An unconventional News Portal.

ಕಾಣೆಯಾದ ಭಾರತೀಯ ವಾಯು ಸೇನೆ ವಿಮಾನ: ‘ಹುಡುಕಾಟ’ದ ಹಿಂದಿನ ಇಂಟರೆಸ್ಟಿಂಗ್ ಕತೆಗಳು!

ಕಾಣೆಯಾದ ಭಾರತೀಯ ವಾಯು ಸೇನೆ ವಿಮಾನ: ‘ಹುಡುಕಾಟ’ದ ಹಿಂದಿನ ಇಂಟರೆಸ್ಟಿಂಗ್ ಕತೆಗಳು!

ವಾಯು ಸೇನೆಗೆ ಸೇರಿದ ಎಎನ್-32 ವಿಮಾನ ಶುಕ್ರವಾರ ಬೆಳಗ್ಗೆಯಿಂದ ನಾಪತ್ತೆಯಾಗಿದೆ. ನಾಪತ್ತೆಯಾಗುವ ಮೊದಲು ಈ ವಿಮಾನ ಬಂಗಾಳಕೊಲ್ಲಿಯ ಮೇಲೆ ಹಾರಾಡುತ್ತಿತ್ತು. ಎಲ್ಲಾ ವಿಮಾನಗಳು ನಾಪತ್ತೆಯಾದಾಗಲೂ ಚಾಲ್ತಿಗೆ ಬರುವಂತೆ ಇಲ್ಲೂ ಊಹಾಪೋಹ ಅನುಮಾನಗಳು ಚಾಲ್ತಿಗೆ ಬಂದಿವೆ.

ಚೆನ್ನೈನಿಂದ ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್’ಗೆ 4 ಅಧಿಕಾರಿಗಳು ಹಾಗೂ 29 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಎನ್-32 ವಿಮಾನ ಬಂಗಾಳ ಕೊಲ್ಲಿ ಸಮುದ್ರದ ಮೇಲೆ ಹಾರಾಡುತ್ತಿದ್ದಾಗ ಸಂಪರ್ಕ ತಪ್ಪಿ ಕಣ್ಮರೆಯಾಗಿದೆ. ಸದ್ಯ ಇಲ್ಲಿವರೆಗೆ ಇದರ ಹಣೆಬರಹ ವರದಿಯಾಗಿಲ್ಲ. ಹಾರಾಟದ ವೇಳೆಯಲ್ಲಿಯೇ ತಂತ್ರಜ್ಞಾನದ ಸಂಪರ್ಕಗಳನ್ನು ಮೀರಿ ವಿಮಾನಗಳು ನಾಪತ್ತೆಯಾಗುತ್ತಿರುವ ಅಂತರಾಷ್ಟ್ರೀಯ ಸುದ್ದಿಗಳು ಇತ್ತೀಚೆಗೆ ಕೇಳಿ ಬರುತ್ತಿವೆ. ಇದರ ಸಾಲಿನಲ್ಲಿ ಭಾರತದ ವಾಯುಸೇನೆಯ ಅಧಿಕಾರಿಗಳಿರುವ ವಿಮಾನವೇ ನಾಪತ್ತೆಯಾದ ಕುರಿತು ಮಾಹಿತಿ ಹೊರಬಿದ್ದಿದೆ. ವಿಶೇಷವಾಗಿ ಇಂಗ್ಲಿಷ್ ಮಾಧ್ಯಮಗಳು ಈ ಕುರಿತು ಗುರುವಾರ ಸಂಜೆಯಿಂದಲೇ ನಾನಾ ಆಯಾಮಗಳನ್ನು ಬಿಚ್ಚಿಡುತ್ತಿವೆ.

