An unconventional News Portal.

‘ಮನಸು ಮಾತಾಡಿತು’: ಸಿಂಪಲ್ಲಾಗೊಂದು ಬರಹಗಾರ ಕಮ್ ಪ್ರಕಾಶಕರ ಸ್ಟೋರಿ!

‘ಮನಸು ಮಾತಾಡಿತು’: ಸಿಂಪಲ್ಲಾಗೊಂದು ಬರಹಗಾರ ಕಮ್ ಪ್ರಕಾಶಕರ ಸ್ಟೋರಿ!

ಇವತ್ತು ಪತ್ರಕರ್ತರು, ಬರಹಗಾರರಾಗುವ ದಿನಗಳ ಕಳೆದು ಹೋಗಿವೆ ಎಂಬಂತಿರುವ ಪರಿಸ್ಥಿತಿ. ಕರ್ನಾಟಕದಲ್ಲಿ ವಿಶೇಷವಾಗಿ  24 ಗಂಟೆ ನ್ಯೂಸ್ ಚಾನಲ್ಗಳು ಶುರುವಾದ ನಂತರ ಪತ್ರಕರ್ತರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡು ಬಂದಿದೆ. ಕಳೆದ ಒಂದು ದಶಕಗಳ ಅಂತರದಲ್ಲಿ ರಾಜ್ಯ ಹಳ್ಳಿ ಹಳ್ಳಿಗಳಿಂದ, ನಾನಾ ಹಿನ್ನೆಲೆಗಳಿಂದ ಬಂದ ಹಲವರು ಪತ್ರಕರ್ತರಾಗಿದ್ದಾರೆ. ಆದರೆ, ಅವರಲ್ಲಿ ಪತ್ರಿಕೋದ್ಯಮದ ಜತೆಗೇ; ಬರಗರಾರರೋ, ಬರಹಗಾರ್ತಿಯೋ ಆದವರ ಸಂಖ್ಯೆ ಬೆರಳೆಣಿಯಷ್ಟಿದೆ.

ಇಂತಹ ಸಮಯದಲ್ಲಿ ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಕೆಲಸ ಮಾಡಿದ, ಮಾಡುತ್ತಿರುವ ಆರ್. ಮಣಿಕಾಂತ್ ನಮ್ಮ ನಡುವೆ ಇರುವ ಅಪರೂಪದ ಪತ್ರಕರ್ತರು. ಅವರ ಹೊಸ ಪುಸ್ತಕವೊಂದನ್ನು ನೇರವಾಗಿ ಪುಸ್ತಕದ ಮಳಿಗೆಗಳಿಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಪ್ರಕಾಶ್ ರೈ ಕೈಯಲ್ಲಿ ಫಾರ್ಮಾಲಿಟಿಯ ರೂಪದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿಸಿದ್ದಾರೆ. ವಿಶೇಷ ಅಂದರೆ, ಅವರ ಪುಸ್ತಕವನ್ನು ಅವರೇ ಸ್ವತಃ ಪ್ರಕಾಶನ ಮಾಡುತ್ತಿರುವುದು.

ಇವತ್ತು ಸುದೀರ್ಘ ಬರವಣಿಗೆಯೇ ಕಷ್ಟ ಎಂಬಂತಿದೆ ಪರಿಸ್ಥಿತಿ. ಅದರ ನಡುವೆ ತಾವು ಬರೆದದ್ದನ್ನು ತಾವೇ ಪ್ರಕಟಿಸುವುದು ಇನ್ನೊಂದು ದೊಡ್ಡ ಸಾಹಸವೇ ಸರಿ. ಗ್ರಂಥಾಲಯ ಇಲಾಖೆಯ ಕರ್ಮಕಾಂಡಗಳ ಹಿನ್ನೆಲೆ ಗೊತ್ತಿರುವವರಿಗೆ ಪುಸ್ತಕಗಳ ಪ್ರಕಟಣಾ ಕ್ಷೇತ್ರ ಯಾವ ಮಟ್ಟಕ್ಕೆ ಬಂದು ತಲುಪಿದೆ ಎಂಬುದರ ಅರಿವು ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಮಣಿಕಾಂತ್ ತಮ್ಮದೇ ಹಾದಿಯಲ್ಲಿ ಗಟ್ಟಿ ಹೆಜ್ಜೆಗಳನ್ನು ಇಟ್ಟುಕೊಂಡು ಮುಂದುವರಿಯುತ್ತಿದ್ದಾರೆ. ಇದೇ ಗುರುವಾರ ಅವರ ಹೊಸ ಪುಸ್ತಕ ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿಯೂ ಲಭ್ಯವಾಗಲಿದೆ.

