An unconventional News Portal.

ಬದಲಾಗುತ್ತಿದ್ದ ಕೊಡವರ ನಾಡಿನಲ್ಲಿ ಕೇಸರಿ ಝಂಡಾ ಮತ್ತು ಗುರುವಾರದ ‘ಬಂದ್ ಶಾಸ್ತ್ರ’ ಮುಗಿಸಿದ ಬಿಜೆಪಿ ನಾಯಕರು!

ಬದಲಾಗುತ್ತಿದ್ದ ಕೊಡವರ ನಾಡಿನಲ್ಲಿ ಕೇಸರಿ ಝಂಡಾ ಮತ್ತು ಗುರುವಾರದ ‘ಬಂದ್ ಶಾಸ್ತ್ರ’ ಮುಗಿಸಿದ ಬಿಜೆಪಿ ನಾಯಕರು!

ನಿರೀಕ್ಷೆಯಂತೆ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಮಾಧ್ಯಮಗಳೆದುರಿನ ಬಂದ್ ‘ಶಾಸ್ತ್ರ’ವನ್ನು ಗುರುವಾರ ಮುಗಿಸಿತು. ಇದರೊಂದಿಗೆ ಕಾಂಗ್ರೆಸ್ ಸಮಾಧಾನದ ನಿಟ್ಟುಸಿರು ಬಿಟ್ಟಿತು. ಸಂಘ ಪರಿವಾರದ ಕೃಪಾಪೋಷಿತ ಬಂದ್ ಅದರ ಶಕ್ತಿ ಪ್ರದರ್ಶನಕ್ಕೆ ಮೀಸಲಾಗಿದ್ದು ‘ಗಣಪತಿ ಆತ್ಮಹತ್ಯೆ ಪ್ರಕರಣ’ದ ವಿಶೇಷ.

‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು, ಕೆ.ಜೆ ಜಾರ್ಜ್ ಬಂಧಿಸಬೇಕು’ ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಜುಲೈ 14ರಂದು ಕರೆ ನೀಡಿದ್ದ ಕೊಡಗು ಜಿಲ್ಲಾ ಬಂದ್ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ರಾಜ್ಯಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯೂ ಆಗಿತ್ತು. ಜತೆಗೆ, ನಿರೀಕ್ಷೆಯಂತೆ ಬಂದ್ ಶಾಂತಿಯುತವಾಗಿ ಪೂರ್ಣಗೊಂಡಿತು. ಈ ಮೊದಲೇ ‘ಸಮಾಚಾರ’ ವರದಿ ಮಾಡಿದಂತೆ ಅಘೋಷಿತ ಬಂದ್ ಮಡಿಕೇರಿ ಸುತ್ತ ಮುತ್ತ ಮಳೆಗಾಲದ ಹಿನ್ನೆಲೆಯಲ್ಲಿ ಜಾರಿಯಲ್ಲಿತ್ತು. ಹಿಂದೂ ಸಂಘಟನೆಗಳು ಗುರುವಾರ ಪೂರ್ವ ಪ್ರಚಾರದ ಮೂಲಕ ಬೀದಿಗೆ ಇಳಿದ ಹಿನ್ನೆಲೆಯಲ್ಲಿ ಪೂರ್ಣ ಮಟ್ಟದ ಬಂದ್ ಆಗಿ ಪರಿವರ್ತನೆಯಾಯಿತು ಅಷ್ಟೆ.

ಈ ರೀತಿ ಸಂಪ್ರದಾಯದ ಚೌಕಟ್ಟುಗಳ ಒಳಗೇ ನಡೆದ ಬಂದ್ ಹಾಗೂ ಅದರಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು; ಕೇಸರಿ ಕಾರ್ಯಕರ್ತರ ನಡವಳಿಕೆ ಹಾಗೂ ಬಾಹ್ಯ ವರ್ತನೆಗಳನ್ನು ತಳಮಟ್ಟದಿಂದ ‘ಸಮಾಚಾರ’ ಇಲ್ಲಿ ವರದಿ ಮಾಡುತ್ತಿದೆ. ಜತೆಗೆ, ಕೊಡಗಿನಲ್ಲಿ ಸಂಘಪರಿವಾರದ ಅಂಗ ಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳಗಳು ಸಾಗಿ ಬಂದ ಹಾದಿಯನ್ನು ಇಲ್ಲಿ ತೆರೆದಿಡುತ್ತಿದ್ದೇವೆ. ಇದು ಸದರಿ ಸಂಘಟನೆಗಳು ಈಗ ಎದುರಿಸುತ್ತಿರುವ ಬಿಕ್ಕಟ್ಟುಗಳ ಅಮೂರ್ತ ಚಿತ್ರಣ ಕೂಡ.

