An unconventional News Portal.

ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ: 48 ಗಂಟೆ ಕಳೆದ ನಂತರ ಸತ್ತು ಹೋಗಿರುವ ಸಂವೇದನೆಗಳ ಸುತ್ತ…

ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ: 48 ಗಂಟೆ ಕಳೆದ ನಂತರ ಸತ್ತು ಹೋಗಿರುವ ಸಂವೇದನೆಗಳ ಸುತ್ತ…

ನೀವು ಈ ಸುದ್ದಿಯನ್ನು ಓದುತ್ತಿರುವ ಹೊತ್ತಿಗೆ ಹೆಚ್ಚುಕಡಿಮೆ 40 ಗಂಟೆಗಳು ಕಳೆದು ಹೋಗಿವೆ. ಡಿವೈಎಸ್ಪಿ ಮಟ್ಟದ ಅಧಿಕಾರಿ ಎಂ. ಕೆ. ಗಣಪತಿ ಮಡಿಕೇರಿಯ ಸ್ಥಳೀಯ ವಾಹಿನಿ ‘ಟಿವಿ ವನ್’ಗೆ ಭೇಟಿ ನೀಡಿದ್ದು, ತಮ್ಮ ಮೇಲಾಗುತ್ತಿರುವ ಕಿರುಕುಳಗಳ ವಿವರ ನೀಡಿದ್ದು, ಇಬ್ಬರು ಹಿರಿಯ ಅಧಿಕಾರಿಗಳು ಹಾಗೂ ಹಿಂದಿನ ಗೃಹ ಸಚಿವರ ಹೆಸರನ್ನು ಹೇಳಿದ್ದು, ನಂತರ ಲಾಡ್ಜ್ ಕೋಣೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬದವರು ಮಡಿಕೇರಿಗೆ ಬಂದು ಪಾರ್ಥಿವ ಶರೀರವನ್ನು ಪಡೆದಿದ್ದು, ಅದರ ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಸಚಿವ ಕೆ. ಜೆ ಜಾರ್ಜ್ ಅವರ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದು, ಡಿಜಿಪಿ ಓಂಪ್ರಕಾಶ್ ಅವರಿಗೆ ಗದರಿದ್ದು, ಗೃಹ ಸಚಿವ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಭಿನ್ನ ಹೇಳಿಕೆ ನೀಡಿದ್ದು, ದಿನಪೂರ್ತಿ ಪ್ಯಾನಲ್ ಚರ್ಚೆಗಳು ನಡೆದಿದ್ದು ಮತ್ತು ಮತ್ತೊಂದು ದಿನ ಮುಗಿದು ಕತ್ತಲಾಗಿದ್ದು…

ಕಳೆದ ಒಂದೂವರೆ ದಿನದಲ್ಲಿ ರಾಜ್ಯದ ಮುಖ್ಯವಾಹಿನಿಯಲ್ಲಿ ನಡೆದ ಬೆಳವಣಿಗೆಯ ಚಿತ್ರಕತೆಗಳಿವು.

ಮಂಗಳೂರಿನಲ್ಲಿ ಐಜಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿದ್ದ ಸೋಮವಾರಪೇಟೆ ಮೂಲದ ಎಂ. ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಮತ್ತು ಅದರ ಸುತ್ತ ನಡೆದ ಘಟನಾವಳಿಗಳನ್ನು ಗಮನಿಸಿದರೆ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡು ಐಎಎಸ್ ಅಧಿಕಾರಿ ಡಿ. ಕೆ. ರವಿ ಪ್ರಕರಣವನ್ನು ನೆನಪಿಸುವಂತಿತ್ತು ಪರಿಸ್ಥಿತಿ. ಆದರೆ ಈ ಬಾರಿ ಜನ ಬೀದಿಗೆ ಇಳಿದಿರಲಿಲ್ಲ ಎಂಬುದೊಂದು ಬಿಟ್ಟರೆ, ಮಿಕ್ಕೆಲ್ಲಾ ದೃಶ್ಯಾವಳಿಗಳು ಪುನರಾವರ್ತನೆಯಾದವು. ಅದೇ ನಿರ್ಲಜ್ಜ ಸರಕಾರ, ರಾಜಕೀಯಕ್ಕಿಳಿದ ಪ್ರತಿಪಕ್ಷಗಳು, ಧಾವಂತಕ್ಕೆ ಬಿದ್ದ ಮಾಧ್ಯಮಗಳು ಮತ್ತು ನಿರ್ಲಕ್ಷ್ಯ ಹೊಂದಿನ ಜನವರ್ಗ. ಅಂತಿಮವಾಗಿ, ಈ ಸಾವು ಕೂಡ ತಿಥಿಗೂ ಮುನ್ನವೇ ಎಲ್ಲರ ಮನಸ್ಸಿನಿಂದ ಮರೆಯಾಗುತ್ತದೆ. ವ್ಯವಸ್ಥೆಯ ಯಥಾಸ್ಥಿತಿ ಹೀಗೆ ಮುಂದುವರಿಯುತ್ತದೆ. ಯಾಕೆ ಹೀಗಾಗುತ್ತಿದೆ?