ಘಟನೆ ನಡೆದು 12 ಗಂಟೆ ಕಳೆಯುವ ಹೊತ್ತಿಗೆ, ವಾಯು ದಳ, ಕೋಸ್ಟ್ ಗಾರ್ಡ್, ನೌಕಾ ಸೇನೆ ಜತೆಯಾಗಿ ಶೋಧ ಕಾರ್ಯಾಚರಣೆ ನಡೆಸಿವೆ. ಈವರೆಗೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಕಾಣೆಯಾದ ವಿಮಾನ ಪತನಗೊಂಡಿರುವ ಸಾಧ್ಯತೆಯನ್ನು ಮುಂದಿಟ್ಟುಕೊಂಡೇ ಹುಡುಕಾಟ ಸಾಗಿದ್ದು, ಸದ್ಯ ಒಂದು ಜಲಂತರ್ಗಾಮಿ, 13 ಹಡಗುಗಳು, ಮತ್ತು 8 ವಿಮಾನಗಳು ಸತತ ಹುಡುಕಾಟದಲ್ಲಿ ನಿರತವಾಗಿವೆ.

ಎ 32 ಸರಣಿ ವಿಮಾನ.

ಎ 32 ಸರಣಿ ವಿಮಾನ.

ಕಾಣೆಯಾಗುವ ಮೊದಲು ಕೊನೆಯ ಬಾರಿಗೆ ವಿಮಾನ ಬೆಳಿಗ್ಗೆ 8.48 ಗಂಟೆಗೆ ಸಂಪರ್ಕಕ್ಕೆ ಲಭ್ಯವಾಗಿತ್ತು. ಆಗ ವಿಮಾನ ಚೆನ್ನೈ ತಾಂಬರಂ ನಿಲ್ದಾಣದಿಂದ ಟೇಕ್ ಆಫ್ ಆಗಿ 16 ನಿಮಿಷಗಳಷ್ಟೇ ಆಗಿತ್ತು. ಈ ವೇಳೆಗೆ ವಿಮಾನ ಬಂಗಾಳ ಕೊಲ್ಲಿ ಸಮುದ್ರ ಪ್ರದೇಶದಲ್ಲಿ 23 ಸಾವಿರ ಅಡಿ ಎತ್ತರದಲ್ಲಿ ತಾನಿದ್ದ ಸ್ಥಳ ತೋರಿಸುತ್ತಿತ್ತು. ಅಂದುಕೊಂಡಂತೆ ವಿಮಾನ ಪ್ರಯಾಣಿಸಿದ್ದರೆ 11.30ಕ್ಕೆ ಪೋರ್ಟ್ ಬ್ಲೇರ್ ತಲುಪಬೇಕಾಗಿತ್ತು. ಒಟ್ಟು 4 ಗಂಟೆ ಹಾರಾಟಕ್ಕೆ ಬೇಕಾದ ಇಂಧನ ವ್ಯವಸ್ಥೆಯೂ ವಿಮಾನದಲ್ಲಿತ್ತು. ಆದರೆ ಇಲ್ಲಿವರೆಗೆ ಪೋರ್ಟ್ ಬ್ಲೇರ್ ನಿಲ್ದಾಣವನ್ನು ವಿಮಾನ ತಲುಪಿಲ್ಲ; ಹಾಗೆಯೇ  ಬೇರೆ ಯಾವ ವಿಮಾನ ನಿಲ್ದಾಣಗಳಲ್ಲಿ ಇಳಿದ ಮಾಹಿತಿಯೂ ಸಿಕ್ಕಿಲ್ಲ.

“ಇಷ್ಟರವೆರೆಗೆ ವಿಮಾನ ಪತ್ತೆಯಾಗಿಲ್ಲ. ವಿಮಾನವನ್ನು ಹುಡುಕಾಡುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಕ್ಷಣಾ ಪಡೆ ಸಿಬ್ಬಂದಿಗಳು ಹುಡುಕಾಟ ಕಾರ್ಯದಲ್ಲಿ ನಿರತರಾಗಿದ್ದಾರೆ,” ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗುರುವಾರ ಸಂಜೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಮಾನದಲ್ಲಿ 6 ಜನ ಸಿಬ್ಬಂದಿಗಳು ಇವರಲ್ಲಿ ಇಬ್ಬರು ಪೈಲಟ್ಗಳು, ಓರ್ವ ಮಾರ್ಗದರ್ಶಕ ಇದ್ದರು. ಇದಲ್ಲದೇ ಓರ್ವ ವಾಯು ಸೇನೆಯ ಅಧಿಕಾರಿ, ಇಬ್ಬರು ಭೂಸೇನೆಯ ಅಧಿಕಾರಿಗಳು, ಓರ್ವ ಕೋಸ್ಟ್ ಗಾರ್ಡ್ ಸಿಬ್ಬಂದಿ ಸೇರಿ 11 ಜನ ಹಾಗೂ 9 ಜನ ನೌಕಾಸೇನೆಯ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು.