ತೆರೆಯ ಮುಂದೆ:

“ಈ ಬಂದ್ಗಳಿಂದ ಜನರಿಗೆ ತೊಂದರೆ, ಮಕ್ಕಳಿಗೆ ಒಂದು ದಿನ ರಜೆ. ಬಿಟ್ಟರೆ ಬೇರೇನೂ ಆಗುವುದಿಲ್ಲ. ಕಡೆಯವರೆಗೆ ಹೋರಾಡುತ್ತೇವೆ ಎಂಬುದೆಲ್ಲಾ ಸುಮ್ಮನೆ. ನಾಳೆಯಿಂದ ಜನಜೀವನ ಎಂದಿನಂತೆ ಆರಂಭವಾಗುತ್ತದೆ. ಎಲ್ಲರೂ ಗಣಪತಿ ಆತ್ಮಹತ್ಯೆಯನ್ನು ಮರೆಯುತ್ತಾರೆ,” ಎಂದು ಬಂದ್ನಲ್ಲಿ ಭಾಗವಹಿಸಿದ್ದ ಹೆಸರು ಹೇಳಲಿಚ್ಚಿಸದ ಸಂಘಪರಿವಾರದ ಕಾರ್ಯಕರ್ತರೊಬ್ಬರು ಅಭಿಪ್ರಾಯ ಹಂಚಿಕೊಂಡರು. ಹೀಗಿದ್ದೂ ಬಂದ್ ಮಾಡಿದ್ದು ಯಾಕೆ? ಎಂದು ಕೇಳಿದರೆ ಅವರಲ್ಲಿ ಸರಿಯಾದ ಉತ್ತರಗಳಿರಲಿಲ್ಲ.

bandh-ps-1ಬಂದ್ ಕೂಡಾ ಹಾಗೆಯೇ ಇತ್ತು. ಮಾಧ್ಯಮಗಳ ಕ್ಯಾಮೆರಾಗಳು ಬಂದಾಗ ಕಾರ್ಯಕರ್ತರು ಕಿರುಚಾಡುತ್ತಾ, ಘೋಷಣೆ ಕೂಗುತ್ತಾ, ಮೈಮೇಲೆ ಆಕ್ರೋಶ ಅವಗಾಹಿಸಿಕೊಂಡವರಂತೆ ವರ್ತಿಸುತ್ತಿದ್ದರು. ಕ್ಯಾಮೆರಾಗಳು ದೂರ ಸರಿಯುತ್ತಿದ್ದಂತೆ ಶಾಂತರಾಗುತ್ತಿದ್ದರು. ಮಡಿಕೇರಿಯ ಜನರಲ್ ತಿಮ್ಮಯ್ಯ ಪ್ರತಿಮೆ ಮುಂದೆ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದ ಬಂದ್ ಬೆಂಬಲಿಸಿ ಸೇರಿದವರ ಸಂಖ್ಯೆ ಕೇವಲ 200-300 ಜನ ಮಾತ್ರ!

