An unconventional News Portal.

ಫ್ರಾನ್ಸ್ ವಿರುದ್ಧ ‘ಯುರೋ – 2016’ ಯುದ್ಧ ಗೆದ್ದ ಪೊರ್ಚುಗಲ್

ಫ್ರಾನ್ಸ್ ವಿರುದ್ಧ ‘ಯುರೋ – 2016’ ಯುದ್ಧ ಗೆದ್ದ ಪೊರ್ಚುಗಲ್

ಬಹು ನಿರೀಕ್ಷಿತ ‘ಯುರೋ ಕಪ್ -2016’ ಪೊರ್ಚುಗಲ್ ಪಾಲಾಗಿದೆ. ಭಾನುವಾರ (ಫ್ರಾನ್ಸ್ ಕಾಲಮಾನ) ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ನೇತೃತ್ವದ ಪೊರ್ಚುಗಲ್ ಅತಿಥೇಯ ಫ್ರಾನ್ಸ್ ವಿರುದ್ಧ 1-0 ಗೋಲ್ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿತು. ಈ ಮೂಲಕ ಯುರೋಪಿಯನ್ ಫೂಟ್ಬಾಲ್ ಜಗತ್ತಿನ ಹೊಸ ಅಧಿಪತಿಯಾಗಿ ಪೊರ್ಚುಗಲ್ ಮೂಡಿ ಬಂತು.

ಪ್ಯಾರಿಸ್ನ ‘ಸ್ಟೇಡ್ ಡೆ ಫ್ರಾನ್ಸ್’ ಮೈದಾನದಲ್ಲಿ ಫೂಟ್ಬಾಲ್ ಫೈನಲ್ ಆರಂಭವಾಗಿತ್ತು. ಎಲ್ಲರ ಕಣ್ಣು ಇದ್ದಿದ್ದು ಪೋರ್ಚುಗಲ್ ನಾಯಕ ಕ್ರಿಶ್ಚಿಯಾನೋ ರೊನಾಲ್ಡೋ ಮೇಲೆ; ಸ್ಟಾರ್ ಆಟಗಾರ, ಪಂದ್ಯದ ದಿಕ್ಕನ್ನೇ ತನಗೆ ಬೇಕಾದಂತೆ ಬದಲಿಸಬಲ್ಲ ಚಾಣಾಕ್ಷ. ಆದರೆ ಪಂದ್ಯ ಆರಂಭವಾಗಿ ಇನ್ನೇನು ಸ್ವಲ್ಪ ಸಮಯ ಕಳೆದಿದೆ ಅಷ್ಟೇ ಕ್ರಿಶ್ಚಿಯಾನೋ ಗಾಯಕ್ಕೆ ತುತ್ತಾದರೂ. ಸ್ಟ್ರೆಚರ್ ಹತ್ತಿ ಹೋದ ಕ್ರಿಶ್ಚಿಯಾನೋ ಮತ್ತೆ ಮೈದಾನಕ್ಕೆ ಇಳಿಯಲೇ ಇಲ್ಲ. ಅರ್ಧ ಮೊದಲಾರ್ಧ ಮತ್ತು ದ್ವಿತೀಯಾರ್ಧ ಪೂರ್ತಿ ರೋನಾಲ್ಡೋ ಇಲ್ಲದೇ ಆಟ ನಡೆದಿದ್ದು ಫೂಟ್ಬಾಲ್ ಅಭಿಮಾನಿಗಳಿಗೆ ಬೇಸರ ಹುಟ್ಟಿಸಿತು.

ರೊನಾಲ್ಡೋ ಮೈದಾನದಿಂದ ಹೊರ ನಡೆಯುತ್ತಿದಂತೆ ಪೋರ್ಚುಗಲ್ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ನಾಯಕನ ಅನುಪಸ್ಥಿತಿಯಲ್ಲಿ ಇಡೀ ತಂಡವೇ ಒಂದಾಗಿ ಅಧ್ಭುತವಾಗಿ ಆಡಿದ ಪೊರ್ಚುಗಲ್ ಆಟಕ್ಕೆ ಫ್ರಾನ್ಸ್ ತಂಡ ದಂಗಾಗಿ ಹೋಯ್ತು.2475

