An unconventional News Portal.

ಅಯೋಧ್ಯೆಯಲ್ಲಿ ಬಂದೂಕು ತರಬೇತಿ: ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾದ ಭಜರಂಗದಳದ ಶಸ್ತ್ರಾಸ್ತ್ರ ಶಿಬಿರ

ಅಯೋಧ್ಯೆಯಲ್ಲಿ ಬಂದೂಕು ತರಬೇತಿ: ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾದ ಭಜರಂಗದಳದ ಶಸ್ತ್ರಾಸ್ತ್ರ ಶಿಬಿರ

ಹಿಂದೂಗಳ ರಕ್ಷಣೆ ನೆಪದಲ್ಲಿ ಪರಿವಾರದ ಅಂಗ ಸಂಘಟನೆ ಭಜರಂಗ ದಳ ನೀಡುತ್ತಿರುವ ಶಸ್ತ್ರಾಸ್ತ್ರ ತರಬೇತಿ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿದೆ.

ಅಯೋಧ್ಯೆಯಲ್ಲಿ ಇತ್ತೀಚೆಗೆ ಭಜರಂಗ ದಳ ತನ್ನ ಕಾರ್ಯಕರ್ತರಿಗೆ ಬಂದೂಕು, ಖಡ್ಗ ಹಾಗೂ ಲಾಠಿ ಬಳಕೆ ಕುರಿತು ತರಬೇತಿ ನೀಡಿದೆ ಎಂದು ಎರಡು ದಿನಗಳ ಹಿಂದೆ ‘ಟೈಮ್ಸ್ ಆಫ್ ಇಂಡಿಯಾ’ ಪ್ರಕಟಿಸಿತ್ತು. ಇದರ ವಿಡಿಯೋಗಳು ಮಂಗಳವಾರ ರಾಷ್ಟ್ರೀಯ ಸುದ್ದಿವಾಹಿನಿಗಳಿಗೆ ಲಭ್ಯವಾಗುವ ಮೂಲಕ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಅಯೋಧ್ಯೆಯಲ್ಲಿ ಭಜರಂಗ ದಳದ ಕಾರ್ಯಕರ್ತರು ಮುಸುಗುಧಾರಿಗಳನ್ನು ಬಂದೂಕಿನಲ್ಲಿ ಗುಂಡಿಕ್ಕುವ ಹಾಗೂ ಲಾಠಿ ಮತ್ತು ಖಡ್ಗಗಳನ್ನು ಬಳಸಿ ನಡೆಸುತ್ತಿದ್ದ ಅಣಕು ತರಬೇತಿ ನಡೆಸುತ್ತಿರುವುದನ್ನು ದೃಶ್ಯಾವಳಿಗಳು ಒಳಗೊಂಡಿವೆ. ತರಬೇತಿ ನೀಡುವವರ ಖಾಕಿ ಚೆಡ್ಡಿಯನ್ನು ಧರಿಸಿದ್ದು, ಯುವಕರಿಗೆ ನಿರ್ದೇಶನಗಳನ್ನು ನೀಡುತ್ತಿರುವುದು ಬಯಲಾಗಿದೆ.

ಅಯೋಧ್ಯೆ ಜತೆಗೆ ಭಜರಂಗದಳ ಸುಲ್ತಾನ್ ಪುರ, ಗೋರಖ್ ಪುರ, ಪಿಲಿಬಿಟ್, ನೋಯ್ಡಾ, ಹಾಗೂ ಫುತೇಪುರಗಳಲ್ಲಿ ಇದೇ ಮಾದರಿಯ ತರಬೇತಿ ಶಿಬಿರಗಳನ್ನು ನಡೆಸಲು ತೀರ್ಮಾನಿಸಿರುವ ವಿಚಾರ ಕೂಡ ಬಯಲಾಗಿದೆ. ಈ ಮೂಲಕ ಹಿಂದಿನಿಂದಲೂ ಚರ್ಚೆಯಲ್ಲಿಯೇ ಇದ್ದ ಹಿಂದೂ ಸಂಘಟನೆಗಳ ಶಸ್ತ್ರಸ್ತ ತರಬೇತಿ ಕಾರ್ಯಕ್ರಮಗಳು ಮತ್ತೊಮ್ಮೆ ಸುದ್ದಿಕೇಂದ್ರಕ್ಕೆ ಬಂದಿವೆ.

ಹಿಂದೂ ಭಯೋತ್ಪಾದನೆ: 

ಹಿಂದೂ ಸಂಘಟನೆಗಳು ನಿಗೂಢವಾಗಿ ಶಸ್ತ್ರಾಸ್ತ್ರ ತರಬೇತಿಗಳನ್ನು ನೀಡುತ್ತಾರೆ ಎಂಬುದು ಹಳೆಯ ಆರೋಪ. ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಪರಿವಾರದ ಅಂಗ ಸಂಘಟನೆಯ ನಾಯಕರು ಈಗಾಗಲೇ ಜೈಲು ಪಾಲಾಗಿದ್ದಾರೆ. ಮುಂಬೈ ಎಟಿಎಸ್ ಸಾಧ್ವಿ ಪ್ರಗ್ನಾ ಸಿಂಗ್, ಮಾಜಿ ಮಿಲಿಟರಿ ಅಧಿಕಾರಿ ಕರ್ನಲ್ ಪುರೋಹಿತ್ ಮತ್ತಿತರರನ್ನು ಬಂಧಿಸುವ ಮೂಲಕ ‘ಹಿಂದೂ ಭಯೋತ್ಪಾದನೆ’ ಎಂಬ ಪದ ಚಾಲ್ತಿಗೆ ಬಂದಿತ್ತು. ಇದನ್ನು ಬಿಜೆಪಿ ಯುಪಿಎ ಸರಕಾರದ ಪಿತೂರಿ ಎಂದು ಆರೋಪಿಸಿತ್ತು.

ಸದ್ಯ ಪಗ್ನಾ ಸಿಂಗ್ ಮತ್ತಿತರರಿಗೆ ಎನ್ಐಎ ತನಿಖೆಯಲ್ಲಿ ಕ್ಲೀನ್ ಚಿಟ್ ನೀಡುವ ಪ್ರಯತ್ನವಾಗಿದ್ದು, ಆರೋಪ ಮುಕ್ತರಾಗಿ ಸದ್ಯದಲ್ಲಿಯೇ ಜೈಲಿನಿಂದ ಹೊರ ಬರುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿಯೂ ಸಂಘಪರಿವಾರದಿಂದ ಹೊರಬಂದು ಶ್ರೀರಾಮ ಸೇನೆ ಹೆಸರಿನಲ್ಲಿ ಸ್ವತಂತ್ರ ಸಂಘಟನೆಯನ್ನು ಕಟ್ಟಿಕೊಂಡಿರುವ ಪ್ರಮೋದ್ ಮುತಾಲಿಕ್ ಇದೇ ಮಾದರಿಯಲ್ಲಿ ಯುವಕರಿಗೆ ತರಬೇತಿ ನೀಡುವುದಾಗಿ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

Leave a comment

FOOT PRINT

Top