An unconventional News Portal.

‘ಹಿಸ್ಟರಿ ಆಫ್ ನರಗುಂದ & ನವಲಗುಂದ’: ಕಳಸಾ ಬಂಡೂರಿ ಕಿಚ್ಚು ಹೊತ್ತಿಸಿದ ಅವಳಿಗಳ ರೋಚಕ ಕತೆ!

‘ಹಿಸ್ಟರಿ ಆಫ್ ನರಗುಂದ & ನವಲಗುಂದ’: ಕಳಸಾ ಬಂಡೂರಿ ಕಿಚ್ಚು ಹೊತ್ತಿಸಿದ ಅವಳಿಗಳ ರೋಚಕ ಕತೆ!

ಉತ್ತರ ಕರ್ನಾಟಕದ ತುಂಬಾ ಈಗ ‘ಕಳಸಾ ಬಂಡೂರಿ’ ಹೋರಾಟ ಕಿಚ್ಚು ಹೊತ್ತಿ ಉರಿಯುತ್ತಿದೆ.

ಈ ಕಿಚ್ಚಿಗೆ ಕಿಡಿ ಹೊತ್ತಿದ್ದು ಯಾವಾಗ ಅಂತ ಹುಡುಕಿಕೊಂಡು ಹೊರಟರೆ ಹೋಗಿ ನಿಲ್ಲುವುದು ನರಗುಂದ ಮತ್ತು ನವಲಗುಂದ ಎಂಬ ಎರಡು ಅವಳಿ ತಾಲೂಕುಗಳಿಗೆ. ಕೃಷಿಯನ್ನೇ ನಂಬಿ ಬಾಳಿ ಬದುಕುವ ಈ ಎರಡೂ ತಾಲೂಕಿನ ಇತಿಹಾಸದ ತುಂಬಾ ರೈತ ಹೋರಾಟ, ರಕ್ತಪಾತ, ಗೋಲಿಬಾರ್ ಘಟನೆಗಳೇ ತುಂಬಿ ತುಳುಕುತ್ತವೆ. ಕಳಸಾ ಬಂಡೂರಿ ಹೋರಾಟ ಈ ಸಮಯದಲ್ಲಿ ಈ ಎರಡೂ ತಾಲೂಕುಗಳ ರೋಚಕ ಸತ್ಯಾಗ್ರಹದ ಹಾದಿಯನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ.

ನರಗುಂದ ಮತ್ತು ನವಲಗುಂದಗಳು ಹಿಂದಿನ ಧಾರವಾಡ ಜಿಲ್ಲೆಯ ತಾಲೂಕು ಕೇಂದ್ರಗಳು. ಸದ್ಯ ನವಲಗುಂದ ಧಾರವಾಡ ಜಿಲ್ಲೆಯಲ್ಲಿದೆ; ನರಗುಂದ ಗದಗ ಪಾಲಾಗಿದೆ. ನರಗುಂದವನ್ನು ನರಿಗುಂದವೆನ್ನುತ್ತಿದ್ದರು. ನರಿ + ಕುಂದ ಅಂದರೆ ನರಿಗಳಿರುವ ಬೆಟ್ಟ ಎಂದರ್ಥ. ಅದೇ ನವಲಗುಂದ ಅಂದರೆ ನವಿಲುಗಳಿರುವ ಬೆಟ್ಟ. ಎರಡೂ ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳು.

