುಟ್ಟಿಕೊಂಡಿರಬಹುದು ಎಂಬುದು ಒಂದು ಅಂದಾಜು. ಶಾಲೆ ಪಠ್ಯಗಳಲ್ಲೂ ಗೋವಿನ ಹಾಡು, ಪುಣ್ಯಕೋಟಿ ಹಾಡು, ವಿಶ್ವಾಮಿತ್ರ ವಸಿಷ್ಠರ ನಡುವಿನ ‘ಕಾಮಧೇನು’ ಕತೆಗಳೆಲ್ಲಾ ಜಾಗ ಪಡೆದಿದ್ದು ಇದೇ ಹಿನ್ನೆಲೆಯಲ್ಲಿ ಇರಬಹುದು.
ಇವತ್ತು ಗೋವಿನ ಹತ್ಯೆ ಮಹಾಪಾಪ ಎಂದು ಚರ್ಚೆಯಾಗುತ್ತಿರುವ ಹೊತ್ತಲ್ಲಿ, ಹಿಂದೆಯೂ ಇದೇ ರೀತಿ ಚರ್ಚೆಗಳು ನಡೆಯುತ್ತಿದ್ದವಾ?

ಹಿಂದೂ ಧರ್ಮದ ಆಕರವಾದ ನಾಲ್ಕೂ ವೇದಗಳಲ್ಲಿ ಆ ಕಾಲದ ಆಚಾರ, ವಿಚಾರ, ನಂಬಿಕೆ, ಜೀವನಕ್ರಮ, ಆಹಾರ ಪದ್ಧತಿಗಳ ವಿವರಗಳಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ಚಾತುವರ್ಣಗಳ ಜನ ಹಿಂದೆ ಮಾಂಸಾಹಾರಿಗಳಾಗಿದ್ದು ಮಾತ್ರವಲ್ಲ, ಹಸು ಮತ್ತು ಕುದುರೆ ಅವರ ಮೆಚ್ಚಿನ ಆಹಾರವಾಗಿತ್ತು. ಅಶ್ವಮೇಧ, ರಾಜಸೂಯ, ವಾಜಪೇಯ ಮೊದಲಾದ ಯಾಗಗಳಲ್ಲಿ ದನ, ಎತ್ತು, ಗೂಳಿಗಳನ್ನು ಬಲಿಕೊಡುವುದು ಮತ್ತು ನಂತರ ಅವುಗಳ ಮಾಂಸವನ್ನು ತಿನ್ನುವುದು ಸಾಮಾನ್ಯವಾಗಿತ್ತು. ಮದುವೆಯಿಂದ ಶ್ರಾದ್ಧದವರೆಗೆ ವಿಶೇಷ ಸಂದರ್ಭಗಳಲ್ಲಿ ‘ದನ ಕಡಿಯುವ’ ಪದ್ಧತಿ ಇತ್ತು. ಮನೆಗೆ ಬರುವ ಅತಿಥಿಗಳಿಗೆ ನೀಡುವ ಗೋಮಾಂಸದಿಂದ ಕೂಡಿದ ‘ಮಧುಪರ್ಕ’ (ಬೀಫ್ ಸೂಪ್ ಅಂದುಕೊಳ್ಳಬಹುದು) ಎಂಬ ಪಾನೀಯ ನೀಡಲಾಗುತ್ತಿತ್ತು. ಇದರಿಂದಾಗಿಯೇ ಅತಿಥಿಗಳನ್ನು ‘ಗೋಘ್ನ’ (ಗೋವಿನ ಹತ್ಯೆಗೆ ಕಾರಣಕರ್ತರು) ಎಂದು ಕರೆಯುತ್ತಿದ್ದರಂತೆ. ಹೀಗಂತ ಪತ್ರಕರ್ತರಾಗಿದ್ದ ದಿನೇಶ್ ಅಮೀನ್ ಮಟ್ಟು ಹಿಂದೊಮ್ಮೆ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

