An unconventional News Portal.

ವಾಟ್ಸಾಪು, ಆಂಧ್ರದ ಪೇ ಸ್ಲಿಪ್ಪು; ಪೊಲೀಸ್ ಪ್ರತಿಭಟನೆಯಲ್ಲಿ ಸಂವಹನ ಮಾಧ್ಯಮದ ತಾರೀಫು!

ವಾಟ್ಸಾಪು, ಆಂಧ್ರದ ಪೇ ಸ್ಲಿಪ್ಪು; ಪೊಲೀಸ್ ಪ್ರತಿಭಟನೆಯಲ್ಲಿ ಸಂವಹನ ಮಾಧ್ಯಮದ ತಾರೀಫು!

ಮೇ ತಿಂಗಳ ಮೊದಲ ವಾರ… 

ಮುಖ್ಯವಾಹಿನಿ ಮಾಧ್ಯಮಗಳ ಫೇಸ್ ಬುಕ್ ಖಾತೆಗಳಿಗೆ ‘ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ’ದ ಲೆಟರ್ ಹೆಡ್ನಲ್ಲಿ 2 ಪುಟಗಳ ಮನವಿ ಪತ್ರವೊಂದನ್ನು ಮೆಸೇಜ್ ರೂಪದಲ್ಲಿ ಕಳುಹಿಸಲಾಗಿತ್ತು. ದಿನ ನಿತ್ಯ ಬರುವ ಅಂತಹ ನೂರಾರು ಸಂಘ- ಸಂಸ್ಥೆಗಳ ಪತ್ರದಂತೆಯೇ ಇದ್ದ ಅದನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಜತೆಗೆ, ಜೂನ್ 4ನೇ ತಾರೀಖು ಕರ್ನಾಟಕದ ಪೊಲೀಸರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಅದರಲ್ಲಿದ್ದ ಒಕ್ಕಣೆಯನ್ನು ಅಷ್ಟು ಸುಲಭದಲ್ಲಿ ಪತ್ರಕರ್ತರು ನಂಬಿದಂತೆ ಕಂಡಿರಲಿಲ್ಲ.

ಈ ಘಟನೆ ನಡೆದು ಮೂರು ವಾರಗಳ ನಂತರ, ಮುಖ್ಯವಾಹಿನಿ ಮಾಧ್ಯಮಗಳಿವತ್ತು ‘ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ’ ಹಾಗೂ ಅದು ಕರೆ ನೀಡಿರುವ ಪೊಲೀಸರ ಪ್ರತಿಭಟನೆ ಹಿಂದೆ ಬಿದ್ದು ಸುದ್ದಿ ಮಾಡುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣಗಳೇನಿರಬಹುದು ಎಂದು ಹುಡುಕಿಕೊಂಡು ಹೊರಟರೆ, ಈ ಕಾಲಘಟ್ಟದಲ್ಲಿ ನಿರ್ಮಾಣವಾಗಿರುವ ಸಂವಹನ ಮಾಧ್ಯಮಗಳ ಪಲ್ಲಟಗಳ ಸೂಕ್ಷ್ಮ, ವಿಸ್ಮಯಕಾರಿ ವಿಚಾರವೊಂದು ತೆರೆದುಕೊಳ್ಳುತ್ತದೆ.

ಅಸಮಾಧಾನ ಸ್ಫೋಟ:

ಜೂನ್ 4ರಂದು ನಡೆಸಲು ಉದ್ದೇಶಿಸಿರುವ ಪೊಲೀಸ್ ಪ್ರತಿಭಟನೆಯ ಭಾಗವಾಗಿ ಸಿಐಡಿಯ ಡಿವೈಎಸ್ಪಿ ಒಬ್ಬರು ಶನಿವಾರ ರಜೆ ಅರ್ಜಿಯನ್ನು ಸಲ್ಲಿಸಿ ಬಂದರು. ಈ ಸಮಯದಲ್ಲಿ ‘ಸಮಾಚಾರ’ದ ಜತೆ ಮಾತಿಗೆ ಸಿಕ್ಕ ಅವರು, “ನಾವು ಪೊಲೀಸರು ಬೀದಿಗಿಳಿದು ಪ್ರತಿಭಟನೆ ಮಾಡುವಂತಿಲ್ಲ. ಶಿಸ್ತಿನ ಇಲಾಖೆಯಲ್ಲಿರುವ ನಮಗೆ ಅದು ಕಾನೂನು ಬಾಹಿರವಾಗುತ್ತದೆ. ಆದರೆ, ನಾನು ರಜೆಯನ್ನು ಸಲ್ಲಿಸಿ ಬಂದಿದ್ದೇನೆ. ಅದನ್ನು ನನ್ನ ಮೇಲಾಧಿಕಾರಿಗಳು ಅಂಗೀಕರಿಸುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ನನ್ನ ರಜೆ ಸಾಂಕೇತಿಕವೇ ಆಗಬಹುದು. ಆದರೆ, ನನ್ನಂತೆಯೇ ಅನೇಕರು ಅದೇ ದಿನ ರಜೆಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ಸೂಚಿಸುತ್ತಿದ್ದಾರೆ. ಇದರ ವಿರುದ್ಧ ಯಾರೂ ಕ್ರಮ ಕೈಗೊಳ್ಳಲು ಸಾಧ್ಯವೂ ಇಲ್ಲ,” ಎಂದರು.

ಅಚ್ಚರಿಯ ಸಂಗತಿ ಏನೆಂದರೆ, ಪ್ರತಿಭಟನೆಗೆ ಕರೆ ನೀಡಿರುವ ‘ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ’ದ ಜತೆಗಾಗಲೀ, ಅದರ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರ ಜತೆಗಾಗಲೀ ಇವರಿಗೆ ಸಂಬಂಧ ಇಲ್ಲ. ಜೂನ್ 4 ರಂದು ಪ್ರತಿಭಟನೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಲ್ಗೊಳ್ಳುತ್ತಿರುವ ಬಹುತೇಕ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಂಘಟನೆ ಇಲ್ಲ, ಅದರ ಅಧ್ಯಕ್ಷರೂ ಮುಖ್ಯವಾಗಿಲ್ಲ. ಹಲವು ದಿನಗಳಿಂದ ಆಳದಲ್ಲಿ ಕುದಿಯುತ್ತಿದ್ದ ವಿಚಾರವೊಂದು ಸ್ಫೋಟಗೊಳ್ಳಲು ಸಂಘಟನೆ ಹಾಗೂ ಅದರ ನಾಯಕತ್ವ ಕೇವಲ ಸಾಂಕೇತಿಕದಂತೆ ಕಾಣಿಸುತ್ತಿದೆ. ಈ ಸಮಯದಲ್ಲಿ ಗಮನಿಸಬೇಕಿರುವ ಮತ್ತೊಂದು ಅಂತರಾಳದ ಸಂಗತಿ ಏನೆಂದರೆ, ರಾಜ್ಯಾದ್ಯಂತ ಇರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಒಂದು ದಿಕ್ಕಿನೆಡೆಗೆ ಕರೆದುಕೊಂಡು ಹೋಗುತ್ತಿರುವುದು, ಪ್ರತಿಭಟನೆಗೆ ಮಾರ್ಗದರ್ಶನ ನೀಡುತ್ತಿರುವುದು ವಾಟ್ಸಾಪ್ ಸಂದೇಶಗಳು.

