An unconventional News Portal.

‘ಸೋಮವಾರ ಬಸ್ ಬಂದ್’: ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ಸ್ಥಗಿತಕ್ಕೆ ಕ್ಷಣಗಣನೆ

‘ಸೋಮವಾರ ಬಸ್ ಬಂದ್’: ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ಸ್ಥಗಿತಕ್ಕೆ ಕ್ಷಣಗಣನೆ

ಸೋಮವಾರ ಸರಕಾರಿ ಸ್ವಾಮ್ಯದ ಬಸ್ ಸಾರಿಗೆ ವ್ಯವಸ್ಥೆ ರಾಜ್ಯಾದ್ಯಂತ ಸ್ಥಗಿತಗೊಳ್ಳಲಿದೆ.

ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ತಳಮಟ್ಟದಲ್ಲಿ ನಾಳಿನ ಬಸ್ ಮುಷ್ಕರದ ಸಾಧ್ಯತೆಗಳು ನಿಚ್ಚಳವಾಗಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಸಾರ್ವನಿಕ ಬಸ್ ಸೇವೆ ನಿಂತು ಹೋಗಿದೆ.

ಎಲ್ಲೋ ಕೆಲವು ಕಡೆಗಳಲ್ಲಿ ಮಾತ್ರವೇ ಬಿಎಂಟಿಸಿ ಬಸ್ಗಳು ಓಡಾಡುತ್ತಿದ್ದು, ಬಹುತೇಕ ಬಸ್ಗಳನ್ನು ಡಿಪೋಗಳಲ್ಲಿ ನಿಲ್ಲಿಸಲಾಗಿದೆ. ಕೆಲವು ಡಿಪೋಗಳಲ್ಲಿ ನಾಳೆ ಮುಂಜಾನೆ ಬಸ್ ತೆಗೆಯದಂತೆ ರಸ್ತೆಗಳನ್ನು ತಡೆಯಲಾಗಿದೆ. ಒಂದು ಕಡೆ ಸಾರಿಗೆ ನೌಕರರನ್ನು ಪ್ರತಿನಿಧಿಸುತ್ತಿರುವ ಕಾರ್ಮಿಕ ಸಂಘಟನೆಗಳು ಹೇಳಿಕೆ ನೀಡುತ್ತಿರುವಾಗಲೇ, ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಪ್ರತಿಭಟನೆಯನ್ನು ಹತ್ತಿಕ್ಕಲು ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಕೊನೆಯ ಹಂತದವರೆಗೂ ಸಮಸ್ಯೆಯನ್ನು ಸಂಧಾನದ ಮೂಲಕ ಬಗೆ ಹರಿಸಿಕೊಳ್ಳಲು ಮುಂದಾಗಿದ್ದ ಸರಕಾರ, ಈಗಾಗಲೇ ಆಯಾ ಜಿಲ್ಲಾಧಿಕಾರಿಗಳಿಗೆ ಸೋಮವಾರ ಶಾಲೆಗಳಿಗೆ ರಜೆ ಘೋಷಣೆ ಮಾಡುವ ಅಧಿಕಾರವನ್ನು ನೀಡಲಾಗಿದೆ. ನಾಳೆ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ.

ಇನ್ನೊಂದೆಡೆ, ಚಾಲಕರು ಮತ್ತು ನಿರ್ವಾಹಕರು ಸಂಬಳ ಹೆಚ್ಚಳಕ್ಕಿಂತ ಮುಖ್ಯವಾಗಿ ಕುರುಕುಳ ತಪ್ಪಿದರೆ ಸಾಕು ಅನ್ನಿಸುತ್ತಿದ್ದಾರೆ. ಇವಿಷ್ಟು ನಾಳಿನ ಬಸ್ ಪ್ರತಿಭಟನೆಯ ಮುಖ್ಯಾಂಶಗಳು. ಇದರ ಜತೆಗೆ, ಸಾರ್ವಕನಿಕ ಸಾರಿಗೆ ವ್ಯವಸ್ಥೆ ಮತ್ತು ಅವರ ಒಳಗಿನ ‘ಸಮಾಚಾರ’ಗಳನ್ನು ನಿಮ್ಮೆದುರಿಗೆ ತೆರದಿಡಲಿದ್ದೇವೆ.

