An unconventional News Portal.

ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ: ಇಲ್ಲಿ ಸೋತವರು ಯಾರು? ಗೆದ್ದವರು ಯಾರು?

ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ: ಇಲ್ಲಿ ಸೋತವರು ಯಾರು? ಗೆದ್ದವರು ಯಾರು?

ಕೊನೆಗೂ ಸಚಿವ ಕೆ. ಜೆ. ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಗಣಪತಿ ಆತ್ಮ ತಣ್ಣಗಾಗಿದೆ. ಕಳೆದ 12 ದಿನಗಳಿಂದ ಸದನದ ಒಳಗೆ, ಹೊರಗೆ ಪ್ರತಿಪಕ್ಷಗಳು ನಡೆಸುತ್ತಿದ್ದ ರಾಜಕೀಯ ಗದ್ದಲ, ಮಾಧ್ಯಮಗಳಲ್ಲಿ ನಿರಂತರ ಸುದ್ದಿ ಪ್ರಸಾರದ ಪರಿಣಾಮಗಳಿಗೆ ಸರಕಾರ ಕೊನೆಗೂ ಮಣಿದಿದೆ. ತಮ್ಮ ಸಹೋದ್ಯೋಗಿ ಒಬ್ಬರನ್ನು ಸಂಪುಟದಿಂದಷ್ಟೆ ಹೊರಗೆ ಕಳುಹಿಸಿ ಕೊಡಲು ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸಿದೆ. 

ಹಗ್ಗ- ಜಗ್ಗಾಟ:

ಜು. 7 ರಂದು ಮಡಿಕೇರಿಯ ವಿನಾಯಕ ಲಾಡ್ಜ್ ಕೋಣೆಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಅದಕ್ಕೂ ಮುನ್ನ ಸ್ಥಳೀಯ ಸುದ್ದಿ ವಾಹಿನಿಯ ಸ್ಟುಡಿಯೋಗೆ ಹೋಗಿದ್ದ ಅವರು, ‘ಡೈಯಿಂಗ್ ಡಿಕ್ಲರೇಷನ್’ ದಾಖಲಿಸಿದ್ದರು. ಅದರಲ್ಲಿ ಸಚಿವ ಕೆ. ಜೆ. ಜಾರ್ಜ್ ಹಾಗೂ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಹಾಗೂ ಆಶಿಕ್ ಮೋಹನ್ ಪ್ರಸಾದ್ ಅವರುಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. 

ಇದೇ ವೇಳೆಗೆ ರಂಜಾನೆ ರಜೆಯ ಮುಗಿಸಿ ಮತ್ತೆ ಸೇರಿದ್ದ ಬಜೆಟ್ ಮುಂದುವರಿದ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿದವು. ಆತ್ಮಹತ್ಯೆ ಪ್ರಕರಣ ಹೊರಬಿದ್ದ ರಾತ್ರಿಯೇ ಬಿಜೆಪಿಯಿಂದ ಜಗದೀಶ್ ಶೆಟ್ಟರ್ ಮಾಧ್ಯಮಗಳ ಜತೆ ಮಾತನಾಡಿ, ಕೆ. ಜೆ. ಜಾರ್ಜ್ ರಾಜೀನಾಮೆ ನೀಡಬೇಕು ಎಂದರು. ಈ ಮೂಲಕ ರಾಜೀನಾಮೆ ಆಗ್ರಹವೇ ತಮ್ಮ ಹೋರಾಟದ ಪ್ರಮುಖ ಅಂಶವಾಗಿರಲಿದೆ ಎಂಬ ಸುಳಿವನ್ನು ನೀಡಿದರು. ಇದಾದ ಎರಡು ದಿನಕ್ಕೆ ವಿದೇಶದಲ್ಲಿ ಮಗನ ಸಿನೆಮಾ ಚಿತ್ರೀಕರಣದಲ್ಲಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ರಾಜ್ಯಕ್ಕೆ ವಾಪಾಸಾದರು. ಊರಿಗೆ ಬಂದವರು ಸೀದಾ ಹೋಗಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಗಣಪತಿ ಹಾಗೂ ಕಲ್ಲಪ್ಪ ಹಂಡಿಭಾಗ್ ಅವರ ಕುಟುಂಬಗಳನ್ನು ಭೇಟಿ ಮಾಡಿ ಬಂದರು. ಬಿಜೆಪಿ ಜತೆಗೂಡಿ ಸದನದ ಒಳಗೆ ಜಾರ್ಜ್ ರಾಜೀನಾಮೆಗಾಗಿ ಆಹೋರಾತ್ರಿ ಧರಣಿಯನ್ನು ಶುರುಮಾಡಿದರು.