ಹೈಟೆಕ್ ಹುಡುಕಾಟ:

ಹಾಗೆ ನೋಡಿದರೆ ಇವತ್ತು ಭೂಮಿ ಮೇಲೆ ಏನೇ ವಸ್ತು ಕಳೆದು ಹೋದರೂ ಹುಡುಕುವುದು ತೀರಾ ಸುಲಭ. ಉಪಗ್ರಹಗಳ ಮೂಲಕ 24 ಗಂಟೆಯೂ ಕಣ್ಗಾವಲು ಇಡುವ ನೇವಿಗೇಷನ್ ಕ್ಯಾಮೆರಾಗಳು ನಮ್ಮ ಬಳಿ ಇವೆ. ಉಪಗ್ರಹಗಳು ಭೂಮಿಯ ಚಿತ್ರವನ್ನು ನಿರಂತರವಾಗಿ ತೆಗೆಯುತ್ತಲೇ ಇರುತ್ತವೆ.

ಇದೀಗ ಈ ವಿಮಾನದ ಹುಡುಕಾಟಕ್ಕೂ ಈ ಎಲ್ಲಾ ಸುಧಾರಿತ ಮಾದರಿಗಳನ್ನು ಬಳಸಲಾಗುತ್ತಿದೆ. ಅತ್ಯಾಧುನಿಕ ರಾಡಾರ್ಗಳಿರುವ ವಿಮಾನಗಳ ಮೂಲಕ ಪತನದ ಅವಶೇಷಗಳು, ಕುರುಹು ಎಲ್ಲಿಯಾದರೂ ಸಿಗುತ್ತಾ ಎಂದು ಹುಡುಕಾಡಲಾಗುತ್ತದೆ. ಇದರ ಜೊತೆ ಜೊತೆಗೆ ಅತ್ತ ನೌಕಾ ಸೇನೆಯೂ ನೀರಿಗೆ ಇಳಿದಿದೆ. ಹೆಲಿಕಾಫ್ಟರ್ಗಳು ಇಳಿಯಲು ಅನುಕೂಲವಾಗುವಂತ ಹಡಗುಗಳನ್ನು ಸಮುದ್ರದ ನಡುವೆ ನಿಲ್ಲಿಸಿಕೊಂಡಿದೆ. ಜಲ, ವಾಯು ಹೀಗೆ ಎಲ್ಲಾ

ಭೂಮಿಯನ್ನು ಸುತ್ತು ಹಾಕುತ್ತಾ, ಚಿತ್ರಗಳನ್ನು ತೆಗೆದು ಕಳುಹಿಸುವ ಸ್ಯಾಟಲೈಟ್ ಕಣ್ಣು.

ಭೂಮಿಯನ್ನು ಸುತ್ತು ಹಾಕುತ್ತಾ, ಚಿತ್ರಗಳನ್ನು ತೆಗೆದು ಕಳುಹಿಸುವ ಸ್ಯಾಟಲೈಟ್ ಕಣ್ಣು.

ಸಾಧ್ಯತೆಗಳನ್ನೂ ಬಳಸಲಾಗುತ್ತದೆ. ಸಮುದ್ರದ ಇಂಚು ಇಂಚನ್ನು ನೀರಿನ ಮೇಲ್ಮೈಯಿಂದ ತಳದವರೆಗೂ ಶೋಧಿಸಲಾಗುತ್ತದೆ. ಸೋನಾರ್ ಉಪಕರಣದ ಮೂಲಕ ವಿಮಾನ ಮುಳುಗಿದ ಅವಶೇಷಗಳು ಇವೆಯಾ ಎಂದು ಸಬ್ಮೆರಿನ್ಗಳು ಹುಡುಕಾಡುತ್ತವೆ.

