An unconventional News Portal.

ಕನ್ನಡದ ಶಿವಾಜಿ ಮತ್ತು ಕಾರ್ಪೊರೇಟ್ ಕಬಾಲಿ!

ಕನ್ನಡದ ಶಿವಾಜಿ ಮತ್ತು ಕಾರ್ಪೊರೇಟ್ ಕಬಾಲಿ!

ತಮಿಳುನಾಡಿನಲ್ಲಿ ಎದ್ದಿರುವ ಸುನಾಮಿಯೊಂದು ಈಗ ದೇಶ, ವಿದೇಶಗಳ ಗಡಿಯನ್ನು ದಾಟಿ ಅಪ್ಪಳಿಸುತ್ತಿದೆ; ವಿಮಾನಗಳ ಹೊರಮೈ ಬಣ್ಣವನ್ನು ಬದಲಿಸಿದೆ; ಕಾರ್ಪೊರೇಟ್ ಸಂಸ್ಥೆಗಳಿಗೆ ರಜೆಯನ್ನು ಘೋಷಿಸುವಂತೆ ಮಾಡಿದೆ; ಟೀ ಶರ್ಟ್ಗಳ ಪ್ರಿಂಟ್ ಶೈಲಿಯನ್ನು ಮಾರ್ಪಡಿಸಿದೆ; ಸಾಮಾಜಿಕ ಜಾಲತಾಣಗಳಲ್ಲೂ ಅಲೆಗಳನ್ನು ಎಬ್ಬಿಸಿದೆ; ಅಷ್ಟೇಕೆ, ನಮ್ಮದೇ ‘ತಿಥಿ’ ಸಿನೆಮಾದ ಗಡ್ಡಪ್ಪನನ್ನೂ ರೂಪಾಂತರಿಸಿದೆ…

ಅಂದಹಾಗೆ ಆ ಸುನಾಮಿಯ ಹೆಸರು ‘ಕಬಾಲಿ’ ಕೇರ್ ಆಫ್ ರಜನಿಕಾಂತ್!

ಜುಲೈ 22ರಂದು ರಜನಿಕಾಂತ್ ಅಭಿನಯದ ಕಬಾಲಿ ಸಿನೆಮಾ ತೆರೆಗೆ ಬರುತ್ತಿದೆ; ಅಥವಾ ನ್ಯೂಸ್ ಚಾನಲ್ಗಳ ಭಾಷೆಯಲ್ಲಿ ಹೇಳುವುದಾದರೆ ಅಪ್ಪಳಿಸಲಿದೆ. ಬಹುಶಃ ದಕ್ಷಿಣ ಭಾರತದ, ಪ್ರಾದೇಶಿಕ ಭಾಷೆಯೊಂದರ ನಟನ ಸಿನೆಮಾವೊಂದು ರಿಲೀಸಿಗೂ ಮುನ್ನವೇ ಇಷ್ಟು ದೊಡ್ಡಮಟ್ಟದ ಪ್ರಚಾರ ಪಡೆದುಕೊಳ್ಳುತ್ತಿರುವುದು ಇದೇ ಮೊದಲಿರಬಹುದು. ಮುಂದಿನ ದಿನಗಳಲ್ಲಿ ಹಾಲಿವುಡ್ ಮತ್ತು ಬಾಲಿವುಡ್ ಸಿನೆಮಾಗಳು ಬಿಡುಗಡೆಗೂ ಮುನ್ನವೇ ನಡೆಸಿಕೊಂಡು ಬರುತ್ತಿರುವ ಪ್ರಚಾರದ ಚೌಕಟ್ಟುಗಳನ್ನು ‘ಕಬಾಲಿ’ ಬದಲಿಸುವ ಸಾಧ್ಯತೆಗಳು ಕಾಣಿಸುತ್ತಿದೆ. ಅಷ್ಟರ ಮಟ್ಟಿಗೆ ಸಿನೆಮಾ ಬಿಡುಗಡೆಗೂ ಮುನ್ನವೇ ‘ಸೂಪರ್ ಹಿಟ್’ ಆಗಿದೆ ಸೂಪರ್ ಸ್ಟಾರ್ ರಜಿನಿ ಅಭಿನಯದ ‘ಕಬಾಲಿ’.

