An unconventional News Portal.

‘ಮಡಿಕೇರಿಯಿಂದ’: ಮಂಜು ಮುಸುಕಿದ ಊರಿನಲ್ಲಿ ‘ಅಘೋಷಿತ ಬಂದ್’ ಮತ್ತು ಸಾಂತ್ವಾನ!

‘ಮಡಿಕೇರಿಯಿಂದ’: ಮಂಜು ಮುಸುಕಿದ ಊರಿನಲ್ಲಿ ‘ಅಘೋಷಿತ ಬಂದ್’ ಮತ್ತು ಸಾಂತ್ವಾನ!

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ತವರು ಜಿಲ್ಲೆಗೆ ದೂರದ ಮಂಗಳೂರಿನಿಂದ ಬಂದರು. ಜಿಲ್ಲಾ ಕೇಂದ್ರ ಮಡಿಕೇರಿಯ ಸ್ಥಳೀಯ ವಾಹಿನಿಗೆ ಸಂದರ್ಶನ ನೀಡಿದರು. ಅಲ್ಲಿ ತಮ್ಮ ಸಾವಿಗೆ ಇಬ್ಬರು ಅಧಿಕಾರಿಗಳು ಹಾಗೂ ಹಿಂದಿನ ಗೃಹ ಸಚಿವ, ಕೊಡಗು ಮೂಲದ ಕೆ. ಜೆ. ಜಾರ್ಜ್ ಕಾರಣ ಎಂದರು. ಆದರೆ, ಸರಕಾರ ಪ್ರಥಮ ಮಾಹಿತಿ ವರದಿ ದಾಖಲಿಸುವಾಗ ಆತ್ಮಹತ್ಯೆಗೆ ಪ್ರೇರಣೆ ನೀಡಿದವರ ಬಗ್ಗೆ ಮುಗುಮ್ಮಾಗಿಯೇ ಉಳಿಯಿತು. ಸಿಎಂ ಸಿದ್ದರಾಮಯ್ಯ ತಮ್ಮ ಸಹೋದ್ಯೋಗಿಯನ್ನು ಉಳಿಸಲು ಹೋಗಿ ರಾಜ್ಯದ ಮಾಧ್ಯಮಗಳ, ಮುಖ್ಯವಾಹಿನಿಯ ಜನರ ಆಕ್ರೋಶಕ್ಕೆ ತುತ್ತಾದರು. ಬಜೆಟ್ ಮುಂದುವರಿದ ಅಧಿವೇಶನದಲ್ಲಿ ಇದೇ ವಿಚಾರಕ್ಕೆ ಆಡಳಿತ ಹಾಗೂ ವಿರೋಧ ಪಕ್ಷಗಳು ಬಡಿದಾಡಿಕೊಳ್ಳುತ್ತಿವೆ.

ಇಷ್ಟೆಲ್ಲಾ ಘಟನೆಗಳು ರಾಜಧಾನಿ ಬೆಂಗಳೂರು ಕೇಂದ್ರಿತವಾಗಿ ನಡೆಯುತ್ತಿರುವಾಗ, ವಿಷಯ ಹುಟ್ಟಿದ ಮಡಿಕೇರಿಯ ಮನಸ್ಥಿತಿ ಏನಿದೆ? ಇದನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ‘ಸಮಾಚಾರ’ ಮಂಗಳವಾರದಿಂದ ಮಡಿಕೇರಿಯನ್ನು ಕೇಂದ್ರವಾಗಿಟ್ಟುಕೊಂಡು ತನ್ನ ಸುತ್ತಾಟವನ್ನು ಆರಂಭಿಸಿದೆ. ಅಲ್ಲಿನ ತಳಮಟ್ಟದ ವರದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನವಿದು.