ಏನಿದು ಬೆಳವಣಿಗೆ?:

ವೇತನ ಹಾಗೂ ಭತ್ಯೆಗಳನ್ನು ಹೆಚ್ಚಿಸುವಂತೆ ಆಗ್ರಹಿಸಿ, ಸಾರ್ವಜನಿಕ ಸಾರಿಗೆ ಸಂಸ್ಥೆಗಳ ನೌಕರರು ಹಾಗೂ ಸಿಬ್ಬಂದಿಗಳ ಪರವಾಗಿ ಒಟ್ಟು ಆರು ಕಾರ್ಮಿಕ ಸಂಘಟನೆಗಳು ಸೋಮವಾರ ಪ್ರತಿಭಟನೆಗೆ ಕರೆ ನೀಡಿವೆ. ಭಾನುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್’ ಬೇಡಿಕೆ ಈಡೇರಿಕೆವರೆಗೂ ಹೋರಾಟ ನಡೆಯಲಿದೆ ಎಂದು ತಿಳಿಸಿದೆ.

ಕಳೆದ 15 ದಿನಗಳ ಅಂತರದಲ್ಲಿ ನಾನಾ ಬೇಡಿಕೆಗಳನ್ನು ಇಟ್ಟುಕೊಂಡು ಸರಕಾರ ಮತ್ತು ಕಾರ್ಮಿಕ ಸಂಘಟನೆಗಳು ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿದೆ. ಇದರ ಜತೆಗೆ, ವೇತನ ಹೆಚ್ಚಳವನ್ನು ಶೇ. 8ರಿಂದ ಶೇ. 10ಕ್ಕೆ ಹೆಚ್ಚಿಸುವುದಾಗಿ ಸರಕಾರ ಈಗಾಗಲೇ ಮಾಧ್ಯಮಗಳಲ್ಲಿ ಜಾಹೀರಾತು ರೂಪದಲ್ಲಿ ತಿಳಿಸಿದೆ. ಆದರೆ, ತಳಮಟ್ಟದಲ್ಲಿ ವೇತನ ಬೇಡಿಕೆ ಜತೆಗೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡಿರುವ ಕಾರ್ಮಿಕ ಸಂಘಟನೆಗಳು ಬಸ್ ಮುಷ್ಕರವನ್ನು ನಡೆಸಲು ತೀರ್ಮಾನಿಸಿವೆ. ಇನ್ನೊಂದೆಡೆ ಕಾರ್ಮಿಕರು ಕೂಡ ದೊಡ್ಡ ಸಂಖ್ಯೆಯಲ್ಲಿ ಇದನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಕಾಣಿಸಿಕೊಳ್ಳಲಿದೆ.

ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿರುವ ಬಿಎಂಟಿಸಿ ಸಂಪೂರ್ಣ ಬಂದ್ ಆಚರಿಸಲಿದೆ. ಹೀಗಾಗಿ, ಲಕ್ಷಾಂತರ ಜನ ಪರದಾಡಲಿದ್ದಾರೆ. ಈಗಾಗಲೇ ಭಾನುವಾರ ಸಂಜೆ ವೇಳೆಗೆ ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಬಸ್ಗಳಿಗಾಗಿ ಕಾಯುತ್ತ ನಿಂತ ಜನರ ಚಿತ್ರಣ ದಿಕ್ಸೂಚಿಯಂತೆ ಕಾಣಿಸುತ್ತಿದೆ.