ರಾಜಕೀಯ ತಂತ್ರಗಾರಿಕೆ:

ಇನ್ನೊಂದೆಡೆ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಬಂದ್ ನಡೆಸುವ ಮೂಲಕ ತಮ್ಮ ಭದ್ರಕೋಟೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಯಿತು. ಜು. 14ರಂದು ಮಡಿಕೇರಿಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವಾದರೂ ಅಂದುಕೊಂಡ ಮಟ್ಟದಲ್ಲಿ ಯಶಸ್ಸಾಗಲಿಲ್ಲ. ಇತ್ತ ಸದನದೊಳಗೂ ಕಾಂಗ್ರೆಸ್ ಪಕ್ಷವಾಗಲೀ, ಸಿಎಂ ಸಿದ್ದರಾಮಯ್ಯ ಅವರಾಗಲೀ ಮಣಿಯುವ ಲಕ್ಷಣಗಳು ಕಾಣಿಸಲಿಲ್ಲ. ಬದಲಿಗೆ ಜಾರ್ಜ್ ಅಲ್ಪಸಂಖ್ಯಾತರು ಅನ್ನೋ ದಾಳವನ್ನು ಉರುಳಿಸಲು ಪ್ರಯತ್ನಿಸಿದರು. ಎರಡು ದಿನ ಸದನ ಮುಂದೂಡುವ ಮೂಲಕ ವಿಚಾರ ತಿಳಿಯಾಗಬಹುದು ಎಂದು ಕಾದರು.Siddu George

ಅಂತಹ ಸಮಯದಲ್ಲಿ ಗಣಪತಿ ಆತ್ಮಹತ್ಯೆ ವಿಚಾರವನ್ನು ಜೀವಂತವಾಗಿಟ್ಟವರು ರಾಜ್ಯದ ಮಾಧ್ಯಮಗಳು. ಬಹುಶಃ ಮುಂಬೈ ದಾಳಿ ನಂತರ ಹೀಗೊಂದು ನಿರಂತರ ಒಂದು ವಿಚಾರದ ಮೇಲೆ ಸುದ್ದಿಯನ್ನು ಭಿತ್ತರಿಸಿದ, ಪ್ರಕಟಿಸಿದ ಉದಾಹರಣೆ ನಮ್ಮಲ್ಲಿಲ್ಲ. ಇದಕ್ಕೆ ಕಾರಣ, ಕೇವಲ ಕೆ. ಜೆ. ಜಾರ್ಜ್ ಮೇಲೆ ಬಂದಿದ್ದ ಆರೋಪಗಳು ಮಾತ್ರವೇ ಕಾರಣವಾಗಿರಲಿಲ್ಲ. ಕಳೆದ ಹಲವು ಪ್ರಕರಣಗಳಲ್ಲಿ ಸರಕಾರ ನಡೆದುಕೊಂಡು ಬಂದ ಉಡಾಫೆ ಧೋರಣೆಗೆ, ಸಿಎಂ ಸಿದ್ದರಾಮಯ್ಯ ಅವರ ಅಸೂಕ್ಷ್ಮ ನಡವಳಿಕೆಗಳಿಗೆ ತಿವಿಯುವ ಅವಕಾಶವಾಗಿ ಈ ಪ್ರಕರಣವನ್ನು ಮಾಧ್ಯಮಗಳು ಬಳಸಿಕೊಂಡಂತೆ ಇತ್ತು ಒಟ್ಟಾರೆ ನಡೆಗಳು. ಈ ನಡುವೆ ಮಾಧ್ಯಮ ಅಕಾಡೆಮಿ ಸಿಎಂ ಜತೆಗೆ ಪತ್ರಕರ್ತರ ಸಂವಾದವನ್ನು ಆಯೋಜಿಸಿತ್ತಾದರೂ, ಗಣಪತಿ ಪ್ರಕರಣ ಮಾಧ್ಯಮಗಳ ಸುದ್ದಿಮನೆಗಳಿಂದ ಮರೆಯಾಲಿಲ್ಲ.