ಜಿಲ್ಲೆಯ ಬಿಜೆಪಿಯ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ. ಸಂಸದ ಪ್ರತಾಪ್ ಸಿಂಹ ಬಂದು ಹಾಜರಿ ಹಾಕಿ ಫೊಟೋಗೆ ಫೋಸ್ ನೀಡಿ ಹೋದರು. ಬೆಳೆಗ್ಗೆಯಿಂದ ಸಂಜೆವರೆಗೆ ರಸ್ತೆಗಿಳಿದಿದ್ದ ಬರೀ 20-25 ವಾಹನ (ಹೆಚ್ಚಿನವು ಪ್ರವಾಸಿ ವಾಹನಗಳು) ಗಳನ್ನು ತಡೆದಿದ್ದೇ ಈ ಬಂದ್ ಮಾಡಿದವರ ಸಾಧನೆಯಾಗಿ ಉಳಿಯಿತು. ರಸ್ತೆ ಮಧ್ಯೆ ಟಯರ್ಗೆ ಬೆಂಕಿ ಕೊಟ್ಟಿದ್ದು, ಸಿದ್ದರಾಮಯ್ಯ ಮತ್ತು ಜಾರ್ಜ್ ಪ್ರತಿಕೃತಿಗಳ ಹೆಣದ ಮೆರವಣಿಗೆ ಮಾಡಿದ್ದು ಬಿಟ್ಟರೆ ಬಂದ್ನಲ್ಲಿ ಅಂತಹ ವಿಶೇಷತೆ ಕಾಣಲಿಲ್ಲ; ಹೆಚ್ಚಾಗಿ ಕಳಕಳಿ ಮರೆಯಾಗಿತ್ತು. ಲೆಕ್ಕಕ್ಕೆ ಮಾತ್ರ ಕೊಡಗಿನ ಮೂಲೆ ಮೂಲೆಗಳಾದ ವಿರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆ, ಕುಶಾಲನಗರ, ಮಾದಾಪುರ, ಶನಿವಾರ ಸಂತೆ, ಕೊಡ್ಲಿಪೇಟೆ, ನಾಪೊಕ್ಲು, ಮೂರ್ನಾಡು, ಪೊನ್ನಂಪೇಟೆ, ಸಂಪಾಜೆ, ಕುಶಾಲನಗರ ಕೊಪ್ಪ ಗೇಟ್ ಹೀಗೆ ಜನ ಸಂಚಾರ ಇರುವಲ್ಲೆಲ್ಲಾ ಪ್ರತಿಭಟನೆಗಳು ನಡೆದವು. ಹಲವು ಕಡೆಗಳ ಬಂದ್ ಚಿತ್ರಣ ಇದಕ್ಕಿಂತ ಭಿನ್ನವಾಗಿರಲಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಮಾತನಾಡಿಕೊಳ್ಳುತ್ತಿದ್ದರು.

ಕೇಸರಿ ಪಡೆಯ ಬಲ:

ಕೊಡಗಿನಲ್ಲಿ ಬಿಜೆಪಿಯ ನೆಟ್ವರ್ಕ್ ಬಲವಾಗಿದೆ; ಇಡಿ ಪ್ರತಿಭಟನೆ ನೋಡಿದಾಗ ಅನಿಸಿದ್ದಿಷ್ಟು. ಪ್ರತಿಭಟನಾಕಾರರು ವಾಹನಗಳ ಸಂಚಾರಕ್ಕೆ ತಡೆ ಮಾಡಿದಾಗಲೂ ಪೊಲೀಸರು ತಡೆಯುವ ಪ್ರಯತ್ನ ಮಾಡಲೇ ಇಲ್ಲ. ಅವರಿಗೂ ಪ್ರತಿಭಟನೆ ಶಾಂತವಾಗಿ ಹೋಗಬೇಕಾಗಿತ್ತು. “ಒಮ್ಮೆ ಶಾಂತವಾಗಿ ಮುಗಿದರೆ ಸಾಕು ನಾವು ಮನೆಗೆ ಹೊರಟು ಬಿಡುತ್ತೇವೆ. ಇವರೆಲ್ಲ ಬಿಸಿ ರಕ್ತದ ಯುವಕರು. ಸ್ವಲ್ಪ ಯಾಮಾರಿದರೂ ಇದ್ದ ಬದ್ದವರೆಲ್ಲ ಬಂದು ಗಲಾಟೆಯೇ ಆಗಿ ಹೋಗುತ್ತದೆ,” ಎಂದೇ ಹೆಚ್ಚಿನ ಪೊಲೀಸರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.

