An unconventional News Portal.

‘ಮಹದಾಯಿ ವಿವಾದ’: ಕರ್ನಾಟಕದ ಮಧ್ಯಂತರ ಅರ್ಜಿ ಸಲ್ಲಿಕೆಗೆ ವಿರೋಧ ವ್ಯಕ್ತಪಡಿಸಿದ್ದರಾ ನಾರಿಮನ್?

‘ಮಹದಾಯಿ ವಿವಾದ’: ಕರ್ನಾಟಕದ ಮಧ್ಯಂತರ ಅರ್ಜಿ ಸಲ್ಲಿಕೆಗೆ ವಿರೋಧ ವ್ಯಕ್ತಪಡಿಸಿದ್ದರಾ ನಾರಿಮನ್?

ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸುವಲ್ಲೇ ಎಡವಟ್ಟು ಮಾಡಿಕೊಂಡಿತಾ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಬಂದಿದೆ.

ನ್ಯಾಯಾಧಿರಣದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಲು ಸ್ವತಃ ಕರ್ನಾಟಕ ಪರ ವಕೀಲ ನಾರಿಮನ್ ವಿರೋಧ ವ್ಯಕ್ತ ಪಡಿಸಿದ್ದರು ಎಂಬ ಮಾಹಿತಿ ಮುಖ್ಯಮಂತ್ರಿ ಕಚೇರಿ ಮೂಲಗಳಿಂದ ತಿಳಿದು ಬಂದಿದೆ. ತಾನಾಗಿಯೇ ಅರ್ಜಿ ಸಲ್ಲಿಸಿ, ತಿರಸ್ಕೃತಗೊಂಡು,  ಅನಗತ್ಯ ವಿವಾದವೊಂದನ್ನು ಕರ್ನಾಟಕ ಸರಕಾರ ಮೈಮೇಲೆ ಎಳೆದುಕೊಂಡಂತಾಗಿದೆ ಪರಿಸ್ಥಿತಿ. ಉತ್ತರ ಕರ್ನಾಟಕ ಉದ್ವಿಗ್ನವಾಗಲು ಪ್ರಮುಖ ಕಾರಣವಾಗಿದೆ.

ಹಿನ್ನೆಲೆ: 

ಕರ್ನಾಟಕ ಮತ್ತು ಗೋವಾ ಜಲವಿವಾದ ನ್ಯಾಯಾಧಿಕರಣದಲ್ಲಿದ್ದಾಗಲೇ, 2015ರಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿಕೊಂಡಿತು. ಇದರಿಂದ ರೊಚ್ಚಿಗೆದ್ದ ಜನ ‘ಕಳಸಾ ಬಂಡೂರಿ ಯೋಜನೆ’ ಜಾರಿಗೆ ಒತ್ತಾಯಿಸಿ ಬೀದಿಗಿಳಿದರು. ಎಲ್ಲೆಲ್ಲೂ ಪ್ರತಿಭಟನೆಗಳು ಹುಟ್ಟಿಕೊಂಡವು. ತೀವ್ರ ಪ್ರತಿರೋಧದಿಂದ ಕಂಗೆಟ್ಟ ರಾಜ್ಯ ಸರ್ಕಾರ ಕೊನೆಗೆ ಸರ್ವಪಕ್ಷ ಸಭೆ ಕರೆದು ನ್ಯಾಯಾಧಿಕರಣದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸುವ ನಿರ್ಧಾರಕ್ಕೆ ಬಂತು.