ಪ್ರತಿಭಟನೆ ಯಾಕೆ?: 

ಹಾಗೆ ನೋಡಿದರೆ ವೇತನ ಹಾಗೂ ಭತ್ಯೆ ಹೆಚ್ಚಳದ ಬೇಡಿಕೆ ಇವತ್ತಿನದಲ್ಲ. ಅದರಲ್ಲೂ ಒಟ್ಟಾರೆ ದೇಶದಲ್ಲಿ ಹೆಚ್ಚುತ್ತಿರುವ ನಿತ್ಯ ಬದುಕಿನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನಾನಾ ಇಲಾಖೆಗಳ ನೌಕರರು ಸಂಬಳ ಹೆಚ್ಚಿಸುವಂತೆ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಪೊಲೀಸರು ಕೂಡ ಸಂಬಳದ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆಗೆ ಕರೆ ನೀಡಿದ್ದರು. ಇದೀಗ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಹಾಗೂ ಸಿಬ್ಬಂದಿಗಳು ಇದೇ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ಅಚ್ಚರಿ ಎಂದರೆ, ಇವರೂ ಕೂಡ ಪಕ್ಕದ ಆಂಧ್ರ ಪ್ರದೇಶದ ಸಾರಿಗೆ ಇಲಾಖೆ ಹೆಚ್ಚಿಸಿರುವ ಸಂಬಳದ ಹೋಲಿಕೆಯನ್ನು ಮುಂದಿಡುತ್ತಿದ್ದಾರೆ. ಈ ಕುರಿತು ಸಿಐಟಿಯು ಪತ್ರಿಕಾ ಹೇಳಿಕೆ ಕೆಳಕಂಡಂತೆ ವಿವರಿಸಿದೆ:

citu-press-note-1

“ಸಂಬಳ ಒಂದು ಕಡೆಗೆ ಇರಲಿ. ನಮಗೆ ನೀಡುತ್ತಿರುವ ಕಿರುಕುಳಕ್ಕೆ ಮುಕ್ತಿ ಬೇಕು. ಡಿಪೋ ಫೈನ್ ಅನ್ನೋ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಸಂಬಳವನ್ನು ಕಡಿತ ಮಾಡಿಕೊಂಡಿದ್ದಾರೆ. ಸರಿಯಾದ ಸೌಲಭ್ಯವೂ ಇಲ್ಲ; ಕೆಲಸಕ್ಕೆ ಗೌರವವೂ ಇಲ್ಲ. ಭ್ರಷ್ಟ ಅಧಿಕಾರಿಗಳು ನಮ್ಮ ಶ್ರಮದ ದುಡಿಮೆಯನ್ನು ಕಿತ್ತುಕೊಳ್ಳುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ನಿರ್ವಾಹಕರೊಬ್ಬರು. ಭಾನುವಾರ ಸಂಜೆ ಶಾಂತಿನಗರದ ಡಿಪೋ-3 ರಲ್ಲಿ ಬಸ್ ನಿಲ್ಲಿಸಿ ಮನೆಗೆ ಹೊರಟಿದ್ದ ಅವರು ‘ಸಮಾಚಾರ’ದ ಜತೆ ಮಾತುಕತೆ ನಿಂತಿದ್ದರು.

ಇದು ತಳಮಟ್ಟದ ಚಿತ್ರಣ. ಬಹುತೇಕ ನೌಕರರಿಗೆ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ಮುಂದಿಟ್ಟಿರುವ ಬೇಡಿಕೆಗಳು ಏನಿವೆ ಎಂಬ ಕುರಿತು ಅರಿವೂ ಕೂಡ ಇಲ್ಲ. ಆದರೆ, ಪ್ರತಿಭಟನೆ ನಡೆಸುವ ಮೂಲಕ ತಮಗೆ ಇಲಾಖೆಯೊಳಗೆ ಆಗುತ್ತಿರುವ ಕಿರುಕುಳದ ಪ್ರಮಾಣ ಕಡಿಮೆಯಾಗಬಹುದು ಎಂಬುದು ಅವರ ಆಶಯ.

