An unconventional News Portal.

ಸುಪ್ರಿಂ ಕೋರ್ಟ್ ತೀರ್ಪಿಗೆ ಮುನ್ನವೇ ಪತ್ರಕರ್ತರಿಗೆ ‘ಗುತ್ತಿಗೆ ಭಾಗ್ಯ’ ಕರುಣಿಸಲು ಮುಂದಾದ ಮಾಲೀಕರು!

ಸುಪ್ರಿಂ ಕೋರ್ಟ್ ತೀರ್ಪಿಗೆ ಮುನ್ನವೇ ಪತ್ರಕರ್ತರಿಗೆ ‘ಗುತ್ತಿಗೆ ಭಾಗ್ಯ’ ಕರುಣಿಸಲು ಮುಂದಾದ ಮಾಲೀಕರು!

ಪೊಲೀಸರಿಗೂ ಪತ್ರಕರ್ತರಿಗೂ ಹಲವು ಅಂಶಗಳಲ್ಲಿ ಹೋಲಿಕೆಗಳನ್ನು ಮಾಡುತ್ತಾರೆ. ಅವುಗಳಲ್ಲಿ ಒಂದು, ಎರಡೂ ಸಮುದಾಯದವರಿಗೆ ವ್ಯವಸ್ಥಿತವಾದ, ಹಕ್ಕುಗಳನ್ನು ಕೇಳುವ ಸಂಘಟನೆಗಳು ಇಲ್ಲ ಎಂಬುದು.

ಪತ್ರಿಕೋದ್ಯಮ ಆಧುನಿಕತೆಗೆ ತೆರೆದುಕೊಳ್ಳುತ್ತಲೇ ಬಂದಿರುವ ಬದಲಾವಣೆಗಳಲ್ಲಿ ಸಕಾರಾತ್ಮಕ ಅಂಶಗಳ ಆಚೆಗೂ, ಸಮುದಾಯದೊಳಗೆ ಸಂಘಟನಾತ್ಮಕ ಪ್ರಕ್ರಿಯೆ ಮಾಯವಾಗಿರುವುದನ್ನು ಗುರುತಿಸಬೇಕಿದೆ. ಹೀಗಾಗಿ, ಇವತ್ತು ಯಾವುದೇ ದೊಡ್ಡ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ನೌಕರರು ಎಂದು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ, ಅವರನ್ನು ‘ಗುತ್ತಿಗೆ’ ಆಧಾರದ ಮೇಲೆ ನೇಮಿಸಿಕೊಳ್ಳುತ್ತಿವೆ. ಒಂದು ವೇಳೆ, ಸಂಸ್ಥೆಗೆ ಪತ್ರಕರ್ತ ಅಥವಾ ಪತ್ರಕರ್ತೆಯ ಅಗತ್ಯವಿಲ್ಲ ಎಂದು ಕಂಡು ಬಂದರೆ, ಅಂತವರ ಗುತ್ತಿಗೆಯನ್ನು ರದ್ಧುಮಾಡುತ್ತವೆ. ಇದಕ್ಕೆ ಅಪವಾದದಂತೆ ಇದ್ದ ಸಂಸ್ಥೆಗಳೆಂದರೆ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’, ‘ಇಂಡಿಯನ್ ಎಕ್ಸ್ ಪ್ರೆಸ್’, ‘ದಿ ಹಿಂದೂ’ ಪತ್ರಿಕೆಗಳು. ಇವತ್ತು ಅವುಗಳನ್ನೂ ನಡೆಸುತ್ತಿರುವ ಸಂಸ್ಥೆಗಳೂ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ನೇಮಕಾತಿಯಲ್ಲಿ ಇದೇ ಗುತ್ತಿಗೆ ಮಾದರಿಯನ್ನು ಅನುಸರಿಸುತ್ತಿವೆ. ಇದಕ್ಕೆ ಕಾರಣವಾಗಿರುವುದು ಮಜೀದಿಯಾ ವೇತನ ಮಂಡಳಿ ಮತ್ತು ಅದು ನೀಡಿದ ಶಿಫಾರಸುಗಳು.