ಒಂದು ಕಾಲದಲ್ಲಿ ಲೆಕ್ಕ ಹಾಕಿದರೆ ಮೂರು ಮುಕ್ಕಾಲು ಕಾರ್ಯಕರ್ತರು; ನಾಯಕರ ನೆರಳಿಲ್ಲದ ಬಿಜೆಪಿ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇ ಸಂಘಪರಿವಾರದ ಬೆಳವಣಿಗೆ ಜತೆಜತೆಗೆ. ಇಲ್ಲಿ ಸಂಘ ಪರಿವಾರದ ಬೀಜ ಬಿತ್ತಿದವರು ಗುರೂಜಿ ಗೋಳ್ವಾಲ್ಕರ್. 1966ರ ಸುಮಾರಿಗೆ ಕೊಡಗಿಗೆ ಬಂದವರು ಇಲ್ಲಿನ ತಂಪು ಹವೆಯ ಹಸಿ ಮಣ್ಣಲ್ಲಿ ಹಿಂದುತ್ವದ ಬೀಜ ಬಿತ್ತಿ ಹೋದರು. ಇದು ಮೊಳಕೆಯೊಡೆದಾಗ ಪೋಷಿಸಿದವರು ಅವರಿಂದ ಪ್ರಭಾವಿತರಾದ ಸಿ.ವಿ. ಸದಾಶಿವರಾವ್, ಬಿ.ವಿ. ಶಿವಕುಮಾರ್ ಲಾಯರ್, ಗುಂಡುಗುಟ್ಟಿ ಗೋಪಾಲಕೃಷ್ಣ ಮುಂತಾದವರು. ಇವರೇ ಕೊಡಗು ಜಿಲ್ಲೆಯ ರಾಷ್ಟ್ರೀಯ ಸ್ವಂಯ ಸೇವಕ ಸಂಘದ ಸಂಸ್ಥಾಪಕರು.

“ಇವರಲ್ಲಿ ಗೋಪಾಲಕೃಷ್ಣರು ಬಹಳ ಕಾಲ ವಿಹಿಂಪ ಅಧ್ಯಕ್ಷರಾಗಿ, ಸಂಘಟನೆಯನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದರು. ಇವತ್ತು ಸಾವಿರಾರು ಕಾರ್ಯಕರ್ತರು ನಮ್ಮ ಜತೆಗೆ ಇದ್ದಾರೆ,” ಎನ್ನುತ್ತಾರೆ ಹಿಂದೊಮ್ಮೆ ಸಂಘದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಸೀನಾ ಸೋಮೇಶ್. 1971ರಲ್ಲಿ ಸಂಘ ಪರಿವಾರದ ಮತ್ತೊಂದು ಬೀಜ ಮೊಳಕೆಯೊಡೆದು ವಿಶ್ವ ಹಿಂದೂ ಪರಿಷತ್ ಘಟಕ ಮೊದಲ ಬಾರಿಗೆ ಆರಂಭವಾಯಿತು. ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಒಂದು ಸಣ್ಣ ಗುಂಪು ಇದನ್ನು ಆರಂಭಿಸಿತ್ತು. ಅವತ್ತಿಗೆ ಪ್ರಮುಖವಾಗಿ ಈ ಗುಂಪಿನಲ್ಲಿದ್ದವರು ಕಂಬೀರಂಡ ನಂಜಪ್ಪ, ಮಕ್ಕಾಟೀರ ಕಾಳಪ್ಪ, ದೇಸು ಶೇಶಾದ್ರಿ, ಪ್ರಭಾಕರ ಪೈ, ಬಿ.ಜಿ ವಸಂತ್ ಮುಂತಾದವರು. ಹೀಗೆ ಸಣ್ಣ ಮಟ್ಟಕ್ಕೆ ಇದ್ದ ಸಂಘಟನೆಗೆ ಮುಂದೆ ಶ್ರೀ ರಾಮ ಜನ್ಮ ಭೂಮಿ ಆಂದೋಲನ ಆರಂಭವಾದಾಗ ಬೇಕಾದಷ್ಟು ನೀರು ಗೊಬ್ಬರ ಸಿಕ್ಕಿ ಬಲಾಢ್ಯವಾಗಿ ಮತ್ತು ಬೃಹತ್ ಆಗಿ ಬೆಳೆಯಿತು.