ರೈತ ಹೋರಾಟದ ಆರಂಭ: 

ಕೃಷಿ ನರಗುಂದ ಮತ್ತು ನವಲಗುಂದ ಎರಡೂ ತಾಲೂಕುಗಳಲ್ಲಿ ಮುಖ್ಯ ಕಸುಬು. 1979ರಲ್ಲಿ ಇಲ್ಲಿ ಬರಗಾಲ ಬಂದಾಗ ಕಾಲುವೆಗಳಿಂದ ನೀರು ಬರುವುದು ನಿಂತು ಹೋಯಿತು. ಈ ಭಾಗದಲ್ಲಿ ಬೆಳೆಯುತ್ತಿದ್ದ ಹತ್ತಿ ಮತ್ತು ಮುಸುಕಿನ ಜೋಳ(ಗೋವಿನ ಜೋಳ)ದ ಬೆಲೆಯೂ ವಿಪರೀತ ಕುಸಿದು ಹೋಯಿತು. ಕ್ವಿಂಟಾಲಿಗೆ 900 ರೂಪಾಯಿ ಇದ್ದ ಹತ್ತಿ ದರ 300 ರೂಪಾಯಿಗೆ ಬಂದು ನಿಂತಿತು. ಜನ ಕಂಗಾಲಾಗಿ ಅತ್ತ ಬ್ಯಾಂಕುಗಳಿಂದ ಪಡೆದ ಸಾಲವೂ ತೀರಿಸಲಾಗದೆ, ದಿವಾಳಿಯಾಗುವ ಪರಿಸ್ಥಿತಿಗೆ ಬಂದು ನಿಂತಿದ್ದರು. ವಾಡಿಕೆಯಂತೆ ಬೀಜ ಬಿತ್ತನೆ ಮಾಡಿ ಗೊಬ್ಬರ ಖರೀದಿಸಲೂ ಹಣವಿಲ್ಲದ ಪರಿಸ್ಥಿತಿ ಅವರದಾಗಿತ್ತು. ಇಷ್ಟೆಲ್ಲ ಆದರೂ ‘ನೀರಿನ ಕರ’ ಮತ್ತು ‘ಬೆಟರ್ ಮೆಂಟ್ ಲೆವಿ’ ಅಲ್ಲಿ ಜಾರಿಯಲ್ಲಿತ್ತು.

ಕಂಗೆಟ್ಟ ನರಗುಂದ, ನವಲಗುಂದ ಮತ್ತು ಹತ್ತಿರದ ಸವದತ್ತಿ ತಾಲೂಕಿನ ಜನ ನಿಧಾನವಾಗಿ ಸಿಡಿದೇಳುವ ಮುನ್ಸೂಚನೆಗಳು ಕಾಣತೊಡಗಿತು. 1979ರ ಡಿಸೆಂಬರಿನಲ್ಲಿ ಇದು ಹೋರಾಟವಾಗಿ ಬೀದಿಗೆ ಬಂತು.

‘ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿ’ ಹೆಸರಿನಲ್ಲಿ; ‘ನೀರಿನ ಕರ’ ಮತ್ತು ‘ಬೆಟರ್ ಮೆಂಟ್ ಲೆವಿ’ ರದ್ದು ಮಾಡಬೇಕು, ಬೆಳೆಗೆ ಉತ್ತಮ ಬೆಲೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ತೀವ್ರ ಪ್ರತಿಭಟನೆ ಆರಂಭವಾಯಿತು. ಸುಮಾರು 6 ತಿಂಗಳುಗಳ ಕಾಲ ಇದು ನಡೆಯಿತು; ಆದರೆ ಸರಕಾರ ಬಗ್ಗಲಿಲ್ಲ. ಅವತ್ತು ಧಾರವಾಡ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಅಧ್ಯಯನ ಮಾಡಿಕೊಂಡಿದ್ದ ನರಗುಂದದವರೇ ಆಗಿದ್ದ ವಿ. ಎನ್. ಹಳಕಟ್ಟಿ ಈ ಹೋರಾಟದ ನೇತೃತ್ವ ವಹಿಸಿದ್ದರು. 1957ರಲ್ಲಿ ಹುಟ್ಟಿಕೊಂಡಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಅಡಿಯಲ್ಲಿ ಅವರು ಸರಣಿ ಪ್ರತಿಭಟನೆ, ಸತ್ಯಾಗ್ರಹಗಳನ್ನು ಆಯೋಜಿಸಿದ್ದರು. ಆರು ತಿಂಗಳುಗಳ ಕಾಲ ಪೂರ್ತಿ ತಾಲೂಕಿನ ಹಳ್ಳಿಗಳ ಜನ ಸಮರೋಪಾದಿಯಲ್ಲಿ ಬಂದು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಯಾವ ಪ್ರತಿಭಟನೆಗಳಿಗೂ ಸರಕಾರ ಜಗ್ಗದಾದಾಗ 1980, ಜುಲೈ 21ರಂದು ನರಗುಂದ, ನವಲಗುಮದ ಮತ್ತು ಸವದತ್ತಿ ತಾಲೂಕು ಬಂದ್ಗೆ ಕರೆ ನೀಡಲಾಯಿತು. ಅವತ್ತು ಮುಂಜಾನೆ ರೈತರೆಲ್ಲಾ ಆಕ್ರೋಷಿತರಾಗಿ ತಾಲೂಕು ಕೇಂದ್ರಗಳಿಗೆ ಬಂದಿದ್ದರು. ಇನ್ನೊಂದಷ್ಟು ಜನ ಹಳ್ಳಿ ಹಳ್ಳಿಗಳಿಂದ ಮೆರವಣಿಗೆಯಲ್ಲಿ ಬರುವವರಿದ್ದರು.

