An unconventional News Portal.

ರಾಕೇಶ್ ಸಿದ್ದರಾಮಯ್ಯಗೆ ‘ಮುಕ್ತಿ’ ನೀಡಿದ ಟುಮಾರೋ ಲ್ಯಾಂಡ್ & ಮರೆಯಾದ ಮಾನವೀಯತೆ!

ರಾಕೇಶ್ ಸಿದ್ದರಾಮಯ್ಯಗೆ ‘ಮುಕ್ತಿ’ ನೀಡಿದ ಟುಮಾರೋ ಲ್ಯಾಂಡ್ & ಮರೆಯಾದ ಮಾನವೀಯತೆ!

‘ಟುಮಾರೋಲ್ಯಾಂಡ್’ ಹೆಸರಿನಲ್ಲಿ ನಡೆಯುವ ಜಗತ್ತಿನ ಅತೀ ದೊಡ್ಡ ಎಲೆಕ್ಟ್ರಾನಿಕ್ ಸಂಗೀತ ಹಬ್ಬಕ್ಕೆ ಹೋಗಿದ್ದ ಸಿಎಂ ಪುತ್ರ ರಾಕೇಶ್ ಪುತ್ರ ಇಹಲೋಕವನ್ನು ತ್ಯಜಿಸಿದ್ದಾರೆ.

ಅವರ ಪಾರ್ಥಿವ ಶರೀರ ಸೋಮವಾರ ಮುಂಜಾನೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದೆ. ಅಲ್ಲಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆಗೆದುಕೊಂಡು ಹೋಗಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಸಮೀಪದ ಟಿ. ಕಾಟೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಬದುಕಿನ ಮಧ್ಯವಯಸ್ಸನ್ನು ತಲುಪಿದ್ದ 39 ವರ್ಷದ ರಾಕೇಶ್ ಸಿದ್ದರಾಮಯ್ಯ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ. ಇಬ್ಬರು ಗಂಡು ಮಕ್ಕಳ ಪೈಕಿ, ತಂದೆಯ ಹಾದಿಯಲ್ಲಿ ರಾಜಕೀಯ ಭವಿಷ್ಯವನ್ನು ಕಟ್ಟಿಕೊಳ್ಳುವ ಇಚ್ಚೆಯನ್ನು ಹೊಂದಿದ್ದವರು. ಅದಕ್ಕೂ ಮೊದಲು ಸಿನೆಮಾ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತಮ್ಮದೇ ಬದುಕನ್ನ ಕಟ್ಟಿಕೊಳ್ಳಲು ಹೆಣಗಾಡಿದವರು. ಅಂತವರು ಬೆಲ್ಜಿಯಂನ ಆಂಟ್ವರ್ಪ್ ನಗರದ ಸಮೀಪದಲ್ಲಿರುವ ಬೂಮ್ ನಗರದಲ್ಲಿ ಜು. 22ರಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಟುಮಾರೋಲ್ಯಾಂಡ್ ಎಂಬ ಎಲೆಕ್ಟ್ರಾನಿಕ್ ಮ್ಯೂಸಿಕ್ ಹಬ್ಬದಲ್ಲಿ ಭಾಗವಹಿಸಲು ತೆರಳಿದ್ದರು. ಅಲ್ಲಿ ಅವರು ಕಾಯಿಲೆಗೆ ತುತ್ತಾಗಿ ಜು, 25ರಂದು ಆಸ್ಪತ್ರೆಗೆ ದಾಖಲಾದರು ಎಂಬುದು ಸದ್ಯ ಇರುವ ಮಾಹಿತಿ. ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದವರು, ಅಲ್ಲಿಯೇ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಮುಖ್ಯಮಂತ್ರಿ ಪುತ್ರ ಎಂಬ ಕಾರಣಕ್ಕೆ ಅವರ ಸಾವು ನಾನಾ ಆಯಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸೂತಕದ ಮನೆಯ ಸಂತಾಪಗಳನ್ನು ಮೀರಿ ಬಹಿರಂಗವಾಗಿ ವಾದ- ವಿವಾದಗಳನ್ನು ಹುಟ್ಟು ಹಾಕಿದೆ.