“1989ರಲ್ಲಿ ಆಂದೋಲನ ಆರಂಭವಾದಾಗ ಸಂಘಟನೆ ಬಲವಾಯ್ತು. ಸರ್ವತ್ರ ಶಾಖೆಗಳು ಆರಂಭವಾದವು. 1992ರ ಬಾಬರಿ ಮಸೀದಿ ಧ್ವಂಸದ ನಂತರ ಮತ್ತಷ್ಟು ಪ್ರಭಲವಾಯಿತು. 2000ನೇ ಇಸವಿಯಲ್ಲಿ ಪಾಲೂರು ಹರಿಶ್ಚಂದ್ರ ದೇವಸ್ಥಾನವನ್ನು ಮುಸಲ್ಮಾನರು ಭಗ್ನ ಮಾಡಿದರು. ಆಗ ಜಿಲ್ಲೆಯಾದ್ಯಂತ ಭಜರಂಗದಳ ಘಟಕ ಆರಂಭವಾಯಿತು,” ಎನ್ನುತ್ತಾರೆ ಸೀನಾ ಸೋಮೇಶ್. ಸೂರ್ಯ ನಾರಾಯಣ್ ಎನ್ನುವವರು ಆರಂಭದಲ್ಲಿ ಇದರ ಸಂಚಾಲಕರಾಗಿದ್ದರು. ಆಗ ಕೊಡಗಿನಲ್ಲಿ 42ಕ್ಕೂ ಹೆಚ್ಚು ಭಜರಂಗದಳ ಘಟಕಗಳು, ಎಲ್ಲಾ ತಾಲೂಕು ಕೇಂದ್ರಗಳಲ್ಲಿ ವಿಹಿಂಪ ಘಟಕಗಳೆಲ್ಲಾ ಪ್ರಾರಂಭವಾದವು. ಆಗೆಲ್ಲಾ ಇಲ್ಲಿ ರಾಜಕೀಯ ಅಧಿಕಾರ ನಡೆಸುತ್ತಿದ್ದವರು ಕಾಂಗ್ರೆಸ್ಸಿಗರಾಗಿದ್ದರು ಎಂಬುದು ವಿಶೇಷ. ಹಾಗೆ, 2004ರ ವಿಧಾನಸಭೆ ಬಿಜೆಪಿ ಪಾಲಾದ ನಂತರ ಯಾವ ಚುನಾವಣೆಯಲ್ಲೂ ಕೇಸರಿ ಪಕ್ಷ ಇಲ್ಲಿ ಸೋತಿಲ್ಲ. ಗ್ರಾಮ ಪಂಚಾಯತ್ನಿಂದ  ಲೋಕಸಭೆವರೆಗೆ ಎಲ್ಲ ಕಡೆಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಅವತ್ತು ನೆಟ್ಟ ಆಲದ ಮರ ಹಾಗೇ ಉಳಿದುಕೊಂಡಿಲ್ಲ. ಬದಲಿಗೆ ಇವತ್ತು ಬೀಳಿಲುಗಳನ್ನು ನೆಲಕ್ಕೆ ಬಿಟ್ಟು ಮತ್ತಷ್ಟು ಗಟ್ಟಿಯಾಗುತ್ತಿದೆ. “ಒಟ್ಟು 25 ಸಾವಿರ ಸದಸ್ಯತ್ವ ಪಡೆದ ಸದಸ್ಯರು ನಮ್ಮ ಬಳಿ ಇದ್ದಾರೆ. 2015ರ ಫೆಬ್ರವರಿಯಲ್ಲಿ ಗೋಣಿಕೊಪ್ಪದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಮಾಡಿದಾಗ ಪ್ರವೀಣ್ ಭಾಯಿ ತೊಗಾಡಿಯಾ ಬಂದಿದ್ದರು. 50 ಸಾವಿರ ಜನ ಸೇರಿದ್ದರು. ಇದೇ ನಮ್ಮ ಶಕ್ತಿ,” ಎನ್ನುತ್ತಾರೆ ಭಜರಂಗದಳ ಜಿಲ್ಲಾ ಸಂಚಾಲಕ ಎನ್.ಕೆ ಅಜಿತ್ ಕುಮಾರ್.