ಅವತ್ತು ನರಗುಂದದಲ್ಲಿ ಪ್ರತಿಭಟನಾಕಾರರು ಅಂಚೆ ಕಚೇರಿ, ಬ್ಯಾಂಕ್ಗಳನ್ನು ಬಂದ್ ಮಾಡಿಸುತ್ತಾ ಬರುತ್ತಿದ್ದರು. ತಹಶೀಲ್ದಾರ್ ಕಚೇರಿಯನ್ನೂ ಬಂದ್ ಮಾಡಬೇಕು ಎಂಬುದು ರೈತ ಹೋರಾಟಗಾರರ ಒತ್ತಾಸೆಯಾಗಿತ್ತು. ಈ ಕಾರಣಕ್ಕೆ 9 ಗಂಟೆಗೂ ಮೊದಲೇ ರೈತರೆಲ್ಲಾ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಸುತ್ತುಕಟ್ಟಿ ನಿಂತಿದ್ದರು. ಯಾವ ಸಿಬ್ಬಂದಿಯನ್ನೂ ಒಳಕ್ಕೆ ಹೋಗಲು ಬಿಟ್ಟಿರಲಿಲ್ಲ. ಕೊನೆಗೆ ತಹಶೀಲ್ದಾರರಿಗೂ ಪ್ರವೇಶ ನಿರಾಕರಿಸಲಾಯಿತು. ಆದರೆ “ಧಾರವಾಡ ಜಿಲ್ಲಾಧಿಕರಾಯಾಗಿದ್ದ ರೇಣುಕಾ ವಿಶ್ವನಾಥನ್, ತಹಶೀಲ್ದಾರ್ ಕಚೇರಿ ತೆರೆಯಲೇಬೇಕು. ತಹಶೀಲ್ದಾರರನ್ನು ಒಳಕ್ಕೆ ಕರೆದುಕೊಂಡು ಹೋಗುವುದು ನಿಮ್ಮ ಜವಾಬ್ದಾರಿ ಎಂಬುದಾಗಿ ಪೊಲೀಸರಿಗೆ ಹೇಳಿದರು. ಪೊಲಿಸ್ ರಕ್ಷಣೆಯಲ್ಲಿ ತಹಶೀಲ್ದಾರರು ಆಗಮಿಸಿದಾಗ ರೈತರು ದಾರಿಗೆ ಅಡ್ಡವಾಗಿ ಮಲಗಿಕೊಂಡು ಬಿಟ್ಟರು. ಆಗ ತಹಶೀಲ್ದಾರರು ರೈತರನ್ನು ತುಳಿದುಕೊಂಡೇ ಕಚೇರಿ ಒಳ ಹೋದ ಸುದ್ದಿ ಕಾಡಗಿಚ್ಚಿನಂತೆ ಹರಡಿತು. ಹಳ್ಳಿಗಳೇ ತುಂಬಿಕೊಂಡು ಬರುತ್ತಿವೆಯೋ ಅನ್ನಿಸುವ ಹಾಗೆ ಈ ಜಾಥಾ ಬರುತ್ತಿತ್ತು,” ಎಂದು ತಮ್ಮ ಅವತ್ತಿನ ನೆನಪುಗಳನ್ನು ಹಂಚಿಕೊಳ್ಳುತ್ತಾರೆ ಅವತ್ತು ಅಲ್ಲಿನ ಅರಣ್ಯಾಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್. ಇವತ್ತು ಸಿಪಿಐ (ಎಂ) ಪಕ್ಷದ ಪ್ರಮುಖ ನಾಯಕರು ಇವರು.