ರಜೆಯಲ್ಲೂ ಕೆಲಸ: 

ರಜೆ ದಿನ ಭಾನುವಾರ ಕೂಡ ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸಗಳಲ್ಲಿ ಬಹುತೇಕ ಅಧಿಕಾರಿಗಳು ನಿರತರಾಗಿರುವುದು ಕಂಡು ಬಂತು. ಸಂಜೆ ನಾಲ್ಕು ಗಂಟೆ ಹೊತ್ತಿಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಠಾರಿಯಾ ಅವರ ಕಚೇರಿ ಚರ್ಚೆಯಲ್ಲಿ ಮುಳುಗಿ ಹೋಗಿತ್ತು. “ನಾನು ಈ ಇಲಾಖೆ ಅಲ್ಲ ಅಂದರೆ, ಇನ್ನೊಂದು ಇಲಾಖೆಗೆ ಹೋಗುವ ಅಧಿಕಾರಿ. ಇರುವಷ್ಟು ದಿನ ನನ್ನ ಹೃದಯಾಂತರಾಳದಿಂದ ಕೆಲಸ ಮಾಡಿದ್ದೇನೆ; ಮಾಡುತ್ತೇನೆ. ಆದಾಯದ ದೊಡ್ಡ ಪ್ರಮಾಣವನ್ನು ಸಂಬಳಕ್ಕೆ ವಿನಿಯೋಗಿಸುವ ಮೂಲಕ ಸಾರ್ವಜನಿಕ ಸಾರಿಗೆ ನಿಗಮಗಳನ್ನು ಸಾಯಿಸಲು ಆಗುವುದಿಲ್ಲ. ಇರುವುದರಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುತ್ತೇನೆ. ಈಗಾಗಲೇ ಎಲ್ಲಾ ಕಾರ್ಮಿಕ ಸಂಘಟನೆಗಳಿಗೆ ಪವರ್ ಪಾಯಿಂಟ್ ಪ್ರಸೆಂಟೇಶನ್ ನೀಡಿಯಾಗಿದೆ. ಅವರಿಗೆ ಇದು ಅರ್ಥವಾಗುತ್ತಿಲ್ಲ,” ಎಂದು ಕಠಾರಿಯಾ ‘ಸಮಾಚಾರ’ದ ಜತೆ ಮಾತುಕತೆ ಆರಂಭಿಸಿದರು.

ಮುಷ್ಕರ ಬಿಸಿಯ ನಡುವೆಯೇ ಶಾಂತವಾಗಿದ್ದ ಹಿರಿಯ ಐಎಎಸ್ ಅಧಿಕಾರಿ, “ನಿಜ ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತದೆ. ಅದನ್ನು ಆದಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ. ಬುಕ್ಕಿಂಗ್ ಸಂಖ್ಯೆ ಕೂಡ ಕಡಿಮೆಯಾಗಿದೆ. ಮಾಧ್ಯಮಗಳು ಬಂದ್ ಬಗ್ಗೆ ಮಾಹಿತಿ ನೀಡಿದ್ದು ಇದಕ್ಕೆ ಕಾರಣ ಇರಬಹುದು. ರಾಜ್ಯದಲ್ಲಿ ಹಾಸನ ಜಿಲ್ಲೆಯೊಂದನ್ನು ಹೊರತು ಪಡಿಸಿದರೆ ಎಲ್ಲಾ ಕಡೆಗಳಲ್ಲೂ ಪರ್ಯಾಯವಾಗಿ ಖಾಸಗಿ ಸಾರಿಗೆ ವ್ಯವಸ್ಥೆಗಳಿವೆ. ಬೆಂಗಳೂರಿನಲ್ಲಿ ಹೊರವಲಯದ ರಸ್ತೆಗಳಲ್ಲಿ ಸಮಸ್ಯೆ ಆಗುವುದಿಲ್ಲ. ನಗರದೊಳಗೆ ಸ್ವಲ್ಪ ತೊಂದರೆಯಾಗಬಹುದು. ಈಗಾಗಲೇ ನೆರೆಯ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ಹಾಗೂ ಬಿಎಂಆರ್ಸಿಎಲ್ಗೆ ಪತ್ರಗಳನ್ನು ಬರೆಯಲಾಗಿದೆ. ಹೆಚ್ಚುವರಿ ಸೇವೆಯನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ,” ಎಂದರು.