ಒದ್ದೆ ನೆಲದಲ್ಲಿ ಮೊದಲ ಹೆಜ್ಜೆ:

ಕಳೆದ ನಾಲ್ಕು ದಿನಗಳಿಂದ ರಾಜ್ಯವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯ ಮೂಲ ಸ್ಥಾನ ಮಡಿಕೇರಿ. ಮಂಗಳವಾರ ಮುಂಜಾನೆ ಅಂದರೆ ಸುಮಾರು 11 ಗಂಟೆ ಹೊತ್ತಿಗೂ ಅಲ್ಲಿ ಮಂಜು ಮುಸುಕಿದ ವಾತಾವರಣ. ಜಿಲ್ಲಾ ಕೇಂದ್ರದ ಹೃದಯ ಭಾಗದ ರಸ್ತೆಗಳಲ್ಲಿ ನಾಲ್ಕಾರು ವಾಹನಗಳು, ಐದಾರು ನಡಿಗೆದಾರರು ಹಾಗೂ ಗಿರಾಕಿಗಳನ್ನು ಕಾಯುತ್ತಾ ಕುಳಿತಿದ್ದ ಅಂಗಡಿ ಮಾಲೀಕರನ್ನು ಹೊರತು ಪಡಿಸಿದರೆ, ಮಡಿಕೇರಿ ಕರೆ ನೀಡುವುದಕ್ಕೆ ಮುನ್ನವೇ ಸ್ವಯಂ ಬಂದ್ ಘೋಷಿಸಿಕೊಂಡಿದೆ. ಅದಕ್ಕೆ ಕಾರಣ ಗಣಪತಿಯವರ ಆತ್ಮಹತ್ಯೆ ಪ್ರಕರಣ ಎಂದರೆ ತಳಮಟ್ಟದ ವರದಿಗಳನ್ನು ತಿರುಚಿದಂತಾಗುತ್ತದೆ. ಇಲ್ಲೀಗ ಮಳೆಗಾಲ. ಮಳೆಗಾಲದಲ್ಲಿ ಮಡಿಕೇರಿ ಇರುವುದು ಹೀಗೆಯೇ.

ಇನ್ನು ಅಲ್ಲಿನ ಜನರ ಬಳಿ ರಾಜಕೀಯ ಮಾತನಾಡಿದರೆ ಅಚ್ಚರಿ ಆಗುವಂತಹ ಸಂಗತಿಗಳು ಹೊರಬೀಳುತ್ತವೆ. ನಿಮ್ಮ ಶಾಸಕರು ಯಾರು ಎಂಬ ಸಾಮಾನ್ಯ ಪ್ರಶ್ನೆ ಮುಂದಿಟ್ಟರೆ, ಬಹುತೇಕರಿಗೆ ಉತ್ತರವೇ ಗೊತ್ತಿರಲಿಲ್ಲ. ಅವರಲ್ಲಿ ಕೂಲಿ ಕೆಲಸಕ್ಕೆ ಹೊರಟವರು, ಹೊರಗಿನಿಂದ ಬಂದ ಜನರೇ ಹೆಚ್ಚು. ಇನ್ನು ಕೆಲವು ಸ್ಥಳೀಯರಿಗೆ ಅಪ್ಪಚ್ಚು ರಂಜನ್ ಮತ್ತು ಕೆ. ಜಿ. ಬೋಪಯ್ಯ ನಡುವೆ ಗೊಂದಲವಿದ್ದಂತೆ ಕಂಡು ಬಂತು. ಹೊರಗೆ ಪ್ರವಾಸೋದ್ಯಮದ ಕಾರಣಕ್ಕೆ, ಸದ್ಯ ಕೋಮು ವಿಚಾರಗಳಿಗೆ ಸದ್ದು ಮಾಡುತ್ತಿರುವ ಜಿಲ್ಲೆಯ ರಾಜಕೀಯ ಪ್ರಜ್ಞೆಯ ಒಳನೋಟಗಳಿವು.

