An unconventional News Portal.

ಪ್ರಧಾನಿ ಮೋದಿ ತವರು ರಾಜ್ಯ ಗುಜರಾತಿನ ದಲಿತರು ರೊಚ್ಚಿಗೆದ್ದಿದ್ದು ಯಾಕೆ?

ಪ್ರಧಾನಿ ಮೋದಿ ತವರು ರಾಜ್ಯ ಗುಜರಾತಿನ ದಲಿತರು ರೊಚ್ಚಿಗೆದ್ದಿದ್ದು ಯಾಕೆ?

ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತಿನಲ್ಲಿ ದಲಿತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ ಘಟನೆಗಳು ಕಣ್ಣ ಮುಂದಿವೆ. ಇವೆಲ್ಲದರ ಪರಿಣಾಮ ಎಂಬಂತೆ ಮುಖ್ಯಮಂತ್ರಿ ಆನಂದಿ ಪಟೇಲ್ ರಾಜೀನಾಮೆ ನೀಡಲು ಹೊರಟಿದ್ದಾರೆ. ದಲಿತರ ಮೇಲಿನ ಹಲ್ಲೆ ದೇಶದಾದ್ಯಂತ ಜನರನ್ನು ರೊಚ್ಚಿಗೆಬ್ಬಿಸಿದೆ. ಉತ್ತರ ಪ್ರದೇಶದಲ್ಲಿ ಭಾನುವಾರ ದಲಿತರ ರ್ಯಾಲಿ ಮಾಡಲು ಹೊರಟ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜನರಿಲ್ಲದೇ ವಾಪಾಸಾಗಿದ್ದಾರೆ. ಈ ಸಂದರ್ಭದಲ್ಲಿ ಬಿಬಿಸಿಯ ಸೌತಿಕ್ ಬಿಸ್ವಾಸ್ ದಲಿತರ ಮೇಲಿನ ದೌರ್ಜನ್ಯಗಳನ್ನು ವಿವರವಾಗಿ ವಿಶ್ಲೇಷಣೆ ನಡೆಸಿದ್ದಾರೆ. ಅದರ ಕನ್ನಡ ರೂಪಾಂತರನ್ನು ‘ಸಮಾಚಾರ’ ಇಲ್ಲಿ ಪ್ರಕಟಿಸುತ್ತಿದೆ.

ನಾಲ್ಕು ವರ್ಷಗಳ ಹಿಂದೆ ಮೇಲ್ವರ್ಗದ ಒಂದಷ್ಟು ಜನ ಮೆಹುಲ್ ವಿನೋದ್ ಬಾಯಿ ಕಬೀರರ ಮನೆಯಲ್ಲಿ ಪ್ರತ್ಯಕ್ಷರಾದರು. ಬಂದವರೇ ಎರಡು ಕೋಣೆಗಳ ಪುಟ್ಟ ಮನೆಯನ್ನು ಸುಟ್ಟು ಹಾಕುವುದಾಗಿ ಧಮಕಿ ಹಾಕಿದರು.

ಭಯ್ಲಾ ಗ್ರಾಮದಲ್ಲಿ ಕಬೀರನ ಮನೆಯಿತ್ತು. ಇಟ್ಟಿಗೆ ಮತ್ತು ಸಿಮೆಂಟಿನಿಂದ ಕಟ್ಟಿದ ಇಂತಹ ಸುಮಾರು 450 ಇತರ ಮನೆಗಳು ಇಲ್ಲಿದ್ದವು. ಇದೇ ಊರಿನ ಪಕ್ಕದ ಹೈವೇಯಲ್ಲಿ ಫಾರ್ಮಸಿ, ಇಂಜಿನಿಯರಿಂಗ್ ಮತ್ತು ಬಯೋಟೆಕ್ ಫ್ಯಾಕ್ಟರಿಗಳಿವೆ. ಅಲ್ಲಿಗೆ ಈ ಜನರೆಲ್ಲಾ ಕೆಲಸಕ್ಕೆ ಹೋಗುತ್ತಿದ್ದರು. ಇಲ್ಲಿನ ಹೆಚ್ಚಿನ ಮನೆಗಳು ಜಮೀನ್ದಾರರ ಒಡೆತನಕ್ಕೆ ಸೇರಿದ್ದವು. ಈಗ ಇವುಗಳಲ್ಲಿ ಶೇ. 70 ಮನೆಗಳಲ್ಲಿ ದಲಿತರಿದ್ದಾರೆ. ಅವುಗಳಲ್ಲಿ ಕಬೀರನ ಮನೆಯೂ ಒಂದು.