ರಾಜಕೀಯ ಮುಖ್ಯ:

ಯಾವುದೇ ವಿಚಾರ ಮುನ್ನೆಲೆ ಬಂದರೂ ಅಲ್ಲಿ ಅಧಿಕಾರ ರಾಜಕಾರಣ ಮುಖ್ಯವಾಗುತ್ತಿದೆಯೇ ಹೊರತು, ಕಾಳಜಿ ಮತ್ತು ದೂರಗಾಮಿ ಆಲೋಚನೆಗಳಲ್ಲ. ಗಣಪತಿಯವರ ಆತ್ಮಹತ್ಯೆ ವಿಚಾರದಲ್ಲಿಯೂ ಇದೇ ಎದ್ದು ಕಾಣಿಸುತ್ತಿದೆ. ಅವರು ಸಾವಿಗೂ ಮುನ್ನವೇ ನಡೆದುಕೊಂಡ ರೀತಿಯನ್ನು ಗಮನಿಸಿದರೆ, ಸತ್ತ ನಂತರ ವ್ಯವಸ್ಥೆಯೊಳಗೆ ಏಳಲಿರುವ ಬಿರುಗಾಳಿಯನ್ನು ಊಹಿಸಿದಂತಿತ್ತು. ತನ್ನ ಆತ್ಮಹತ್ಯೆಗೆ ಇಂತವರೇ ಕಾರಣ ಎನ್ನುವ ಮೂಲಕ ಸಾವಿನ ನಂತರವೂ ಒಂದಷ್ಟು ಜನ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದು ಬಯಸಿದ್ದರು.

ಆದರೆ, ಈ ವ್ಯವಸ್ಥೆಯಲ್ಲಿ ಅಷ್ಟೊಂದು ಸೂಕ್ಷ್ಮತೆ ಉಳಿದುಕೊಂಡಿಲ್ಲ ಎಂಬುದನ್ನು ಅವರು ಮರೆತಿದ್ದರು. ಗುರುವಾರ ರಾತ್ರಿ, ಆತ್ಮಹತ್ಯೆ ಪ್ರಕರಣ ಹೊರಬೀಳುತ್ತಿದ್ದಂತೆ ಮೊದಲ ಕೆಲವು ಗಂಟೆಗಳ ಕಾಲ ಪೊಲೀಸ್ ಇಲಾಖೆ ಒಳಗಿನ ಹುಳುಕುಗಳ ಕುರಿತು ಚರ್ಚೆ ನಡೆಯಿತು. ನಂತರ ನಿಧಾನವಾಗಿ ಅದು ರಾಜಕೀಯ ಬಣ್ಣವನ್ನು ಪಡೆದುಕೊಂಡಿತು. ಗಣಪತಿಯವರ ಹಿನ್ನೆಲೆಯೂ ಚರ್ಚೆಯ ಅಖಾಡಕ್ಕೆ ಬಂತು. ಕೊನೆಗೆ, ಇಲ್ಲಿಯೂ ಕೂಡ ಪರ ಮತ್ತು ವಿರೋಧ ಎಂಬ ಸಿದ್ಧಮಾದರಿಯ ಚೌಕಟ್ಟೊಂದು ನಿರ್ಮಾಣವಾಯಿತು. ಒಂದು ಸಾವು ಸೃಷ್ಟಿಸಬೇಕಾದ ಕಂಪನ, ಆಲೋಚನೆಗಳು ಮರೆಯಾದವು. ಹಿಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಅಖಾಡಕ್ಕೆ ಇಳಿಯಿತು.