ಬಂದ್ ಬೆಳವಣಿಗೆಗಳು:

ಮಾಧ್ಯಮಗಳಲ್ಲಿ ತೋರಿಸುತ್ತಿರುವಂತೆ ಮಡಿಕೇರಿ ‘ಉದ್ವಿಗ್ನ’ ಅನ್ನುವಂತ ಯಾವ ಪರಿಸ್ಥಿತಿಯೂ ಇಲ್ಲಿ ಕಾಣಿಸಲಿಲ್ಲ. ಮಂಗಳವಾರ ನಡೆದ ಎಬಿವಿಪಿ ಕಾಲೇಜ್ ಬಂದ್ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಸಂಖ್ಯೆ 50 ದಾಟಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಸಂಖ್ಯೆ 300ರಷ್ಟಿತ್ತು. “ಕೇವಲ ರಾಜಕೀಯ ಕಾರಣಕ್ಕಷ್ಟೇ ಬಂದ್ ಮಾಡುತ್ತಾರೆ. ಬೇರಾವ ಉಪಯೋಗನೂ ಇಲ್ಲ. ಈ ಬಂದ್ನಿಂದ ಏನೂ ಆಗುವುದಿಲ್ಲ. ಎರಡು ದಿನ ಬಂದ್ ಮಾಡಿ ಸುಮ್ಮನಾಗುತ್ತಾರೆ,” ಎಂದರು ಮಡಿಕೇರಿಯ ಆಟೋ ಚಾಲಕ ರವಿ. ಇತ್ತೀಚಿನ ದಿನಗಳಲ್ಲಿ ಮಡಿಕೇರಿಯಲ್ಲಿ ಬಂದ್ಗಳು ಸಾಮಾನ್ಯ ಎಂಬಂತಾಗಿದೆ ಎಂಬುದು ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. “ಟಿಪ್ಪು ಜಯಂತಿ ಸಮಯದಲ್ಲಿ ಬಂದ್ ಮಾಡೋಕೆ ಹೋದ್ರು. ಆಮೇಲೆ ಏನಾಯ್ತು; ಒಬ್ಬ ಸತ್ತು ಹೋದ. ಇವತ್ತು ಅವನನ್ನು ಯಾರು ನೆನಪು ಮಾಡ್ಕೋತಿದ್ದಾರೆ ಹೇಳಿ,” ಎಂದು ಆಕ್ರೋಶವನ್ನು ಅವರು ಹೊರಹಾಕಿದರು.

ರಾಜಕೀಯ ಪಲ್ಲಟ:

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಮಡಿಕೇರಿ ಇವತ್ತು ಬಿಜೆಪಿಯ ಹಿಡಿತದಲ್ಲಿದೆ. ಇದಕ್ಕೆ ಕಾರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿರಂತರ ಪ್ರಯತ್ನ ಎನ್ನುವುದು ಸ್ಥಳೀಯ ಮಾಧ್ಯಮ ಪ್ರತಿನಿಧಿಯೊಬ್ಬರ ಅಭಿಪ್ರಾಯ. 1992ರ ಅಯೋಧ್ಯೆ ಘಟನೆಯ ನಂತರ ದೇಶಾದ್ಯಂತ ಬಿಜೆಪಿ ಬೆಳೆಯುತ್ತಿರುವ ವೇಳೆಯಲ್ಲಿ ಇಲ್ಲಿಯೂ ಕೇಸರಿ ಪಕ್ಷ ನೆಲೆ ಕಂಡುಕೊಂಡಿತು. ಪರಿಣಾಮ 1994ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ವಿರಾಜಪೇಟೆ ಮತ್ತು ಮಡಿಕೇರಿ ಎರಡೂ ಕ್ಷೇತ್ರಗಳಲ್ಲಿ ಗೆಲುವು ಕಂಡಿತು. ಸದ್ಯ ವಿರಾಜಪೇಟೆಯಲ್ಲಿ ಕೆ.ಜಿ ಬೋಪಯ್ಯ ಮತ್ತು ಮಡಿಕೇರಿಯಲ್ಲಿ ಅಪ್ಪಚ್ಚು ರಂಜನ್ ಬಿಜೆಪಿ ಪಕ್ಷದಿಂದ ಜನರನ್ನು ಪ್ರತಿನಿಧಿಸುತ್ತಿದ್ದಾರೆ.