ತಂದೆಯಂತೆಯೇ:

rakesh-sid-2ಮೈಸೂರಿನ ಚಿಕ್ಕ ಹಳ್ಳಿಯಲ್ಲಿ ಹಿಂದುಳಿದ ಕುಟುಂಬದಲ್ಲಿ ಹುಟ್ಟಿ ಬೆಳೆದ ರಾಕೇಶ್ ಸಿದ್ದರಾಮಯ್ಯ ತಂದೆಯ ಏರಿಳಿತ ದಿನಗಳನ್ನು ಹತ್ತಿದಿಂದ ಕಂಡವರು. “ಒಂದು ಸಮಯದಲ್ಲಿ ಜನತಾದಳದಿಂದ ಹೊರಬಂದ ನಂತರ ಸಿದ್ದರಾಮಯ್ಯ ಅವರ ಮನೆಯ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿತ್ತು. ಈ ಸಮಯದಲ್ಲಿ ಎರಡನೇ ಮಗ ವೈದ್ಯನಾಗಿ ಬದುಕಿನಲ್ಲಿ ಸೆಟಲ್ ಆಗಿದ್ದ. ಆದರೆ ರಾಕೇಶ್ ಇನ್ನೂ ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದ. ಅವತ್ತು ಅವನು ಅನುಭವಿಸಿದ ಅವಮಾನಗಳು ದೊಡ್ಡದಿದ್ದವು,” ಎನ್ನುತ್ತಾರೆ ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ರಾಕೇಶ್ ಸ್ನೇಹಿತರೊಬ್ಬರು. “ಈ ಸಮಯದಲ್ಲಿ ಆತ ಸಿನೆಮಾ ಒಂದರಲ್ಲಿ ನಾಯಕನಾಗಿ ನಟಿಸಿದನಾದರೂ ದೊಡ್ಡ ಸದ್ದು ಮಾಡಲಿಲ್ಲ. ಕೊನೆಗೆ ಯಾವುದೋ ಒಂದು ಥಿಯೇಟರ್ನಲ್ಲಿ ಬಿಡುಗಡೆ ಮಾಡಿ, ಸಬ್ಸಿಡಿ ಪಡೆದು ಸಿನೆಮಾಗೆ ಹಾಕಿದ ದುಡ್ಡನ್ನು ವಾಪಾಸ್ ಪಡೆಯುವ ಪರಿಸ್ಥಿತಿ ಬಂದಿತ್ತು,” ಎನ್ನುತ್ತಾರೆ ಅವರು.

ಅಂತಹ ಹಿನ್ನೆಲೆಯಿಂದ ಬಂದ ರಾಕೇಶ್ ತಂದೆ ಮುಖ್ಯಮಂತ್ರಿಯಾದ ನಂತರ ಜೀವನಶೈಲಿನಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಿಕೊಂಡರು ಎಂಬುದು ಅವರ ಆಪ್ತ ವರ್ಗ ಇಂದು ಹೇಳುತ್ತಿರುವ ಘಟನೆಗಳಿಂದ ಅರ್ಥವಾಗುತ್ತದೆ. “ಆತ ಬೆಂಗಳೂರಿಗೆ ಬರುವುದು, ರಾಜಕೀಯಕ್ಕೆ ಇಳಿಯುವುದು ಮೊದಲಿನಿಂದಲೂ ತಂದೆ (ಸಿದ್ದರಾಮಯ್ಯ)ಗೆ ಇಷ್ಟ ಇರಲಿಲ್ಲ. ಹಾಗಂತ ಅವರು ಆತನಿಗೆ ಕಡಿವಾಣ ಹಾಕಲೂ ಸಾಧ್ಯವಿರಲಿಲ್ಲ. ಹೀಗಾಗಿ, ವರುಣಾ ಕ್ಷೇತ್ರದ ಹೊಣೆಗಾರಿಗೆ ವಹಿಸಿಕೊಟ್ಟು, ಮೈಸೂರಿನಲ್ಲಿಯೇ ಉಳಿದುಕೊಳ್ಳುವಂತೆ ನೋಡಿಕೊಂಡರು,” ಎನ್ನುತ್ತಾರೆ ಮುಖ್ಯಮಂತ್ರಿ ಕುಟುಂಬಕ್ಕೆ ಒಂದು ಕಾಲದಲ್ಲಿ ಆಪ್ತರಾಗಿದ್ದ ರಾಜಕಾರಣಿಯೊಬ್ಬರು.