ಕಬೀರನ ಮನೆಗೆ ಮೇಲ್ಜಾತಿ ಗೂಂಡಾಗಳು ಬರಲು ಕಾರಣ ಇಷ್ಟೆ; ಆತ ತನ್ನ ಆಟೋದಲ್ಲಿ ಬಸ್ ಸ್ಟ್ಯಾಂಡ್ ಪಕ್ಕ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ.

ಈತನ ತಂದೆ ತಾಯಿ ಜಾಡಮಾಲಿ ಕೆಲಸ ಮಾಡುತ್ತಲೇ ಬಾಳಿ ಬದುಕಿದವರು. ಆದರೆ ಮಗ ಮಾತ್ರ ಪರಂಪರಾಗತ ಕೆಲಸ ಬಿಟ್ಟು ಸಾಲ ಪಡೆದು ರಿಕ್ಷಾ ಓಡಿಸಲು ಆರಂಭಿಸಿದ್ದು ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾಯಿತು.

ಇಲ್ಲಿನ ಹೆಚ್ಚಿನ ರಿಕ್ಷಾಗಳೆಲ್ಲಾ ಮೇಲ್ವರ್ಗದವರಿಗೇ ಸೇರಿದ್ದು. ದಲಿತನೊಬ್ಬ ರಿಕ್ಷಾ ಓಡಿಸುವುದು, ಬಸ್ ಸ್ಟ್ಯಾಂಡ್ ಪಕ್ಕ ವ್ಯವಹಾರ ಮಾಡುವುದು ಅವರಿಂದ ಸಹಿಸಲು ಅಸಾಧ್ಯವಾಗಿತ್ತು. “ಈ ಕಾರಣಕ್ಕೆ ನನಗೆ ಹೊಡೆದು ಬೆದರಿಕೆ ಹಾಕುತ್ತಿದ್ದಾರೆ,” ಎನ್ನುತ್ತಾನೆ ಕಬೀರ.

ಕಬೀರ ಊರಿನಲ್ಲೇ ನಿಂತು ರಿಸ್ಕ್ ತೆಗೆದುಕೊಳ್ಳಲು ಹೋಗಲಿಲ್ಲ. ತನ್ನ ಆಟೋ ತೆಗೆದುಕೊಂಡು ಮನೆಯವರನ್ನು ಕೂರಿಸಿ, ಊರು ಖಾಲಿ ಮಾಡಿ 15 ಕಿಲೋಮೀಟರ್ ದೂರದಲ್ಲಿರುವ ತನ್ನ ಸಂಬಂಧಿಕರ ಊರಿಗೆ ಹೊರಟು ಹೋದ.

2014 ಮತ್ತೆ ಕಬೀರ ಭಯ್ಲಾಗೆ ಬಂದ. ಬಂದವನು ತನ್ನ ರಿಕ್ಷಾ ಮಾರಿ ಸಾಲ ತೀರಿಸಿದ. ದಿನಕ್ಕೆ 217 ರೂಪಾಯಿಗಳ ಗುತ್ತಿಗೆ ಆಧಾರದ ಮೇಲೆ ಪಾರ್ಮಸೆಟುಕಲ್ ಕಂಪೆನಿಗೆ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡ. ಆತನ ಅಷ್ಟೂ ಕನಸುಗಳು ಕಣ್ಣೆದುರೇ ಕಮರಿದ ದಿನವದು. ತಾನೂ ಮುಂದೊಂದು ದಿನ ಉತ್ತಮ ಜೀವನ ಸಾಗುಸುತ್ತೇನೆ ಎಂದು ಹೊರಟಿದ್ದವ ತನ್ನೆಲ್ಲ ಆಸೆ ನಿರೀಕ್ಷೆಗಳನ್ನು ಕೈಚೆಲ್ಲಿದ್ದ.