ಗೋವೂ ಕೂಡ ಆಹಾರ ಪದ್ಧತಿಯ ಭಾಗವಾಗಿತ್ತು ಎಂಬ ಕುರಿತು ಬರೆದು ಮುಗಿಯದಷ್ಟು ಉಲ್ಲೇಖಗಳು ವೇದಗಳು, ಉಪನಿಷತ್, ಮನುಸ್ಮೃತಿ, ಮಹಾಭಾರತ, ರಾಮಾಯಣಗಳಲ್ಲಿವೆ. ಡಾ. ಬಿ. ಆರ್. ಅಂಬೇಡ್ಕರ್ ಬರೆದಿರುವ ‘ಹಿಂದೂಸ್ ಏಟ್ ಬೀಫ್’, ಭಾರತರತ್ನ ಪ್ರಶಸ್ತಿ ಪಡೆದಿದ್ದ ಪುರಾತತ್ವ ಶಾಸ್ತ್ರಜ್ಞ ಪಿ. ವಿ. ಕಾಣೆ ಸಂಪಾದಿಸಿರುವ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ದಲ್ಲಿ, ಇತಿಹಾಸಕಾರ ಪ್ರೊ. ದ್ವಿಜೇಂದ್ರನಾಥ್ ಝಾ ಅವರ ‘ದಿ ಮಿತ್ ಆಫ್ ಹೋಲಿ ಕೌ’ ಎಂಬ ಪುಸ್ತಕದಿಂದ ಹಿಡಿದು ಅನೇಕ ಇತಿಹಾಸಕಾರರು, ವಿದ್ವಾಂಸರ ಅಧ್ಯಯನಗಳಲ್ಲಿ ವೇದಗಳ ಕಾಲದಲ್ಲಿ ಗೋ ಮಾಂಸ ಭಕ್ಷಣೆ ಇತ್ತು ಎಂಬ ಬಗ್ಗೆ ವಿವರಗಳಿವೆ, ಎಂದು ಮಟ್ಟು ಅದೇ ಲೇಖನದಲ್ಲಿ ಉಲ್ಲೇಖಿಸಿದ್ದರು.

ಪುರಾಣಗಳ ಕತೆ ಹೀಗಾದರೆ, ಮಾನವನ ನಾಗರಿಕತೆಯ ಬೆಳವಣಿಗೆಯ ಉದ್ದಕ್ಕೂ ಬೆಂಬಲವಾಗಿ ನಿಂತ ಪ್ರಾಣಿಗಳಲ್ಲಿ ಗೋವಿಗೆ ಅಗ್ರಸ್ಥಾನವಿದೆ. ಉಳುಮೆಗೆ ಬೆನ್ನೆಲುಬಾಗಿ, ಕೃಷಿ ಬೆಳೆಗಳಿಗೆ ಗೊಬ್ಬರದ ಮೂಲವಾಗಿ, ಹಸಿವಿನ, ಪೌಷ್ಠಿಕಾಂಶದ ಬೇಡಿಕೆ ಪೂರೈಸುವ ಹಾಲಿನ ಮೂಲವಾಗಿ ಮನುಷ್ಯನ ಎಲ್ಲಾ ಚಟುವಟಿಕೆಗಳ ಸುತ್ತ ವಿಶಿಷ್ಟ ‘ಗೋ ಸಂಸ್ಕೃತಿ’ಯೊಂದು ತನ್ನಿಂತಾನೇ ಬೆಳೆದು ಬಂದಿದೆ.

ಹರಪ್ಪ-ಮೊಹೆಂಜೋದಾರೋ ನಾಗರಿಕತೆಗಳ ಕಾಲದಲ್ಲಿ ಜನರ ಸಂಪತ್ತನ್ನು ಗೋವುಗಳ ಸಂಖ್ಯೆಯಿಂದ ಅಳೆಯಲಾಗುತ್ತಿತ್ತು ಎನ್ನುವ ಉಲ್ಲೇಖಗಳು ಇತಿಹಾಸದ ತುಂಬಾ ಢಾಳಾಗಿ ದಾಖಲಾಗಿವೆ. ಅವತ್ತಿಗೆ ಹೆಚ್ಚು ದನ ಸಾಕುತ್ತಿದವ ಶ್ರೀಮಂತನಾಗಿದ್ದ. ಅವತ್ತಿಗೆಲ್ಲಾ ಸಾಮಾನ್ಯವಾಗಿದ್ದ ಗೋ ಮಾಂಸ ತಿನ್ನುವುದಕ್ಕೆ ಮುಂದೆ ನಿಷೇಧ ಹೇರಲಾಯಿತು.