ಇಲ್ಲಿನ ಜನರಿಗೆ ರಾಜಕೀಯ ಆಸಕ್ತಿಯ ವಿಚಾರ ಅಂತ ಅನ್ನಿಸುವುದಿಲ್ಲ. ಇವತ್ತಿನ ಯುವತಲೆಮಾರಿನಲ್ಲಿ ಬಿಜೆಪಿಯ ಬಗ್ಗೆ ಒಲವಿದೆ. ಸ್ಥಳೀಯ ವಿಚಾರಗಳು ಬಂದಾಗ ಅದು ವೇಗವಾಗಿ ಪ್ರತಿಕ್ರಿಯಿಸುವ ರೀತಿಯಿಂದಾಗಿ ಹೆಚ್ಚಿನರಿಗೆ ಹತ್ತಿರವಾಗುತ್ತಿದೆ. ಅದು ಟಿಪ್ಪು ಜಯಂತಿ ವಿಚಾರವೇ ಇರಬಹುದು, ಗಣಪತಿ ಆತ್ಮಹತ್ಯೆಯೇ ಇರಬಹುದು.

ಮಡಿಕೇರಿಯ ಯುವಕರ ಒಲವು ಬಿಜೆಪಿ ಅನ್ನುವುದಕ್ಕಿಂತ ಹಿಂದುತ್ವ ಎಂಬುದು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತಿತ್ತು. ಇವತ್ತಿಗೂ ಸಂಘ ಪರಿವಾರದ ಪ್ರಚಾರಕರಾದ ಜಗದೀಶ್ ಕಾರಂತ್ ಮತ್ತು ಕಲ್ಲಡ್ಕ ಪ್ರಭಾಕರ ಭಟ್ಟರ ಉಗ್ರ ಭಾಷಣಗಳನ್ನು ನೆನಪಿಸಿಕೊಳ್ಳುವವರಿದ್ದಾರೆ. ಅವರ ನಿರಂತರ ಭಾಷಣದಿಂದಾಗಿ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ ಎಂಬುದನ್ನು ಕೆಲವರು ಒಪ್ಪಿಕೊಳ್ಳುತ್ತಾರೆ.

“ಬಿಜೆಪಿ ಬಗ್ಗೆ ಆಕರ್ಷಣೆ ಇದೆ. ಹಾಗಂತ ಜನ ಅವರು ಕರೆದಾಗಲೆಲ್ಲಾ ಬೀದಿಗೆ ಇಳಿಯುವುದಿಲ್ಲ. ಪ್ರತಿಭಟನೆ, ಗಲಾಟೆಗಳಲ್ಲಿ ಅಷ್ಟಾಗಿ ಇಲ್ಲಿನ ಜನರಿಗೆ ಆಸಕ್ತಿ ಇಲ್ಲ,” ಎನ್ನುತ್ತಾರೆ ‘ಟಿವಿ ವನ್’ ಸಂಪಾದಕ ಪ್ರಸಾದ್. ಇದೇ ಟಿವಿ ಕಚೇರಿಗೆ ಗಣಪತಿ ಆತ್ಮಹತ್ಯೆಗೂ ಮುನ್ನ ತೆರಳಿ ಸಂದರ್ಶನ ನೀಡಿ ಬಂದಿದ್ದರು. “ಬಿಜೆಪಿಯವರು ಬಂದ್ ಕರೆ ನೀಡಿದ್ದಾರೆ. ಈಗಾಗಲೇ ಜನ ಎಲ್ಲಿ ನಮ್ಮ ವಾಹನಗಳಿಗೆ ಕಲ್ಲು ಬೀಳುತ್ತವೆಯೋ, ಅಂಗಡಿ ಮುಂಗಟ್ಟಿಗೆ ಹಾನಿಯಾಗುತ್ತದೆಯೋ ಎಂದು ಯೋಚಿಸುತ್ತಿದ್ದಾರೆ. ಅವತ್ತು ಅವರು ರಸ್ತೆಗೆ ಇಳಿಯುವುದು ಡೌಟು. ಅದೇ ಬಂದ್,” ಎನ್ನುತ್ತಾರೆ ಪ್ರಸಾದ್.

