An unconventional News Portal.

‘ದಿ ಸ್ಟೋರಿ ಆಫ್ ಎಫ್ಐಆರ್’: ಜಾರ್ಜ್ ವಿರುದ್ದ ಕೇಸ್ ದಾಖಲಾಗುವ 60 ನಿಮಿಷ ಮೊದಲು ನಡೆದಿದ್ದೇನು?

‘ದಿ ಸ್ಟೋರಿ ಆಫ್ ಎಫ್ಐಆರ್’: ಜಾರ್ಜ್ ವಿರುದ್ದ ಕೇಸ್ ದಾಖಲಾಗುವ 60 ನಿಮಿಷ ಮೊದಲು ನಡೆದಿದ್ದೇನು?

ಸಚಿವರಾಗಿದ್ದ ಕೆ. ಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಾಗುವ 60 ನಿಮಿಷಗಳಿಗೂ ಮುಂಚೆ ನಡೆದ ನಾಟಕೀಯ ಘಟನೆಗಳ ವಿವರಗಳೀಗ ರಾಜ್ಯದ ಪೊಲೀಸ್ ವಲಯದಲ್ಲಿ ಚರ್ಚೆಯ ವಸ್ತುವಾಗಿದೆ. ಈ ಕುರಿತು ಗೃಹ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ‘ಒನ್ ಇಂಡಿಯಾ’ ಇಂಗ್ಲಿಷ್ ವೆಬ್ಸೈಟ್ ಗುರುವಾರ ಸಂಜೆ ವರದಿಯೊಂದನ್ನು ಪ್ರಕಟಿಸಿದೆ.

ಡಿವೈಎಸ್ಪಿ ಎಂ. ಕೆ. ಗಣಪತಿ ಆತ್ಮಹತ್ಯೆ ಬೆನ್ನಲ್ಲೇ ಆಗಿನ್ನೂ ಸಚಿವರಾಗಿದ್ದ ಕೆ. ಜೆ. ಜಾರ್ಜ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳ ರಕ್ಷಣಗೆ ಕಸರತ್ತು ಶುರುವಾಗಿತ್ತು. ಅದರ ಭಾಗವಾಗಿ ಅವರ ವಿರುದ್ಧ ಯಾವುದೇ ಕಾರಣಕ್ಕೂ ಪ್ರಥಮ ಮಾಹಿತಿ ವರದಿ ದಾಖಲಾಗದಂತೆ ತಡೆಯುವ ಪ್ರಯತ್ನದಲ್ಲಿ ಖುದ್ದು ಪೊಲೀಸ್ ಮಹಾ ನಿರ್ದೇಶಕ ಹಾಗೂ ಮಡಿಕೇರಿ ಎಸ್ಪಿ ತಮ್ಮದೇ ವ್ಯಾಪ್ತಿಯೊಳಗೆ ವಿಫಲ ಪ್ರಯತ್ನ ಮಾಡಿದ್ದರು; ಅದೂ ಜಿಲ್ಲಾ ನ್ಯಾಯಾಲಯ ನಗರ ಠಾಣೆಗೆ ನಿರ್ದೇಶನ ನೀಡಿದ ನಂತರ. ಇದು ಹೊರಬಿದ್ದಿರುವ ಮಾಹಿತಿಯ ಅಸಲಿ ತಿರುಳು ಎನ್ನಲಾಗುತ್ತಿದೆ.

ಜುಲೈ 19, ಮಂಗಳವಾರ..