ಇಂತಹ ನೂರಾರು ಕತೆಗಳು ಗುಜರಾತಿನ ತುಂಬಾ ಸಿಗುತ್ತವೆ.

ಕಳೆದ ಕೆಲವು ವರ್ಷಗಳಲ್ಲಿ ಗುಜರಾತ್ ಸೇರಿದಂತೆ ದೇಶದ ದಲಿತರ ಜೀವನಮಟ್ಟದಲ್ಲಿ ದೊಡ್ಡ ಮಟ್ಟಕ್ಕೆ ಸುಧಾರಣೆಯಾಗಿದೆ. ಮೇಲ್ವರ್ಗದವರಿಗೆ ಇದನ್ನು ಅರಗಿಸಕೊಳ್ಳಲಾಗುತ್ತಿಲ್ಲ. “ಎಲ್ಲಿ ದಲಿತರ ಸಾಮಾಜಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗುತ್ತಿದೆಯೋ ಅಲ್ಲಿ ಸಂಘರ್ಷ ಹೆಚ್ಚಾಗುತ್ತದೆ,” ಎನ್ನುತ್ತಾರೆ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ನ ಪ್ರತಾಪ್ ಭಾನು ಮೆಹ್ತಾ.

ಪರಂಪರಾಗತ ವೃತ್ತಿಗೂ ಕುತ್ತು

ದೇಶದಲ್ಲಿ ಈ ಹಿಂದೆಯೂ ದಲಿತರು ಮತ್ತು ಮೇಲ್ವರ್ಗದವರ ನಡುವೆ ಸಂಘರ್ಷ ನಡೆದಿವೆ. ಆದರೆ ಅವೆಲ್ಲಾ ಜಮೀನು, ನೀರು, ಮನೆ, ಅಸ್ಪೃಶ್ಯತೆಗಾಗಿ ನಡೆದ ಹೋರಾಟಗಳು.

Gujarat Dalit rally

ಅಹಮದಾಬಾದಿನಲ್ಲಿ ನಡೆದ ದಲಿತ ರ್ಯಾಲಿಯಲ್ಲಿ ಭಾಗವಹಿಸಿದ್ದ ಅಸಂಖ್ಯಾತ ದಲಿತರು ತಮ್ಮ ಶಕ್ತಿ ಪ್ರದರ್ಶಿಸಿದರು.

ಆದರೆ ಕಳೆದೊಂದು ತಿಂಗಳಿಂದ ನರೇಂದ್ರ ಮೋದಿ ತವರು ಗುಜರಾತಿನಲ್ಲಿ ನಡೆಯುತ್ತಿರುವ ಈ ಹೊಸ ಸಂಘರ್ಷ ಇನ್ನೊಂದು ಆಯಾಮವನ್ನು ಪಡೆದುಕೊಂಡಿದೆ. 10 ವರ್ಷಗಳಿಗೂ ಹೆಚ್ಚು ಕಾಲ ಇದೇ ರಾಜ್ಯದಲ್ಲಿ ‘ಅಭಿವೃದ್ಧಿಯ ಹರಿಕಾರ’ ನರೇಂದ್ರ ಮೋದಿ ರಾಜ್ಯಭಾರ ಮಾಡಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಕೆಲವು ವಾರಗಳ ಹಿಂದೆ ಇದೇ ರಾಜ್ಯದಲ್ಲಿ ಸತ್ತ ದನಗಳ ಚರ್ಮ ಸುಲಿದರು ಎಂಬ ಕಾರಣಕ್ಕೆ ನಾಲ್ಕು ದಲಿತರ ಮೇಲೆ ಮನ ಬಂದಂತೆ ಹಲ್ಲೆ ಮಾಡಲಾಯಿತು. ಗೋ ರಕ್ಷಕರು ಎಂದು ಕರೆಸಿಕೊಳ್ಳುವವರು ಹೀನಾಯ ಕೃತ್ಯ ಎಸಗಿದರು.

