An unconventional News Portal.

ಕುಂಭದ್ರೋಣ ಮಳೆಗೆ 100 ಕ್ಕೂ ಹೆಚ್ಚು ಬಲಿ

ಕುಂಭದ್ರೋಣ ಮಳೆಗೆ 100 ಕ್ಕೂ ಹೆಚ್ಚು ಬಲಿ

ಉತ್ತರ ಭಾರತ ಸುತ್ತ ಮುತ್ತ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ನೆರೆಯ ರಾಷ್ಟ್ರ ನೇಪಾಳದಲ್ಲಿ ಪ್ರವಾಹದಿಂದಾಗಿ ಹೆಚ್ಚಿನ ಸಾವು ನೋವು ಸಂಭವಿಸಿದ್ದರೆ, ಬಿಹಾರ ಮತ್ತು ಅಸ್ಸಾಂನಲ್ಲಿಯೂ ಜನ ಮಳೆಯಿಂದಾಗಿ ತತ್ತರಿಸಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಹಲವು ಪ್ರದೇಶಗಳು ಜಲಾವೃತವಾಗಿವೆ. ಬ್ರಹ್ಮಪುತ್ರ ಸೇರಿದಂತೆ ನದಿಗಳೂ ತುಂಬಿ ಹರಿಯುತ್ತಿದ್ದು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಜನ-ಜಾನುವಾರುಗಳ ಜೀವ ಹಾನಿ ಒಂದೆಡೆಯಾದರೆ, ಲೆಕ್ಕವಿಲ್ಲದಷ್ಟು ಬೆಳೆ ಹಾನಿ, ಆಸ್ತಿ ಹಾನಿ ಸಂಭವಿಸಿದೆ.

ನೇಪಾಳದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು ಪ್ರವಾಹ ಮತ್ತು ಭೂ ಕುಸಿತಕ್ಕೆ 75ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ನೆರೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಲವಾರು ಜನರನ್ನು ರಕ್ಷಿಸಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅಲ್ಲಿನ ಸೇನೆ ಗ್ರಾಮಗಳಿಂದ ಜನರನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸುವಲ್ಲಿ ನಿರತವಾಗಿದೆ.

ಬಿಹಾರದಲ್ಲಿಯೂ ಇದೇ ರೀತಿಯ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಈವರೆಗೆ 22 ಜನ ಸಾವನ್ನಪ್ಪಿದ್ದರೆ ಸುಮಾರು 10 ಲಕ್ಷ ಜನ ಮಳೆಯಿಂದಾಗಿ ತೊಂದರೆಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಬಿಹಾರ ಸರಕಾರ ಜನರನ್ನು ಎತ್ತರದ ಪ್ರದೇಶಗಳಿಗೆ ಕಳುಹಿಸುತ್ತಿದೆ.

ಈಶಾನ್ಯ ರಾಜ್ಯ ಅಸ್ಸಾಂನಲ್ಲಿಯೂ ನಿರಂತರ ಮಳೆ ಸುರಿಯುತ್ತಿದ್ದು ಅಲ್ಲಿಯೂ 16ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸುಮಾರು 16 ಲಕ್ಷ ಜನ ಇಲ್ಲಿ ತೊಂದರೆಗೆ ಒಳಗಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ 472 ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.

ಗದ್ದೆಗಳು, ಕೃಷಿ ಭೂಮಿ ಮರ್ತು ಸಂಪರ್ಕ ರಸ್ತೆಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಇಲ್ಲಿನ ಅಭಯಾರಣ್ಯಗಳಲ್ಲಿರುವ ಪ್ರಾಣಿಗಳು ಎತ್ತರದ ಸ್ಥಳಗಳಿಗೆ ಹೋಗಿ ಜೀವ ಉಳಿಸಿಕೊಳ್ಳುತ್ತಿವೆ.

ಅಸ್ಸಾಂನ ಜೀವನದಿ ಬ್ರಹ್ಮಪುತ್ರ ತನ್ನ ಮಟ್ಟವನ್ನು ಮೀರಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಮಣ್ಣು ಕೊಚ್ಚಿ ಹೋಗಿದೆ. ಇದೇ ನದಿ ಬಾಂಗ್ಲಾದೇಶದ ಕುರಿಗ್ರಾಮ ಮತ್ತು ಜಮಲ್ಪುರ್ ಜಿಲ್ಲೆಗಳನ್ನೂ ನೀರಿನಲ್ಲಿ ಮುಳುಗಿಸಿದೆ. ಇಲ್ಲಿಯೂ ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದು ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಪಾಕಿಸ್ತಾನದಲ್ಲಿಯೂ ಮಳೆ ಹಾನಿ ಉಂಟು ಮಾಡಿದ್ದು ಖೈಬರ್, ಪಂಖ್ತುಂಕ್ವಾ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ 22 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಪತ್ರಿಕೆ ‘ಡಾನ್’ ವರದಿ ಮಾಡಿದೆ.

ಗುರ್ಗಾಂವ್ ದೆಹಲಿ ಟ್ರಾಫಿಕ್ ಜಾಂ

ಇದೇ ವೇಳೆ ಮಳೆಯಿಂದಾಗಿ ಹರಿಯಾಣದ ಗುರ್ಗಾಂವ್ ಮತ್ತು ದೆಹಲಿ ನಡುವಿನ ರಾಷ್ಟ್ರೀಯ ಹೆದ್ದಾರಿ-8 ಜಲಾವೃತವಾಗಿದ್ದು ಗುರುವಾರ ಸಾವಿರಾರು ವಾಹನಗಳು ರಸ್ತೆಯಲ್ಲೇ ಕಾಲ ಕಳೆಯುವಂತಾಯಿತು. ಮಳೆ ಮತ್ತು ಟ್ರಾಫಿಕ್ ಜಾಂ ಹಿನ್ನಲೆಯಲ್ಲಿ ಗುರ್ಗಾಂವಿಗೆ ಬರಬೇಡಿ ಎಂದು ಅಲ್ಲಿನ ಪೊಲೀಸರೇ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ಮಳೆ ಪೀಡಿತ ಗುರ್ಗಾಂವ್ ರಸ್ತೆ ವೀಕ್ಷಣೆಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಇಂದು ಆಗಮಿಸುವ ನಿರೀಕ್ಷೆ ಇದೆ.

Leave a comment

FOOT PRINT

Top