An unconventional News Portal.

ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ FDA ಅಭ್ಯರ್ಥಿಗಳು: ಮರು ಪರೀಕ್ಷೆ ಆಗ್ರಹ ಮುಂದಿಟ್ಟ ಪ್ರತಿಭಟನಾಕಾರರು

ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ FDA ಅಭ್ಯರ್ಥಿಗಳು: ಮರು ಪರೀಕ್ಷೆ ಆಗ್ರಹ ಮುಂದಿಟ್ಟ ಪ್ರತಿಭಟನಾಕಾರರು

ಎಫ್ಡಿಎ ಮರು ಪರೀಕ್ಷೆಗೆ ಆಗ್ರಹಿಸಿ ಹಾಗೂ ಅರ್ಹತಾ ಪಟ್ಟಿಯ ಆಯ್ಕೆ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಬುಧವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಭ್ಯರ್ಥಿಗಳು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸರಕಾರ ಎಫ್ಡಿಎ ಮರುಪರೀಕ್ಷೆ ಸಂಬಂಧ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹ ಮುಂದಿಟ್ಟಿದ್ದಾರೆ.

ಈ ಹಿಂದೆ ಇದೇ ಅಭ್ಯರ್ಥಿಗಳು ಒಂದು ದಿನ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಸಿಎಂ ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ವರದಿ ತರಿಸಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಇದಾಗಿ 15 ದಿನ ಕಳೆದರೂ ಈವರೆಗೆ ಸರಕಾರ ಆಗಲೀ, ಕೆಪಿಎಸ್ಸಿ ಆಗಲೀ ಎಫ್ಡಿಎ ಪರೀಕ್ಷೆ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಬದಲಿಗೆ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಪರಿಶೀಲಿಸಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಸ್ವಾತಂತ್ರ ಉದ್ಯಾನವನದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.

kpsc-hunger-strike-2

ಹಿನ್ನೆಲೆ: 

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ತನಿಖೆ ನಡೆಸುತ್ತಿದ್ದ ಸಿಐಡಿ ಬಂಧಿಸಿದ್ದ ಆರೋಪಿಗಳು ಕಳೆದ ವರ್ಷ ನಡೆದ ಎಫ್ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನೂ ಸೋರಿಕೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರೀಕ್ಷೆ ಬರೆದವರಲ್ಲಿ ವಂಚನೆಗೆ ಒಳಗಾಗಿದ್ದೇವೆ ಎಂಬ ಭಾವನೆ ಮೂಡಿತ್ತು. ಇದಕ್ಕೆ ಸಾಮಾಜಿಕ ಜಾಲ ತಾಣಗಳು ವೇದಿಕೆ ಕಲ್ಪಿಸಿದ ಕಾರಣ, ಪ್ರತಿಭಟನೆ ಸ್ವರೂಪವನ್ನು ಪಡೆದುಕೊಂಡಿತ್ತು. ಮೊದಲು ‘ಕೆಪಿಎಸ್ಸಿ ಚಲೋ’ ಹೆಸರಿನಲ್ಲಿ ಉದ್ಯೋಗ ಸೌಧದ ಮುಂದೆ ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳು, ನಂತರ ಒಂದು ದಿನ ಪ್ರತಿಭಟನೆಯನ್ನು ಇದೇ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದರು. ಇದೀಗ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಎಫ್ಡಿಎ ಮರು ಪರೀಕ್ಷೆ ಬಗ್ಗೆ ಸರಕಾರದ ತೀರ್ಮಾನವನ್ನು ಎದುರು ನೋಡುತ್ತಿದ್ದಾರೆ.

Leave a comment

FOOT PRINT

Top