An unconventional News Portal.

ಮಂಗಳವಾರವೂ ‘ಬಸ್ ಬಂದ್’: ನಡೆಯದ ದ್ವಿಪಕ್ಷೀಯ ಮಾತುಕತೆ; ಸಂಕಷ್ಟಗಳ ಮುಂದುವರಿಕೆ

ಮಂಗಳವಾರವೂ ‘ಬಸ್ ಬಂದ್’: ನಡೆಯದ ದ್ವಿಪಕ್ಷೀಯ ಮಾತುಕತೆ; ಸಂಕಷ್ಟಗಳ ಮುಂದುವರಿಕೆ

ಸರಕಾರಿ ಸಾರಿಗೆ ಸಂಸ್ಥೆಗಳ ಕಾರ್ಮಿಕ ಒಕ್ಕೂಟಗಳು ಕರೆ ನೀಡಿರುವ ‘ಬಸ್ ಬಂದ್’ ಮಂಗಳವಾರವೂ ಮುಂದುವರಿಯಲಿದೆ.

ಸೋಮವಾರ ಸಂಜೆವರೆಗೆ ಸರಕಾರದ ಮಟ್ಟದಲ್ಲಿ ಕಾರ್ಮಿಕರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಿತು. ಆದರೆ, ಸರಕಾರ ಮತ್ತು ಕಾರ್ಮಿಕ ಸಂಘಟನೆಗಳ ಜತೆಯಲ್ಲಿ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಕಾರ್ಮಿಕ ಸಂಘಟನೆಗಳು ತೀರ್ಮಾನಿಸಿವೆ. ರಾಜ್ಯಾದ್ಯಂತ ಸರಕಾರಿ ಬಸ್ ಸೇವೆ ಸೋಮವಾರ ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು, ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರದಾಡುವಂತಾಗಿತ್ತು. ಇದೇ ಸ್ಥಿತಿ ಮಂಗಳವಾರವೂ ಮುಂದುವರಿಯುವ ಸಾಧ್ಯತೆಗಳೀಗ ನಿಚ್ಚಳವಾಗಿವೆ.

ಯಾರ ಜತೆ ಮಾತುಕತೆ?:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಸಿಟಿ), ಉತ್ತರ ಕರ್ನಾಟಕ ಭಾಗದ ಎನ್ಇ/ ಎನ್ ಡಬ್ಲ್ಯೂ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿಯಲ್ಲಿ ಹಲವು ಕಾರ್ಮಿಕ ಸಂಘಟನೆಗಳಿವೆ. ಅವುಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನೇತೃತ್ವದ ನಾಲ್ಕು ಸಂಘಟನೆಗಳು. ಪಕ್ಷದ ಕಾರ್ಮಿಕ ಸಂಘಟನೆ ಎಐಟಿಯುಸಿ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಂಡಳಿ, ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಂಡಳಿ ಹಾಗೂ ಕೆಎಸ್ಆರ್ಟಿಸಿ ಎಸ್ಸಿ- ಎಸ್ಟಿ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಬಂದ್ ಕರೆಯನ್ನು ಮುಂದುವರಿಸಲಾಗುತ್ತದೆ. ಇವುಗಳನ್ನು ಹೊರತು ಪಡಿಸಿ, ಸಿಪಿಐ (ಎಂ) ಪಕ್ಷದ ಕಾರ್ಮಿಕ ಸಂಘಟನೆಯಾಗಿರುವ ಸಿಐಟಿಯು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದೆ. ಹಾಗೆಯೇ ಬಿಜೆಪಿ ಪಕ್ಷದ ಕಾರ್ಮಿಕ ಸಂಘಟನೆ ಬಿಎಂಎಸ್ ನೌಕರರ ಬಂದ್ಗೆ ಬೆಂಬಲ ಸೂಚಿಸಿದೆ. ಉಳಿದಂತೆ ಬೆರಳೆಣಿಕೆ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಹೊಂದಿರುವ ಕೆಲವು ಸಂಯುಕ್ತ ಸಂಘಟನೆಗಳು ಈ ಪ್ರತಿಭಟನೆಯಿಂದ ಹೊರಕ್ಕೆ ಉಳಿದಿವೆ.