“ರಾಕೇಶ್ ಹಠದ ಮನುಷ್ಯ; ತಂದೆಯ ಹಲವು ಗುಣಗಳು ಆತನಲ್ಲಿಯೂ ಇತ್ತು. ಬಡವರ ಕಂಡರೆ ಅವನಲ್ಲಿ ಕರುಣೆ ಉಕ್ಕುತ್ತಿತ್ತು. ಅದೇ ವೇಳೆ, ತನ್ನೆಲ್ಲಾ ಬಡತನಗಳನ್ನು ಮರೆಯುವಂತೆ ಆತ ಐಶಾರಾಮಿ ಬದುಕಿನತ್ತಲೂ ಮುಖಮಾಡಿದ್ದ. ಅದು ಅವನು ಇಟ್ಟ ಮೊದಲ ತಪ್ಪು ಹೆಜ್ಜೆ,” ಎನ್ನುತ್ತಾರೆ ರಾಕೇಶ್ ಸ್ನೇಹಿತರು. ಅಂತಹದೊಂದು ಜೀವನ ಶೈಲಿ ರಾಕೇಶ್ ಅವರನ್ನು ಟುಮಾರೋಲ್ಯಾಂಡ್ ಎಂಬ ಜಗತ್ತಿನ ಅತೀ ದೊಡ್ಡ ಎಲೆಕ್ಟ್ರಾನಿಕ್ ಸಂಗೀತದ ಹಬ್ಬದ ಅಂಗಳಕ್ಕೆ ಕರೆತಂದು ಬಿಟ್ಟಿತ್ತು.

ಏನಿದು ಟುಮಾರೋಲ್ಯಾಂಡ್?:

ಅಮೆರಿಕಾದ ಅಟ್ಲಾಂಟದಲ್ಲಿ ಆರಂಭವಾದ ಸಂಗೀತದ ಉತ್ಸವ ಇದು. ಒಂದು ಕಾಲದ ಹಿಪ್ಪಿ ಚಳವಳಿಯನ್ನು ನೆನಪಿಸುವಂತಹ, ಅದೇ ಪರಂಪರೆಯನ್ನು ಮುಂದುವರಿಸುವ ಭಾಗದಂತೆ ಕಾಣುವ ಈ ಹಬ್ಬದ 12ನೇ ಅವತರಣಿಗೆ ನಡೆದಿದ್ದು ಇದೇ ಜು. 22ರಿಂದ 24ರವರೆಗೆ, ಮೂರು ದಿನಗಳ ಕಾಲ ಬೆಲ್ಜಿಯಂ ನಗರದಲ್ಲಿ. ಸಣ್ಣಮಟ್ಟದಲ್ಲಿ ಶುರುವಾದ ಟುಮಾರೋಲ್ಯಾಂಡ್ ಇವತ್ತಿಗೆ ಜಗತ್ತಿನ ಸಂಗೀತಲೋಕದಲ್ಲಿ ದೊಡ್ಡ ಹೆಸರು ಮಾಡಿದೆ. ಇದರ ಒಂದು ಟಿಕೆಟ್ ಬೆಲೆಯೇ ಭಾರತೀಯ ರೂಪಾಯಿಗಳಲ್ಲಿ ಸುಮಾರು 18. 6 ಲಕ್ಷ ರೂಪಾಯಿ. ಒಬ್ಬರಿಗೆ ನಾಲ್ಕು ಟಿಕೆಟ್ಳನ್ನಷ್ಟೆ ಆಯೋಜಕರು ನೀಡುತ್ತಾರೆ. 2014ರಲ್ಲಿ ಟುಮಾರೋಲ್ಯಾಂಡ್ ಟಿಕೆಟ್ಗಳು ಬಿಡುಗಡೆ ಮಾಡಿದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು.