ನ್ಯಾ. ಜಿ. ಆರ್. ಮಜೀದಿಯಾ

ನ್ಯಾ. ಜಿ. ಆರ್. ಮಜೀದಿಯಾ

ಈ ಸಮಯದಲ್ಲಿ ಮಜೀದಿಯಾ ವೇತನ ಮಂಡಳಿಯ ಕುರಿತು ಇಲ್ಲಿ ಪ್ರಸ್ತಾಪಿಸುವುದಕ್ಕೆ ಕೆಲವು ಕಾರಣಗಳಿವೆ. ಕೆಲವು ದಿನಗಳ ಹಿಂದೆಯಷ್ಟೆ ಪ್ರತಿಷ್ಠಿತ ಪತ್ರಿಕೆಯೊಂದರ ಪತ್ರಕರ್ತರನ್ನು ಕರೆದು, ಗುತ್ತಿಗೆ ಆಧಾರದಲ್ಲಿ ಮರು ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಲಾಗಿದೆ. ಈ ಕಾರಣಕ್ಕೆ ಜುಲೈ ಒಳಗೆ ರಾಜೀನಾಮೆ ನೀಡಿ, ಮರು ನೇಮಕಾತಿಗೆ ಒಳಗಾಗಬೇಕು ಎಂದು ಸೂಚಿಸಲಾಗಿದೆ. ಒಪ್ಪದಿದ್ದರೆ ವರ್ಗಾವಣೆ ಮತ್ತಿತರ ಅಸ್ತ್ರಗಳನ್ನು ಪ್ರಯೋಗಿಸುವುದಾಗಿ ಹೇಳಲಾಗಿದೆ. ‘ಸಮಾಚಾರ’ಕ್ಕೆ ಇಲ್ಲಿನ ಸಿಬ್ಬಂದಿಗಳು ನೀಡಿದ ಮಾಹಿತಿ ಪ್ರಕಾರ, “ಜುಲೈ ತಿಂಗಳಿನಲ್ಲಿ ಮಜೀದಿಯಾ ವೇತನ ಮಂಡಳಿ ನೀಡಿದ ಶಿಫಾರಸುಗಳ ಜಾರಿ ಕುರಿತು ಸುಪ್ರಿಂ ಕೋರ್ಟ್ನಲ್ಲಿ ಮಹತ್ವದ ಆದೇಶವೊಂದು ಹೊರಬೀಳಲಿದೆ. ಇದರಿಂದ ಪತ್ರಿಕಾ ಸಂಸ್ಥೆಗಳ ಮಾಲೀಕರು ತಮ್ಮ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಹರಿಯರ್ಸ್ ಹಾಗೂ ಹೆಚ್ಚಿನ ವೇತನವನ್ನು ನೀಡಬೇಕಿದೆ. ಇದರಿಂದ ತಪ್ಪಿಸಿಕೊಳ್ಳಲು ಮಾಲೀಕರು ಇಂತಹದೊಂದು ನಡೆಯನ್ನು ಮುಂದಿಟ್ಟಿದ್ದಾರೆ,” ಎನ್ನಲಾಗುತ್ತಿದೆ.

ಪತ್ರಕರ್ತರಿಗೂ ಸೂಕ್ತ ವೇತನ ಹಾಗೂ ಭತ್ಯಗೆಳನ್ನು ನೀಡಬೇಕು ಎಂದು ಮಜೀದಿಯಾ ವೇತನ ಮಂಡಳಿ ಶಿಫಾರಸು ಮಾಡಿತ್ತು. ಇದನ್ನು ಪ್ರಶ್ನಿಸಿ ದೇಶಾದ್ಯಂತ ಪ್ರಮುಖ ಪತ್ರಿಕೆಗಳ ಮಾಲೀಕರ ಸಂಘ ಸುಪ್ರಿಂ ಕೋರ್ಟ್ ಮೆಟ್ಟಿಲೇರಿತ್ತು. ಬೆಂಗಳೂರು ಪತ್ರಿಕಾ ನೌಕರರ ಸಂಘ ಮತ್ತಿತರ ಸಂಘಟನೆಗಳೂ ಕೂಡ ಸುಪ್ರಿಂ ಕೋರ್ಟ್ನಲ್ಲಿ ಪತ್ರಕರ್ತರ ಹಾಗೂ ಸಿಬ್ಬಂದಿಗಳ ಪರವಾಗಿ ವಾದ ಮಂಡಿಸಿತ್ತು. ಸುದೀರ್ಘ 15 ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ಅಂತಿಮವಾಗಿ ಪತ್ರಿಕಾ ನೌಕರರ ಪರವಾಗಿ 2014ರಲ್ಲಿ ತೀರ್ಪು ಪ್ರಕಟವಾಗಿತ್ತು. 2011ರಿಂದಲೇ ಅನ್ವಯವಾಗುವಂತೆ ವೇತನ ಮಂಡಳಿಯ ಶಿಫಾರಸುಗಳನ್ನು ಜಾರಿಗೆ ತರುವಂತೆ ಕೋರ್ಟ್ ಹೇಳಿತ್ತು.