ಗೋ ಹತ್ಯೆ ನಿಷಿದ್ಧ:

ಬುದ್ಧನ ಆಗಮನ ಗೋ ಹತ್ಯೆ ನಿಷೇಧದ ಪ್ರಮುಖ ಕಾಲಘಟ್ಟ ಎಂದು ಇತಿಹಾಸ ಹೇಳುತ್ತದೆ. ಮಾಂಸಾಹಾರಿಯೇ ಆಗಿದ್ದ ಗೌತಮ ಬುದ್ಧ ಮುಂದೆ ಅಹಿಂಸಾವಾದಿಯಾದಾಗ, ರೈತನ ಸಂಗಾತಿಯಾಗಿದ್ದ ಗೋವುಗಳ ಹತ್ಯೆಯನ್ನು ವಿರೋಧಿಸಲು ಆರಂಭಿಸಿದ. ಅವತ್ತಿಗೆ ಬೌದ್ಧ ಧರ್ಮದ ಉದಯ ಮತ್ತು ಬೆಳವಣಿಗೆಯಿಂದ ಭೀತಿಗೊಳಗಾದ ಹಿಂದೂಧರ್ಮ ಅದನ್ನು ವಿರೋಧಿಸಲೆಂದೇ ಸಸ್ಯಹಾರ ಪ್ರೀಯವಾಯಿತು ಎಂದು ಇತಿಹಾಸ ದಾಖಲಿಸುತ್ತದೆ. ಮುಂದಿನದೆಲ್ಲಾ ಇವತ್ತಿಗೆ ಕಣ್ಣೆದುರಿಗಿರುವ ಚರಿತ್ರೆ; ಗೋವು ನಿಧಾನವಾಗಿ ಪವಿತ್ರ ಪ್ರಾಣಿಯಾಯಿತು. ರಾಜಕೀಯ ಪಡಸಾಲೆಗಳಲ್ಲಿ ಫಲ ನೀಡುವ ರಾಜಕೀಯ ದಾಳವಾಯಿಯಿತು.

ಅಚ್ಚರಿ ಎಂದರೆ, ದೇಶದಲ್ಲಿ ಮೊದಲು ಗೋ ರಾಜಕೀಯ ಆರಂಭಿಸಿದವರು ಮೊಘಲ್ ದೊರೆಗಳು. ಬಾಬರ್, ಅಕ್ಬರ್, ಹುಮಾಯೂನ್ ಮೊದಲಾದವರೆಲ್ಲರೂ ಹಿಂದೂಗಳನ್ನು ಒಲಿಸಿಕೊಳ್ಳಲು ಗೋಹತ್ಯೆಗೆ ನಿಷೇಧ ಹೇರಿದ್ದರು.
ಮುಂದೆ ಬ್ರಿಟಿಷರು ಸೇರಿದಂತೆ ಪಾಶ್ಚಾತ್ಯರ ಆಡಳಿತವಿದ್ದ ಭಾರತದಲ್ಲಿ ಊರು, ಪಟ್ಟಣ ಎಂದೆಲ್ಲಾ ವ್ಯವಸ್ಥೆಗಳು ಹುಟ್ಟಿಕೊಂಡಾಗಲೂ ಗೋವಿಗೆ ಅದರದ್ದೇ ಆದ ವಿಶೇಷ ಮಾನ್ಯತೆಗಳಿದ್ದವು. ಊರಿನಲ್ಲೊಂದ ಗೋಮಾಳ, ದನಗಳನ್ನು ನೋಡಿಕೊಳ್ಳಲು ಗೋಪಾಲಕರು, ದನಗಳನ್ನೇ ನಂಬಿ ಬದುಕುವ ಗೋಲ್ಲರೆಲ್ಲಾ ಜಾಗ ಪಡೆದಿದ್ದರು.

ಒಂದು ಪ್ರಾಣಿ ಒಳ್ಳೆಯ ಆಹಾರ ಮತ್ತು ಔಷಧ ಎನ್ನುವುದಾದಲ್ಲಿ, ಇವೆಲ್ಲಕ್ಕಿಂತ ಆರ್ಥಿಕ ದೃಷ್ಟಿಯಿಂದ ಮುಖ್ಯವಾದಲ್ಲಿ, ಅವುಗಳನ್ನುಸಂರಕ್ಷಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅಂತಹ ಎಲ್ಲಾ ಅರ್ಹತೆಗಳಿರುವ ಪ್ರಾಣಿ ಎಂದರೆ ಗೋವು; ಇದರ ಜೊತೆಗೆ ಧಾರ್ಮಿಕ ಕಾರಣಗಳು ಬೇರೆ; ಪಂಥೀಯ ವಾದ ಹೂಡಿ ನಿಷೇಧ ಬಯಸುವವರಿಗೆ ಬಹುಶಃ ಇದಕ್ಕಿಂತ ಒಳ್ಳೆಯ ಅಜೆಂಡಾ ಸಿಗುವುದು ಕಷ್ಟ.

