An unconventional News Portal.

ಹನಿ ಪೆಟ್ರೋಲ್ ಬಳಸದೆ ವಿಮಾನ ಓಡಿಸಿದರು; ವಿಶ್ವಕ್ಕೆ ಸಂದೇಶ ಸಾರಿದರು!

ಹನಿ ಪೆಟ್ರೋಲ್ ಬಳಸದೆ ವಿಮಾನ ಓಡಿಸಿದರು; ವಿಶ್ವಕ್ಕೆ ಸಂದೇಶ ಸಾರಿದರು!

ಬಹುನಿರೀಕ್ಷಿತ ‘ಸೋಲಾರ್ ಇಂಪಲ್ಸ್’ ಮಂಗಳವಾರ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಇಳಿಯುವುದರೊಂದಿಗೆ ವಿಶಿಷ್ಟ ದಾಖಲೆಯೊಂದು ನಿರ್ಮಾಣವಾಯಿತು.

ಬಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬಾರ್ಶ್‍ಬರ್ಗ್ ಹನಿ ಪಟ್ರೋಲನ್ನೂ ಬಳಸದೆ, ಕೇವಲ ಸೂರ್ಯನ ಶಕ್ತಿಯ ಬಳಸಿ ವಿಮಾನದಲ್ಲಿ ವಿಶ್ವಪರ್ಯಟನೆ ಮಾಡಿ ಹುಬ್ಬೇರಿಸುವ ಸಾಧನೆ ಮಾಡಿದರು. 500ಕ್ಕೂ ಹೆಚ್ಚು ದಿನಗಳ 35,400 ಕಿಲೋಮೀಟರುಗಳ ಅವರ ಪಯಣದ ಕತೆ ಇದು.

ಸೂರ್ಯನ ಬೆಳಕಿನಲ್ಲಿ ಕಾರು, ಆಟೋ ರಿಕ್ಷಾಗಳು ಓಡುವುದಾದರೆ; ವಿಮಾನ ಯಾಕೆ ಓಡಾಡಬಾರದು ಎಂದು ಪ್ರಶ್ನೆ ಹಾಕಿಕೊಂಡವರು ಬಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬಾರ್ಶ್‍ಬರ್ಗ್. ಬಾರ್ಶ್‍ಬರ್ಗ್ ಸ್ವಿಡ್ಜರ್ಲಾಂಡಿನ ಖ್ಯಾತ ಉದ್ಯಮಿ ಮತ್ತು ಎಂಜಿನಿಯರ್. ಪಿಕಾರ್ಡ್ ಮನೋವೈದ್ಯ ಹಾಗೂ ಗಗನಯಾನಿ. ಇವರಿಬ್ಬರು ‘ಸೋಲಾರ್ ಇಂಪಲ್ಸ್’ ಹೆಸರಿನ ವಿಮಾನದಲ್ಲಿ ವಿಶ್ವ ಸುತ್ತಲು ಹೊರಟಾಗ ಸ್ವಿಡ್ಜರ್‍ಲ್ಯಾಂಡ್‍ನ ಖಾಸಗಿ ತಂತ್ರಜ್ಞಾನ ಸಂಸ್ಥೆಗಳು ಬೆನ್ನಿಗೆ ನಿಂತವು. ಅವುಗಳ ನೆರವಿನೊಂದಿಗೆ ಇವರೀಗ ವಿಶ್ವ ಪರ್ಯಟನೆ ಮಾಡಿ ಮುಗಿಸಿದ್ದಾರೆ.

ಇವರು ವಿಶ್ವ ಸುತ್ತಲು ಹೊರಟಾಗ ‘ಸೋಲಾರ್ ಇಂಪಲ್ಸ್’ ಯೋಜನೆಯಡಿಯಲ್ಲಿ ಸೋಲಾರ್ ಇಂಪಲ್ಸ್-1 ಮತ್ತು 2 ಎಂಬ ಎರಡು ಹಗುರ ವಿಮಾನಗಳನ್ನು ತಯಾರಿಸಲಾಯಿತು. ಇದರಲ್ಲಿ ಸೋಲಾರ್ ಇಂಪಲ್ಸ್ -2 ವಿಮಾನವನ್ನು ಇವರಿಬ್ಬರು ಸಾಹಸಕ್ಕೆ ಆಯ್ಕೆ ಮಾಡಿಕೊಂಡರು. ಸುಮಾರು ಒಂದೂವರೆ ವರ್ಷಗಳ ಕಾಲ, ಹನ್ನೆರಡು ಹಂತಗಳಲ್ಲಿ ಸೂರ್ಯನ ಬೆಳಕನ್ನೇ ಬಳಸಿಕೊಂಡು ಜಗತ್ತು ಸುತ್ತುವ ಅಸಾಧಾರಣ ಯೋಜನೆ ಹಾಕಿಕೊಂಡರು. ಯುಎಇನ ಅಬುಧಾಬಿಯಿಂದ ಹೊರಟು ಮತ್ತೆ ಅಬುಧಾಬಿಗೆ ಹಿಂದುರುಗುವ ಯೋಜನೆ ಹಾಕಿ ಯಾತ್ರೆ ಆರಂಭಿಸಿದರು. ಅವತ್ತು ಅವರ ಮುಂದೆ ಬೃಹತ್ ಸವಾಲಿತ್ತು.