ಶುಕ್ರವಾರ ಬೆಳಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೈತಿಕತೆ ವಿಚಾರವನ್ನು ಮರತೇ ಬಿಟ್ಟಂತೆ ಕಂಡರು. “ತನಿಖೆ ನಡೆಯಲಿ, ವರದಿ ಬರಲಿ, ಕ್ರಮ ಕೈಗೊಳ್ಳುತ್ತೇವೆ.” ಎಂದರು. ಅದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಅಸ್ತ್ರ ಎಂಬುದು ಅವರಿಗೂ ಗೊತ್ತಿತ್ತು. ಅದಕ್ಕಾಗಿಯೇ ರಾತ್ರೋರಾತ್ರಿ ಪ್ರಕರಣವನ್ನು ಸಿಐಡಿಗೆ ವಹಿಸುವ ಪ್ರಕ್ರಿಯೆಯನ್ನು ಮುಗಿಸಿ ಬಂದಿದ್ದರು. ಜತೆಗೆ ಗೃಹ ಸಚಿವ ಪರಮೇಶ್ವರ್ ನೀಡಿದ ಹೇಳಿಕೆಗಳು ಪ್ರಕರಣದ ದಿಕ್ಕನ್ನೇ ಬದಲಿಸಿದವು. ಮುಖ್ಯಮಂತ್ರಿ ಮತ್ತು ಗೃಹ ಸಚಿವರ ನಡುವೆ ಭಿನ್ನಾಭಿಪ್ರಾಯ ಎಂದು ಧಾವಂತಕ್ಕೆ ಬಿದ್ದವರಂತೆ ಮಾಧ್ಯಮಗಳು ಬಿಂಬಿಸಿದವು. ಅಸಲಿಗೆ, ಇಬ್ಬರು ಸಹೋದ್ಯೋಗಿಗಳು ಬಿಕ್ಕಟ್ಟಿನಿಂದ ಪಾರಾಗಲು ಸೂತ್ರವೊಂದನ್ನು ಹೆಣೆದಿರುವ ಸಾಧ್ಯತೆಯನ್ನು ಗಮನಿಸವಲ್ಲಿ ಅವು ಸೋತು ಹೋದವು.
ಇದೇ ವೇಳೆಗೆ, ಟೌನ್ ಹಾಲ್ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿತಾದರೂ, ಅದರ ನಾಯಕತ್ವ ವಹಿಸಿದವರ ನೈತಿಕತೆ ಎಷ್ಟಿದೆ ಎಂಬುದನ್ನು ಜನರಿಗೆ ಮೊದಲೇ ಗೊತ್ತಿತ್ತು. ಈ ನೆಲೆಯಲ್ಲಿ ಅಧಿಕಾರದ ಕೇಂದ್ರದ ಮಟ್ಟಿಗೆ ಪ್ರಕರಣ ಮುಗಿದ ಅಧ್ಯಾಯ ಅನ್ನಿಸಿಕೊಂಡು ಬಿಟ್ಟಿತ್ತು.

ಮಡುವುಗಟ್ಟಿದ್ದ ಮೌನ:

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ರಾಜ್ಯ ಪೊಲೀಸ್ ಇಲಾಖೆಯೊಳಗೆ ಮಡುವುಗಟ್ಟಿದ ಮೌನವೊಂದು ಆವರಿಸಿಕೊಂಡಿತ್ತು. ತಮ್ಮೊಬ್ಬ ಸಹೋದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೊನೆಯ ಗಳಿಗೆಯಲ್ಲಿ ಹೇಳಿದ ಒತ್ತಡಗಳು, ರಾಜಕೀಯ ಹಸ್ತಕ್ಷೇಪಗಳು ಇಲ್ಲಿನ ಪ್ರತಿಯೊಬ್ಬರ ಅನುಭವಕ್ಕೆ ಬಂದ ಅಂಶಗಳೇ ಆಗಿದ್ದವು. ಹೀಗಿದ್ದೂ, ಹಿರಿಯ ಅಧಿಕಾರಿಗಳು ಬೆಂಗಳೂರು ಬಿಟ್ಟು ಕದಲಿಲ್ಲ. ಮಡಿದ ಅಧಿಕಾರಿಯ ಕುಟುಂಬಕ್ಕೆ ಸಾಂತ್ವಾನ ಹೇಳಲಿಲ್ಲ. ಡಿಜಿಪಿ ಓಂ ಪ್ರಕಾಶ್ ಅವರಿಗೆ ಮಡಿಕೇರಿಗೆ ಹೋಗಿ ಎಂದು ಖುದ್ದು ಮುಖ್ಯಮಂತ್ರಿಯವರೇ ಹೇಳಬೇಕಾದ ಸನ್ನಿವೇಶ ಇರುವಾಗ ಹೆಚ್ಚಿನದ್ದೇನನ್ನೂ ನಿರೀಕ್ಷೆ ಮಾಡುವ ಹಾಗಿಲ್ಲ ಎಂಬುದು ಅವರಿಗೂ ಅರ್ಥವಾಗಿ ಹೋಗಿತ್ತು.

ಗಣಪತಿ ತಮ್ಮ ಸೇವಾವಧಿಯಲ್ಲಿ ತಪ್ಪಿಗಳನ್ನು ಮಾಡಿರಬಹುದು. ಒಣ ಸಿದ್ಧಾಂತಗಳಿಗೆ ಬಲಿಯಾಗಿರಬಹುದು. ಆದರೆ, ಅವರ ಸಾವು ಅವೆಲ್ಲವನ್ನೂ ಮೀರಿದ್ದು ಎಂಬ ಸಂವೇದನೆ ಕಳೆದುಕೊಂಡ ಪ್ರತಿಕ್ರಿಯೆಗಳಿಗೆ ಇವರು ಮೂಕಸಾಕ್ಷಿಗಳಾಗಿ ಕೂರವಂತಾಗಿತ್ತು. ಬಹುಶಃ ಇನ್ನು ಪೊಲೀಸರ ಸರಣಿ ಆತ್ಮಹತ್ಯೆಗಳು ನಡೆದರೂ, ಅವುಗಳು ಕೂಡ ಈ ದೇಶದಲ್ಲಿ ನಡೆದುಕೊಂಡು ಬರುತ್ತಿರುವ ರೈತರ ಆತ್ಮಹತ್ಯೆಯಷ್ಟೆ ಸಹಜವಾಗಿ ಹೋಗುವ ದಿನಗಳು ದೂರವಿಲ್ಲ ಎಂಬ ಕಠೋರ ಸತ್ಯವನ್ನು ಇಲಾಖೆ ಅರಗಿಸಿಕೊಳ್ಳುವ ಹಾದಿಯಲ್ಲಿರುವುದು ಕಂಡು ಬಂತು.

ನೈತಿಕತೆಯ ಪ್ರಶ್ನೆ:

ಇವೆಲ್ಲನ್ನು ಮೀರಿದ್ದು ನೈತಿಕತೆಯ ಪ್ರಶ್ನೆ. ಒಬ್ಬ ಅಧಿಕಾರಿ ಸಾವಿಗೂ ಮುನ್ನ ಇಂತವರಿಂದ ತೊಂದರೆಯಾಗಿದೆ ಎಂದು ಹೆಸರುಗಳನ್ನು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವಾಗ, ಪ್ರಕರಣದ ಕೇಂದ್ರಕ್ಕೆ ಬಂದವರ ಪ್ರತಿಕ್ರಿಯೆಗಳು ಗಮನಿಸುವಂತಿತ್ತು. ರಾಷ್ಟ್ರೀಯ ವಾಹಿನಿಗೆ ಸಂದರ್ಶನ ನೀಡಿದ ಎ. ಎಂ. ಪ್ರಸಾದ್, “ನಾನು ಕಳೆದ ಎಂಟು ವರ್ಷಗಳಿಂದ ಗಣಪತಿಯವರನ್ನು ಭೇಟಿಯೇ ಆಗಿಲ್ಲ,” ಎಂದರು. ರಜೆಯ ಮೇಲೆ ಒರಿಸ್ಸಾಗೆ ತೆರಳಿದ್ದ ಪ್ರಣವ್ ಮೊಹಾಂತಿ ಬೆಂಗಳೂರಿಗೆ ಬಂದರಾದರೂ, “ಎಲ್ಲೋ ಮಿಸ್ ರೆಪ್ರೆಸೆಂಟ್ ಆಗಿದೆ ನನ್ನ ಹೆಸರು,” ಎಂದು ಖಾಸಗಿಯಾಗಿ ಹೇಳಿಕೊಂಡರು. ಸಚಿವ ಕೆ. ಜೆ. ಜಾರ್ಜ್ ನಿರೀಕ್ಷಿತ ಸಮಜಾಯಿಷಿಯ ಹೇಳಿಕೆಯನ್ನು ನೀಡಿದರು.