ತಾಲೂಕು ಕೇಂದ್ರಕ್ಕೆ ಜಾಥಾ ಬಂದ ಬಂದ ರೈತರು ಆಕ್ರೋಷಿತರಾಗಿ ತಹಶೀಲ್ದಾರ್, ಪೊಲೀಸರ ಮೇಲೆ ಹಲ್ಲೆ ನಡೆಸಿದರು. ತಹಶೀಲ್ದಾರ್ ಕಚೇರಿಗೆ ಬೆಂಕಿ ಹಚ್ಚಲಾಯಿತು. ಒಂದೇ ಒಂದು ಪೇಪರ್ ಕೂಡಾ ಉಳಿಯದೆ ತಹಶೀಲ್ದಾರ್ ಕಚೇರಿ ದಾಖಲೆಗಳು ಹೊತ್ತಿ ಉರಿದು ಹೋದವು. ದೊಂಬಿ ಗಲಭೆಯಲ್ಲಿ ಡಿವೈಎಸ್ಪಿ ತಲೆಗೆ ಗಾಯವಾಯಿತು, ತಹಶೀಲ್ದಾರ್ ಕಿವಿಗೆ ಗಾಯವಾಯಿತು. ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಹಾರಿಸಿದ ಗುಂಡಿಗೆ ರೈತರೊಬ್ಬರು ಸಾವಿಗೀಡಾದರೆ, ಪ್ರತಿಭಟನಾಕಾರರು ಅದೇ ಪೊಲೀಸ್ ಅಧಿಕಾರಿಯನ್ನು ಹೊಡೆದು ಕೊಂದು ಹಾಕಿದರು. ಉಳಿದ ಪೊಲೀಸರು ತಮ್ಮ ಯೂನಿಫಾರಂ ಬಿಚ್ಚಿ ನದಿಗೆ ಹಾರಿ ಪ್ರಾಣ ಉಳಿಸಿಕೊಂಡರು; ಅಷ್ಟರಮಟ್ಟಿಗೆ ಪ್ರತಿಭಟನೆ ಉಗ್ರವಾಗಿತ್ತು.

ರೈತರ ಮೇಲಿನ ಗೋಲಿಬಾರ್ ಖಂಡಿಸಿ ಅಂದು ರೈತ ನಾಯಕರು ನಡೆಸಿದ ಹೋರಾಟ.

ರೈತರ ಮೇಲಿನ ಗೋಲಿಬಾರ್ ಖಂಡಿಸಿ ಅಂದು ರೈತ ನಾಯಕರು ನಡೆಸಿದ ಹೋರಾಟ.

ಹತ್ತಿರದ ತಾಲೂಕು ನವಲಗುಂದದಲ್ಲಿಯೂ ಬೃಹತ್ ಪ್ರತಿಭಟನೆಯಲ್ಲಿ ಗೋಲಿಬಾರ್ ನಡೆದು ಓರ್ವ ರೈತ ಸಾವನ್ನಪ್ಪಿದರು. ಸವದತ್ತಿಯಲ್ಲಿಯೂ  ಭಾರೀ ಪ್ರತಿಭಟನೆ ನಡೆಯಿತು. ಒಟ್ಟಾರೆ ಬಂದ್ ವೇಳೆಯಲ್ಲಿ ಇಬ್ಬರು ರೈತರು ಸೇರಿ ಮೂವರು ಪ್ರಾಣ ಕಳೆದುಕೊಂಡರು.