bandh-vol-1ಇವತ್ತು ಭಜರಂಗದಳಕ್ಕೆ ಪ್ರತಿ ಗ್ರಾಮದಲ್ಲೂ ಘಟಕಗಳಿವೆ. ಇದರ ಮೇಲ್ವಿಚಾರಣೆ ನೋಡಿಕೊಳ್ಳುವ ವಿಹಿಂಪ ಜಿಲ್ಲಾಧ್ಯಕ್ಷರು ಎಮ್ ಎಮ್ ಟಾಟಾ ಬೋಪಯ್ಯ. ಇಲ್ಲಿಯೂ ಬಲಾಢ್ಯ ನೆಟ್ವರ್ಕ್ ಕೆಲಸ ಮಾಡುತ್ತಿದೆ. 4 ತಾಲೂಕು ಘಟಕಗಳು ಅವುಗಳ ಅಡಿಯಲ್ಲಿ  38 ಉಪ ಘಟಕಗಳು ಅವುಗಳಡಿಯಲ್ಲಿ, ಮತ್ತೆ ಗ್ರಾಮಮಟ್ಟದ ಘಟಕಗಳು ಬರುತ್ತವೆ. ಪ್ರತಿ ಗ್ರಾಮ ಘಟಕದಲ್ಲಿಯೂ ಗೋರಕ್ಷಾ ಪ್ರಮುಖ್, ಮಾತೃ ಮಂಡಳಿ, ದುರ್ಗಾ ವಾಹಿನಿ, ಮಠ-ಮಂದಿರಗಳ ಧರ್ಮಾಚರಣಾ ಪ್ರಮುಖ್, ಸದಸ್ಯರು ಎಂದೆಲ್ಲಾ ಸೇರಿ ಒಟ್ಟು 10-15 ಜನ ಪೂರ್ಣ ಪ್ರಮಾಣದ ಕಾರ್ಯಕರ್ತರಿದ್ದಾರೆ. ಹೀಗೆ 4-5 ಸಾವಿರ ಜನರಾಗುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಮಾಹಿತಿ ನೀಡುತ್ತಾರೆ.

ಇವುಗಳಿಗೆಲ್ಲಾ ಬುನಾದಿಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡಾ ಭದ್ರ ತಳಪಾಯ ಹೊಂದಿದೆ. ಕೊಡಗಿನಾದ್ಯಂತ ನಿತ್ಯ ಮುಂಜಾನೆ 60-70 ಶಾಖೆಗಳು ನಡೆಯುತ್ತವೆ. ವಾರಾಂತ್ಯಕ್ಕೆಲ್ಲಾ 500ರವರೆಗೆ ಈ ಸಂಖ್ಯೆ ಏರುತ್ತದೆ. ಇನ್ನು ‘ಐಟಿಸಿ’ ಮತ್ತು ‘ಒಟಿಸಿ’ ತರಬೇತಿ ಹಸರಿನಲ್ಲಿ ಪ್ರತಿ ವರ್ಷ 200 – 600 ಜನರವರೆಗೆ ಪೂರ್ಣ ಪ್ರಮಾಣದ ಹಿಂದೂತ್ವದ ಕಟ್ಟಾಳುಗಳ ಪಡೆಯನ್ನು ತಯಾರು ಮಾಡಲಾಗುತ್ತದೆ.  ಇವತ್ತು ಚಕ್ಕೇರ ಮನು ಕಾರ್ಯಪ್ಪ ಸಂಘದ ಜಿಲ್ಲಾ ಸಂಘ ಚಾಲಕ್ ಆಗಿದ್ದಾರೆ.