ಈ ಹಿನ್ನೆಲೆಯಲ್ಲಿ, ಬರವಣಿಗೆ, ಪ್ರಕಾಶನ ಹಾಗೂ ಹೊಸ ಪುಸ್ತಕದ ಕುರಿತು ಎ. ಆರ್. ಮಣಿಕಾಂತ್ ಅವರೇ ‘ಸಮಾಚಾರ’ ಓದುಗರಿಗಾಗಿ ಬರೆದು ಕಳುಹಿಸಿರುವ ಈ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಓದುಗರ ಹಾರೈಕೆ ಅವರ ಮೇಲಿರಲಿ.

– ಸಮಾಚಾರ ಬಳಗ. 


  • ಎ. ಆರ್. ಮಣಿಕಾಂತ್

manassu-mathadithu-manikanthಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಸಿಗಲಿಲ್ಲ ಅನ್ನುವ ಒಂದೇ ಕಾರಣದಿಂದ; ಹೊಟ್ಟೆ ಪಾಡಿಗಾಗಿ ಪತ್ರಿಕೋದ್ಯಮಕ್ಕೆ ಬಂದವನು ನಾನು. ಮುಂದೆ ನಾನೊಬ್ಬ ಬರಹಗಾರ ಆಗುತ್ತೇನೆ ಅನ್ನುವ ಸಣ್ಣ ನಂಬಿಕೆ ಕೂಡ ನನಗೆ ಇರಲಿಲ್ಲ.

‘ವಿಜಯ ಕರ್ನಾಟಕ’ದ ‘ಸಿಂಪ್ಲಿ ಸಿಟಿ ಪೇಜ್’ ಎಂಬ ಅಪರೂಪದ ಪುಟವನ್ನು ನಿರ್ವಹಿಸಬೇಕಾದಾಗ ನಾನು ಬರೆಯುತ್ತಾ ಹೋದೆ. ಸಂಪಾದಕರು, ಗೆಳೆಯರು, ಓದುಗರು ಅವನ್ನೆಲ್ಲ ಇಷ್ಟಪಟ್ಟರು. ಬರಹಗಳನ್ನು ಸೇರಿಸಿ ಒಂದು ಬುಕ್ ಮಾಡು ಎಂದು ಸಲಹೆ ಕೊಟ್ಟರು. ಮರುದಿನದಿಂದಲೇ ಪ್ರಕಾಶಕರ ಹಿಂದೆ ಬಿದ್ದೆ. ಆ ದಿನಗಳಲ್ಲಿ ಪ್ರಕಾಶಕರ ಸಂಖ್ಯೆ ಕಮ್ಮಿ ಇತ್ತು. ಆದರೆ ಅವರು ಪ್ರಕಟಿಸಲೇಬೇಕಾಗಿದ್ದ ಪುಸ್ತಕಗಳ ಪಟ್ಟಿ ದೊಡ್ಡದಿತ್ತು.