ಜುಲೈ 21ರ ಈ ಬಂದ್ ಸುದ್ದಿ ಕಾಡ್ಗಿಚ್ಚಿನಂತೆ ರಾಜ್ಯವೆಲ್ಲಾ ಹರಿದಾಡಿತು. ತಾಲೂಕು ಜಿಲ್ಲಾ ಕೇಂದ್ರ ಸೇರಿ ರಾಜ್ಯದ ಸುಮಾರು 200 ಕಡೆಗಳಲ್ಲಿ ಪ್ರತಿಭಟನೆಗಳು ನಡೆದವು. ಹಲವು ಕಡೆಗಳಲ್ಲಿ ಲಾಠಿ ಚಾರ್ಚ್ ಮೂರು ನಾಲ್ಕು ಕಡೆ ಫೈರಿಂಗ್ ನಡೆಯಿತು. ಇಡೀ ರಾಜ್ಯವೇ ಒಂದು ಕ್ಷಣ ಬೆಚ್ಚಿ ಬಿದ್ದ ದಿನಗಳವು.

ಕೊನೆಗೆ ದಾರಿ ಕಾಣದೆ ಅವತ್ತಿನ ಗುಂಡೂರಾವ್ ಸರಕಾರ ಪ್ರತಿಭಟನಾಕಾರರನ್ನು ಕರೆಸಿ ಮಾತನಾಡಿ ಎಲ್ಲ ಬೇಡಿಕೆಗಳನ್ನೂ ಈಡೇರಿಸಿತು. ಪ್ರತಿ ತಾಲೂಕಿಗೆ ಕೋಟಿಯಂತೆ ಹಣ ಬಿಡುಗಡೆ ಮಾಡಿತು. ಸರಕಾರವೇ ಬೆಲೆ ನೀಡಿ ಹತ್ತಿ ಮತ್ತು ಮುಸುಕಿನ ಜೋಳ ಖರೀದಿಸಿತು. ಸಾಲ ನೀಡುವುದನ್ನು ನಿಲ್ಲಿಸಿದ್ದ ಬ್ಯಾಂಕುಗಳು ಮತ್ತೆ ಸಾಲ ನೀಡಿದವು.

ಹೋರಾಟದ ಇತಿಹಾಸ:

ನರಗುಂದ ಮತ್ತು ನವಲಗುಂದದ ಹೋರಾಟದ ಇತಿಹಾಸ ಕೆದಕಿದರೆ ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿ ಪ್ರತಿಭಟನೆಗಳು ಹುಟ್ಟಿಕೊಂಡಿದ್ದು ಕಾಣಿಸುತ್ತವೆ. ಇಲ್ಲಿನ ಸುತ್ತ ಮುತ್ತಲಿನ ಭಾಗಗಳು ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದವು. ಹೋರಾಟ ಅಲ್ಲಿನ ಜನರ ರಕ್ತದಲ್ಲಿಯೇ ಬಂದ ಹಾಗೆ.