ಅವರಿಂದ ಅವರಿಗೇ:

ಸಂಘ ಪರಿವಾರ ಕಾವೇರಿ ಟ್ರಸ್ಟ್ ಹೆಸರಿನಲ್ಲಿ ಮಡಿಕೇರಿಯಲ್ಲಿ ಆಶ್ವಿನಿ ಹಾಸ್ಪಿಟಲ್ ಎಂಬ 100ಕ್ಕೂ ಹೆಚ್ಚು ಹಾಸಿಗೆ ವ್ಯವಸ್ಥೆ ಇರುವ ಅತ್ಯಾಧುನಿಕ  ಆಸ್ಪತ್ರೆ ಹೊಂದಿದೆ. ಇಲ್ಲಿ ಸಂಘದ ಕಾರ್ಯಕರ್ತರಿಗೆ ರಿಯಾಯಿತಿಯೂ ಇದೆ. ಇದಲ್ಲದೇ ಕುಶಾನಗರದಲ್ಲಿ ವಿಹಿಂಪ ಶಾಲೆಯನ್ನು ನಡೆಸುತ್ತದೆ. ಇಲ್ಲಿಯೂ 500-600 ಮಕ್ಕಳು ಕಲಿಯುತ್ತಿದ್ದಾರೆ. ಇದರ ಜೊತೆ ಜೊತೆಗೆ ಪ್ರತೀ ವರ್ಷ ರಕ್ತದಾನ ಶಿಬಿರ, ಉಚಿತ ಕಣ್ಣಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ಸಂಘದ ನಾಯಕರು ನೀಡುತ್ತಾರೆ.

ಹೀಗಿರುವ ಸಂಘಪರಿವಾರ ಮತ್ತದರ ರಾಜಕೀಯ ಮುಖ ಬಿಜೆಪಿ ಇಲ್ಲಿ ಬಂದ್ಗೆ ಕರೆ ನೀಡಿದರೆ ಪರಿಣಾಮ ಹೇಗಿರಬಲ್ಲದು ಎಂಬುದಕ್ಕೆ ಕಳೆದ ಟಿಪ್ಪು ಜಯಂತಿ ಸಮಯದಲ್ಲಿ ನಡೆದ ಗಲಾಟೆಯ ನೆನಪುಗಳಿನ್ನೂ ಹಾಗೆಯೇ ಇವೆ. ಇಂತಹ ಸಮಯದಲ್ಲಿಯೇ ಗಣಪತಿ ಆತ್ಮಹತ್ಯೆ ವಿಚಾರವನ್ನು ಕೈಗೆತ್ತಿಕೊಂಡಾಗ, ವಿಧಾನಸೌಧದ ರಾತ್ರಿ ನಿದ್ದೆಗಿಂತಲೂ ಇದು ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂಬ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ, ಮೃತ ಡಿವೈಎಸ್ಪಿ ಪತ್ನಿ ಕೈಯಲ್ಲಿ ಪ್ರಧಾನಿಗೊಂದು ಪತ್ರ ಬರೆಸಿದ್ದು ಬಿಟ್ಟರೆ, ಕೊಡಗು ಎಂದಿನ ಜನಜೀವನಕ್ಕೆ ಮರಳಲು ಹೆಚ್ಚಿನ ದಿನ ತೆಗೆದುಕೊಳ್ಳಲಾರದು.

ಹೆಚ್ಚಿನ ಓದಿಗೆ:

‘ದಿ ಸ್ಟೋರಿ ಆಫ್ ಕೆ. ಜೆ. ಜಾರ್ಜ್’: ಮಡಿಕೇರಿಯಿಂದ ಸರ್ವಜ್ಞ ನಗರಕ್ಕೆ; ಮರದ ಉದ್ಯಮದಿಂದ ರಾಜಕಾರಣಕ್ಕೆ!

‘ಮಡಿಕೇರಿಯಿಂದ’: ಮಂಜು ಮುಸುಕಿದ ಊರಿನಲ್ಲಿ ‘ಅಘೋಷಿತ ಬಂದ್’ ಮತ್ತು ಸಾಂತ್ವಾನ!

Leave a comment

FOOT PRINT

Top