”ಸಾರ್, ಇದೊಂದು ಪುಸ್ತಕ ಪ್ರಕಟಿಸಿ ಸಾರ್,” ಅಂದರೆ, “ಅಯ್ಯೋ, ಇದು ಮಾರಾಟ ಆಗಲ್ಲ ಸಾರ್. ಸೊ ನೀವು ಬೇರೆ ಯಾರನ್ನಾದರೂ ಸಂಪರ್ಕಿಸಿ,” ಅನ್ನುತ್ತಿದ್ದರು. ಬಹಳ ದಿನಗಳು ಕಳೆದರೂ ಯಾರೂ ಪ್ರಕಾಶಕರು ಸಿಕ್ಕದೇ ಹೋಗಿದ್ದರಿಂದ ಅನಿವಾರ್ಯವಾಗಿ- ಶ್ರೀನಿವಾಸ ವೆಂಕಟರಾಮ್ ಅನ್ನುವ ಸಹೃದಯಿ ಹಿರಿಯ ಮಿತ್ರರ ನೆರವು ಪಡೆದು ನನ್ನ ಪುಸ್ತಕವನ್ನು ನಾನೇ ಪ್ರಕಟಿಸಿದೆ. ಪ್ರಕಾಶನಕ್ಕೆ ಒಂದು ಹೆಸರು ಬೇಕು ಅನ್ನಿಸಿದಾಗ, ನನ್ನ ಮಗಳು ನೀಲಿ ಮತ್ತು ಅವಳ ಅಮ್ಮನನ್ನು ನೆನಪಿಸಿಕೊಂಡು ‘ನೀಲಿಮಾ ಪ್ರಕಾಶನ’ ಎಂದು ಹೆಸರಿಟ್ಟೆ. ನಾನು ಒಬ್ಬ ಪ್ರಕಾಶಕ ಆಗಿದ್ದು ಹೀಗೆ.

‘ಈ ಗುಲಾಬಿಯು ನಿನಗಾಗಿ’- ನಮ್ಮ ಪ್ರಕಾಶನದ ಮೊದಲ ಪುಸ್ತಕ. ಆ ನಂತರದಲ್ಲಿ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’, ‘ಅಪ್ಪ ಅಂದ್ರೆ ಆಕಾಶ’, ‘ಹಾಡು ಹುಟ್ಟಿದ ಸಮಯ’, ‘ಭಾವತೀರಯಾನ’ ಪುಸ್ತಕಗಳನ್ನು ಪ್ರಕಟಿಸಿದ್ದೇನೆ . ಇವಿಷ್ಟೂ ನಾನು ಬರೆದ ಪುಸ್ತಕಗಳು. ಇವುಗಳ ಜೊತೆಗೆ ಪ್ರಕಾಶ್ ಹೆಗಡೆ ಅವರ-‘ಇದರ ಹೆಸರು ಇದಲ್ಲ’ ಪುಸ್ತಕವನ್ನೂ ಪ್ರಕಟಿಸಿದ್ದೇನೆ. ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಪುಸ್ತಕದ ೯೭೦೦೦ ಕ್ಕೂ ಹೆಚ್ಚು ಪ್ರತಿಗಳು ಮಾರಾಟ ಆಗಿವೆ.

‘ಭಾವತೀರಯಾನ’ ಪುಸ್ತಕ ೨೫ನೇ ಮುದ್ರಣ ಕಂಡಿದೆ. ನೀಲಿಮಾ ಪ್ರಕಾಶನದ ಪುಸ್ತಕಗಳನ್ನು ವ್ಯಕ್ತಿತ್ವ ವಿಕಸನ ತರಗತಿಗಳಲ್ಲಿ, ಸೆಮಿನಾರ್ ಗಳಲ್ಲಿ ಕೈಪಿಡಿ ಪುಸ್ತಕದ ರೂಪದಲ್ಲಿ ಬಳಸುತ್ತಿದ್ದಾರೆ ಅನ್ನುವುದು ನನ್ನ ಹೆಮ್ಮೆ.

ಈ ತಿಂಗಳು ೨೮ ರಂದು ನನ್ನ ಹೊಸ ಪುಸ್ತಕ – ‘ಮನಸು ಮಾತಾಡಿತು’ ಬಿಡುಗಡೆ ಆಗುತ್ತಿದೆ. ಅತ್ಯುತ್ತಮ ಕ್ವಾಲಿಟಿಯ ಪುಸ್ತಕಗಳನ್ನು ಆದಷ್ಟೂ ಕಡಿಮೆ ಬೆಲೆಗೆ ಕೊಡುವುದು ನೀಲಿಮಾ ಪ್ರಕಾಶನದ ಹೆಚ್ಚುಗಾರಿಕೆ.

Leave a comment

FOOT PRINT

Top