ಆಗ ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಸರ್ವ ಪಕ್ಷಗಳ ನಿಯೋಗ ದೆಹಲಿಯಲ್ಲಿ ಫಾಲಿ ಎಸ್ ನಾರಿಮನ್ ಅವರನ್ನು ಭೇಟಿಯಾಗಿ ಮಧ್ಯಂತರ ಅರ್ಜಿ ಸಲ್ಲಿಸುವಂತೆ ಕೋರಿಕೊಂಡಿತು. ನಾರಿಮನ್ ಆಗ ಕರ್ನಾಟಕವನ್ನು ನ್ಯಾಯಾಧಿಕರಣದಲ್ಲಿ ಪ್ರತಿನಿಧಿಸುತ್ತಿದ್ದರು. ಕೋರಿಕೆ ಪರಿಶೀಲಿಸಿದ ನಾರಿಮನ್ ಮಧ್ಯಂತರ ಅರ್ಜಿ ಸಲ್ಲಿಸುವುದು ಬೇಡ ಎಂದು ಕರ್ನಾಟಕದ ನಿಯೋಗಕ್ಕೆ ಸಲಹೆ ನೀಡಿದರು. ಆದರೆ ಹೊರಗೆ ನಡೆಯುತ್ತಿದ್ದ ಪ್ರತಿಭಟನೆ ತಣ್ಣಗಾಗಿಸುವ ಪ್ರಯತ್ನವಾಗಿ ಅರ್ಜಿ ಸಲ್ಲಿಸಲು ಒತ್ತಾಯ ಮಾಡಿದಾಗ ಕೊನೆಗೆ ನಾರಿಮನ್ ಕೇವಲ 7.56 ಟಿಎಂಸಿ ಕುಡಿಯುವ ನೀರಿಗಾಗಿ ಮಾತ್ರ ಬೇಡಿಕೆ ಇಟ್ಟು ಅರ್ಜಿ ಸಲ್ಲಿಸುವುದಕ್ಕೆ ಒಪ್ಪಿಕೊಂಡರು. ಅದರಂತೆ 2015, ನವೆಂಬರ್ 11 ರಂದು ರಾಜ್ಯ ಸರ್ಕಾರದಿಂದ ಮಹದಾಯಿ ನ್ಯಾಯಾಧಿಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಕೆಯಾಯಿತು.

ತಿರಸ್ಕೃತಗೊಂಡ ಅರ್ಜಿ:

ಆದರೆ ಇದೀಗ ಬುಧವಾರ ಮಧ್ಯಂತರ ಅರ್ಜಿಯನ್ನು ವಿಚಾರಣೆಗೂ ಕೈಗೆತ್ತಿಕೊಳ್ಳದೇ ತಿರಸ್ಕರಿಸಿ ನ್ಯಾಯಾಧಿಕರಣ ಆದೇಶ ನೀಡಿದೆ. ಇದರ ಬೆನ್ನಲ್ಲೇ ಉತ್ತರ ಕರ್ನಾಟಕದಲ್ಲಿ ಪ್ರತಿಭಟನೆಗಳು ಹುಟ್ಟಿಕೊಂಡಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ. ಅವತ್ತೇ ನಾರಿಮನ್ ಮಾತು ಕೇಳಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ವಾದಗಳು ಇದೀಗ ಹುಟ್ಟಿಕೊಂಡಿವೆ.

ಇನ್ನೊಂದು ಕಡೆ ಈ ಹೋರಾಟ ಕೇವಲ ಮಧ್ಯಂತರ ತೀರ್ಪಿಗಾಗಿ ನಡೆಯುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಕರ್ನಾಟಕದ ಮಧ್ಯಂತರ ಬೇಡಿಕೆಯನ್ನು ತಿರಸ್ಕರಿಸಿರುವುದರಿಂದ ಅಂತಿಮ ತೀರ್ಪು ಹತ್ತಿರದಲ್ಲೇ ಇರುವ ಸಾಧ್ಯತೆ ಇದೆ. ಈಗಾಗಲೇ ನ್ಯಾಯಾಧಿಕರಣ ರಚನೆಯಾಗಿ 6 ವರ್ಷಗಳೂ ಕಳೆದಿವೆ. ಮುಂದೆ ಬರಲಿರುವ ಅಂತಿಮ ತೀರ್ಪು, ಮಧ್ಯಂತರ ಅರ್ಜಿ ತಿರಸ್ಕರಿಸುವ ಮೂಲಕ ದಿಕ್ಸೂಚಿಯೊಂದು ಸಿಕ್ಕಿದೆ. ಈ ಕಾರಣಕ್ಕೆ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹೀಗಾಗಿ ಎಲ್ಲರೂ ಅಂತಿಮ ತೀರ್ಪನ್ನು ಎದುರು ನೀಡುತ್ತಿದ್ದಾರೆ.