ಸ್ವಾತಂತ್ರ್ಯ ಪೂರ್ವದಲ್ಲಿ ನರಗುಂದ ಎಂಬ ಸಣ್ಣ ಪ್ರಾಂತ್ಯವನ್ನು ಆಳುತ್ತಿದ್ದವನು ನರಗುಂದದ ಬಾಬಾ ಸಾಹೇಬ. ಸಣ್ಣ ಪಾಳೆಪಟ್ಟು ರಾಜ ಈತ. ದತ್ತು ಸ್ವೀಕಾರ ಮಾಡುವಂತಿಲ್ಲ ಎಂಬ ಕಾರಣ ನೀಡಿ  ಕಿತ್ತೂರನ್ನು ಬ್ರಿಟೀಷರು ವಶಕ್ಕೆ ಪಡೆದ 10 ವರ್ಷಗಳ ನಂತರ ಅದೇ ಫರ್ಮಾನನ್ನು ಬ್ರಿಟೀಷರು ಬಾಬಾ ಸಾಹೇಬನ ವಿರುದ್ಧವೂ ಹೊರಡಿಸಿದರು. ಆತನಿಗೂ ಮಕ್ಕಳಿರಲಿಲ್ಲ.

ನರಗುಂದಲ್ಲಿರುವ ಬಾಬಾ ಸಾಹೇಬ್ ಕಂಚಿನ ಪುತ್ಥಳಿ.

ನರಗುಂದಲ್ಲಿರುವ ಬಾಬಾ ಸಾಹೇಬ್ ಕಂಚಿನ ಪುತ್ಥಳಿ.

1840ರ ಆಸು ಪಾಸಿನಲ್ಲಿ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಬಂದ ಬಂದ ಬ್ರಿಟಿಷ್ ಅಧಿಕಾರಿಯ ರುಂಡ ಚೆಂಡಾಡಿ  ಊರಿನ ಬಾಗಿಲಿಗೆ (ಅಗಸೆ ಬಾಗಿಲು) ತೂಗು ಹಾಕಿದ ಬಾಬಾ ಸಾಹೇಬ. ಕೆಂಪಗಸೆ ಹೆಸರಿನಲ್ಲಿ ಈ ಬಾಗಿಲು ನರಗುಂದದಲ್ಲಿ ಇವತ್ತಿಗೂ ಇದೆ. ಇದಾದ ನಂತರ ಬೆಳಗಾವಿಯಿಂದ ತನ್ನ ಸೈನ್ಯ ಸಮೇತ ಬಂದ ಬ್ರಿಟಿಷರು ಬಾಬಾ ಸಾಹೇಬ ಪ್ರದೇಶಗಳನ್ನು ಕೈವಶ ಮಾಡಿಕೊಂಡಿದ್ದರು.

ಇದಾದ ನಂತರ ಇಲ್ಲಿ ನಿರಂತರ ಸ್ವಾತಂತ್ರ್ಯ ಹೋರಾಟ ಜಾರಿಯಲ್ಲಿತ್ತು. ಸುತ್ತ ಮುತ್ತಲಿನ ಬೈಲ ಹೊಂಗಲ, ಕಿತ್ತೂರು, ರಾಮದುರ್ಗ, ಸವದತ್ತಿಗಳೂ ಇವುಗಳ ಜತೆ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದವು. 1920ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದಾಗ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಬೆಂಬಲ ಸೂಚಿಸಿ ಸತ್ಯಾಗ್ರಹಕ್ಕೆ ಧುಮುಕಿದರು. ಮುಂದೆ 1930ರ ಜನವರಿ 26ರಂದು ದೇಶದಾದ್ಯಂತ ಧ್ವಜ ದಿನಾಚರಣೆ ಆರಂಭಿಸಿದಾಗಲೂ ನರಗುಂದ ನವಲಗುಂದದಲ್ಲೆಲ್ಲಾ ಪ್ರತಿಭಟನಾರ್ಥವಾಗಿ ಎಲ್ಲೆಲ್ಲೂ ಧ್ವಜಗಳು ಹಾರಾಡಿದ್ದವು.