solar-impulse-2-takeoff

ವಾರಣಾಸಿಯಲ್ಲಿ ಸೋಲಾರ್ ಇಂಪಲ್ಸ್ -2

2015, ಮಾರ್ಚ್ 9.. ಆಂಡ್ರೆ ಬಾರ್ಶ್‍ಬರ್ಗ್ ಮತ್ತು ಬಟ್ರಾಂಡ್ ಪಿಕಾರ್ಡ್ ಸಾವಿರಾರು ಜನರ ಹಾರೈಕೆಯೊಂದಿಗೆ ಅಬುಧಾಬಿಯಿಂದ ತಮ್ಮ ಸೋಲಾರ್ ಇಂಪಲ್ಸ್-2  ವಿಮಾನವನ್ನು ಟೇಕ್ ಆಫ್ ಮಾಡಿದರು. ಅಲ್ಲಿಂದ 12 ಹಂತಗಳಲ್ಲಿ ವಿಶ್ವದ ಬೇರೆ ಬೇರೆ ಭಾಗಗಳಿಗೆ ಹೋಗಿ ನವೀಕರಿಸಬಹುದಾದ ಇಂಧನಗಳ ಬಗ್ಗೆ ಇವರು ಜಾಗೃತಿ ಉಂಟು ಮಾಡಿದರು. ಹೀಗೆ ಈ ಸೌರ ವಿಮಾನದಲ್ಲಿ ಇವರಿಬ್ಬರು ಕಳೆದ ವರ್ಷ ಭಾರತಕ್ಕೂ ಬಂದಿದ್ದರು. ಅಹಮದಾಬಾದ್ ಮತ್ತು ವಾರಣಾಸಿಯಲ್ಲಿ ಈ ವಿಮಾನ ಇಳಿಸಿ ‘ರಿನ್ಯೂಯೇಬಲ್ ಎನರ್ಜಿ’ ಬಗ್ಗೆ ಪಾಠ ಮಾಡಿ ಹೋಗಿದ್ದರು.

ಇವರು ಯಾತ್ರೆ ಅಂದುಕೊಂಡಂತೆ ಸುಗಮವಾಗಿರಲಿಲ್ಲ. ಮಧ್ಯೆ ಹಲವು ಸಮಸ್ಯೆಗಳು ವಿಮಾನದಲ್ಲಿ ಆಣಿಸಿಕೊಂಡವು. ಬ್ಯಾಟರಿಗಳು ಓವರ್ ಹೀಟ್ ಆಗಿದ್ದರಿಂದ ಅನಿವಾರ್ಯವಾಗಿ ಕೆಲವೆಡೆ ವಿಮಾನ ಇಳಿಸಬೇಕಾಯಿತು. ಆದರೆ ಎಲ್ಲಾ ಎಡರು ತೊಡರುಗಳಲ್ಲಿ ದಾಟಿ ಮಂಗಳವಾರ ಅಬುಧಾಬಿಗೆ ಬಂದಿಳಿಯುವ ಮೂಲಕ ತಮ್ಮ ಜೈತ ಯಾತ್ರೆಯನ್ನು ಪೂರ್ಣಗೊಳಿಸಿದರು.

ವಿಶಿಷ್ಟ ವಿನ್ಯಾಸ

‘ಸೌರ ವಿಮಾನ’ವನ್ನು ವಿಚಿತ್ರವಾಗಿ ವಿನ್ಯಾಸ ಮಾಡಲಾಗಿತ್ತು. ಸೋಲಾರ್ ಪ್ಯಾನಲ್ಗಳನ್ನು ಕೂರಿಸಲು ಅನುಕೂಲವಾಗವಂತೆ ವಿಮಾನದ ರೆಕ್ಕೆಗಳನ್ನು ಸ್ವಲ್ಪ ಉದ್ದವಾಗಿಯೇ ನಿರ್ಮಿಸಲಾಗಿತ್ತು. ಬರೋಬ್ಬರಿ 236 ಅಡಿ ಉದ್ದದ ರೆಕ್ಕೆ ಇದರಲ್ಲಿದೆ. ವಿಚಿತ್ರ ಅಂದ್ರೆ ಬೋಯಿಂಗ್ 787 ವಿಮಾನದ ರೆಕ್ಕೆಯೂ ಇಷ್ಟೇ ಉದ್ದವಿದೆ. ಬೋಯಿಂಗ್ 1000 ಪ್ರಯಾಣಿಕರನ್ನು ಹೊತ್ತೊಯ್ದರೆ ಈ ವಿಮಾನದಲ್ಲಿ ಇಬ್ಬರಷ್ಟೇ ಪ್ರಯಾಣಿಸಬಹುದಾಗಿತ್ತು.