ಸೂತಕದ ಮನೆಯಲ್ಲಿ:

ಮಂಗಳವಾರ ಗಣಪತಿ ಮನೆಗೆ ಭೇಟಿ ನೀಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು.

ಮಂಗಳವಾರ ಗಣಪತಿ ಮನೆಗೆ ಭೇಟಿ ನೀಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು.

ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಎಂ.ಕೆ. ಗಣಪತಿ ಕುಟುಂಬವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ. ಆರ್. ಸೀತಾರಾಂ ಮಂಗಳವಾರ ಭೇಟಿ ಮಾಡಿದರು. ಸೋಮವಾರಪೇಟೆಯ ರಂಗಸಮುದ್ರದಲ್ಲಿರುವ ಗಣಪತಿಯವರ ಮನೆಗೆ ತೆರಳಿದ ಅವರು ಸಾಂತ್ವನ ಹೇಳಿ ‘ಸರಕಾರಿ ಶಾಸ್ತ್ರ’ ಮುಗಿಸಿದರು. ಈ ವೇಳೆ ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದರೂ, ಸಚಿವರು ನಾಜೂಕಾಗಿಯೇ ಎಲ್ಲವನ್ನೂ ನಿಭಾಯಿಸಿದರು.

ಗಣಪತಿಯವರ ಮನೆ ಬಾಗಿಲಿನಲ್ಲಿ ಪ್ರತಿಭಟನೆ ಮುಂದಾದವರಿಗೆ “ನಿಮ್ಮೆಲ್ಲಾ ಬೇಡಿಕೆಗಳನ್ನು ಕೇಳಲೆಂದೇ ಬಂದಿದ್ದೇನೆ,” ಎಂದ ಸಚಿವರು ಪೊಲೀಸ್ ಭದ್ರತೆಯಲ್ಲಿ ಗಣಪತಿ ಮನೆಗೆ ತೆರಳಿದರು. ಈ ವೇಳೆ ಗಣಪತಿ ತಂದೆ ಕುಶಾಲಪ್ಪರಿಗೆ ಸಾಂತ್ವನ ಹೇಳಿದ ಸಚಿವರು, “ತನಗೆ ಗಣಪತಿ ಏನು ಎಂಬ ಅರಿವು ಇದೆ. ಅವರು ಬೆಂಗಳೂರಿನಲ್ಲಿದ್ದಾಗ ನನ್ನ ಕ್ಷೇತ್ರದ ವ್ಯಾಪ್ತಿಯ್ಲಲೇ ಕೆಲಸ ಮಾಡುತ್ತಿದ್ದರು. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯನ್ನು ರಾಜ್ಯ ಕಳೆದುಕೊಂಡಿದೆ. ಆದರೆ ವಿನಾ ಕಾರಣ ರಾಜಕೀಯಕ್ಕೆ ಬಲಿಯಾಗಬೇಡಿ ಎಂದಷ್ಟೇ ಹೇಳಲು ಬಂದಿದ್ದೇನೆ,” ಎಂದರು. ಕೊನೆಗೆ ಇದೆಲ್ಲಾ ನಡೆದು ಪತ್ನಿ ಪಾವನಾ ಜೊತೆ ಮಾತನಾಡಲು ಮನೆಯ ಒಳಗೆ ತೆರಳಿದಾಗ ಟಿವಿ ಕ್ಯಾಮೆರಾಗಳು ಹಿಂಬಾಲಿಸಿದವು. ಇದನ್ನು ಕುಟುಂಬದವರು ಆಕ್ಷೇಪಿಸಿದರು. ಸಚಿವರ ವಿನಂತಿಯ ಮೇರೆಗೆ ಮಾಧ್ಯಮಗಳು ಹೊರಗೇ ಉಳಿದುಕೊಳ್ಳಬೇಕಾಯಿತು.