ಆದರೆ, ಸಿಪಿಐ ಹಾಗೂ ಸಿಪಿಐ (ಎಂ) ಪಕ್ಷಗಳ ಕಾರ್ಮಿಕ ಸಂಘಟನೆಗಳ ಬಲ ಹೆಚ್ಚಿರುವುದರಿಂದ ಅವುಗಳು ತೆಗೆದುಕೊಳ್ಳುವ ತೀರ್ಮಾನ ಪ್ರತಿಭಟನೆಯ ಸ್ವರೂಪವನ್ನು ತೀರ್ಮಾನಿಸಲಿದೆ. ಸೋಮವಾರ ಸಂಜೆವರೆಗೂ ಸರಕಾರ ಕಡೆಯಿಂದ ಈ ಕಾರ್ಮಿಕ ಸಂಘಟನೆಗಳ ಮುಖಂಡರುಗಳಿಗೆ ಯಾವುದೇ ಕರೆ ಬಾರದ ಹಿನ್ನೆಲೆಯಲ್ಲಿ, ಪ್ರತಿಭಟನೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಸಂಘಟನೆ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ. ಸಿಐಟಿಯು ಮಂಗಳವಾರ ಬೆಳಗ್ಗೆ ಟೌನ್ಹಾಲ್ ಮುಂದೆ ಪ್ರತಿಭಟನೆಗೆ ಕರೆ ನೀಡಿದೆ.

ತಿಕ್ಕಾಟ ಯಾಕೆ?:

ksrtc-depot-strikeಸದ್ಯ 44 ಬೇಡಿಕೆಗಳನ್ನು ಸಿಪಿಐ ನೇತೃತ್ವದ ಕಾರ್ಮಿಕ ಸಂಘಟನೆಗಳು ಸರಕಾರದ ಮುಂದಿಟ್ಟಿವೆ. ಇದರಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವುದು ವೇತನ ಹೆಚ್ಚಳ ಪ್ರಸ್ತಾವ. ಇದು ಸಾರಿಗೆ ಸಂಸ್ಥೆಗಳ ಆಂತರಿಕ ವಲಯದಲ್ಲಿ ಹಲವು ವರ್ಷಗಳಿಂದ ಇರುವ ಬೇಡಿಕೆಯಾಗಿತ್ತು. ಸರಕಾರ ಇತ್ತೀಚೆಗೆ ಏಕಾಏಕಿ ಶೇ. 8ರಷ್ಟು ವೇತನ ಹೆಚ್ಚಿಸುವುದಾಗಿ ಪ್ರಕಟಿಸಿತು. ಇದು ‘ದ್ವಿಪಕ್ಷೀಯ ಮಾತುಕತೆ’ಯ ಮೂಡ್ನಲ್ಲಿದ್ದ ಕಾರ್ಮಿಕ ಸಂಘಟನೆಗಳು ರೊಚ್ಚಿಗೇಳುವಂತೆ ಮಾಡಿತು. “ಸರಕಾರ ನಮ್ಮನ್ನು ಕರೆದು ವೇತನ ಹೆಚ್ಚಳಕ್ಕೂ ಮುಂಚೆ ಚರ್ಚಿಸಿದ್ದರೆ ಪ್ರತಿಭಟನೆ, ಬಂದ್ ಅವಶ್ಯಕತೆಯೇ ಬೀಳುತ್ತಿರಲಿಲ್ಲ,” ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಕಾರ್ಮಿಕ ಸಂಘಟನೆಯ ಮುಖಂಡರೊಬ್ಬರು.