“ನಮಗಿನ್ನೂ ಯಾವುದೇ ರೀತಿಯ ಸೂಚನೆ ಬಂದಿಲ್ಲ. ದಿನಾ ಬರುವ ಹಾಗೆ ಬಂದಿದ್ದೇನೆ. ಇವತ್ತು ರಾತ್ರಿ ಚೆನ್ನೈಗೆ ಹೋಗುತ್ತೇವೆ,” ಎಂದರು ತಮಿಳುನಾಡು ಸಾರಿಗೆ ಬಸ್ ಚಾಲಕ ಕಮ್ ನಿರ್ವಾಹಕ ಆರ್ಮುಗಮ್.

ಬಂದ್ ಆರಂಭ: 

ಸೋಮವಾರ ಮುಂಜಾನೆ ಪ್ರತಿಭಟನೆಗೆ ಕರೆ ನೀಡಲಾಗಿದ್ದರೂ, ಈಗಾಗಲೇ ಬಂದ್ ಬಿಸಿ ಶುರುವಾಗಿದೆ. ಶಾಂತಿನಗರದ ಒಂದು ಡಿಪೋದಲ್ಲಿ ನಾಳೆ ಬಸ್ಗಳನ್ನು ಹೊರಗೆ ತೆಗೆಯಲಾಗದಂತೆ ಅಡ್ಡವಾಗಿ ಬಸ್ಗಳನ್ನು ನಿಲ್ಲಿಸಲಾಗಿದೆ.

ಶಾಂತಿನಗರ ಕೆಎಸ್ಆರ್ಟಿಸಿ ಡಿಪೋ ಒಂದರ ಗೇಟಿಗೆ ಅಡ್ಡವಾಗಿ ನಿಲ್ಲಿಸುರುವ ಬಸ್ಗಳು.

ಶಾಂತಿನಗರ ಕೆಎಸ್ಆರ್ಟಿಸಿ ಡಿಪೋ ಒಂದರ ಗೇಟಿಗೆ ಅಡ್ಡವಾಗಿ ನಿಲ್ಲಿಸುರುವ ಬಸ್ಗಳು.

ಎಲ್ಲಾ ಬಸ್ ಡಿಪೋಗಳ ಮುಂದೆ ಪೊಲೀಸ್ ಹಾಗೂ ಹೋಮ್ ಗಾರ್ಡ್ ಭದ್ರತೆ ಕಲ್ಪಿಸಲಾಗಿದೆ. ನಾಳೆಯಿಂದ ಸಾರಿಗೆ ವ್ಯವಸ್ಥೆಯ ವ್ಯತ್ಯಯಕ್ಕೆ ಜನ ಹೇಗೆ ಸ್ಪಂದಿಸುತ್ತಾರೆ ಎಂಬುದೂ ಕೂಡ ಬಂದ್ ಭವಿಷ್ಯವನ್ನು ನಿರ್ಧರಿಸಲಿದೆ. ಸದ್ಯ ಸರಕಾರದ ಮಟ್ಟದಲ್ಲಿ, ಸಾರಿಗೆ ನಿಗಮಗಳ ಒಳಗೆ, ಕಾರ್ಮಿಕ ಸಂಘಟನೆಗಳ ಅಂತರಂಗದಲ್ಲಿ ಮತ್ತು ನಿಗಮಗಳ ನೌಕರರು ಹಾಗೂ ಸಿಬ್ಬಂದಿಗಳ ಮನಸ್ಸಿನಲ್ಲಿ ಬಂದ್ ನಾನಾ ಆಯಾಮಗಳ ಆಲೋಚೆಯನ್ನಂತೂ ಹುಟ್ಟು ಹಾಕಿದೆ. ಹೊಸ ಹೊಸ ಮಾಹಿತಿ ಹೊರಬೀಳುತ್ತಿವೆ. ಇವೆಲ್ಲವನ್ನೂ ನಾಳೆ ಮುಂಜಾನೆಯಿಂದ ‘ಸಮಾಚಾರ’ ಒಂದೊಂದಾಗಿ ನಿಮ್ಮೆದುರಿಗೆ ಬಿಚ್ಚಿಡಲಿದೆ.

 

Leave a comment

FOOT PRINT

Top