ಸತತ ಟಿವಿ ಮಾಧ್ಯಮಗಳ ಕವರೇಜ್ ಗಣಪತಿ ಅವರ ಪತ್ನಿ ಪಾವನಾಗೆ ಕಿರಿಕಿರಿ ತಂದೊಡ್ಡಿದೆ. ಇದರಿಂದ ಬೇಸತ್ತು, ಬೆಳಿಗ್ಗೆ ಒಮ್ಮೆ ಮಾತ್ರ ಮಾಧ್ಯಮಗಳ ಜತೆ ಮಾತನಾಡುತ್ತೇವೆ, ನಮ್ಮನ್ನು ಸಂಪರ್ಕಿಸಲು ಬರಬೇಡಿ ಎಂಬ ಸಂದೇಶವನ್ನು ಕುಟುಂಬದವರು ಮಾಧ್ಯಮಗಳಿಗೆ ತಲುಪಿಸಿದ್ದಾರೆ.

ಮಾತುಕತೆ ಮುಗಿಸಿ ಹೊರಬಂದ ಸಚಿವರು ಎಲ್ಲರ ಜತೆ ನಗುನಗುತ್ತಲೇ ಮಾತನಾಡಿ ಹೊರಟು ಹೋದರು. ಇವರಿಗೂ ಮುಂಚೆ ಕೊಡಗು ಜಿಲ್ಲೆಯ ಉಸ್ತುವಾರಿಕೆಯ ಹೊಣೆಯನ್ನು ಹೊತ್ತುಕೊಂಡವರು ಸದ್ಯ ಆರೋಪದ ಕೇಂದ್ರಸ್ಥಾನದಲ್ಲಿರುವ ಸಚಿವ ಕೆ. ಜೆ. ಜಾರ್ಜ್. ಇದೇ ಕೊಡಗಿನ ಗೋಣಿಕೊಪ್ಪಲಿಗೆ ಸೇರಿದವರು. ಅವರು ಓದಿದ್ದೆಲ್ಲಾ ಇಲ್ಲಿಯೇ ಪೊನ್ನಂ ಪೇಟೆಯಲ್ಲಿ. “ಗೋಣಿಕೊಪ್ಪಲಿನ ಸುತ್ತ ಮುತ್ತ ಮರದ ವ್ಯಾಪಾರ ಮಾಡುತ್ತಿದ್ದರು,” ಎಂದು ಇಲ್ಲಿನ ಸ್ಥಳೀಯರು ಜಾರ್ಜ್ ಅವರ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ನಂತರ ಬೆಂಗಳೂರಿಗೆ ಹೋಗಿ ನೆಲೆನಿಂತ ಜಾರ್ಜ್, ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಗೆ ಏನೂ ಮಾಡಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರೇ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸದ್ಯಕ್ಕೆ ಮಡಿಕೇರಿ ಮಳೆಯ ಹಿನ್ನೆಲೆಯಲ್ಲಿ ಮಂಜಿನ ಮುಸುಗನ್ನು ಹೊದ್ದು ಕುಳಿತಿದೆ. ಆಳಕ್ಕೆ ಇಳಿಯುತ್ತಾ ಹೋದಂತೆ ಇಲ್ಲಿ ಇನ್ನೇನು ಕತೆಗಳಿವೆಯೋ ಗೊತ್ತಿಲ್ಲ. ಗಣಪತಿ ಅವರ ಆತ್ಮಹತ್ಯೆ ನಂತರ ಮುಖ್ಯವಾಹಿನಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಪರಿಣಾಮ ಇಲ್ಲೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a comment

FOOT PRINT

Top