An unconventional News Portal.

ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ: ‘ಟೈಮ್ಸ್ ನೌ’ಗೆ ‘ಆಫ್ ದಿ ರೆಕಾರ್ಡ್’ ಮಾಹಿತಿಯೇ ವರ!

ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ: ‘ಟೈಮ್ಸ್ ನೌ’ಗೆ ‘ಆಫ್ ದಿ ರೆಕಾರ್ಡ್’ ಮಾಹಿತಿಯೇ ವರ!

‘ಆಫ್ ದಿ ರೆಕಾರ್ಡ್’..

ಪತ್ರಿಕೋದ್ಯಮದಲ್ಲಿದ್ದವರಿಗೆ ಈ ಪದದ ಅರ್ಥ ಗೊತ್ತಿರುತ್ತದೆ. ಮೂಲಗಳ ಜತೆ ವರದಿಗಾರರು ಒಂದು ಕ್ಷಣ ವೃತ್ತಿಯನ್ನು ಮರೆತು ಮಾತನಾಡುವುದು, ಅವುಗಳನ್ನು ಭಿತ್ತರಿಸುವುದಿಲ್ಲ ಅಥವಾ ಪ್ರಕಟಿಸುವುದಿಲ್ಲ ಎಂಬ ಕರಾರಿನ ಮೇಲೆ ಮಾಹಿತಿ ಪಡೆದುಕೊಳ್ಳುವುದೇ ಈ ‘ಆಫ್ ದಿ ರೆಕಾರ್ಡ್’…

ಅಲ್ಲಿ ಕರಾಳ ಸತ್ಯಗಳು ಅನಾವರಣಗೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಂತ ಅವುಗಳನ್ನು ಯಾರೂ ಸುದ್ದಿ ಮಾಡುವುದಿಲ್ಲ. ಅದು ವರದಿಗಾರಿಕೆಯ ಅಲಿಖಿತ ನಿಯಮ. ಇದಕ್ಕಿರುವ ಕಾರಣಗಳಲ್ಲಿ ಒಂದು ಪತ್ರಿಕೋದ್ಯಮದ ಕೆಲವು ಮೂಲಭೂತ ನಂಬಿಕೆಯನ್ನು ಉಳಿಸಿಕೊಳ್ಳುವುದಾಗಿದೆ. ಅದರ ಆಚೆಗೂ, ‘ಆಫ್ ದಿ ರೆಕಾರ್ಡ್’ ಮಾಹಿತಿ ನೀಡುವವರು  ವರದಿಗಾರರಿಗೆ ಚಿರಪರಿಚಿತ ಮೂಲಗಳೇ ಆಗಿರುತ್ತವೆ. ಒಬ್ಬ ವರದಿಗಾರ ಅಥವಾ ವರದಿಗಾರ್ತಿಗೆ ಈ ಮೂಲಗಳೇ ವೃತ್ತಿ ಬದುಕಿನ ಆಧಾರಗಳು. ದೀರ್ಘಕಾಲ ಮಾಹಿತಿ ಮೂಲವನ್ನು ಕಾಪಾಡಿಕೊಳ್ಳಬೇಕು ಎಂದರೆ ಈ ‘ಆಫ್ ದಿ ರೆಕಾರ್ಡ್’ ತತ್ವವನ್ನು ಪಾಲಿಸಬೇಕಾಗುತ್ತದೆ. ಆದರೆ, ಅದನ್ನೇ ‘ಟೌಮ್ಸ್ ನೌ’ ವಾಹಿನಿ ತನ್ನ ತನಿಖಾ ಪತ್ರಿಕೋದ್ಯಮದ ಅಸ್ತ್ರವಾಗಿ ಈಗ ಬಳಸಿಕೊಳ್ಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದೆ.

ನಡೆದಿದ್ದಿಷ್ಟು..

ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇಲ್ಲಿ ನಾಲ್ಕನೇ ಸ್ಥಾನಕ್ಕೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್’ಗೆ ಕೆಲವು ಮತಗಳ ಕೊರತೆ ಇದೆ. ಇದನ್ನು ತುಂಬ ಬೇಕಾದವರು ಪಕ್ಷೇತರರು ಮತ್ತು ಅಡ್ಡ ಮತದಾನ ಮಾಡುವವರು. ಇದರಲ್ಲಿ ಕೆಲವು ಶಾಸಕರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬುದು ಸುದ್ದಿ. ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತದೆ ಎನ್ನುವ ಆರೋಪ ಹಿಂದಿನಿಂದಲೂ ಇದೆ. ಆದರೆ ಇದಕ್ಕೆ ಗಟ್ಟಿ ಪುರಾವೆಗಳೇ ಸಿಕ್ಕಿರಲಿಲ್ಲ.

