An unconventional News Portal.

ಒತ್ತಡದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಹೆಣಗುತ್ತಿರುವ ಪತ್ರಕರ್ತೆಯರು!

ಒತ್ತಡದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಹೆಣಗುತ್ತಿರುವ ಪತ್ರಕರ್ತೆಯರು!

ಒಂದು ಕಾಲದಲ್ಲಿ ಪುರುಷರಿಗೇ ಮೀಸಲಾಗಿದ್ದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಈಗ ಮಹಿಳೆಯರ ಪಾಲು ದೊಡ್ಡದಿದೆ.

ಬದಲಾದ ಸನ್ನಿವೇಷದಲ್ಲಿ ಎಲ್ಲಾ ಕ್ಷೇತ್ರಗಳಂತೆ ಇಲ್ಲೂ ಮಹಿಳೆಯರು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಇನ್ನಷ್ಟು ಅವಕಾಶಗಳು ಸಿಕ್ಕರೆ ಅವರು ನಿರ್ಣಾಯಕ ಪಾತ್ರಗಳನ್ನೂ ನಿಭಾಯಿಸುವ ಮುನ್ಸೂಚನೆ ನೀಡಿದ್ದಾರೆ. ಒಂದು ಕಾಲದಲ್ಲಿ ಪುರುಷರು ಮಾತ್ರ ನಿಭಾಯಿಸಬಲ್ಲ ಕ್ಷೇತ್ರಗಳೆಂದು ಗುರುತಿಸುತ್ತಿದ್ದ ಪತ್ರಿಕೋದ್ಯಮದ ವಿಭಾಗಗಳಾದ ತನಿಖಾ ಪತ್ರಿಕೋದ್ಯಮ, ಕ್ಯಾಮೆರಾಮನ್, ಕ್ರೈಮ್ ಬೀಟ್ಗಳಲ್ಲೂ ಇವತ್ತು ಸಾಕಷ್ಟು ಮಹಿಳೆಯರು ಕಾಣಸಿಗುತ್ತಾರೆ.

ಹೀಗೆ ದೊಡ್ಡ ಮಟ್ಟದಲ್ಲಿ ಮಾಧ್ಯಮ ಜಗತ್ತಿಗೆ ಪ್ರವೇಶಿಸುತ್ತಿರುವ ಪತ್ರಕರ್ತೆಯರು, ಮಾಧ್ಯಮ ತಂತ್ರಜ್ಞೆಯರು ಎದುರಿಸುವ ಸಮಸ್ಯೆಗಳಾವುವು? ಅವರುಗಳು ಎದುರಿಸುತ್ತಿರುವ ಸವಾಲುಗಳೇನು? ಅವುಗಳತ್ತ ‘ಸಮಾಚಾರ’ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.

“ನಾನು ಟಿವಿಯಲ್ಲಿ ಡಿಸ್ಟ್ರಿಕ್ಟ್ ಇನ್ ಚಾರ್ಜ್ ಆಗಿದ್ದೆ. ಮದುವೆಯಾಗಿ ಎರಡು ವರ್ಷವಾದರೂ ನನಗೆ ಮಕ್ಕಳಾಗಿರಲಿಲ್ಲ. ವೈದ್ಯರ ಬಳಿ ಹೋದಾಗ ಸ್ವಲ್ಪ ದಿನ ಕೆಲಸ ಬಿಡಿ, ರೆಸ್ಟ್ ಬೇಕು ಅಂದ್ರು. ಕೊನೆಗೆ ಕೆಲಸ ಬಿಟ್ಟು ಮನೆಯಲ್ಲಿದ್ದೆ. ಎಲ್ಲಾ ಸರಿಯಾಯ್ತು” ಎನ್ನುತ್ತಾರೆ ಟಿವಿ ಚಾನಲ್ನಲ್ಲಿ ಕೆಲಸ ಮಾಡುವ ಮಹಿಳಾ ಪತ್ರಕರ್ತರೊಬ್ಬರು. ಇದು ಅವರೊಬ್ಬರ ಸಮಸ್ಯೆಯಲ್ಲ.