ಇದಾಗುತ್ತಿದ್ದಂತೆ ಹಳೆಯ ಅಷ್ಟೂ 44 ಬೇಡಿಕೆಗಳ ಪಟ್ಟಿಯನ್ನು ಕಾರ್ಮಿಕ ಸಂಘಟನೆಗಳು ಸರಕಾರದ ಮುಂದಿಟ್ಟು ಪ್ರತಿಭಟನೆಗೆ ಕರೆ ನೀಡಿದವು. ಇದು 15 ದಿನಗಳ ಮುಂಚೆಯೇ ಗೊತ್ತಿದ್ದರೂ, ಸಾರಿಗೆ ಸಂಸ್ಥೆಗಳ ಆಡಳಿತ ಮಂಡಳಿಗಳಾಗಲೀ, ಸರಕಾರವಾಗಲೀ ಸೂಕ್ತ ರೀತಿಯಲ್ಲಿ ಸ್ಪಂದಿಸುವಲ್ಲಿ ವಿಫಲವಾದರು. ಇದೀಗ ಸರಕಾರ ಶೇ. 8ರಿಂದ ಶೇ. 10ರಷ್ಟು ವೇತನ ನೀಡಲು ಮುಂದಾಗಿದೆ. ಆದರೆ, ಕಾರ್ಮಿಕ ಸಂಘಟನೆಗಳು ಶೇ. 35ರ ಹೆಚ್ಚಳಕ್ಕೆ ಪಟ್ಟು ಹಿಡಿದು ಕುಳಿತಿವೆ. “ನಾವು ಶೇ. 35 ಕೊಡಿ ಅನ್ನುತ್ತಿದ್ದೇವೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯಲು ಸಿದ್ಧರಿದ್ದೇವೆ. ಸಂಸ್ಥೆ ಉಳಿಯಬೇಕು; ಬೆಳೆಯಬೇಕು ಎಂಬುದು ನಮ್ಮ ಆಶಯ ಕೂಡ,” ಎನ್ನುತ್ತಾರೆ ಸಿಪಿಐ (ಎಂ)ನ ನಾಯಕ ಕೆ. ಪ್ರಕಾಶ್.

ಇಂದು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶೇ. 12. 5ರಷ್ಟು ವೇತನ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಸರಕಾರಕ್ಕೆ ಹೆಚ್ಚುವರಿ 500 ಕೋಟಿ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸಿಎಂ ಇದನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಹೀಗಾಗಿ, ವೇತನ ಹೆಚ್ಚಳದ ಪ್ರಸ್ತಾಪ ಮಾತುಕತೆ ಹಂತಕ್ಕೆ ಬರುವ ಸಾಧ್ಯತೆ ಇವತ್ತಿಗೆ ಕಾಣಿಸುತ್ತಿಲ್ಲ.

ಮಂದೇನು?: 

ಸದ್ಯದ ಪರಿಸ್ಥಿತಿಯಲ್ಲಿ ಮಂಗಳವಾರವೂ ಪ್ರತಿಭಟನೆ ಮುಂದುವರಿದರೆ ಪ್ರಯಾಣಿಕರ ಸಂಕಷ್ಟಗಳು ಇನ್ನೂ ಹೆಚ್ಚಾಗಲಿವೆ. ಸೋಮವಾರ ಬಂದ್ ಕಾರಣಕ್ಕೆ ಒಂದು ದಿನ ಕೆಲಸದ ಬಿಡುವು ನೀಡಿರುವ ಕಂಪನಿಗಳು ನಾಳೆ ಕಾರ್ಮಿಕರಿಗೆ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಬಹುದು. ಈ ಹಿನ್ನೆಲೆಯಲ್ಲಿ ಪ್ರಯಾಣ ಅನಿವಾರ್ಯವಾದರೆ ಬೆಂಗಳೂರಿನ ನಿತ್ಯ ಬದುಕಿನಲ್ಲಿ ಬಿಕ್ಕಟ್ಟುಗಳು ಸೃಷ್ಟಿಯಾಗಲಿವೆ. ರಾಜ್ಯ ಇತರ ಕಡೆಗಳಲ್ಲೂ ಇದೇ ಸ್ಥಿತಿಯನ್ನು ನಿರೀಕ್ಷಿಸಬಹುದಾಗಿದೆ. ಈ ಹಿಂದೆ ಬಿಜೆಪಿ ಸರಕಾರವಿದ್ದ ಸಮಯದಲ್ಲಿ ಇದೇ ಮಾದರಿಯ ಪ್ರತಿಭಟನೆ ಎರಡು ದಿನಗಳ ಕಾಲ ನಡೆದಿತ್ತು. ಈ ಬಾರಿಯೂ ಅದೇ ಹಾದಿಯಲ್ಲಿ ಪ್ರತಿಭಟನೆಕಾರರು ಮತ್ತು ಸರಕಾರದ ನಡುವೆ ಹಗ್ಗ- ಜಗ್ಗಾಟ ಮುಂದುವರಿದಿದೆ.

Leave a comment

FOOT PRINT

Top