ಒಂದು ಕ್ಷಣಕ್ಕಾದರೂ, ‘ಅವರು ಸಾವಿಗೂ ಮುನ್ನ ನಮ್ಮ ಹೆಸರು ಹೇಳಿದ್ದಾರೆ. ಅದರಲ್ಲಿ ಸತ್ಯವಿದೆಯೋ, ಇಲ್ಲವೋ ತನಿಖೆಯಾಗಲಿ. ಅಲ್ಲೀವರೆಗೂ ನಾನು ಅಧಿಕಾರ ಕೇಂದ್ರದಿಂದ ದೂರ ಉಳಿದು ತನಿಖೆಯನ್ನು ಎದುರಿಸುತ್ತೇನೆ. ಸತ್ಯ ಮೇವ ಜಯತೇ’ ಎಂದು ಯಾರ ಬಾಯಲ್ಲೂ ಬರಲಿಲ್ಲ. ಅಂತಹ ನೈತಿಕ ಪ್ರಜ್ಞೆಯನ್ನು ನಿರೀಕ್ಷಿಸುವ ದಿನಗಳು ಸತ್ತು, ತಿಥಿಯೂ ಮುಗಿದ ದಿನಗಳಿವು ಎಂಬುದು ಮತ್ತೊಮ್ಮೆ ಸಾಭೀತಾಯಿತು.

ಈ ಸಮಯದಲ್ಲಿ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಬಳಕೆಯಾಗಬೇಕಾದದ್ದು ಜನ ನೀಡಿರುವ ಅಧಿಕಾರ. ಕನಿಷ್ಟ ಇವರ್ಯಾರ ಮೇಲೆ ಒಂದು ಪ್ರಥಮ ಮಾಹಿತಿ ವರದಿ ಕೂಡ ದಾಖಲಾಗಲಿಲ್ಲ. ಅಲ್ಲಿಗೆ ತನಿಖೆಗೆ ಮುನ್ನವೇ ಪ್ರಕರಣ ಹಾದಿ ಬಿಟ್ಟ ಸೂಚನೆ ಸಿಕ್ಕಂತಾಯಿತು.

ಇವೆಲ್ಲವುಗಳ ಆಚೆಗೆ ಹತ್ತತ್ತು ಸುದ್ದಿ ವಾಹಿನಿಗಳ ನಿರಂತರ ಪ್ರಸಾರ, ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಮೂರು ನಾಲ್ಕು ಪುಟಗಳ ಕವರೇಜ್ ಆಚೆಗೂ 36 ಗಂಟೆ ನಂತರ ಸಮಾಜ ಯಥಾಸ್ಥಿತಿಯಲ್ಲಿಯೇ ಮುಂದುವರಿಯುತ್ತದೆ. ಸತ್ತವರ ಜತೆಗೇ ನೆನಪುಗಳೂ ಮಣ್ಣಾಗುತ್ತವೆ ಎಂದರೆ ಎಲ್ಲೋ ಏನೋ ಮಿಸ್ ಹೊಡೆಯುತ್ತಿದೆ ಅಂತಲೇ ಅರ್ಥ.

Leave a comment

FOOT PRINT

Top