ಈ ಸಮಯದಲ್ಲಿ ರಜನಿ ಎಂಬ ನಟ ಬೆಳೆದು ಬಂದ ಹಾದಿಯನ್ನು ಭಿನ್ನ ಆಯಾಮದಲ್ಲಿ ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಇದು ಅಸಾಮಾನ್ಯ ನಟನೊಬ್ಬ ಬೆಂಗಳೂರಿನಲ್ಲಿ ಕಳೆದ ಬಾಲ್ಯ, ಈ ಸಮಯದಲ್ಲಿ ಮೈಗೂಡಿಸಿಕೊಂಡ ಆಚರಣೆಗಳು, ನಂತರ ಬದುಕಿನ ಉದ್ದಕ್ಕೂ ಅದನ್ನೇ ಪಾಲಿಸಿಕೊಂಡು ಬರುತ್ತಿರುವ ರೀತಿ ಮತ್ತು ಜೀವನದ ಸಾಧನೆಯ ಎಲ್ಲಾ ಹಂತಗಳನ್ನು ತಲುಪಿದ ನಂತರ ಆತನ ಹೆಸರು ಹಾಗೂ ಚರಿಷ್ಮಾ ಆರ್ಥಿಕ ವ್ಯವಸ್ಥೆಯೊಂದರಲ್ಲಿ ಹೇಗೆ ಬಳಕೆಯಾಗಬಹುದು ಎಂಬುದರ ಕತೆ.

ಪ್ರೀತಿಯ ತಮ್ಮ:

12 ಡಿಸೆಂಬರ್, 1950

ಬ್ರಿಟಿಷರಿದ್ದ ಕಾಲದಲ್ಲಿ ಗುತ್ತಿಗೆದಾರ ರಾವ್ ಸಾಹೇಬ್ ಕಟ್ಟಿಸಿದ ಮೊದಲ 250 ಹಾಸಿಗೆ ಉಳ್ಳ ಹೆರಿಗೆ ಆಸ್ಪತ್ರೆ ‘ವಾಣಿ ವಿಲಾಸ’ದಲ್ಲಿ ಹುಟ್ಟಿದ ಮಗು ಶಿವಾಜಿರಾವ್ ಗಾಯಕ್ವಾಡ್.  ತಂದೆ ರಾನೋಜಿ ರಾವ್ ಗಾಯಕ್ವಾಡ್ ಪೊಲೀಸ್ ಇಲಾಖೆಯಲ್ಲಿದ್ದವರು. ತಾಯಿ ರಮಾಬಾಯಿ; ಮರಾಠಿ ಕುಟುಂಬದ ಹೆಣ್ಣುಮಗಳು. ದಂಪತಿಗಳ ನಾಲ್ಕು ಮಕ್ಕಳ ಪೈಕಿ ಕೊನೆಯ ಮಗು ಶಿವಾಜಿ. ತಂದೆ ಸರಕಾರಿ ನೌಕರಿಯಲ್ಲಿದ್ದರೂ ಹೇಳಿಕೊಳ್ಳುವ ಆದಾಯವೇನು ಇರಲಿಲ್ಲ. ತಿಂಗಳಿಗೆ 500 ರೂ. ಸಂಬಳ. ವಾಣಿ ವಿಲಾಸ ಪಕ್ಕದಲ್ಲಿಯೇ ಇದ್ದ ಗಲ್ಲಿಯೊಂದರಲ್ಲಿ ಕುಟುಂಬ ವಾಸಿಸುತ್ತಿತ್ತು.