ಇದಾದ ಬೆನ್ನಿಗೇ ರೊಚ್ಚಿಗೆದ್ದ ದಲಿತರು ಗುಜರಾತನ್ನು ನಡುಗಿಸಿ ಬಿಟ್ಟರು. ಸಂಸತ್ತಿನಲ್ಲೂ ಮಾರ್ಧನಿಸಿದ ಹಲ್ಲೆ ದೇಶದಾದ್ಯಂತ ಆಕ್ರೋಶ ಹುಟ್ಟು ಹಾಕಿತು. ಓರ್ವ ಮಹಿಳೆ ಸೇರಿ 30ಕ್ಕೂ ಹೆಚ್ಚು ದಲಿತರು ಆತ್ಮಹತ್ಯೆ ಯತ್ನ ನಡೆಸಿದರು. ಇವರಲ್ಲಿ ಓರ್ವ ಜೀವವನ್ನೂ ಕಳೆದುಕೊಳ್ಳಬೇಕಾಯಿತು.

ಇದಾದ ಬಳಿಕ ತಮ್ಮ ವೃತ್ತಿ ಬಹಿಷ್ಕರಿಸಿದ ಸಾವಿರಾರು ದಲಿತರು ಸತ್ತ ದನಗಳನ್ನು ತಂದು ಸರಕಾರಿ ಕಚೇರಿಗಳ ಮೇಲೆಲ್ಲಾ ಎಸೆದು ವಿಶಿಷ್ಟ ಪ್ರತಿಭಟನೆಯಿಂದ ಸುದ್ದಿಯಾದರು. ಭಾನುವಾರ ಅಹಮದಾಬಾದಿನಲ್ಲಿ ಸಾವಿರಾರು ಜನ ಸೇರಿ ಬೃಹತ್ ರ್ಯಾಲಿ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದರು.

ಇದೇ ಮೊದಲಲ್ಲ ಗುಜರಾತಿನಲ್ಲಿ ದಲಿತರ ಮೇಲಿನ ದೌರ್ಜನ್ಯ

ದಲಿತರ ಮೇಲಿನ ಹಲ್ಲೆ ದೌರ್ಜನ್ಯಗಳ ದೀರ್ಘ ಇತಿಹಾಸ ಗುಜರಾತಿಗಿದೆ. ತನ್ನ ಜೀವನದುದ್ದಕ್ಕೂ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಮಹಾತ್ಮ ಗಾಂಧೀಜಿಯ ತವರು ರಾಜ್ಯವೂ ಆದ ಗುಜರಾತಿನಲ್ಲಿ; ದಲಿತರ ಮೇಲಿನ ದೌರ್ಜನ್ಯಗಳು ಇಂದು ದಿನ ನಿತ್ಯ ಜರುಗುತ್ತಿವೆ.

“ಅವತ್ತಿಗೆ ಗಾಂಧೀಜಿ ಹೋರಾಟ ಮಾಡುತ್ತಿದ್ದಾಗಲೂ ಮೇಲ್ವರ್ಗದವರು ನಡೆಸುತ್ತಿದ್ದ ಶಾಲೆಗಳಿಗೆ ದಲಿತರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ರಾಜ್ಯದಲ್ಲಿ ದೊಡ್ಡ ಮಟ್ಟಕ್ಕೆ ದಲಿತರ ಬಗ್ಗೆ ಮೇಲ್ವರ್ಗದವರಲ್ಲಿ ಅಸಹನೆ ತಳಮಳಗಳು 1980ರ ಸುಮಾರಿಗೆ ಆರಂಭವಾದವು,” ಎನ್ನುತ್ತಾರೆ ಸಾಮಾಜಿಕ ತಜ್ಞ ಘನಶ್ಯಾಮ್ ಶಾ.

