An unconventional News Portal.

‘ಹಾಯ್ ಬೆಂಗಳೂರು’ ಕಚೇರಿಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಅಪರೂಪದ ಪತ್ರಕರ್ತನ ನೆನಪು ಮಾಡಿಕೊಟ್ಟರು!

‘ಹಾಯ್ ಬೆಂಗಳೂರು’ ಕಚೇರಿಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಅಪರೂಪದ ಪತ್ರಕರ್ತನ ನೆನಪು ಮಾಡಿಕೊಟ್ಟರು!

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ‘ಹಾಯ್ ಬೆಂಗಳೂರು’ ಪತ್ರಿಕಾ ಕಚೇರಿಗೆ ಸೋಮವಾರ ಸಿಬಿಐ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಮುಂಬೈನಲ್ಲಿ ಐದು ವರ್ಷಗಳ ಹಿಂದೆ ನಡೆದ ತನಿಖಾ ಪತ್ರಕರ್ತ ಜ್ಯೋತಿರ್ಮೊಯ್ ಡೇ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಅವರಿಂದ ಮಾಹಿತಿ ಪಡೆದುಕೊಂಡರು. ಈ ಕುರಿತು ಅವರೇ ತಮ್ಮ ವೆಬ್ ಸೈಟಿನಲ್ಲಿ ಹೇಳಿಕೊಂಡಿದ್ದಾರೆ.

ಈ ಮೂಲಕ ಕೊಲೆಯಾಗಿ ಹೋದ ಅಪರರೂಪ ಪತ್ರಕರ್ತರೊಬ್ಬರ ನೆನಪು ಮಾಡಿಕೊಳ್ಳುವ ಸನ್ನಿವೇಶ ಇದೀಗ ಎದುರಾಗಿದೆ. ಮುಂಬೈನ ‘ಮಿಡ್ ಡೇ’ ಪತ್ರಿಕೆಯಲ್ಲಿ ತನಿಖಾ ವರದಿಗಳ ಸಂಪಾದಕರಾಗಿದ್ದ ಜ್ಯೋತಿಮೊಯ್ ಡೇ ತಮ್ಮ ಸಹೋದ್ಯೋಗಿಗಳ ವಲಯದಲ್ಲಿ ಕಮಾಂಡರ್ ಜೇ ಎಂದೇ ಕರೆಸಿಕೊಳ್ಳುತ್ತಿದ್ದರು. ತಮ್ಮ ಓದುಗರ ಪಾಲಿಗೆ ಅವರು ಪ್ರೀತಿಪಾತ್ರ ಜೇ ಡೇ ಆಗಿದ್ದರು. ಅವರ ಹತ್ಯೆ ನಂತರ ಕನ್ನಡದ ‘ಸಂಪಾದಕೀಯ’ ಬ್ಲಾಗ್ ಪ್ರಕಟಿಸಿದ್ದ ನುಡಿ ನಮನ ಹೀಗಿತ್ತು:

ಇಪ್ಪತೈದು ವರ್ಷಗಳ ಹಿಂದೆ ‘ಹಿಂದೂಸ್ತಾನ್ ಟೈಮ್ಸ್’ ಮೂಲಕ ತಮ್ಮ ವೃತಿಜೀವನಕ್ಕೆ ಕಾಲಿರಿಸಿದ್ದ ಡೇ ಹವ್ಯಾಸಿ ಛಾಯಾಗ್ರಾಹಕರಾಗಿದ್ದವರು. ಅದರಲ್ಲೂ ವನ್ಯಜೀವಿಗಳ ಬಗ್ಗೆ ಇನ್ನಿಲ್ಲದ ಆಸಕ್ತಿ ಅವರಿಗೆ. ಹೀಗೆ ಎಲ್ಲೆಲ್ಲಿ ವನ್ಯಜೀವಿಗಳಿವೆಯೋ ಅಲ್ಲೆಲ್ಲ ಛಾಯಾಗ್ರಹಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವನ್ಯಪ್ರಣಿಗಳ ಬದುಕನ್ನು ಮನುಷ್ಯ ಸಮಾಜ ಕಿತ್ತುಕೊಳ್ಳುತ್ತಿರುವ ಕುರಿತು ಬಹಳ ನೋವಾಗುತ್ತಿತ್ತವರಿಗೆ. ಮಹಾರಾಷ್ಟ್ರ ಸರ್ಕಾರವು ರಾಷ್ಟ್ರೀಯ ಉದ್ಯಾನ ಎಂದು ಮೀಸಲಿಟ್ಟಿದ್ದ ಜಾಗವನ್ನೇ ವಾಣಿಜ್ಯ ಕಾರಣಗಳಿಗಾಗಿ ಬಳಸಿಕೊಳ್ಳಲೆತ್ನಿಸಿದಾಗ ತಡೆಯಲಾಗದೇ ಆ ಕುರಿತು ಒಂದು ವಿವರವಾದ ಲೇಖನ ಬರೆದರು. ಇದು ಡೇ ಬರೆದ ಮೊತ್ತಮೊದಲ ತನಿಖಾ ವರದಿ. ಈ ವರದಿ ಪ್ರಕಟವಾದಾದ್ದೇ ತಡ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗದ್ದಲವಾಗಿ ಸರ್ಕಾರ ಮುಖಭಂಗವನ್ನೆದುರಿಸಬೇಕಾಯಿತು.