1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿಯೂ ನರಗುಂದ ಮತ್ತು ನವಲಗುಂದ ಹಾಗೂ ಸುತ್ತ ಮುತ್ತಲ ಹಳ್ಳಿಗಳು ಹೋರಾಟದ ಮುಮಚೂಣಿಯಲ್ಲಿದ್ದವು. ಸ್ವಾತಂತ್ರ್ಯ ಹೋರಾಟದ ಸಂದರ್ಭ ಹಲವು ಬಾರಿ ಇಲ್ಲಿ ಗೋಲಿಬಾರ್ ಕೂಡಾ ನಡೆದಿದೆ. ಆದರೆ ಯಾವ ಗುಂಡಿನ ದಾಳಿಗೂ ಜಗ್ಗದೇ  ಹೋರಾಟವನ್ನೇ ಮೈದಾಳಿಕೊಂಡ ಬಂದ ಊರಿದು.

ಕಳಸಾ ಬಂಡೂರಿಗೆ ಕಿಚ್ಚು: 

ಕಳೆದ ಆರೇಳು ವರ್ಷಗಳಿಂದ ನರಗುಂದ ನವಲಗುಂದ ಸುತ್ತ ಮುತ್ತ ನೀರಿನ ಕೊರತೆ ಕಾಣಿಸಿಕೊಳ್ಳಲಾರಂಭಿಸಿತು. ಮಲಪ್ರಭೆಗೆ ನದಿಗೆ ಕಟ್ಟಿದ ನವಿಲು ತೀರ್ಥದ ಅಣೆಕಟ್ಟಿನ ನೀರು ಇಲ್ಲಿನ ಕೃಷಿಗೆ ಸಾಲುತ್ತಿರಲಿಲ್ಲ. ಕೆಲವು ನಾಲೆಗಳಲ್ಲಂತೂ ಒಮ್ಮೆಯೂ ನೀರೂ ಹರಿದಿರಲಿಲ್ಲ.

2015ರ ಹೊತ್ತಿಗೆ ಭೀಕರ ಬರೆಗಾಲ ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಿತು. ಅದರ ಪರಿಣಾಮ ನರಗುಂದ ಮತ್ತು ನವಲಗುಂದದಲ್ಲಿ ತೀವ್ರವಾಗಿತ್ತು. ಇನ್ನು ನೀರು ಹರಿಯದೇ ಕೃಷಿ ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡ ಇಲ್ಲಿನ ಜನ, ಹಳೆಯ ಹೋರಾಟದ ಇತಿಹಾಸ ಬೆನ್ನಿಗಿಟ್ಟುಕೊಂಡು 2015, ಜುಲೈ 16ರಂದು ಪ್ರತಿಭಟನೆ ಶುರುವಿಟ್ಟುಕೊಂಡರು. ಮತ್ತೆ ನರಗುಂದ ಸಿಡಿಯಿತು. ಚಳವಳಿಯ ಮೂಲ ನರಗುಂದವಾದರೆ ಹುಬ್ಬಳ್ಳಿ ಚಳವಳಿ ಕೇಂದ್ರವಾಯಿತು. ನವಲಗುಂದ, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳ ಒಂಬತ್ತು ತಾಲೂಕುಗಳ ಉದ್ದಗಲಕ್ಕೂ ಚಳವಳಿಯ ಕಾವು ಹರಡಿತು.

ಅಲ್ಲಿಂದ ಆರಂಭವಾದ ಮಹದಾಯಿ ಹೋರಾಟದ ಕಾವು ಈಗ ಮುಖ್ಯವಾಹಿನಿಗೂ ತಟ್ಟಿದೆ. ಈ ಸಮಯದಲ್ಲಿ ನರಗುಂದ ಮತ್ತು ನವಲುಗುಂದಗಳ ಹೆಸರು ಪದೇ ಪದೇ ಕೇಳಿಬರುತ್ತಿದೆ. ಅವುಗಳಿಗಿರುವ ಈ ಹಿನ್ನೆಲೆಯನ್ನು ನೋಡಿದರೆ, ರೈತ ಹೋರಾಟದ ಪರಂಪರೆ ಮುಂದುವರಿಕೆಯ ಭಾಗದಂತೆ ಇವತ್ತಿನ ದಿನಗಳು ಕಾಣಿಸುತ್ತಿವೆ.

Leave a comment

FOOT PRINT

Top