ಉಳಿದಿರುವ ಪರಿಹಾರವೇನು?

ಸಿದ್ಧರಾಮಯ್ಯನವರು ಹೇಳಿರುವಂತೆ ಸದ್ಯ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಬೇಕಾಗಿದೆ. ಕಾಂಗ್ರೆಸಿಗರು ಗೋವಾದ ಕಾಂಗ್ರೆಸಿಗರ ಜೊತೆ ಮಾತುಕತೆ ಮಾಡುಬೇಕು, ಬಿಜೆಪಿಯವರು ಗೋವಾ ಬಿಜೆಪಿಯವರನ್ನು ಒಪ್ಪಿಸಬೇಕು ಎಂಬ ರಾಜಕೀಯ ಕಾರಣಗಳ್ನು ಬದಿಗೊತ್ತಬೇಕಾಗಿದೆ. ಬದಲಿಗೆ ಬಿಜೆಪಿ ಹೈಕಮಾಂಡ್ ಮೂಲಕ ಗೋವಾ ಮುಖ್ಯಮಂತ್ರಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹರಿಸಲು ಯತ್ನಿಸಬೇಕಾಗಿದೆ.

ಎಲ್ಲಾ ವಿಚಾರದಲ್ಲೂ ತನ್ನದೇ ಆದ ವಿಶಿಷ್ಟ ನಿರ್ಧಾರ ಕೈಗೊಳ್ಳುವ, ಸಾಂಪ್ರದಾಯಿಕತೆಗಿಂತ ಭಿನ್ನವಾಗಿ ಆಲೋಚಿಸುವ ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲೂ ವಿಭಿನ್ನ ಪರಿಹಾರ ಹುಡುಕಿದರೆ ಅದಕ್ಕಿಂತ ಉತ್ತಮ ಪರಿಹಾರ ಬೇರೊಂದಿಲ್ಲ. ಇದನ್ನು ರಾಜ್ಯದ ಜನ ನಿರೀಕ್ಷಿಸುತ್ತಿದ್ದಾರೆ.

ಯಾರು ಈ ಫಾಲಿ ಸ್ಯಾಮ್ ನಾರಿಮನ್?

ಫಾಲಿ ಎಸ್ ನಾರಿಮನ್ (ಚಿತ್ರ: ಔಟ್ಲುಕ್)

ಫಾಲಿ ಎಸ್ ನಾರಿಮನ್ (ಚಿತ್ರ: ಔಟ್ಲುಕ್)

ಫಾಲಿ ಸ್ಯಾಮ್ ನಾರಿಮನ್ ದೇಶದ ಪ್ರಖ್ಯಾತ ಸಂವಿಧಾನ ತಜ್ಞರು ಮತ್ತು ನದಿ ನೀರಿನ ಹಂಚಿಕೆಯ ವಿವಾದಗಳಲ್ಲಿ ದೇಶದಲ್ಲಿರುವ ಕೆಲವೇ ಕೆಲವು ಪ್ರಮುಖರಲ್ಲಿ ಒಬ್ಬರು. ಸದ್ಯ 87ರ ಇಳಿ ವಯಸ್ಸಲ್ಲಿರುವ ನಾರಿಮನ್ ರದ್ದು 5 ದಶಕಗಳಿಗೂ ಹೆಚ್ಚಿನ ನ್ಯಾಯಾಂಗ ವ್ಯವಸ್ಥೆಯೊಳಗಿನ ಅನುಭವ. ಇವತ್ತು ಇವರೇನಾದರೂ ಒಂದು ವಿಚಾರಣೆಗೆ ಹಾಜರಾಗಬೇಕಾದರೆ 8-15 ಲಕ್ಷ ಪಾವತಿಸಬೇಕು. ಅಷ್ಟರ ಮಟ್ಟಿಗೆ ಇವತ್ತಿಗೂ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ.