ಆದರೆ, ಅದು ದುಬಾರಿ ವೆಚ್ಚ ಬೇಡುವ ಪ್ರಕ್ರಿಯೆಯಾಗಿರುವುದರಿಂದ ಪತ್ರಿಕಾ ಮಾಲೀಕರು ಭಾಗಶಃ ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದರು. “ಇದನ್ನು ಪ್ರಶ್ನಿಸಿ ನಾವು ಕಾರ್ಮಿಕ ಇಲಾಖೆಯಲ್ಲಿ ದೂರು ನೀಡಿದ್ದೆವು. ಇಲಾಖೆಯು ಉಪ ಆಯುಕ್ತರ ನೇತೃತ್ವದಲ್ಲಿ ಸದರಿ ಪತ್ರಿಕಾ ಕಚೇರಿಗಳಿಗೆ ತಂಡವೊಂದನ್ನು ಕಳುಹಿಸಿ ವರದಿಯನ್ನು ತರಿಸಿಕೊಂಡಿದ್ದರು. ಕೊನೆಗೆ, ಪತ್ರಿಕಾ ಮಾಲೀಕರು ನ್ಯಾಯಾಲಯದ ಆದೇಶವನ್ನೇ ಉಲ್ಲಂಘನೆ ಮಾಡಿದ್ದಾರೆ ಎಂದು ವರದಿ ನೀಡಿದ್ದರು. ಇದೀಗ ಅದರ ಕುರಿತು ಜುಲೈನಲ್ಲಿ ಸುಪ್ರಿಂ ಕೋರ್ಟ್ ತೀರ್ಪು ನೀಡಲಿದೆ,” ಎಂದು ಸಂಘದ ಪ್ರತಿನಿಧಿಯೊಬ್ಬರು ‘ಸಮಾಚಾರ’ಕ್ಕೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ರಾಜೀನಾಮೆ ನೀಡಿ, ಗುತ್ತಿಗೆ ಆಧಾರದಲ್ಲಿ ಮರು ನೇಮಕಾತಿ ಪ್ರಕ್ರಿಯೆಗೆ ಒಳಗಾಗುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಕುರಿತು ಸದರಿ ಪತ್ರಿಕೆಯ ಮುಖ್ಯಸ್ಥರನ್ನು ‘ಸಮಾಚಾರ’ ಸಂಪರ್ಕಿಸಿದಾಗ, “ಇದು ನನಗೆ ಬರುವುದಿಲ್ಲ. ಮಾನವ ಸಂಪನ್ಮೂಲ ವಿಭಾಗದವರನ್ನು ಕೇಳಿ,” ಎಂದರು. ಪತ್ರಿಕೆಯ ಮಾನವ ಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸಿದಾಗ, “ಹೀಗೊಂದು ಪ್ರಕ್ರಿಯೆ ನಡೆಯುತ್ತಿದೆ. ಇದರ ಬಗ್ಗೆ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ,” ಎಂದು ಕೆಳಹಂತದ ಸಿಬ್ಬಂದಿ ಮಾಹಿತಿ ನೀಡಿದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಮರಳಿ ಕರೆ ಮಾಡಿದ ಇದೇ ವಿಭಾಗದ ಬೇರೊಬ್ಬ ಸಿಬ್ಬಂದಿ, “ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ನಡೆದರೂ ಅದು ಸಂಸ್ಥೆಯ ಆಂತರಿಕ ವಿಚಾರ,” ಎಂದರು. ತಮ್ಮ ಹೆಸರನ್ನು ಹೇಳಲು ಅವರು ಇಚ್ಚಿಸಲಿಲ್ಲ.

ಒಟ್ಟಾರೆ, ಸದ್ಯದ ಬೆಳವಣಿಗೆಗಳು ಮಾಧ್ಯಮಗಳಲ್ಲಿ ನೌಕರರು ಎನ್ನಿಸಿಕೊಂಡ ಕೊನೆಯ ತಲೆಮಾರನ್ನೂ ನೌಕರರಾಗಿ ಉಳಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೊಸತಾಗಿ ಪತ್ರಕೋದ್ಯಮಕ್ಕೆ ಬಂದವರಿಗೆ, ಬರುತ್ತಿರುವವರಿಗೆ ಅಂತಹ ಭಾಗ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಸರಕಾರದ ‘ಭಾಗ್ಯ’ಗಳನ್ನು ವಿಮರ್ಶೆಗೆ ಒಳಪಡಿಸುವ ಗುರುತರ ಹೊಣೆಯನ್ನು ಪತ್ರಕರ್ತರು ನಿಭಾಯಿಸಬೇಕು. ಇದು ಈ ಕಾಲದ ಪತ್ರಿಕೋದ್ಯಮದ ವ್ಯಂಗ್ಯ ಮತ್ತು ನಾಚಿಕೆಗೇಡಿನ ಸಂಗತಿ.

Leave a comment

FOOT PRINT

Top