ಶಿವಾಜಿ ಹುಟ್ಟಿದ ಕೆಲವು ವರ್ಷಗಳಿಗೇ ರಾನೋಜಿ ನಿವೃತ್ತಿ ಹೊಂದಿದರು. ಆಗ ಅವರಿಗೆ ಬರುತ್ತಿದ್ದದ್ದು ತಿಂಗಳಿಗೆ 100 ರೂ. ಪಿಂಚಣಿ. ಅದರಲ್ಲಿಯೇ ಆರು ಜನರ ಕುಟುಂಬ ಸಾಗಬೇಕಿತ್ತು. ಈ ಸಮಯದಲ್ಲಿ ಶಿವಾಜಿ ಅಣ್ಣ ಸತ್ಯನಾರಾಯಣ ಸರಕಾರಿ ನೌಕರಿ ಪಡೆದುಕೊಂಡರು. ಕುಟುಂಬ ಬೆಂಗಳೂರಿನ ಹಳೆಯ ಏರಿಯಾಗಳಲ್ಲಿ ಒಂದಾದ ಹನುಮಂತ ನಗರಕ್ಕೆ ಸ್ಥಳಾಂತರಗೊಂಡಿತು. ಈ ಸಮಯದಲ್ಲಿ ಸತ್ಯನಾರಾಯಣ ಕಿರಾಣಿ ಅಂಗಡಿ ತೆರೆದರಾದರೂ ಹೆಚ್ಚು ದಿನ ನಡೆಯಲಿಲ್ಲ. ಹೀಗೆ, ಅದೊಂದು ಕೆಳ ಮಧ್ಯಮ ವರ್ಗದ ಮನೆ ಮತ್ತು ಭವಿಷ್ಯದ ಸೂಪರ್ ಸ್ಟಾರ್ ಬೆಳೆಯುತ್ತಿದ್ದ ರೀತಿ.

ಆಧ್ಯಾತ್ಮದ ಸ್ಪರ್ಶ:

rajanikanth-childhood-1

ಬಾಲಕ ಶಿವಾಜಿ.

ಆ ಸಮಯದಲ್ಲಿ ಹನುಮಂತನಗರದ ಸಮೀಪದಲ್ಲಿಯೇ ಇದ್ದ ಗೋಸಾಯಿ ಮಠ (ಇವತ್ತಿನ ರಾಮಕೃಷ್ಣ ಆಶ್ರಮ)ದ ಜತೆ ಶಿವಾಜಿಯ ಸಂಪರ್ಕ ಶುರುವಾಯಿತು. ಈ ಸಮಯದಲ್ಲಿ ನಿಧಾನವಾಗಿ ದೇವರು, ಆಧ್ಯಾತ್ಮದ ಕಡೆಗೆ ಪುಟ್ಟ ಬಾಲಕನ ನಡಿಗೆ ಶುರುವಾಯಿತು. ಅದು ಎಷ್ಟರ ಮಟ್ಟಿಗೆ ಶಿಸ್ತು ಬದ್ಧವಾಗಿತ್ತು ಎಂದರೆ, ‘ಒಂದು ದಿನ ಶಿವಾಜಿ ಮಠಕ್ಕೆ ಬಾರದಿದ್ದರೆ ಹಿರಿಯ ಸ್ವಾಮಿ ತಮ್ಮ ಶಿಷ್ಯರನ್ನು ಶಿವಾಜಿ ಮನೆಗೆ ಕಳುಹಿಸುತ್ತಿದ್ದರು,’ ಎಂದು ‘ರಜಿನಿಕಾಂತ್- ದಿ ಡೆಫೆನೆಟಿವ್ ಬಯೋಗ್ರಫಿ’ ಪುಸ್ತಕದಲ್ಲಿ ಲೇಖಕ ನಮನ್ ರಾಮಚಂದ್ರನ್ ಉಲ್ಲೇಖಿಸುತ್ತಾರೆ. ಅವತ್ತು ಶಿವಾಜಿ ಅನುಭವಿಸುತ್ತಿದ್ದ ಬಡತನವನ್ನು ಆಧ್ಯಾತ್ಮ ಬೇರೆಯದೇ ನೆಲೆಯಲ್ಲಿ ಅರ್ಥಪಡಿಸಿ, ಖುಷಿಯಾಗಿಡುವ ಮಾರ್ಗವೂ ಆಗಿತ್ತೇನೋ?