ಕರ್ನಾಟಕದ ವಿವಾದಗಳಿಗೂ ನಾರಿಮನ್ ಗೂ ವಿಶೇಷ ಸಂಬಂಧ. ಕರ್ನಾಟಕ ಮಹಾರಾಷ್ಟ್ರದ ನಡೆಯುತ್ತಿದ್ದ ಬೆಳಗಾವಿ ಗಡಿ ವಿವಾದದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದವರು ನಾರಿಮನ್. ಇವರ ತಂಡದಲ್ಲಿ ಹಿರಿಯ ನ್ಯಾಯವಾದಿಗಳಾದ ಮೋಹನ್‌ ಕಾತರಕಿ, ಮಧುಸೂದನ್‌ ನಾಯಕ್‌, ಎಂ.ಬಿ. ಝಿರಲಿ, ನಿಶಾಂತ ಪಾಟೀಲ ಮೊದಲಾದವರಿದ್ದಾರೆ.

ಕಾವೇರಿ ನೀರಿನ ಹಂಚಿಕೆ ಪ್ರಕರಣ ನ್ಯಾಯಾಧಿಕರಣದ ಮೆಟ್ಟಿಲು ಹತ್ತಿದಾಗ ಅಲ್ಲೂ ರಾಜ್ಯದ ಪರವಾಗಿ ವಾದ ಹೂಡಿದ್ದರು. ಆಗ ಕರ್ನಾಟಕ ಸರಕಾರ ಅವರಿಗೆ 2.08 ಕೋಟಿ ಹಣ ಪಾವತಿಸಿತ್ತು.

ನಾರಿಮನ್ ಪುತ್ರ ರೋಹಿನ್ಟನ್‌ ನಾರಿಮನ್‌ ಕೂಡಾ ನ್ಯಾಯಾಂಗ ವೃತ್ತಿಯಲ್ಲಿದ್ದು ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್‌ ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಇವರು ಸುಪ್ರಿಂ ಕೋರ್ಟ್ ನ್ಯಾಯಾಧೀಶರಾಗಿದ್ದಾರೆ.

ಈಗಿನ ಮಯನ್ಮಾರಿನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ ನಾರಿಮನ್ ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಹಲವಾರು ಪ್ರಖ್ಯಾತ ಪ್ರಕರಣಗಳಲ್ಲಿ ವಾದ ಮಂಡಿಸಿದವರು. 1991ರಿಂದ ಇಂದಿಗೂ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷರಾಗಿರುವ ಇವರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1972 ರಿಂದ 1975ರವರೆಗೆ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿದ್ದರು. ಆದರೆ ಶ್ರೀಮತಿ ಗಾಂಧಿ ‘ತುರ್ತು ಪರಿಸ್ಥಿತಿ’ ಘೋಷಿಸಿದಾಗ ರಾಜೀನಾಮೆ ನೀಡಿ ಹೊರ ನಡೆದಿದ್ದರು.

ಇವರ ನ್ಯಾಯಾಂಗ ಸೇವೆಗೆ ಹಲವು ಪುರಸ್ಕಾರ ಗೌರವಗಳು ಸಂದಿವೆ. 1991ರಲ್ಲಿ ಪದ್ಮ ಭೂಷಣ ಮತ್ತು 2007ರಲ್ಲಿ ದೇಶದ ಎರಡನೇ ಅತ್ಯುಚ್ಛ ಪುರಸ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರ ಗೌರವಿಸಿದೆ.

Leave a comment

FOOT PRINT

Top