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದವು. ಟಿವಿ ಮಾಧ್ಯಮಗಳಲ್ಲಿ ಎಫ್ಐಆರ್ ವಿಚಾರವಾಗಿ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಸದನದ ಒಳಗೆ ಹಾಗೂ ಹೊರಗೆ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಪಕ್ಷಗಳು ಧರಣಿ ನಡೆಸುತ್ತಿದ್ದವು. ಬಿಜೆಪಿ ರಾಜ್ಯಭವನಕ್ಕೆ ಮೆರವಣಿಗೆ ಶುರುಮಾಡಿತ್ತು. ಇದೇ ವೇಳೆಗೆ ಮಡಿಕೇರಿಯ ಜಿಲ್ಲಾ ಪ್ರಧಾನ ಮತ್ತು ಜೆಎಂಎಫ್ಸಿ ನ್ಯಾಯಾಲಯ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ. ಜೆ. ಜಾರ್ಜ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಮತ್ತು ಆಶಿಕ್ ಮೋಹನ್ ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಮಧ್ಯಾಹ್ನದ ಹೊತ್ತಿಗೆ ಆದೇಶ ನೀಡಿತ್ತು. ಇನ್ನೇನು ಎಫ್ಐಆರ್ ದಾಖಲಾಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದೇ ವೇಳೆಯಲ್ಲಿ ಉನ್ನತ ಮಟ್ಟದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿತ್ತು.

ಎಫ್ಐಆರ್ ಟ್ವಿಸ್ಟ್

“ಹೊರಗಿನ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅಖಾಡಕ್ಕೆ ಇಳಿದಿದ್ದರು. ಮಡಿಕೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರಿಗೆ ಕರೆ ಮಾಡಿದ್ದರು. ಎಫ್ಐಆರ್ ದಾಖಲಿಸಿದಂತೆ ಠಾಣಾಧಿಕಾರಿಗೆ ಸೂಚಿಸುವಂತೆ ಹೇಳಿದ್ದರು,’’ ಎಂದು ಗೃಹ ಇಲಾಖೆ ಮೂಲಗಳು ಹೇಳಿವೆ. ನಂತರ ಎಸ್ಪಿ ನಗರ ಠಾಣಾಧಿಕಾರಿ ಭರತ್ ಜೊತೆ ಮಾತನಾಡಿ ಎಫ್ಐಆರ್ ದಾಖಲಿಸದಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.

madikeri-web

ಮಡಿಕೇರಿ ನಗರ ಪೊಲೀಸ್ ಠಾಣೆ ಮುಂದೆ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ

ಇದೇ ಸಮಯಕ್ಕೆ ಮಡಿಕೇರಿಯ ನ್ಯಾಯಾಲಯ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿ ಆದೇಶ ಹೊರಡಿಸಿತ್ತು. ನಗರ ಠಾಣೆಯ ಮುಂದೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಶುರುಮಾಡಿದ್ದವು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತಕ್ಕೆ ಬಂದಿತ್ತು. ಒಳಗಿದ್ದ ಠಾಣಾಧಿಕಾರಿ ನ್ಯಾಯಾಲಯದ ಆದೇಶ ಪಾಲಿಸುವುದೋ? ಇಲ್ಲಾ ಹಿರಿಯ ಅಧಿಕಾರಿಗಳ ಮರ್ಜಿಗೆ ಬೀಳುವುದೋ ಗೊಂದಲಕ್ಕೆ ಸಿಲುಕಿದ್ದರು. ಈ ಸಮಯದಲ್ಲಿ ಮಡಿಕೇರಿ ಠಾಣೆಯಿಂದ ಗೃಹ ಇಲಾಖೆಯ ಕೆಲವರಿಗೆ ಸಲಹೆ ಕೇಳಿಕೊಂಡು ಕರೆಗಳು ಹೋಗಿವೆ ಎಂಬುದು ಸದ್ಯಕ್ಕೆ ಸಿಗುತ್ತಿರುವ ಮಾಹಿತಿ.