ಇದನ್ನು ಬೆನ್ನತ್ತಲೆಂದೇ ರಾಷ್ಟ್ರೀಯ ಮಾಧ್ಯಮಗಳಾದ ‘ಟೈಮ್ಸ್ ನೌ’ ಮತ್ತು ‘ಇಂಡಿಯಾ ಟುಡೆ’ ತನ್ನ ವರದಿಗಾರರನ್ನು ಕಣಕ್ಕಿಳಿಸಿತು. ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಎರಡೂ ಚಾನಲ್ಗಳು ಗುರುವಾರ ಸಂಜೆ ವರದಿ ಪ್ರಸಾರ ಆರಂಭಿಸಿದವು. ಮೊದಲಿಗೆ ಸಂಜೆ ವೇಳೆಗೆ ‘ಇಂಡಿಯಾ ಟುಡೆ’ ಕುಟುಕು ಕ್ಯಾರ್ಯಾಚರಣೆ ವೀಡಿಯೋ ಪ್ರಸಾರ ಮಾಡಿತು. ಅದರ ಸ್ಟಿಂಗ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮಾತುಕತೆಗೆ ಬಂದವರು ಎಂದು ಹೇಳಿಕೊಂಡ ವರದಿಗಾರರು ರಾಜ್ಯದ ನಾಲ್ವರು ಶಾಸಕರನ್ನು ಮಾತನಾಡಿಸಿದವು. ಈ ಮೂಲಕ ಯಾವ ಶಾಸಕ ಎಷ್ಟು ಹಣ ಡಿಮ್ಯಾಂಡ್ ಮಾಡಿದರು ಎಂದು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು. ನಂತರ ಅದನ್ನು ಸುದ್ದಿ ರೂಪದಲ್ಲಿ ಭಿತ್ತರಿಸಲಾಗಿತು. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದನ್ನು ನೀವು ಗಮನಿಸಿದ್ದೀರಿ.

ಇದಾದ ಕೆಲವೇ ನಿಮಿಷಗಳಲ್ಲಿ ‘ಇಂಡಿಯಾ ಟುಡೆ’ ಪ್ರತಿಸ್ಪರ್ಧಿ ‘ಟೈಮ್ಸ್ ನೌ’ ತಾನೂ ರಾಜ್ಯಸಭೆಯ ಚುನಾವಣೆಯ ಬಗ್ಗೆ ಕುಟುಕು ಕಾರ್ಯಾಚರಣೆ ನಡೆಸಿದ್ದಾಗಿ ಹೇಳಿಕೊಂಡಿತು. ‘ಈವರೆಗೆ ಯಾರೂ ಮಾಡದ ದೊಡ್ಡ ಮಟ್ಟದ ಕುಟುಕು ಕಾರ್ಯಾಚರಣೆ ನಮ್ಮ ಚಾನಲ್ ಮಾಡಿದೆ’ ಅಂತ ಎಂದಿನ ಏರು ದನಿಯಲ್ಲಿ ‘ಟೈಮ್ಸ್ ನೌ’ ಸಂಪಾದಕ ಅರ್ನಾಬ್ ಗೋಸ್ವಾಮಿ ಕಟ್ಟಿ ಬಂದ ಗಂಟಲಿನ ಮೂಲಕ ಹೇಳಿಕೊಂಡಿದ್ದನ್ನು ದೇಶ ನೋಡಿತು. ನಂತರ 31 ನಿಮಿಷಗಳ ಕುಟುಕು ಕಾರ್ಯಾಚರಣೆಯ ‘ನ್ಯೂಸ್ ಡಾಕ್ಯುಮೆಂಟರಿ’ಯನ್ನು ಚಾನಲ್ ಪ್ರಸಾರ ಮಾಡಿತು. ಇಡೀ ಡಾಕ್ಯೂಮೆಂಟರಿ ನೋಡಿದಾಗ ಅದು ಅಸಲಿಗೆ ಕುಟುಕು ಕಾರ್ಯಾಚರಣೆಯೇ ಅಲ್ಲ ಎಂಬುದು ವೀಕ್ಷಕರ ಗಮನಕ್ಕೆ ಬಂತು. ವರದಿಗಾರರು ತಮ್ಮ ಮಾಹಿತಿ ಮೂಲಗಳ ಜತೆ, ಸಂದರ್ಶನ ನಡೆಸಿದವರ ಜತೆ, ‘ಈಗ ಕ್ಯಾಮೆರಾ ಇಲ್ಲ, ನಿಜ ಹೇಳಿ’ ಎಂದು ಮಾತುಕತೆ ನಡೆಸಿದ್ದನ್ನೇ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದ ಸಂಗತಿ ಗೋಚರಿಸಿತು.