ಮೊದಲಾರ್ಧ ಪೂರ್ತಿ ಗೋಲ್ಗಳಿಲ್ಲದೇ ಸಾಗಿತು. ದ್ವಿತೀಯಾರ್ಧದ್ದೂ ಅದೇ ಕತೆ. ಪಂದ್ಯ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಕಡೆಯವರೆಗೂ ಸಾಗಿ ಬಂತು. ಪೋರ್ಚುಗಲ್ನ ಜಾವೋ ಮರಿಯಾ ಮತ್ತ ನಾನಿ ಮಧ್ಯೆ ಮಧ್ಯೆ ಫ್ರಾನ್ಸ್ ಕೋಟೆಗೆ ಕನ್ನ ತೋಡುವ ಪ್ರಯತ್ನ ನಡೆಸಿದರಾದರೂ ಯಾವ ಪ್ರಯತ್ನಗಳೂ ಯಶಸ್ವಿಯಾಗಲಿಲ್ಲ. ಅತ್ತ ಫ್ರಾನ್ಸ್ನದೂ ಇದೇ ಕತೆ.

ಫ್ರಾನ್ಸ್ ಈ ಹಿಂದಿನ ಐರ್ಲಾಂಡ್, ಐಸ್ಲಾಂಡ್ ಮತ್ತು ಜರ್ಮನಿ ವಿರುದ್ಧದ ಪಂದ್ಯದಲ್ಲಿ ದ್ವಿತೀಯಾರ್ಧದಲ್ಲಿ ಅತ್ಯುತ್ತಮ ದಾಳಿ ನಡೆಸುತ್ತಿತ್ತು. ಆದರೆ ಈ ಬಾರಿ ಅದ್ಯಾವುದೂ ಕಾಣಿಸಲೇ ಇಲ್ಲ. ಪೊರ್ಚುಗಲ್ ಮುಂದೆ ಸಪ್ಪೆಯಾದ ಫ್ರಾನ್ಸನ್ನು ನೋಡಬೇಕಾಯಿತು. ಆಗಾಗ ಫ್ರಾನ್ಸ್ ರಕ್ಷಣಾ ಕೋಟೆಯೂ ಒಡೆಯುತ್ತಿತ್ತು. ಅತ್ತ ಮುನ್ಪಡೆ ಆಟಗಾರರೂ ದಾಳಿ ಸಂಘಟಿಸುವಲ್ಲಿ ಸೋಲುತ್ತಿದ್ದರು. ಒಟ್ಟಾರೆ ಫ್ರಾನ್ಸ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವುದು ನಿಶ್ಚಿತವಾಗಿತ್ತು.

ಗೋಲ್ ಕೀಪರ್ ಕರಾಮತ್ತು:

ಇತ್ತೀಚೆಗಿನ ಫೂಟ್ಬಾಲ್ ನಲ್ಲಾದ ಬದಲಾವಣೆಗಳನ್ನು ನೋಡಿದರೆ ಹೆಚ್ಚಿನ ಫೈನಲ್ ಪಂದ್ಯಗಳಲ್ಲಿ ರಕ್ಷಣಾ ಆಟಗಾರರಿಂದ ಹೆಚ್ಚಾಗಿ ಗೋಲ್ ಕೀಪರ್ಗಳೇ ಜಯ ನಿರ್ಧರಿಸುತ್ತಿದ್ದಾರೆ. ಯುರೋ ಫೈನಲ್ನಲ್ಲಿಯೂ ಇದೇ ನಡೆಯಿತು. ಉಭಯ ತಂಡಗಳ ಗೋಲ್ ಕೀಪರ್ಗಳು ಕೊನೆಯವರೆಗೂ ಗೋಲ್ ಆಗದಂತೆ ತಮ್ಮ ಕರಾಮತ್ತು ತೋರಿದರು. ಅದರಲ್ಲೂ ಪೊರ್ಚುಗಲ್ ಚಾಂಪಿಯನ್ ಆಟದಲ್ಲಿ ರುಯಿ ಪಟ್ರೇಸಿಯೋ ಪಾತ್ರ ಪ್ರಮುಖವಾದುದು. ಆಟದ ಅವಧಿಯಲ್ಲಿ ಕಳೆದ 298 ನಿಮಿಷಗಳಿಂದ ಅವರು ಎದುರಾಳಿಗೆ ಒಂದೇ ಒಂದು ಗೋಲ್ ಕೂಡಾ ಬಿಟ್ಟು ಕೊಟ್ಟಿಲ್ಲ. ಈ ಮೂಲಕ ತಮ್ಮ ದೇಶದ ತಂಡವನ್ನು ಅವರು ಫೈನಲ್ವರೆಗೆ ಕರೆ ತಂದರು.