ಇಂತಹ ಹಬ್ಬದಲ್ಲಿ ‘ಲವ್ ಟುಮಾರೋ’ (ನಾಳೆಗಳನ್ನು ಪ್ರೀತಿಸಿ) ಎಂಬ ಒಂದು ವಿಭಾಗ ಈ ಬಾರಿ ಆಯೋಜನೆಗೊಂಡಿತ್ತು. ಗೌರವ, ಅನ್ವೇಷಣೆ, ನಿಸರ್ಗ, ಹೊಣೆಗಾರಿಕೆ ಮತ್ತು ಆರೋಗ್ಯ ಎಂಬ ಐದು ಮಂತ್ರಗಳನ್ನು ಇಲ್ಲಿ ಪ್ರಚಾರ ಪಡಿಸಲಾಗಿತ್ತು. ಇದಕ್ಕಿಂತಲೂ ವಿಪರ್ಯಾಸ ಏನೆಂದರೆ, ಈ ಬಾರಿಯ ಟುಮಾರೋಲ್ಯಾಂಡ್ ಹಬ್ಬದ ಘೋಷವಾಕ್ಯ The elixir of life. ಎಲಿಗ್ಸರ್ ಅಂದರೆ ಯಾವುದೇ ವಸ್ತುವನ್ನು ಚಿನ್ನವನ್ನಾಗಿ ಬದಲಿಸಲು ಬಳಸುವ ಪಾಕ ಎಂದರ್ಥ. ಈ ಪಾಕದ ಮೂಲಕ ಬದುಕಿನ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂದು ಹಬ್ಬದ ಆಯೋಜಕರು ಪ್ರಚಾರ ಮಾಡಿದ್ದರು. ಇದನ್ನು ಅನುಭವಿಸಲು ಹೋದ ರಾಕೇಶ್ ಬದುಕಿನ ಮುಕ್ತಿಯನ್ನು ಪಡೆದುಕೊಂಡಿದ್ದಾರೆ.

ಸಾವು- ಸಂತಾಪ- ಅಸಹ್ಯ:

ರಾಕೇಶ್ ಸಿದ್ದರಾಮಯ್ಯ ಸಾವಿನ ಸುದ್ದಿ ಶನಿವಾರ ಸಂಜೆ ವೇಳೆಗೆ ಬಹಿರಂಗವಾಗುತ್ತಿದ್ದಂತೆ ರಾಜ್ಯಾದ್ಯಂತ ಸಂತಾಪದ ಮಹಾಪೋರವೇ ಹರಿದು ಬಂತು. ಸಾವು ಸಹಜವಾಗಿಯೇ ಮೂಡಿಸುವ ಮಾನವೀಯ ಸಂತಾಪ ಸೂಚಕಗಳು ಅವು. ಅವುಗಳ ನಡುವೆಯೇ ಒಂದಿಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಾವಿನಲ್ಲಿಯೂ ಅಸಹ್ಯಕರ ರಾಜಕೀಯಕ್ಕಿಳಿದರು. ಅಧಿಕಾರಿ ಡಿ. ಕೆ. ರವಿಯವರ ಬಡ ತಾಯಿಯ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲು ಮುಂದಾದರು.