ಮೌನ ಕ್ರಾಂತಿ:

ಬದಲಾಗಿರುವ ಕಾಲಘಟದಲ್ಲಿ ಜನರಿಗೆ ಮಾಹಿತಿ ವಿನಿಮಯಕ್ಕೆ, ಮಾರ್ಗದರ್ಶನಕ್ಕೆ ಮುಖ್ಯವಾಹಿನಿ ಮಾಧ್ಯಮಗಳ ಅಗತ್ಯವೇ ಬೀಳುತ್ತಿಲ್ಲ ಎಂಬುದನ್ನು ಸದ್ಯ ಪೊಲೀಸ್ ಇಲಾಖೆಯೊಳಗೆ ನಡೆಯುತ್ತಿರುವ ಬೆಳವಣಿಗೆಗಳು ಮತ್ತೊಮ್ಮೆ ಸಾದರ ಪಡಿಸುತ್ತಿವೆ. ಕೆಲವು ದಿನಗಳ ಹಿಂದೆ FDA ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಭಾರಿ ಪ್ರತಿಭಟನೆಯೊಂದನ್ನು ಮಾಡಿದ್ದರು. ರಾಜ್ಯ ಮಟ್ಟದ, ಸುಮಾರು 2 ಸಾವಿರ ಅಭ್ಯರ್ಥಿಗಳು ಒಂದು ಕಡೆ, ಗುರುತು ಪರಿಚಯವಿಲ್ಲದೆ ಸೇರಿದ್ದು, ಪ್ರತಿಭಟನೆ ರೂಪುಗೊಂಡಿದ್ದು, ಪರಸ್ಪರ ಮಾಹಿತಿ ಹಂಚಿಕೊಂಡಿದ್ದು ವಾಟ್ಸಾಪ್ ಮತ್ತು ಫೇಸ್ ಬುಕ್ ಮೂಲಕ. ಇದೇ ಮಾದರಿಯಲ್ಲಿ ಕರ್ನಾಟಕದ ಪೊಲೀಸ್ ವಲಯದಲ್ಲಿ ಪ್ರತಿಭಟನೆ ತೀವ್ರಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ವಾಟ್ಸಾಪ್.

“ಇದು ನೋಡಿ, ನಿನ್ನೆ ರಾತ್ರಿ ನಮ್ಮ ವಾಟ್ಸಾಪ್ ಗುಂಪಿನಲ್ಲಿ ನಡೆದ ಮಾತುಕತೆ. ಇಲ್ಲಿ ನಮಗೆ ಹೊರಗಿನ ಸಂಘಟನೆಗಳು ಹಾಗೂ ವ್ಯಕ್ತಿಗಳು ಬೆಂಬಲ ನೀಡಿದ ಸಂದೇಶಗಳನ್ನೂ ಕೆಲವರು ಹಂಚಿಕೊಂಡಿದ್ದಾರೆ,” ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ತಮ್ಮ ಮೊಬೈಲ್ ಪರದೆಯನ್ನು ತೋರಿಸಿದರು. ಅಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಮತ್ತಿತರ ಸಂಘಟನೆಗಳು ಪೊಲೀಸರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಸಂದೇಶಗಳಿದ್ದವು. ಮಾಹಿತಿಯ ಮೂಲವಾಗಿ ವಾಟ್ಸಾಪ್ ಅನುಕೂಲವಾಗುತ್ತಿದೆ ಎಂದವರು ತಾರೀಫು ಮಾಡಿದರು. ಸ್ಪಷ್ಟವಾದ ಸಂಘಟನಾತ್ಮಕ ರಚನೆಗಳಿಲ್ಲದಿದ್ದರೂ, ಅನೇಕ ಪೊಲೀಸರನ್ನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಹೊಸ ಕಾಲಘಟ್ಟದ ಸಂವಹನ ಮಾಧ್ಯಮ ವಹಿಸುತ್ತಿರುವ ಮಹತ್ವದ ಪಾತ್ರವಿದು.

ಪೇ ಸ್ಲಿಪ್ ಕಿಡಿ:

ವಾಟ್ಸಾಪ್ ಸಂದೇಶಗಳಲ್ಲಿ ಹರಿದಾಡಿದ ನೆರೆ ರಾಜ್ಯದ ಪೇ ಸ್ಲಿಪ್.