ನಂತರದಲ್ಲಿ ಡೇಯವರು ‘ಅಫ್ಟರ್‌ನೂನ್ ಡಿಸ್ಪಾಚ್’ ಹಾಗೂ ‘ಕೊರಿಯರ್’ ಎಂಬ ಪತ್ರಿಕೆಗಳಿಗೆ ಫೋಟೋಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸಿದರು. ನಂತರ ‘ಮಿಡ್ ಡೇ’ ಪತ್ರಿಕೆಗೆ ಫ್ರೀಲ್ಯಾನ್ಸ್ ಪತ್ರಕರ್ತರಾದರು. ಕೊನೆಗೆ ಅವರು ಪೂರ್ಣಾವಧಿ ಪತ್ರಕರ್ತನಾಗಿ ಕಾರ್ಯಾರಂಭ ಮಾಡಿದ್ದು 1996ರಲ್ಲಿ, ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಮೂಲಕ. ಅಲ್ಲಿ ಅವರ ಆಸಕ್ತಿಯ ವಿಷಯ ಕ್ರೈಂ ರಿಪೋರ್ಟಿಂಗ್ ಆಗಿತ್ತು. ಯಾವ ಗಲ್ಲಿಯಲ್ಲಿ ಎಡವಿದರೂ ಹೋಗಿ ಬೀಳುವುದು ದಾವೂದ್ ಇಬ್ರಾಹಿಂ ಇಲ್ಲವೇ ಚೋಟಾ ಶಕೀಲ್ ಕಾಲಬುಡದಲ್ಲೇ. ಅಲ್ಲಿ ಬಾಯಿ ಮಾತನಾಡುವುದಿಲ್ಲ. ಬಂದೂಕು ಮಾತನಾಡುತ್ತವೆ!. ಆದರೂ ಅಂಜದೇ ಭೂಗತ ಜಗತ್ತಿನ ಅಪರಾಧಗಳ ಕುರಿತು, ಅದು ಹೊರಗಿನ ಅಧಿಕಾರಸ್ಥರೊಂದಿಗೆ ಹೊಂದಿರುವ ನಂಟಿನ ಕುರಿತು ತನಿಖಾ ವರದಿ ಆರಂಭಿಸಿದ ಡೇ ಅದರಲ್ಲಿ ಪಕ್ಕಾ ವೃತಿಪರತೆ ಮೆರೆದರು. ಮುಂದೆ 2005ರಲ್ಲಿ ‘ಎಕ್ಸ್‌ಪ್ರೆಸ್‌’ನ್ನು ಬಿಟ್ಟು ‘ಹಿಂದೂಸ್ತಾನ್ ಟೈಮ್ಸ್’ ಸೇರಿದರು. ನಂತರ ಅದನ್ನೂ ಬಿಟ್ಟು ಮತ್ತೆ ತಾವು ಆರಂಭದಲ್ಲಿ ವೃತ್ತಿಯನ್ನಾರಂಭಿಸಿದ್ದ ‘ಮಿಡ್‌ ಡೇ’ಯಲ್ಲಿ ತನಿಖಾ ಮತ್ತು ಅಪರಾಧ ಸುದ್ದಿಗಳ ಸಂಪಾದಕರಾಗಿ ಸೇರಿಕೊಂಡರು.