ಕೊನೆಗೆ ಸಂಜೆ ಹೊತ್ತಿಗೆ ಭಾರತೀಯ ದಂಡ ಸಂಹಿತೆ 306ರ ಅಡಿಯಲ್ಲಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಯಿತು ಎಂದು ಮೂಲಗಳು ಹೇಳುತ್ತಿವೆ. ಎಫ್ಐಆರ್ ನಲ್ಲಿ ಕೆ. ಜೆ. ಜಾರ್ಜ್ ಪ್ರಥಮ ಆರೋಪಿಯಾಗಿ ಮತ್ತು ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಹಾಗೂ ಎ. ಎಂ. ಪ್ರಸಾದ್ ಅವರನ್ನು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಆರೋಪಿಗಳನ್ನಾಗಿ ಮಾಡಲಾಯಿತು.

ನಂತರ ಮಾಧ್ಯಮಳಲ್ಲಿ, ‘ಎಫ್ಐಆರ್ ದಾಖಲಿಸಿಲು ಈವರೆಗೆ ಆಗಿರುವ ಬೆಳವಣಿಗೆಗಳ ಅಧ್ಯಯನ ನಡೆಸಬೇಕಾಗಿತ್ತು. ಬಳಿಕ ಈ ಬಗ್ಗೆ ಕಾನೂನು ತಜ್ಞರ ಸಲಹೆಯನ್ನೂ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಸ್ವಲ್ಪ ತಡವಾಗಿದೆ ಎಂದು ಪೊಲೀಸರು ಸಮಜಾಯಿಷಿ ನೀಡಿದರು’ ಎಂದು ವರದಿಯಾಗಿತ್ತು. ಅಸಲಿ ಕಾರಣ ಬೇರೆಯದ್ದ ಇತ್ತು ಎಂಬುದೀಗ ಬಯಲಾಗುತ್ತಿದೆ.

ಇಷ್ಟೆಲ್ಲಾ ಘಟನೆಗಳು ಇಲಾಖೆಯೊಳಗೆ ನಡೆಯುತ್ತಿದ್ದರೂ ಡಿಜಿಪಿ ಓಂ ಪ್ರಕಾಶ್ ಸುದ್ದಿಕೇಂದ್ರಕ್ಕೆ ಬರುತ್ತಿಲ್ಲ. “ಇನ್ನೆರಡು ತಿಂಗಳಿಗೆ ನಿವೃತ್ತಿಯಾಗಲಿದ್ದಾರೆ. ಅಲ್ಲಿಯವರೆಗೂ ಹೇಗಾದರೂ ತೂಗಿಸಿಕೊಂಡು ಹೋದರೆ ಸಾಕು ಎಂದುಕೊಂಡಿದ್ದಾರೆ. ಅದರಲ್ಲೂ ಅವರ ಮನೆಯ ಮುಂದೆ ಮಹಿಳೆಯೊಬ್ಬರು ಪ್ರತಿಭಟನೆ ನಡೆಸಿದ ಸುದ್ದಿ ಹೊರಬಿದ್ದ ನಂತರ ಸುಸ್ತಾಗಿ ಹೋಗಿದ್ದಾರೆ,’’ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಮೂಲಗಳು. ಹೀಗಿದ್ದೂ ಈ ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಿಕೊಳ್ಳದಂತೆ ಮಡಿಕೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಖುದ್ದು ಓಂಪ್ರಕಾಶ್ ಯಾಕೆ ಫೋನಾಯಿಸಿದ್ದರು? ಎಂಬುದು ಪ್ರಶ್ನೆ.

“ಇದಕ್ಕೆ ಉತ್ತರ ಬೇಕು ಎಂದರೆ ಪೊಲೀಸ್ ಇಲಾಖೆಯನ್ನು ತೆರೆಮರೆಯಲ್ಲಿ ನಿಂತು ನಡೆಸುತ್ತಿರುವವರು ಯಾರು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು,’’ ಎನ್ನುತ್ತಾರೆ ಡಿಜಿಪಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು.

ಚಿತ್ರ ಕೃಪೆ: ವಿಜಯವಾಣಿ

Leave a comment

FOOT PRINT

Top