rakesh-death-status-1

ಇಂತಹ ಹಲವಾರು ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳ ಬಳಕೆದಾರರಲ್ಲಿ ಅಸಹ್ಯಗಳನ್ನು ಹುಟ್ಟಿಸಿದವು. “ಇದು ನಮ್ಮ ನಡುವೆ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಮಾನವೀಯತೆ ಮತ್ತು ತಲೆ ಎತ್ತುತ್ತಿರುವ ಅಸಹ್ಯಕರ ಮನಸ್ಥಿತಿಯ ಅಭಿವ್ಯಕ್ತಿಗಳು,” ಎಂದು ‘ಸಮಾಚಾರ’ ಓದುಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು. ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಸದಾನಂದ ಗೌಡ ಅವರ ಫೇಸ್ಬುಕ್ನಲ್ಲಿ ವ್ಯಕ್ತಪಡಿಸಿದ ಈ ಅಭಿಪ್ರಾಯ, ಸಕಾಲಿಕ ಎನ್ನುವಂತಿತ್ತು.

rakesh-death-gowda-status-

ಹೀಗೆ, ಒಂದು ಸಾವಿನ ಸೂತಕದ ಮನೆ ನಾನಾ ಆಯಾಮಗಳನ್ನು ಪಡೆದುಕೊಂಡಿತು. ಇವುಗಳ ನಡುವೆಯೇ ರಾಜ್ಯ ಮುಖ್ಯಮಂತ್ರಿ ಕುಟುಂಬ ಪುತ್ರನನ್ನು ಕಳೆದುಕೊಂಡ ಶೋಕವನ್ನು ಭರಿಸುತ್ತಿದೆ.

‘ಬಸ್ ಬಂದ್’ ಮುಗಿದರೂ ನಿಲ್ಲದ ತೆರೆಮರೆಯ ಬೆಳವಣಿಗೆಗಳು, ಮತ್ತೊಂದೆಡೆ ಮಹದಾಯಿ ಹೋರಾಟ ಸಮಯದಲ್ಲಿ ರೈತರ ಮೇಲೆ ನಡೆದ ಲಾಠಿ ಪ್ರಹಾರಗಳಂತಹ ವಿದ್ಯಮಾನಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪ್ರೀತಿಯ ಪುತ್ರನ ಅಂತಿಮ ಸಂಸ್ಕಾರಗಳನ್ನು ನಡೆಸಿಕೊಡಬೇಕಿದೆ. “ಅವರಿಗೆ ಪುತ್ರನ ಸಾವಿನ ದುಃಖವನ್ನು ಭರಿಸಲು ಶಕ್ತಿ ಹಾಗೂ ಸಮಯ ಎರಡ ಅಗತ್ಯವೂ ಈ ಸಮಯದಲ್ಲಿದೆ. ಅದಾದ ನಂತರ ಮತ್ತದೇ ರಾಜಕೀಯ ಇದ್ದೇ ಇರುತ್ತದೆ. ಪರ- ವಿರೋಧಗಳ ಚರ್ಚೆಯನ್ನು ನಡೆಸುತ್ತಿರುವವರು ಮೊದಲು ಇಷ್ಟು ಪ್ರಮಾಣ ಮಾನವೀಯತೆ ಉಳಿಸಿಕೊಳ್ಳಲಿ ಎಂದಷ್ಟೆ ಈ ಸಮಯದಲ್ಲಿ ಹಾರೈಸಬಹುದಾಗಿದೆ,” ಎನ್ನುತ್ತಾರೆ ಸಿದ್ದರಾಮಯ್ಯ ಅವರಿಂದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೆ ದೂರವಾಗಿರುವ ರಾಜಕಾರಣಿಯೊಬ್ಬರು.

ಒಟ್ಟಾರೆ, ಒಂದು ಸಾವು ಸಂತಾಪ, ಸೂತಕಗಳ ಆಚೆಗೂ ದ್ವೇಷಕಾರಿಕೊಳ್ಳಲು ವೇದಿಕೆಯಾಗಬಲ್ಲಂತಹ ವಾತಾವರಣವೊಂದು ಸೃಷ್ಟಿಯಾದ ದಿನಗಳಿವು ಎಂಬುದು ನಿಚ್ಚಳವಾದಂತಾಗಿದೆ.

Leave a comment

FOOT PRINT

Top