ಡೇ, ಎರಡು ದಶಕಗಳ ಕಾಲ ತನಿಖಾ ಪತ್ರಿಕೋದ್ಯಮವನ್ನು ಆವಾಹಿಸಿಕೊಂಡುಬಿಟ್ಟಿದ್ದರು. ದೇಶದ ಭೂಗತ ಲೋಕ ರಾಜಕಾರಣದ ರಾಜಧಾನಿಯೇ ಆಗಿರುವ ಮುಂಬೈ ಅಂಡರ್ ವರ್ಲ್ಡ್ನ ಅಣುರೇಣುಗಳನ್ನೂ ಬಲ್ಲವರಾಗಿದ್ದರವರು. ಆದರೆ ಒಮ್ಮೆಯೂ ತಮ್ಮ ವರದಿಗಳ ಮೂಲವನ್ನು ಅಪ್ಪಿತಪ್ಪಿಯೂ ಬಿಟ್ಟುಕೊಡದ ವೃತಿಪರತೆ ಅವರದು. ಈ ಕ್ಷೇತ್ರದಲ್ಲಿ ತಾವು ಗಳಿಸಿಕೊಂಡ ಅಪಾರ ಅನುಭವಗಳ ಮೂಸೆಯಲ್ಲಿ ‘ಖಲಾಸ್’ ಮತ್ತು ‘ಝೀರೋ ಡಯಲ್: ದ ಡೇಂಜರಸ್ ವರ್ಲ್ಡ್ ಆಫ್ ಇನ್‌ಫಾರ್ಮರ್ಸ್’ ಎಂಬೆರಡು ಕೃತಿಗಳನ್ನೂ ಬರೆದಿದ್ದರು.

ಮುಂಬೈ ಭೂಗತ ಜಗತ್ತಿನೊಂದಿಗೇ ನೇರ ಸಂಪರ್ಕ ಹೊಂದಿದ್ದರೂ, ಪತ್ರಿಕಾ ಲೋಕದಲ್ಲಿ ಪ್ರಸಿದ್ಧಿ ಪಡೆದಿದ್ದರೂ ಎಂದೂ ಅಹಂನಿಂದ ಬೀಗಿದವರಲ್ಲ ಡೇ. ಅವರೊಂದಿಗೆ ಕೆಲಸ ಮಾಡಿದ ಸಹೋದ್ಯೋಗಿಗಳು, ಡೇಯವರ ಆಪ್ತ ಸ್ನೇಹಿತರು ಹೇಳುವ ಪ್ರಕಾರ ಅವರೊಬ್ಬ ಅತ್ಯಂತ ವಿನಮ್ರ ಮನುಷ್ಯ. ತಮ್ಮೆದುರಿಗಿರುವವರು ಹಿರಿಯ ಕಿರಿಯರು ಎಂದು ಭಾವಿಸದೇ ಒಂದೇ ಬಗೆಯಲ್ಲಿ ಕಾಣುವ ವಿನಯವಂತಿಕೆ ಅವರದ್ದು. ಯಾರಾದರೂ ಕಷ್ಟದಲ್ಲಿರುವವರು ಕಂಡರೆ ಮಮ್ಮಲ ಮರುಗಿ ಕೂಡಲೇ ತನ್ನಿಂದಾದ ಸಹಾಯಕ್ಕೆ ಹೊರಡುವ ಉದಾತ್ತ ವ್ಯಕ್ತಿತ್ವ ಡೇಯವರದ್ದು. ‘ಯಾರಿಗೆ ಏನೇ ಆದರೂ ಓಡಿ ಹೋಗಿ ಸಹಾಯಕ್ಕೆ ನಿಲ್ಲುತ್ತಿದ್ದ ನಿನ್ನನ್ನು ಉಳಿಸಲು ಯಾರೂ ಬರಲಿಲ್ಲವಲ್ಲೋ….. ಎಂದು ಡೇಯವರ ತಾಯಿ ಬೀನಾ ಡೇ’ ಅವರ ಶವಕ್ಕೆ ಮುಖವಿಟ್ಟು ಮುಗಿಲು ಮುಟ್ಟುವಂತೆ ರೋಧಿಸುತ್ತಿದ್ದದ್ದು ಅದೇ ಕಾರಣಕ್ಕೆ.

ಕೊಲೆಯಾಗುವ ಮುಂಚೆ ಡೇ ಮುಂಬೈಯಲ್ಲಿ ಮೇರೆ ಮೀರಿದ್ದ ಆಯಿಲ್ ಮಾಫಿಯಾದ ಬಗ್ಗೆ, ಅದರಲ್ಲೂ ಭೂಗತ ಲೋಕದ ದೊರೆಗಳು ಸೇರಿಕೊಂಡು ಡೀಸೆಲ್ ಕಲಬೆರೆಕೆ ಮಾಡುತ್ತಿದ್ದ ವಿಷಯಗಳ ಕುರಿತಾಗಿ ತನಿಖಾ ವರದಿ ಬರೆಯತೊಡಗಿದ್ದರು. ಈ ಮಾಫಿಯಾದಲ್ಲಿ ಭೂಗತ ಕ್ರಿಮಿನಲ್‌ಗಳೊಂದಿಗೆ ಹೊರಜಗತ್ತಿನ ಅಧಿಕಾರಶಾಹಿ ಶಾಮೀಲಾಗಿರುವ ಚಿತ್ರಣವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