ಏರುತ್ತಿರುವ ದೌರ್ಜನ್ಯದ ಗ್ರಾಫ್

ದೇಶದಲ್ಲಿರುವ 20 ಕೋಟಿ ದಲಿತರಲ್ಲಿ ಗುಜರಾತಿನಲ್ಲಿರುವ ದಲಿತರ ಸಂಖ್ಯೆ ಶೇಕಡಾ 2.3 ಮಾತ್ರ. ಅದೇ ದೌರ್ಜನ್ಯಗಳ ವಿಷಯಕ್ಕೆ ಬಂದರೆ ಗುಜರಾತ್ ಮುಂಚೂಣಿಯಲ್ಲಿದೆ. 2015 ರಲ್ಲಿ ಕೇವಲ ಒಂದೇ ವರ್ಷದಲ್ಲಿ ದಲಿತರ ವಿರುದ್ಧ 1000 ಪ್ರಕರಣಗಳು ದಾಖಲಾಗಿವೆ.

1990ರಿಂದ 2015ರ ಮಧ್ಯೆ 25 ವರ್ಷಗಳಲ್ಲಿ 536 ದಲಿತರನ್ನು ಗುಜರಾತಿನಲ್ಲಿ ಕೊಲೆ ಮಾಡಲಾಗಿದೆ. 750 ದಲಿತರ ಮಹಿಳೆಯರ ಮೇಲೆ ಅತ್ಯಾಚಾರದ ಕೃತ್ಯ ಎಸಗಲಾಗಿದೆ. ಒಂದು ಅಧ್ಯಯನದ ಪ್ರಕಾರ ಇಲ್ಲಿನ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶೇಕಡಾ 95 ಪ್ರಕರಣಗಳಲ್ಲಿ ಆರೋಪಿಗಳು ಬಿಡುಗಡೆಯಾಗಿದ್ದಾರೆ. 1981ರಿಂದ 11 ಜಿಲ್ಲೆಗಳು ಅಧಿಕೃತವಾಗಿ ದಲಿತ ‘ದೌರ್ಜನ್ಯ ಪೀಡಿತ’ ಜಿಲ್ಲೆಗಳೆಂದು ಘೋಷಿಸಿಕೊಂಡಿವೆ. ಅಷ್ಟರ ಮಟ್ಟಿಗೆ ಪರಿಸ್ಥಿತಿ ಶೋಚನೀಯವಾಗಿದೆ.

“ಇವತ್ತು ದಲಿತರು ಪ್ರತಿಭಟಿಸುತ್ತಿದ್ದಾರೆ. ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಪ್ರಾಧಿಕಾರ, ಗ್ರಾಮಾಡಳಿತಗಳಿಗೆ ಮಾಹಿತಿ ಕೋರಿ ಆರ್ಟಿಐ ಅರ್ಜಿ ಸಲ್ಲಿಸುತ್ತಿದ್ದಾರೆ,” ಎನ್ನುತ್ತಾರೆ ದಲಿತರ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಮಕ್ವಾನ್. “ಇದರಿಂದ ಮೇಲ್ವರ್ಗದವರು ಭಯಗೊಂಡಿದ್ದು ದಲಿತರ ಮಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ,” ಎನ್ನುತ್ತಾರೆ ಅವರು.

ಅವರ ‘ನವಸರ್ಜನ್ ಟ್ರಸ್ಟ್’ ನಾಲ್ಕು ವರ್ಷಗಳ ದೀರ್ಘ ಅಧ್ಯಯನ ನಡೆಸಿ 2010ರಲ್ಲಿ ವರದಿ ಹೊರ ತಂದಾಗ ಗುಜರಾತಿನ 1600 ಗ್ರಾಮಗಳಲ್ಲಿ 98 ಗ್ರಾಮಗಳಲ್ಲಿ ಇವತ್ತಿಗೂ ಅಸ್ಪೃಶ್ಯತೆಯ ಆಚರಣೆಗಳು ಉಳಿಸಿಕೊಂಡಿರುವುದು ಕಂಡು ಬಂದಿತ್ತು.

ಇಡೀ ವರದಿಯಲ್ಲಿ ಅಘಾತಕಾರಿ ಅಂಶಗಳು ಸಾಕಷ್ಟಿದ್ದವು. ಅವುಗಳಲ್ಲಿ ಪ್ರಮುಖವಾದವು ಹೀಗಿವೆ..