ಸದ್ಯ ಕಾಣೆಯಾದ ವಿಮಾನ ನಾಲ್ಕು ವರ್ಷ ಹಳೆಯದಾಗಿದ್ದು ಇತ್ತೀಚೆಗಷ್ಟೇ ವಿಮಾನದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡಿದ್ದು ಬಿಟ್ಟರೆ ಬೇರಾವ ಸಮಸ್ಯೆಗಳಿರಲಿಲ್ಲ.

‘ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ’ಕ್ಕೆ ಸೇನೆಗಳ ನಡುವೆ ಹೊಂದಾಣಿಕೆ ಮತ್ತು ನಿರ್ದೇಶನ ನೀಡುವ ಹೊಣೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ವಹಿಸಿದ್ದಾರೆ.

ನಾಪತ್ತೆ ಕತೆಗಳ ಸರಣಿ:

ಜಗತ್ತಿನಲ್ಲಿ ನಾಪತ್ತೆಯಾದ ವಿಮಾನಗಳು ನೂರಾರು ಇವೆ. ಆದರೆ ಇದರಲ್ಲಿ 90 ಭಾಗ ಸಿಂಗಲ್ ಸೀಟರ್ನಿಂದ ಹಿಡಿದು ಡಬಲ್ ಸೀಟರ್ ಮತ್ತು ಅತಿ ಸಣ್ಣ ವಿಮಾನಗಳೇ ಆಗಿವೆ. ದೊಡ್ಡ ವಿಮಾನಗಳು 1990ಕ್ಕೆ ಮೊದಲು ಕಾಣೆಯಾಗಿದ್ದಿದೆ. ಆದರೆ ಉಪಗ್ರಹಗಳೆಲ್ಲಾ ಬಂದ ನಂತರ ವಿಮಾನ ನಾಪತ್ತೆಯಾಗುವ ಘಟನೆಗಳು ತೀರಾ ಅಪರೂಪವಾಗಿತ್ತು. ಇದೇ ಕಾರಣಕ್ಕೆ 1990ರಿಂದ ಇಲ್ಲಿವರೆಗೆ 26 ವರ್ಷಗಳಲ್ಲಿ ಕೇವಲ 7 ವಿಮಾನಗಳಷ್ಟೇ ನಾಪತ್ತೆಯಾಗಿವೆ.

ಆದರೆ ಭಾರೀ ಸುದ್ದಿಯಾಗಿದ್ದು ಮತ್ತು ಇವತ್ತಿಗೂ ನಿಗೂಢವಾಗಿಯೇ ಉಳಿದುಕೊಂಡಿರುವುದು 2014ರ ಮಾರ್ಚ್ 8 ರಂದು ನಾಪತ್ತೆಯಾದ ಮಲೇಷ್ಯಾ ಏರ್ ಲೈನ್ಸ್ ಗೆ ಸೇರಿದ ವಿಮಾನ ಪ್ರಕರಣ. ಎಂಎಚ್-370 ಹೆಸರಿನ ಈ ವಿಮಾನ 239 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ವರ್ಷಗಟ್ಟಲೆ ನೆಲ, ನೀರಲ್ಲೆಲ್ಲಾ ಹುಡುಕಾಡಿದರೂ ಈ ವಿಮಾನದ ಸುಳಿವು ಇವತ್ತಿಗೂ ಪತ್ತೆಯಾಗಿಲ್ಲ.