ಶಿವಾಜಿ ಬಳಿ ಇದ್ದದ್ದು ಒಂದು ಪ್ಯಾಂಟ್ ಹಾಗೂ ಎರಡು ಶರ್ಟುಗಳು. ಪ್ರತಿ ದಿನ ಅವುಗಳನ್ನೇ ತೊಳೆದು, ಒಣಗಿಸಿಕೊಂಡು ಮತ್ತೆ ಬಳಕೆ ಮಾಡಬೇಕಿತ್ತು. ದೀಪಾವಳಿ ಬಂದಾಗ ಮಾತ್ರ ಮತ್ತೊಂದು ಹೊಸ ಪ್ಯಾಂಟ್ ಹಾಗೂ ಇನ್ನೆರಡು ಹೊಸ ಶರ್ಟುಗಳು ಶಿವಾಜಿಯ ವಾಲ್ ರೋಬ್ ಸೇರಿಕೊಳ್ಳುತ್ತಿದ್ದವು. ಅಷ್ಟೊತ್ತಿಗೆ ಹಳೆಯವು ಹರಿದು ಮೂಲೆ ಸೇರಿರುತ್ತಿದ್ದವು. ಹೀಗಿರುವಾಗಲೇ ಒಂದು ದೀಪಾವಳಿಯಲ್ಲಿ ಶಿವಾಜಿ ಅಣ್ಣನ ಬಳಿ ಇದ್ದದ್ದು 7 ರೂಪಾಯಿಗಳು ಮಾತ್ರ. ಹೊಸ ಬಟ್ಟೆಗಳನ್ನು ಕೊಳ್ಳಲು ಸಾಧ್ಯವಿಲ್ಲ ಎಂದರು. ಪ್ಯಾಂಟ್ ಮತ್ತು ಶರ್ಟುಗಳ ಬದಲಿಗೆ ಮೂರು ಜತೆ ಜುಬ್ಬಾ ಪೈಜಾಮ ಕೊಡಿಸುವುದಾಗಿ ತಿಳಿಸಿದರಂತೆ. ಅವತ್ತಿಂದ ಜುಬ್ಬಾ ಪೈಜಾಮವೇ ಶಿವಾಜಿ ಡ್ರಸ್ ಕೋಡ್ ಆಗಿ ಹೋಯಿತು ಎಂದು ರಾಮಚಂದ್ರ ಬರೆಯುತ್ತಾರೆ.

ಸಂಕೋಚದ ಆಚೆಗೆ:

ರಜಿನಿ ಕುರಿತು ಹೊರಬಂದಿರುವ ಹಲವು ಪುಸ್ತಕಗಳಲ್ಲಿ ಇದೂ ಒಂದು.

ರಜಿನಿ ಕುರಿತು ಹೊರಬಂದಿರುವ ಹಲವು ಪುಸ್ತಕಗಳಲ್ಲಿ ಇದೂ ಒಂದು.