  • ಶೇಕಡಾ 90 ಗ್ರಾಮಗಳಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿಷಿದ್ಧ.
  • ಸರಕಾರದ ಶಾಲೆಗಳಲ್ಲೇ ಶೇಕಡಾ 54 ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ದಲಿತರಿಗೆ ಪ್ರತ್ಯೇಕ ಪಂಕ್ತಿ.
  • ಶೇಕಡಾ 64 ಗ್ರಾಮ ಪಂಚಾಯತಿಗಳಲ್ಲಿ ದಲಿತ ಸದಸ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ. ಚಾ ಕುಡಿಯಲು ಅವರಿಗೆ ಬೇರೆಯದೇ ಲೋಟ ಮತ್ತು ತಟ್ಟೆಯನ್ನಿಟ್ಟಿದ್ದರು.
  • ಶೇಕಡಾ 96 ಗ್ರಾಮಗಳಲ್ಲಿ ದಲಿತರಿಗೆ ರುದ್ರಭೂಮಿಯ ಜಾಗವೇ ಇಲ್ಲ.

“ಆತಂಕಕಾರಿ ವಿಚಾರವೆಂದರೆ ಇತ್ತೀಚೆಗಿನ ದೌರ್ಜನ್ಯಗಳು ಹಿಂದೂ ಸಂಘಟನೆಗಳ ಸತತ ಪ್ರಚಾರದಿಂದ ಹುಟ್ಟುಕೊಂಡವು,” ಎನ್ನುತ್ತಾರೆ ಶಾ. “ಈ ಸಂಘಟನೆಗಳು ಜನರಿಗೆ ಏನು ತಿನ್ನಬೇಕು, ಕುಡಿಬೇಕು, ಯಾವ ಬಟ್ಟೆ ಹಾಕಬೇಕು, ಯಾವ ನಡವಳಿಕೆ ಇಟ್ಟುಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತವೆ,” ಎನ್ನುತ್ತಾರೆ ಅವರು.

ಇಲ್ಲಿನ ಸ್ವಘೋಷಿತ ‘ಗೋ ರಕ್ಷಕ’ರು ಸುಲಿಗೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಗಳೂ ಕೇಳಿ ಬಂದಿವೆ. ಆದರೆ ಪ್ರಧಾನಿ ಮೋದಿ ಮಾತ್ರ ಮೌನವಾಗಿದ್ದಾರೆ.

ಗುಜರಾತಿನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಅಲ್ಲಿನ ಚುನಾವಣೆಯಲ್ಲಿ ಅಷ್ಟೇನೂ ಪರಿಣಾಮ ಬೀರಲಾರದು. ಈಗಾಗಲೇ ಅಲ್ಲಿ ದಲಿತರು ಹಿಂದಿನಿಂದಲೂ ಕಾಂಗ್ರೆಸಿಗೆ ಮತ ನೀಡುತ್ತಾ ಬಂದಿದ್ದಾರೆ. ಆದರೆ ದಲಿತರೇ ಬಹು ಸಂಖ್ಯಾತರಾಗಿರುವ, ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲಿ ಇದು ಬಿಜೆಪಿಯ ಹಣೆಬರಹ ನಿರ್ಧಸಲಿದೆ ಎನ್ನುವ ಅಭಿಪ್ರಾಯಗಳಿವೆ.

ಆದರೆ ಆಳದಲ್ಲಿ ಈ ಘಟನೆ ಇನ್ನೇನು ತಲ್ಲಣಗಳನ್ನು ಹುಟ್ಟು ಹಾಕಿದೆಯೋ ಗೊತ್ತಿಲ್ಲ.

ಆದರೆ ಪ್ರಧಾನಿ ನರೇಂದ್ರ ಮೋದಿ ಪಾಲಿಗೆ ಮಾತ್ರ ಇದು ಖಂಡಿತ ಒಳ್ಳೆ ಬೆಳವಣಿಗೆಯಂತೂ ಅಲ್ಲ.

ಕೃಪೆ: ಬಿಬಿಸಿ

Leave a comment

FOOT PRINT

Top