ಸ್ವಾತಂತ್ರೋತ್ತರ ಭಾರತದ ನಿಷೇಧದ ನಂತರವೂ ಅವತ್ತಿಗೂ, ಇವತ್ತಿಗೂ ಕೆಳವರ್ಗಗಳಲ್ಲಿ ಗೋಮಾಂಸ ಭಕ್ಷಣೆ ಸಾಮಾನ್ಯವಾಗಿಯೇ ಇತ್ತು. ಆದರೆ ಸಮಸ್ಯೆ ಆರಂಭವಾಗಲು ಪ್ರಮುಖ ತಿರುವು ನೀಡಿದ್ದು ದನಗಳ ತಳಿಗಳಲ್ಲಾದ ಬದಲಾವಣೆ.

ವಿದೇಶಿ ತಳಿ ಸಮಸ್ಯೆ:

ದೇಶದ ಮೊದಲ ಅಭಿವೃದ್ಧಿ ಕ್ರಾಂತಿಗಳು ಎಂಬ ಬಿಂಬಿಸಲ್ಪಟ್ಟ ‘ಕೃಷಿ ಕ್ರಾಂತಿ’ ಹಾಗೂ ‘ಕ್ಷೀರ ಕ್ರಾಂತಿ’ಯಲ್ಲಿ ಗೋವು ಪ್ರಮುಖ ಪಾತ್ರ ವಹಿಸಿತ್ತು. ಕೃಷಿ ಕ್ರಾಂತಿಯಲ್ಲಿ ಸ್ವದೇಶಿ ತಳಿಗಳು ಮಹತ್ವ ಪಡೆದಿದ್ದರೆ, ‘ಕ್ಷೀರ ಕ್ರಾಂತಿ’ಯ ಹೊತ್ತಿಗೆ ವಿದೇಶಿ ತಳಿಗಳು ಜಾಗ ಪಡೆದುಕೊಂಡವು. ನಮ್ಮದೇ ದೇಸಿ ತಳಿಗಳಾದ ಮಲೆನಾಡು ಗಿಡ್ಡ, ಗಿರ್ ರೀತಿಯ ಅಪೂರ್ವ ತಳಿಗಳು ಬದಿಗೆ ಸರಿದು ಜೆರ್ಸಿ, ಎಚ್. ಎಫ್ ದನಗಳು ಜಾಗ ಪಡೆದುಕೊಂಡವು. ಹಾಲಿನ ಉದ್ಯಮವನ್ನೇ ಕೇಂದ್ರವಾಗಿಟ್ಟು ಬಂದ ಇದರ ಬೃಹತ್ ಉದ್ಯಮದ್ದು ಮತ್ತೊಂದು ದೊಡ್ಡ ಕತೆ.

ಹೈಬ್ರೀಡ್ ತಳಿಗಳು ಬರುತ್ತಿದ್ದಂತೆ ಸಮಸ್ಯೆಗಳು ಆರಂಭವಾದವು. ಹುಟ್ಟಿದ ಗಂಡು ಕರುಗಳನ್ನು ನೊಗಕ್ಕೆ ಕಟ್ಟಲು ಆಗುವುದಿಲ್ಲ. ಹಾರ್ಮೋನಿನ ಇಂಜೆಕ್ಷನ್ ನೀಡಿ ಸಂತಾನ ಕ್ರಿಯೆಗಳನ್ನು ಕೃತಕವಾಗಿ ನಡೆಸುವುದರಿಂದ, ವೀರ್ಯ ಹೊಂದಿದ ಗಂಡು ಕರುಗಳ ಅಗತ್ಯವೇ ಇಲ್ಲವಾಯಿತು. ಬೀಡಾಡಿ ತಿರುಗಿಕೊಂಡು ಹೊಟ್ಟೆ ಹೊರೆದುಕೊಂಡು ಸಮಯ ಬಂದಾಗ ಸಾಯಲಿ ಎನ್ನಲು ‘ಜಾಗತೀಕರಣ’ದ ಜಗತ್ತಿನಲ್ಲಿ ಗೋಮಾಳವಾಗಲೀ, ದನಗಳು ಮೇಯಲು ಖಾಲಿ ಜಾಗಗಳಾಗಲೀ ಉಳಿದಿರಲಿಲ್ಲ.
ಕೊನೆಗೆ ಸಾಕಲು ಅನುಕೂಲ ಇಲ್ಲದ ಕಾರಣ ವಯಸ್ಸಾದ ದನ-ಕರುಗಳನ್ನು ರೈತರು ಮಾರಲು ಆರಂಭಿಸಿದರು.