ಶಿವಾಜಿ ಮೊದಲಿನಿಂದಲೂ ಸಂಕೋಚದ ಹುಡುಗ. ಆದರೆ, ಅದೇ ಸಂಪೂರ್ಣ ಸತ್ಯವಲ್ಲ ಎಂಬುದನ್ನು ರಜನಿಕಾಂತ್ ಕುರಿತು ಹೊರಬಂದಿರುವ ಗಾಯತ್ರಿ ಶ್ರೀಕಾಂತ್ ಬರೆದ ‘ಮೈ ನೇಮ್ ಇಸ್ ರಜನಿಕಾಂತ್’ ಪುಸ್ತಕ ನಿರೂಪಿಸುತ್ತದೆ. ಆಗಿನ್ನೂ ಶಿವಾಜಿ ಚಿಕ್ಕ ಹುಡುಗ. ಸಿನೆಮಾ ನೋಡುವ ಹುಚ್ಚು. ಸ್ನೇಹಿತನೊಬ್ಬನ ಜತೆ ಸಿನೆಮಾ ನೋಡಿ ಹೊರಬರುತ್ತಿದ್ದಾಗ, ಆ ಏರಿಯಾದ ರೌಡಿಯೊಬ್ಬ ಎದುರಾಗುತ್ತಾರೆ. ಶಿವಾಜಿ ಸ್ನೇಹಿತನನ್ನು ಹಿಡಿದುಕೊಂಡು ಥಳಿಸಲು ಶುರು ಮಾಡುತ್ತಾರೆ. ಒಂದೆರಡು ನಿಮಿಷ ಪಕ್ಕದಲ್ಲಿ ನಿಂತು ನೋಡಿತ್ತಿದ್ದ ಶಿವಾಜಿ, ಕೊನೆಗೆ ರೌಡಿಗೆ ಮನ ಬಂದಂತೆ ಹೊಡೆಯಲು ಶುರುಮಾಡುತ್ತಾನೆ. ಸ್ನೇಹಿತನನ್ನು ಆತನಿಂದ ಬಿಡಿಸಿಕೊಂಡು ಅಲ್ಲಿಂದ ಇಬ್ಬರೂ ಪರಾರಿಯಾಗುತ್ತಾರೆ. ಹಾಗೆ ಅವತ್ತು ಶಿವಾಜಿ ಬಾರಿಸಿದ ರೌಡಿಯ ಹೆಸರು ಮರ್ಡರ್ ಕೃಷ್ಣ. ಆತನ ಹೆಸರು ಕೇಳಿದರೆ ಪೊಲೀಸರು ನಡುಗುತ್ತಿದ್ದರಂತೆ.

ಇದು ಗೊತ್ತಾದ ಮೇಲೆ ಶಿವಾಜಿ ಮೂರು ದಿನ ಮನೆಯಿಂದ ಹೊರಗೆ ಬಂದಿರಲಿಲ್ಲ. ಅದು ಮನೆಯವರೇ ವಿಧಿಸಿದ್ದ ಗೃಹ ಬಂಧನ. ಕೊನೆಗೆ, ಒಂದಿನ ಮನೆಯ ಗೋಡೆ ಹಾರಿ ಸೀದಾ ಕೃಷ್ಣನ ಅಡ್ಡಾಗೆ ಹೋದ ಶಿವಾಜಿ, “ನೋಡು ಆಗೋದು ಆಗಿ ಹೋಯಿತು. ನನ್ನನ್ನು ಕತ್ತರಿಸಿ ಹಾಕೋದಿದ್ರೆ ಈಗ್ಲೇ ಹಾಕು. ಭಯದಿಂದ ಬದುಕೋಗೆ ಆಗೋಲ್ಲ,” ಎಂದನಂತೆ.

ಇದು ಶಿವಾಜಿಯ ಮನಸ್ಥಿತಿ ಹೇಗಿತ್ತು ಎಂಬುದಕ್ಕೆ ಉದಾಹರಣೆ. ಶಿವಾಜಿ ರಜಿನಿಯಾಗಿ ಬದಲಾಗಿರುವ ಇವತ್ತೂ ಕೂಡ, ಹೇಳದೆ ಕೇಳದೆ ಮನೆ ಬಿಟ್ಟು ರೈಲ್ವೆ ನಿಲ್ದಾಣಗಳನ್ನು ಅಲೆಯುತ್ತಾರೆ ಎಂದು ಅವರನ್ನು ಬಲ್ಲ ಹಿರಿಯ ಪತ್ರಕರ್ತರೊಬ್ಬರು ನೆನಪಿಸಿಕೊಳ್ಳುತ್ತಾರೆ.

ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು, ಬೆಳೆಯುವ ಹಾದಿಯಲ್ಲಿ ತಂದೆಯನ್ನೂ ಕಳೆದುಕೊಂಡ ಶಿವಾಜಿ ಬೆಂಗಳೂರಿನ ಸಾರಿಗೆ ಇಲಾಖೆ ಸೇರಿಕೊಂಡಿದ್ದು, ನಂತರ ನಾಟಕ ಕಲಿಯಲು ತಮಿಳುನಾಡು ಸೇರಿಕೊಂಡಿದ್ದು, ಅಲ್ಲಿಂದ ಮುಂದೆ ಸೂಪರ್ ಸ್ಟಾರ್ ಆಗಿದ್ದೆಲ್ಲವೂ ಇವತ್ತಿಗೆ ಜನಪ್ರಿಯ ಕತೆ. ಆದರೆ, ಈ ಬೆಳವಣಿಗೆಯಲ್ಲಿ ಗಮನಿಸಬೇಕಿರುವ ಕೆಲವು ಅಂಶಗಳಿವೆ.

ಪ್ರೀಮಿಯರ್ಗೆ ಬರೋಲ್ಲ:

ರಜನಿಕಾಂತ್ ಇವತ್ತಿಗೂ ತಮ್ಮ ಯಾವ ಸಿನೆಮಾದ ಪ್ರೀಮಿಯರ್ ಶೋಗಳಿಗೂ ಬರುವುದಿಲ್ಲವಂತೆ. ‘ಮೈ ಡೇಸ್ ವಿತ್ ಬಾಷಾ’ ಎಂಬ ಪುಸ್ತಕ ಬರೆದ ನಿರ್ದೇಶಕ ಸುರೇಶ್ ಕೃಷ್ಣ ತಮಗಾದ ಅನುಭವವೊಂದನ್ನು ನೆನಪಿಸಿಕೊಳ್ಳುತ್ತಾರೆ. ಅದು ಬಾಷಾ ಸಿನೆಮಾ ಬಿಡುಗಡೆಯ ದಿನ. ರಜನಿ ಕುಟುಂಬ, ತಮಿಳುನಾಡು ಸಿನೆಮಾದ ಹೆಸರಾಂತರೆಲ್ಲರೂ ಪ್ರೀಮಿಯರ್ ಶೋಗೆ ಬಂದಿದ್ದರೂ ರಜನಿಯ ಸುಳಿವೇ ಇರಲಿಲ್ಲವಂತೆ. ‘ರಜನಿಯವರಿಗೆ ಪ್ರತಿ ಸಿನೆಮಾವೂ ಅವರ ಮೊದಲ ಸಿನೆಮಾವೇ ಆಗಿರುತ್ತದೆ. ಪ್ರೀಮಿಯರ್ ಶೋಗೂ ಮುನ್ನ ಸಿನೆಮಾಗೆ ಕೆಲಸ ಮಾಡಿದ ತಂತ್ರಜ್ಞರ ಜತೆ ಸಿನೆಮಾ ನೋಡುತ್ತಾರೆ, ಅಷ್ಟೆ. ಬಿಡುಗಡೆಯ ಮೊದಲ ಶೋ ನಂತರ ತಮ್ಮ ಹತ್ತಿರದವರಿಗೆ ಕರೆ ಮಾಡಿ ಅಭಿಪ್ರಾಯ ಕೇಳುತ್ತಾರೆ. ಅದು ಅವರ ಸ್ವಭಾವ’ ಎಂದು ಬರೆಯುತ್ತಾರೆ ಸುರೇಶ್.

ಇಷ್ಟೆಲ್ಲಾ ವಿಶೇಷಗಳ ನಡುವೆ, ಸಿನೆಮಾ ಬಗೆಗಿನ ಶ್ರದ್ಧೆ ಮತ್ತು ತಮ್ಮದೇ ಆದ ಮ್ಯಾನರಿಸಂ ಮೂಲಕ ಬೆಳೆದು ನಿಂತಿರುವ ರಜನಿಕಾಂತ್ ಸುತ್ತ ಇವತ್ತು ನಡೆಯುತ್ತಿರುವ ಬೆಳವಣಿಗೆಗಳೂ ಇಷ್ಟೆ ಕುತೂಹಲಕಾರಿಯಾಗಿವೆ.