ಎಕ್ಸ್ ಟ್ರಾ ಅವಧಿಯಲ್ಲಿ ಈಡರ್ ಮ್ಯಾಜಿಕ್:2390516_w1

ಇನ್ನೇನು ನಿಗದಿತ ಅವಧಿ ಮುಗಿಯಲು 11 ನಿಮಿಷಗಳಿವೆ ರೊನಾಟೋ ಸಾಂಚೆಸ್ ಬದಲಿಗೆ ಮೈದಾನಕ್ಕೆ ಇಳಿದು ಬಂದ ‘ಈಡೆರ್’ ಪಂದ್ಯದ ಗತಿಯನ್ನೇ ಬದಲಿಸಿದರು. ನಿಗದಿತ ಅವಧಿಯಲ್ಲಿ ಯಾವುದೇ ಗೋಲ್ ದಾಖಲಾಗದಿದ್ದಾಗ ಪಂದ್ಯವನ್ನು 30 ನಿಮಿಷಗಳ ಹೆಚ್ಚಿನ ಅವಧಿಗೆ ವಿಸ್ತರಿಸಲಾಯ್ತು. ಈ ವೇಳೆ ಬದಲಿಗೆ ಆಟಗಾರನಾಗಿ ಬಂದಿದ್ದ ಪೋರ್ಚುಗಲ್ ಮುನ್ಪಡೆ ಆಟಗಾರ ಈಡರ್ ಫ್ರಾನ್ಸ್ ಕೋಟೆಗೆ ಲಗ್ಗೆ ಹಾಕಿಯೇ ಬಿಟ್ಟರು. ಲೌರೆಂಟ್ ಕೊಶೆನ್ಲಿ ಮತ್ತು ಸಾಮ್ಯುವೆಲ್ ಉಮ್ಟಿಟಿ ಪಾಸ್ ಮಾಡಿದ ಚೆಂಡನ್ನು ಕಾಲಿನಿಂದ ಗೋಲ್ ಪೆಟ್ಟಿಗೆಯತ್ತ ರಭಸದಿಂದ ಒದ್ದರು. ಬಾಲ್ ವೇಗ ಮತ್ತು ದಿಕ್ಕನ್ನು ಗ್ರಹಿಸುವಲ್ಲಿ ವಿಫಲವಾದ ಫ್ರಾನ್ಸ್ ಗೋಲ್ ಕೀಪರ್ ಲ್ಲೋರಿಸ್ ಗೋಲ್ ತಡೆಯಲ್ಲಿ ವಿಫಲವಾಗುತ್ತಿದ್ದಂತೆ ಇಡೀ ಮೈದಾನ ಸ್ಥಬ್ದವಾಯ್ತು. ಎಲ್ಲೋ ಮೂಲೆಯಲ್ಲಿದ್ದ ಪೊರ್ಚುಗಲ್ ಅಭಿಮಾನಿಗಳಷ್ಟೇ ಕುಣಿದು ಕುಪ್ಪಳಿಸಿದರು.

ಗೆದ್ದ ಸಂಭ್ರಮದಲ್ಲಿ ಪೊರ್ಚುಗೀಸರು ಮೈದಾನ ತುಂಬಾ ಓಡಾಡಿ ಸಂಭ್ರಮಿಸಿದರೆ ಫ್ರಾನ್ಸ್ ಆಟಗಾರರು ವಿರೋಚಿತ ಸೋಲಿನಿಂದ ಪೆಚ್ಚು ಮೋರೆ ಹಾಕಬೇಕಾಯಿತು. ಟೂರ್ನಿಯಲ್ಲಿ ಅತೀ ಹೆಚ್ಚು 6 ಗೋಲ್ ಗಳಿಸಿ ನವತಾರೆಯಾಗಿ ಉದಯಿಸಿದ್ದ ಫ್ರಾನ್ಸ್ನ ಆಂಟೋನ್ ಗ್ರಿಜ್ಞನ್ ಫೈನಲ್ ಪಂದ್ಯದಲ್ಲೇ ಕೈ ಕೊಟ್ಟಿದ್ದು ತವರಿನ ಅಭಿಮಾನಿಗಳನ್ನು ನಿರಾಸೆಗೆ ದೂಡಿತು.

ಚಿತ್ರ ಕೃಪೆ: ಇಎಸ್ಪಿಎನ್, ಗಾರ್ಡಿಯನ್

Leave a comment

FOOT PRINT

Top