ಹೀಗೆ ದನಗಳು ಕಸಾಯಿಖಾನೆ ಸೇರುವುದು ಆರಂಭವಾಯಿತು. ಬೀಫ್ ಉದ್ಯಮ ಎಗ್ಗಿಲ್ಲದೇ ಬೆಳೆಯಲಾರಂಭಿಸಿತು. ನಿಧಾನವಾಗಿ ಧರ್ಮದ ಹೆಸರಿನಲ್ಲಿ ‘ಗೋ ರಕ್ಷಕ’ರು ಹುಟ್ಟಿಕೊಂಡರು. ದೇಶದಲ್ಲಿ ಎಂದೋ ಮಾಡಿದ ಕಾನೂನುಗಳು ಏಕಾಏಕಿ ಚಾಲ್ತಿಗೆ ಬಂದವು. ಅಲ್ಲಿವರಗೆ ಕಾನೂನಿಗೆ ಕಿಮ್ಮತ್ತಿಲ್ಲದೇ ಎಲ್ಲೆಲ್ಲೋ ನಡೆಯುತ್ತಿದ್ದ ಕಸಾಯಿಖಾನೆಗಳು ಕಾನೂನಿನ ಛತ್ರಿಯಡಿ ಕಾರ್ಯ ನಿರ್ವಹಿಸಲು ಆರಂಭಿಸಿದವು. ಕೆಲವು ರಾಜ್ಯಗಳು ವೋಟ್ ಬ್ಯಾಂಕ್ ದೃಷ್ಟಿ ಇಟ್ಟುಕೊಂಡು ಗೋ ನಿಷೇಧ ಕಾನೂನು ಜಾರಿಗೆ ತಂದವು. ಅಂಬೇಡ್ಕರ್ ರಿಂದ ಆರಂಭವಾಗಿ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತರಲು ಹೊರಟಿದ್ದ, ‘ಕರ್ನಾಟಕ ಗೋ ಹತ್ಯಾ ನಿಷೇಧ ಮಸೂದೆ’ವರೆಗೆ ದನದ ಹತ್ಯೆ ವಿಚಾರ ಕಾನೂನಿನಡಿ ಚರ್ಚೆಗೆ ಒಳಗಾಗುತ್ತಲೆ ಬಂದಿದೆ.

ಯಾವ ಕಾನೂನುಗಳು ಇವು? ಇವುಗಳಿಗಿರುವ ಮಹತ್ವವಾದರೂ ಏನು? ಅಷ್ಟಕ್ಕೂ ಇಷ್ಟೆಲ್ಲಾ ಕಾನೂನುಗಳಿದ್ದರೂ, ಈ ನಕಲಿ ‘ಗೋ ರಕ್ಷಕ’ರು ಯಾಕೆ ಸ್ವಂಯ ಪ್ರೇರಣೆಯಿಂದ ಕಾಮಧೇನುವನ್ನು ರಕ್ಷಿಸುತ್ತೀವಿ ಎಂದು ಹಾರಾಡುತ್ತಿದ್ದಾರೆ? ಈ ಎಲ್ಲವುಗಳ ಕುರಿತು ನಾಳೆ ಇನ್ನೊಂದಿಷ್ಟು ಮಾಹಿತಿ ಜತೆ ಬರ್ತೀವಿ.


ಭಾಗ 1: ಪುರಾಣದ ‘ಕಾಮಧೇನು’; ಕ್ಷೀರ ಕ್ರಾಂತಿಯ ‘ಜೆರ್ಸಿ’ ಮತ್ತು ಗೋ ರಾಜಕೀಯಕ್ಕೆ ಮುನ್ನುಡಿ!

ಭಾಗ- 2: ಗೋ ಹತ್ಯೆ ನಿಷೇಧ ಮತ್ತು ಕಾನೂನು ಜಾರಿ ಹಿಂದೆ ಬಡಿದಿದ್ದ ‘ಅಜೆಂಡಾ’ಗಳ ವಾಸನೆ!

ಭಾಗ-3: ಗೋ ರಕ್ಷಣೆಗೂ ಮುನ್ನ ಬೀಫ್ ರಫ್ತು ಉದ್ಯಮದ ಅಂತರಾಳಕ್ಕೆ ಕಾಲಿಟ್ಟು ನೋಡಿ!

ಭಾಗ-4: ‘ಭಜರಂಗದಳ’ದವರ ಗೋ ರಕ್ಷಣೆ ಮತ್ತು ತಳಮಟ್ಟದ ವಾಸ್ತವಗಳು!

ಭಾಗ-5: ಗೋವು ಎಂಬ ಭಾವನಾತ್ಮಕ ಸಂಗತಿ ಮತ್ತು ನಿಷೇಧ ಎಂಬ ‘ಬ್ರಾಂಡಿಂಗ್’!


 

Leave a comment

FOOT PRINT

Top