'ಸೋಲಾರ್ ಇಂಪಲ್ಸ್-2'ರ ಯಾತ್ರೆ ಹೀಗಿತ್ತು. (ಚಿತ್ರ: ಸಿಎನ್ಎನ್)

‘ಸೋಲಾರ್ ಇಂಪಲ್ಸ್-2’ರ ಯಾತ್ರೆ ಹೀಗಿತ್ತು. (ಚಿತ್ರ: ಸಿಎನ್ಎನ್)

ಹಗುರವಾಗಿರಬೇಕು ಎಂಬ ಒಂದೇ ಕಾರಣಕ್ಕೆ ಕಾರ್ಬನ್ ಫೈಬರ್ ಬಳಸಿ ಇಡೀ ವಿಮಾನವನ್ನು 2300 ಕೆಜಿ ತೂಗುವಂತೆ ನಿರ್ಮಾಣ ಮಾಡಲಾಗಿತ್ತು. ರೆಕ್ಕೆಯ ಮೇಲೆ 17,248 ಸೋಲಾರ್ ಸೆಲ್‍ಗಳು ಅಳವಡಿಸಿ, ರಾತ್ರಿ ಹೊತ್ತು ಸಂಚರಿಸಲು ವಿದ್ಯುತ್ತನ್ನು ಲೀಥಿಯಮ್ ಬ್ಯಾಟರಿಗಳಲ್ಲಿ ಶೇಖರಿಸಿಡುವಂತೆ ವ್ಯವಸ್ಥೆ ಇದರಲ್ಲಿತ್ತು. ಈ ಬ್ಯಾಟರಿಗಳೇ 942 ಕೆಜಿ ತೂಗುತ್ತಿದ್ದವು. ಸೋಲಾರ್ ಶಕ್ತಿಯ ಕಾರಣಕ್ಕೆ ಗಂಟೆಗೆ ಸುಮಾರು 50ರಿಂದ 160 ಕಿಲೋಮೀಟರ್ ವೇಗದಲ್ಲಷ್ಟೇ ಇದು ಹಾರಾಟ ನಡೆಸುತ್ತಿತ್ತು. ಹಗಲು ವಿಮಾನ ವೇಗವಾಗಿ ಚಲಿಸಿ, ಬ್ಯಾಟರಿಯಲ್ಲಿ ರಾತ್ರಿ ಹೊತ್ತು ವಿಮಾನದ ವೇಗವನ್ನು ಪೂರ್ತಿ ತಗ್ಗಿಸಲಾಗುತ್ತಿತ್ತು.

ಬಟ್ರಾಂಡ್ ಮತ್ತು ಬ್ಯಾಶ್ ಬರ್ಗ್ ಪಾಳಿಯ ಮೇಲೆ ಈ ವಿಮಾನ ಚಲಾಯಿಸಿ ಜಗತ್ತನ್ನು ಒಂದು ಸುತ್ತು ಬಂದಿದ್ದಾರೆ. ಅವರೇನೂ ವಿಮಾನದಲ್ಲಿ ಆರಾಮವಾಗಿ ಕಾಲ ಕಳೆದಿರಲಿಲ್ಲ. ಹಾಗೆ ನೋಡಿದರೆ ವಿಮಾನದಲ್ಲಿ ಅವರಿಗೆ ರೆಸ್ಟ್ ತೆಗೆದುಕೊಳ್ಳಲು ಪ್ರತ್ಯೇಕ ಕೋಣೆಗಳಾಗಲೀ, ಸ್ಥಳಗಳಾಗಲೀ ಇರಲಿಲ್ಲ. ಪೈಲಟ್ ಸೀಟಿನಲ್ಲೇ ನಿದ್ದೆ, ವಿಶ್ರಾಂತಿ ಎಲ್ಲಾ ತೆಗೆದುಕೊಂಡು 500 ದಿನಕ್ಕಿಂತ ಹೆಚ್ಚು ವಿಮಾನ ನಡೆಸಿ ತಮ್ಮ ಯೋಜನೆ ಪೂರೈಸಿದ್ದಾರೆ. ಇವರಿಗೆ ಸರಿಯಾದ ಮಾರ್ಗದರ್ಶನ ನೀಡಲು 60 ಜನ ಪರಿಣತರ ತಂಡ ಸ್ವಿಡ್ಜರ್‍ಲ್ಯಾಂಡ್‍ನ ಕಂಟ್ರೋಲ್ ರೂಂನಿಂದ ಸದಾ ನಿರ್ದೇಶನಗಳನ್ನು ನೀಡುತ್ತಿರುತ್ತಿತ್ತು.

ವಿಮಾನ ಸಣ್ಣದಾದರೂ 930 ಕೋಟಿ ಸುರಿದು ಹತ್ತು ವರ್ಷಗಳಲ್ಲಿ ಇದನ್ನು ನಿರ್ಮಾಣ ಮಾಡಲಾಗಿತ್ತು. ನವೀಕರಿಸಬಹುದಾದ ಇಂಧನಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲು ಇವರು ಇಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ಅದನ್ನು ರೋಚಕವಾಗಿಯೇ ಮಾಡಿ ಮುಗಿಸಿದರು.

ಚಿತ್ರ ಕೃಪೆ: ಸಿಎನ್ಎನ್

Leave a comment

FOOT PRINT

Top