ವಾಟ್ಸಾಪ್ ಸಂದೇಶಗಳಲ್ಲಿ ಹರಿದಾಡಿದ ನೆರೆ ರಾಜ್ಯದ ಪೇ ಸ್ಲಿಪ್.

ಮೊದಲಿನಿಂದಲೂ ಕರ್ನಾಟಕ ಪೊಲೀಸ್ ಸಿಬ್ಬಂದಿಗಳಲ್ಲಿ ತಮ್ಮ ಕೆಲಸದ ಅವಧಿ, ಕಡಿಮೆ ಸಂಬಳಗಳ ಕುರಿತು ಅಸಮಾಧಾನಗಳಿದ್ದವು. ಆದರೆ, ವಸಾಹತು ಕಾಲದ ಅಧಿಕಾರಶಾಹಿಯ ಗುಣಲಕ್ಷಣಗಳನ್ನು ಇವತ್ತಿಗೂ ಢಾಳಾಗಿ ಉಳಿಸಿಕೊಂಡಿರುವ ಇಲಾಖೆಯೊಳಗೆ ಇವುಗಳ ಕುರಿತು ದನಿ ಎತ್ತುವುದು ಕಷ್ಟ ಎಂಬ ಪರಿಸ್ಥಿತಿ ಇತ್ತು. ಈ ಸಮಯದಲ್ಲಿ ಕೆಲವು ದಿನಗಳ ಹಿಂದೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪೊಲೀಸರ ವೇತನದ ಕುರಿತು ನಿಖರ ಮಾಹಿತಿ ನೀಡುವ ‘ಪೇ ಸ್ಲಿಪ್’ಗಳು ವಾಟ್ಸಾಪ್ ಮೂಲಕ ಹರಿದಾಡತೊಡಗಿದವು. ಇವು ಒಳಗೆ ಹುದುಗಿ ಹೋಗಿದ್ದ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿದವು. ಅದೇ ವೇಳೆ, ಇಲಾಖೆಯಿಂದ ಹೊರಬಿದ್ದಿದ್ದ ಶಶಿಧರ್ ಕೂಡ ತಮ್ಮ ನಿರಂತರ ಹೋರಾಟಕ್ಕೊಂದು ಗಡುವು ವಿಧಿಸಿ ಪ್ರತಿಭಟನೆಯ ದಿನಾಂಕವನ್ನು ಘೋಷಿಸಿದರು. ಹೊತ್ತಿದ ಕಿಡಿ ಜ್ವಾಲೆಯಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.

ಶನಿವಾರ ಗೃಹ ಸಚಿವ ಜಿ. ಪರಮೇಶ್ವರ್ ಅವರೇ ಪತ್ರಿಕಾಗೋಷ್ಠಿ ನಡೆಸಿ ಪೊಲೀಸರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲವೊಂದು ಸಲಹೆ- ಸೂಚನೆಗಳನ್ನು ಮುಂದಿಟ್ಟಿದ್ದಾರೆ. ವಾಸ್ತವದಲ್ಲಿ ಗೃಹ ಇಲಾಖೆ ನೈಜ ಸಮಸ್ಯೆಗಳಿಗೆ ಸ್ಪಂದಿಸುವುದು ಕಷ್ಟ ಎಂಬುದನ್ನು ಅವರ ಮಾತುಗಳು ಹೇಳುತ್ತಿವೆ. ಹೀಗಾಗಿ, ಜೂನ್ 4ರಂದು ನಡೆಯುವ ಪೊಲೀಸರ ‘ಸಿಪಾಯಿ ದಂಗೆ’ (ಸಂಘಟನಾಕಾರರು ಹೇಳಿಕೊಂಡಂತೆ) ಯಾವ ಹಾದಿಯನ್ನು ಹಿಡಿಯಲಿದೆ ಎಂಬ ಕುತೂಹಲ ಮೂಡಿದೆ.

 

Leave a comment

FOOT PRINT

Top