ಕೊನೆಯ ಮೊಳೆ:

ಹೀಗಿರುವಾಗಲೇ ಸೋಮವಾರ ಜಂಟಿ ಹೋರಾಟ ಎನ್ನುತ್ತಿದ್ದ ಬಿಜೆಪಿಯ ನಾಯಕರನ್ನು ಸದನದಿಂದ ಕರೆಸಿಕೊಂಡ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜೆಡಿಎಸ್ನ್ನು ಬದಿಗೆ ಸರಿಸಿ ರಾಜಭವನಕ್ಕೆ ದೂರು ನೀಡಲು ಹೊರಟು ಹೋದರು. ಇದೇ ವೇಳೆಗೆ, ಮಡಿಕೇರಿಯ ಜೆಎಂಎಫ್ಸಿ ನ್ಯಾಯಾಲಯ ಜಾರ್ಜ್ ಹಾಗೂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾರ್ಗದರ್ಶನ ನೀಡಿತು. ಕಾನೂನಾತ್ಮಕವಾಗಿ ಇದರ ಸಾಧ್ಯಾಸಾಧ್ಯತೆಗಳೇನಿವೆ ಎಂಬುದು ಬೇರೆಯದೇ ವಿಚಾರ. ಆದರೆ, ಇನ್ನೇನು ಉದುರಿ ಬೀಳುತ್ತಿದ್ದ ಸೌಧಕ್ಕೆ ಕಲ್ಲೆಸೆದಂತಾಗಿತು ಕೆಳ ನ್ಯಾಯಾಲಯದ ನಡೆ. ಅಲ್ಲಿಗೆ ಪ್ರಕರಣ ಒಂದು ಸುತ್ತ ಬಂದು ನಿಂತಿತ್ತು. ಈ ಸಮಯದಲ್ಲಿಯೂ ಎಚ್ಚರಾಗದಿದ್ದರೆ ಮುಂದಿನ ಎಲ್ಲಾ ಸಾಧ್ಯತೆಗಳೂ ಮುಚ್ಚಿ ಹೋಗಲಿವೆ ಎಂಬುದು ಸರಕಾರಕ್ಕೂ ಅರ್ಥವಾಗಿತ್ತು.

ಇಷ್ಟೆಲ್ಲದರ ನಡುವೆ ಆಗಾಗ್ಗೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದ ಜಾರ್ಜ್, ಸಂಜೆ ವೇಳೆಗೆ ಮೆತ್ತಗಾಗಿದ್ದರು. ಅವರಿಂದ ರಾಜೀನಾಮೆ ತೀರ್ಮಾನ ಎಂಬ ಸುದ್ದಿ ಹೊರಬೀಳುವಂತೆ ನೋಡಿಕೊಳ್ಳಲಾಯಿತು. ಜತೆಗೆ ಇದು ಕಾಂಗ್ರೆಸ್ ಶಾಸಕರ ಒತ್ತಾಯದ ಕಾರಣಕ್ಕೆ ಹೊರತು ಸಿಎಂ ಸಿದ್ದರಾಮಯ್ಯ ಕೊನೆಯವರೆಗೂ ಜಾರ್ಜ್ ಪರವಾಗಿಯೇ ನಿಂತಿದ್ದರಂತೆ ಎಂಬ ಸುದ್ದಿಯನ್ನೂ ಹರಿಯ ಬಿಡಲಾಯಿತು. ಹಾಗೆ ನೋಡಿದರೆ, ಇಡೀ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಕಳೆದುಕೊಂಡಿದ್ದಾರೆ. ಆದರೆ ಮುಂದಿನ ಚುನಾವಣೆಗೆ ಆಪ್ತ ಮಿತ್ರನೊಬ್ಬನನ್ನು ಉಳಿಸಿಕೊಂಡಿದ್ದಾರೆ.

ಗಣಪತಿ ಆತ್ಮಹತ್ಯೆ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿದೆ ಎಂದು ಪ್ರತಿ ಪಕ್ಷ ಬಿಜೆಪಿ ಈಗಾಗಲೇ ಪಟಾಕಿ ಸಿಡಿಸಲು ಶುರುಮಾಡಿದೆ. ನಾಳೆ ಹೊತ್ತಿಗೆ ಸಂಭ್ರಮಾಚರಣೆ ನಂತರದ ವಿಶ್ರಾಂತಿಗೆ ಅದು ತೆರಳಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತೆ ಮುಖ್ಯವಾಹಿನಿಯಿಂದ ನಾಪತ್ತೆಯಾಗುತ್ತಾರೆ. ಕೊನೆಗೆ ಕೆಲವೇ ದಿನಗಳಲ್ಲಿ ಗಣಪತಿ ಜನರ ನೆನಪುಗಳಿಂದಲೂ ಮರೆಯಾಗಲಿದ್ದಾರೆ. ಇನ್ನೆರಡು ವರ್ಷಗಳಿಗೆ ಮತ್ತೊಂದು ಚುನಾವಣೆ ಎದುರಾಗಲಿದೆ.

ಚಿತ್ರ: i.ytimg.com, mayatoday.com/

Leave a comment

FOOT PRINT

Top