ಸಾಧ್ಯತೆಗಳು:

ಸದ್ಯ ವಾಯುಸೇನೆಗೆ ಸೇರಿದ, ನಾಗರಿಕರನ್ನು ಹೊತ್ತ ವಿಮಾನ ನಾಪತ್ತೆ ಪ್ರಕರಣ ಈ ಕಾರಣಗಳಿಗಾಗಿ ದೇಶದ ಆಸಕ್ತಿ ಸೆಳೆಯುವ ಸಾಧ್ಯತೆಗಳಿವೆ. ವಿಮಾನ ಬಂಗಾಳ ಕೊಲ್ಲಿಯ ಸಮುದ್ರದ ಮೇಲೆಯೇ ನಾಪತ್ತ ಆಗಿರುವುದರಿಂದ ಪತನವಾಗಿರುವ ಸಾಧ್ಯತೆಗಳೇ ಜಾಸ್ತಿ ಎಂದು ಪ್ರಾಥಮಿಕ ಹಂತದ ವಿಶ್ಲೇಷಣೆಗಳು ಹೇಳುತ್ತಿವೆ. ಹೀಗಾದಲ್ಲಿ ಯಾರೂ ಬದುಕುಳಿಯುವ ಸಾಧ್ಯತೆಗಳಿಲ್ಲ. ಒಂದೊಮ್ಮೆ ತಾಂತ್ರಿಕ ಕಾರಣದಿಂದ ಕೇವಲ ಸಂಪರ್ಕ ಮಾತ್ರ ತಪ್ಪಿ ಹೋಗಿದ್ದಲ್ಲಿ ಎಲ್ಲಾದರೂ ಇಳಿಸಿರುವ ಸಾಧ್ಯತೆಯೂ ಇದೆ. ಆದರೆ ವಿಮಾನ ನಾಪತ್ತೆಯಾಗಿ ಒಂದು ದಿನ ಕಳೆದರೂ ಸುಳಿವಿಲ್ಲದಿರುವ ಹಿನ್ನಲೆಯಲ್ಲಿ ಅದರ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಈಗ ಎಲ್ಲೆಲ್ಲೂ ಉಗ್ರರದೇ ಸುದ್ದಿಗಳು ಜಗತ್ತಿನ ಮೂಲೆ ಮೂಲೆಯಿಂದ ಬರುತ್ತಿದ್ದು, ಇಲ್ಲಿಯೂ ಉಗ್ರರೇನಾದರೂ ಅಪಹರಣ ಮಾಡಿದರಾ? ಎಂಬ ಅನುಮಾನಗಳೂ ವ್ಯಕ್ತವಾಗಿವೆ. ಹೀಗೆ ವಿಮಾನಗಳು ಆಕಾಶದ ನಡುವೆ ನಾಪತ್ತೆಯಾದಾಗಲೆಲ್ಲ ಭಯೋತ್ಪಾದನೆಯ ಟ್ಯಾಗ್ ಕೂಡ ಕೇಳಿರುತ್ತದೆ. ಆದರೆ ಅದಕ್ಕೆ ಪೂರಕವಾಗಿ ಯಾವ ದಾಖಲೆಗಳನ್ನು ಈವರೆಗೂ ಯಾರೂ ಬಿಡುಗಡೆ ಮಾಡಿಲ್ಲ.

ಇದೆಲ್ಲವನ್ನೂ ಮೀರಿರುವ ಮತ್ತೊಂದು ಸಾಧ್ಯತೆ; ವಾಯುಸೇನೆಯ ವಿಮಾನ, ತನ್ನ ಪ್ರಯಾಣಿಕರ ಸಮೇತ ಮಲೇಷ್ಯಾ ವಿಮಾನದಂತೆ ಶಾಶ್ವತವಾಗಿ ನಾಪತ್ತೆಯಾಗುವುದು; ನಿಗೂಢ ಪ್ರಕರಣಗಳ ಸಾಲಿಗೆ ಸೇರಿಹೋಗುವುದು. ಅದರ ಹೊಣೆಗಾರಿಕೆ ರಕ್ಷಣಾ ಇಲಾಖೆ ಹೊತ್ತುಕೊಳ್ಳಬೇಕು ಎಂಬುದು ಸದ್ಯಕ್ಕೆ ಆತುರದ ಹೇಳಿಕೆಯಾಗುತ್ತದೆ.

Leave a comment

FOOT PRINT

Top