ಸಾವಿರಾರು ಕೋಟಿ ರೂಪಾಯಿಯ ವ್ಯವಹಾರಗಳಲ್ಲಿ ತೊಡಗಿರುವ ಒಂದು ಕ್ರಿಮಿನಲ್ ವ್ಯವಸ್ಥೆ ಇದನ್ನು ಹೇಗೆ ತಾನೇ ಸಹಿಸೀತು ಹೇಳಿ. ಅಂದು ಮುಂಬೈನ ಘಾಟ್‌ಕೋಪರ್‌ನ ಅಮೃತನಗರದಲ್ಲಿರುವ ತನ್ನ ತಾಯಿಯ ಮನೆಯಿಂದ ತಾನು ಪೊವಾಯಿಯಲ್ಲಿ ಪತ್ನಿ ಹಾಗೂ ಪತ್ರಕರ್ತೆ ಶುಭಾಶರ್ಮರೊಂದಿಗೆ ವಾಸಿಸುತ್ತಿದ್ದ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದಂತೆಯೇ ಮಧ್ಯಾಹ್ನ 2.45ಕ್ಕೆ ಇವರ ಹಿಂದಿನಿಂದ ಬೈಕಿನಲ್ಲಿ ಬಂದ ಪಾತಕಿಗಳು ಹಾರಿಸಿದ ಗುಂಡಿಗೆ ಡೇ ಹಿಡಿತ ತಪ್ಪಿ ಬಿದ್ದಿದ್ದರು. ಅವರು ತಪ್ಪಿಸಿಕೊಳ್ಳಲು ಯತ್ನಿಸುವಷ್ಟರಲ್ಲಿ ಮತ್ತೂ ಎಂಟು ಗುಂಡುಗಳು ಇವರ ಶರೀರವನ್ನು ಬಗೆದಿದ್ದವು. ನಂತರ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಡೇ ಯವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆಗ ಸರಿಯಾಗಿ 3 ಗಂಟೆ 5 ನಿಮಿಷ.

ಪ್ರಕರಣದ ತನಿಖೆಯನ್ನು ಆರಂಭಿಸಿದ ಮುಂಬೈ ಪೊಲೀಸರು ಆರಂಭದಲ್ಲಿಯೇ ಒಂದು ಕಾಲದಲ್ಲಿ ಡೇ ಸಹೋದ್ಯೋಗಿಯಾಗಿದ್ದ ‘ಏಷಿಯನ್ ಏಜ್’ನ ಕ್ರೈಂ ರಿಪೋರ್ಟರ್ ಜಿಗನಾ ವೋರಾಳನ್ನು ಬಂಧಿಸಿದ್ದರು. ಡೇ ಹತ್ಯೆ ಹಿಂದೆ ಭೂಗತ ಲೋಕದ ದೊರೆ ಛೋಟಾ ರಾಜನ್ ಇದ್ದಾನೆ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದರು. ಅದಾದ ನಂತರ ಡೇ ಹತ್ಯೆ ಪ್ರಕರಣದಲ್ಲಿ ತನಿಖೆ ಪ್ರಗತಿ ಕಾಣಲಿಲ್ಲ. ಕೊನೆಗೆ ಒತ್ತಡಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಆ ನಂತರವೂ ಸಿಬಿಐ ಕೆಲವು ಸುಫಾರಿ ಹಂತಕರನ್ನು ಬಂಧಿಸಿತಾದರೂ, ಪ್ರಕರಣದ ತನಿಖೆಯಲ್ಲಿ ದೊಡ್ಡ ಮಟ್ಟದ ಫಲಿತಾಂಶ ಏನೂ ಕಾಣಲಿಲ್ಲ. ಇದೀಗ ಪತ್ರಕರ್ತ ಬೆಳೆಗೆರೆ ಹಾಗೂ ಜೇ ಡೇ ನಡುವೆ ನಡೆದ ಇ- ಮೇಲ್ ಸಂಭಾಷಣೆಗಳ ಮಾಹಿತಿ ಪಡೆಯಲು ಬೆಂಗಳೂರಿಗೆ ಬರುವ ಮೂಲಕ ಪ್ರಕರಣದ ತನಿಖೆ ಇನ್ನೂ ಜಾರಿಯಲ್ಲಿದೆ ಎಂಬ ಮಾಹಿತಿ ನಿಚ್ಚಳವಾಗಿದೆ. ಅಪರೂಪದ ಪತ್ರಕರ್ತರೊಬ್ಬರನ್ನು ನೆನಪು ಮಾಡಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.

Leave a comment

FOOT PRINT

Top