ನಂತರ ಶುರುವಾಗಿದ್ದು ‘ಟೌಮ್ಸ್ ನೌ’ ವಾಹಿನಿಯ ಈ ಹೊಸ ಮಾದರಿಯ ಪತ್ರಿಕೋದ್ಯಮದ ಕುರಿತು ಚರ್ಚೆ. ವೃತ್ತಿಧರ್ಮದ ವಿಚಾರ ಬಂದಾಗ ರಾಷ್ಟ್ರೀಯ ವಾಹಿನಿಯ ಈ ನಡೆ ಎಷ್ಟು ಸರಿ ಎಂಬ ಪ್ರಶ್ನೆಯೊಂದು ಈಗ ಹುಟ್ಟಿಕೊಂಡಿದೆ. ‘ಆಫ್ ದಿ ರೆಕಾರ್ಡ್’ ಎಂದು ನಂಬಿಸಿ, ಪಡೆದ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಪತ್ರಿಕೋದ್ಯಮ ನಂಬಿಕೆಗಳನ್ನು ಅಲ್ಲಾಡಿಸಿ ಬಿಟ್ಟಿದೆ ‘ಅರ್ನಾಬ್ ಸ್ಕೂಲ್ ಆಫ್ ಜರ್ನಲಿಸಂ’.

ಹೆಚ್ಚು ಕಡಿಮೆ ಅರ್ಧ ದಶಕಗಳ ಕಾಲ ಇಂಗ್ಲಿಷ್ ಸುದ್ದಿವಾಹಿನಿಗಳ ರೇಟಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡು ಬಂದಿದ್ದ ‘ಟೈಮ್ಸ್ ನೌ’ ದಿಲ್ಲಿ ವಿಶ್ವವಿದ್ಯಾನಿಲಯದ ವಿಚಾರದಲ್ಲಿ ತೆಗೆದುಕೊಂಡು ನಿಲುವಿನಿಂದಾಗಿ ಮುಗ್ಗರಿಸಿ ಬಿದ್ದಿತ್ತು. ಪಕ್ಕದ ‘ಇಂಡಿಯಾ ಟುಡೆ’ ವೃತ್ತಿಪರ ಪತ್ರಿಕೋದ್ಯಮದ ಮೂಲಕ ದಿನದಿಂದ ದಿನಕ್ಕೆ ಜನರ ವಿಶ್ವಾಸವನ್ನು ಗಳಿಸುತ್ತಿದೆ. ಇಂತಹ ಸಮಯದಲ್ಲಿ ಸಹಜವಾಗಿಯೇ ಮಾರುಕಟ್ಟೆಯ ಪೈಪೋಟಿಯ ಒತ್ತಡ ‘ಟೈಮ್ಸ್ ನೌ’ ಮೇಲಿದೆ. ಅದನ್ನು ಭರಿಸುವ ಭರಾಟೆಯಲ್ಲಿ ‘ಆಫ್ ದಿ ರೆಕಾರ್ಡ್’ ಮಾಹಿತಿಯನ್ನು ಸ್ಟಿಂಗ್ ಆಪರೇಷನ್ ಎಂದು ಹೇಳಿಕೊಳ್ಳುವ ಒತ್ತಡಕ್ಕೆ ಅರ್ನಾಬ್ ಒಳಗಾದರಾ? ಗೊತ್ತಿಲ್ಲ.

Leave a comment

FOOT PRINT

Top