ಕಾರ್ಪೊರೇಟ್ ಐಕಾನ್:

Rajini-kabali-tshirtರಜನಿಕಾಂತ್ ಸರಳ ಜೀವಿ. ತಾವಾಯಿತು; ತಮ್ಮದೇ ಆಧ್ಯಾತ್ಮಿಕ ಬದುಕಾಯಿತು ಎಂದು ಬದುಕುತ್ತಿರುವವರು. ಇಂತಹ ರಜನಿಯ ಮನೋರಂಜನೆಯ ಮುಖ ತಲೈವಾ, ಬಾಷಾ, ರೋಬೊಟ್ ಮತ್ತು ಕಬಾಲಿ ತರಹದ ಪಾತ್ರಗಳು. ಇವತ್ತು ಅವೇ ಆರ್ಥಿಕ ವ್ಯವಸ್ಥೆಯಲ್ಲಿ ಬಿಕರಿಯಾಗುತ್ತಿರುವ ಸರಕುಗಳು. ನೀವೊಮ್ಮ ಯಾವುದಾದರೂ ಆನ್ಲೈನ್ ಸ್ಟೋರ್ಗೆ ಭೇಟಿ ನೀಡಿ ರಜನಿಕಾಂತ್ ಎಂದು ಸರ್ಚ್ ನೀಡಿದರೆ ರಜನಿ ಸುತ್ತ ಬೆಳೆದಿರುವ ಇಂತಹದೊಂದು ಮಾರುಕಟ್ಟೆಯ ಆಲೋಚನೆ ಮತ್ತು ವ್ಯಾಪ್ತಿ ಹೇಗಿದೆ ಎಂಬುದು ಅರ್ಥವಾಗಿ ಹೋಗುತ್ತದೆ. ಬಹುಶಃ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯೊಳಗೆ ಜನಪ್ರಿಯತೆಯೂ ಒಂದು ಸರಕು ಎಂಬುದು ಇಲ್ಲಿ ನಿರೂಪಿಸಲ್ಪಡುತ್ತದೆ.

ರಜನಿಯ ನಿಜ ಬದುಕೇ ಬೇರೆ; ಈ ಕಬಾಲಿಯ ಹವಾನೇ ಬೇರೆ. ‘ರಜನೀಸ್ ಪಂಚತಂತ್ರ: ಬಿಜಿನೆಸ್ ಅಂಡ್ ಲೈಫ್ ಮ್ಯಾನೇಜ್ಮೆಂಟ್’ ಪುಸ್ತಕದಲ್ಲಿ ಈ ಕುರಿತು ಇನ್ನಷ್ಟು ಮಾಹಿತಿಗಳು ಸಿಗುತ್ತವೆ. ಸದ್ಯ ಈ ಕುರಿತು ಬರೆಯುವ ಅಗತ್ಯವಿಲ್ಲ. ಯಾಕೆಂದರೆ ಇದು ಕಬಾಲಿ ಎಂಬ ಸುನಾಮಿ ಎದ್ದ ಕಾಲ. ಸುನಾಮಿ ಅಪ್ಪಳಿಸಿ ಹಿಂದಕ್ಕೆ ಹೋದ ಮೇಲೆ ವಸ್ತುಸ್ಥಿತಿ ಹೇಗಿರುತ್ತದೆ ಎಂಬುದನ್ನು ಕಾದೇ ನೋಡಬೇಕಿದೆ. ಅಷ್ಟರೊಳಗೆ ಕಬಾಲಿ ದರ್ಶನ ಮಾಡಿಕೊಂಡು ಬಂದಿರಿ.

Leave a comment

FOOT PRINT

Top