ಮಾಧ್ಯಮಗಳು 24/7 ವ್ಯವಸ್ಥೆಗೆ ತೆರೆದುಕೊಂಡ ನಂತರ ಸೃಷ್ಟಿಸುತ್ತಿರುವ ಕೆಲಸದ ಒತ್ತಡ ಕಡಿಮೆ ಏನಲ್ಲ. ಇದು ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡುವುದರೊಂದಿಗೆ, ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಮಹಿಳೆಯರನ್ನು ಸಮಸ್ಯೆಗೆ ದೂಡಿದ್ದಿದೆ.

“ಮದುವೆಯಾಗಿ ಸಂಸಾರ ನಡೆಸಿಕೊಂಡು ಹೋಗುವುದೂ, ವೃತ್ತಿ ನಿಭಾಯಿಸುವುದೂ ತುಂಬಾ ಕಷ್ಟವಾಗುತ್ತದೆ. ಎಷ್ಟೋ ಬಾರಿ ನೈಟ್ ಶಿಫ್ಟ್ ಹಾಕಿದಾಗ ಗಂಡನ ಮುಖ ನೋಡಲೂ ಸಮಯ ಸಿಗುವುದಿಲ್ಲ. ಜೊತೆಗೆ ಮನೆಯಲ್ಲಿ ಅಡುಗೆ ಮಾಡಬೇಕು.. ಹಿಂಸೆ” ಎಂಬುದು ಇನ್ನೊಬ್ಬ ಯುವ ಪತ್ರಕರ್ತೆಯ ಅಳಲು. “ನಾನು ನೈಟ್ ಶಿಪ್ಟ್ ಹಾಕುವುದಿದ್ದರೆ ಕೆಲಸಕ್ಕೇ ಬರುವುದಿಲ್ಲ ಎಂದು ಕಂಡೀಷನ್ ಹಾಕಿಯೇ ಇಲ್ಲಿಗೆ ಕೆಲಸಕ್ಕೆ ಬಂದಿದ್ದು,” ಅಂತ ಇದಕ್ಕೆ ಇನ್ನೊಬ್ಬರು ತಾವು ಕಂಡುಕೊಂಡ ಪರಿಹಾರವನ್ನು ಮುಂದಿಡುತ್ತಾರೆ.

ಹೀಗೆ ಮಾಧ್ಯಮದ ರಾತ್ರಿಪಾಳಿಗಳು ಮಹಿಳೆಯರನ್ನು ದುಃಸ್ವಪ್ನದಂತೆ ಕಾಡುವುದಿದೆ. ಇದೇ ಕಾರಣಕ್ಕೋ ಏನೋ ಎಷ್ಟೋ ಯುವತಿಯರು ಮದುವೆಯಾಗುತ್ತಿದ್ದಂತೆ ಪತ್ರಿಕೋದ್ಯಮದಿಂದ ದೂರ ಸರಿಯುತ್ತಾರೆ.

ಮಾನಸಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಈ ರೀತಿಯಾದರೆ, ಕೆಲಸದ ವೇಳೆ ಅನುಭವಿಸುವ ಕಿರಿಕಿರಿ, ತೊಂದರೆಗಳು ಭಿನ್ನವಾಗಿರುತ್ತವೆ. “ಫೀಲ್ಡ್ ನಲ್ಲಿ ಸುತ್ತ ಮುತ್ತಲಿನವರು ಕೆಕ್ಕರಿಸಿ ನೋಡುತ್ತಾರೆ. ಕೆಟ್ಟದಾಗಿ ಮಾತನಾಡಿಕೊಳ್ತಾರೆ. ಯಾರ್ಯಾರ ಜೊತೆಗೋ ಸಂಬಂಧ ಕಟ್ಟುತ್ತಾರೆ,” ಎಂಬುದು ಇತ್ತೀಚೆಗಷ್ಟೇ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಪತ್ರಕರ್ತೆಯೊಬ್ಬರ ಮಾತು.

ಎಲ್ಲಾ ಕ್ಷೇತ್ರಗಳಂತೆ ಮಹಿಳೆಯರು ಪತ್ರಿಕೋದ್ಯಮದಲ್ಲೂ ದೌರ್ಜನ್ಯಕ್ಕೆ ಒಳಗಾದ ಯುವತಿಯರಿದ್ದಾರೆ. ಇವುಗಳಲ್ಲಿ ಮಾನಸಿಕ ದೌರ್ಜನ್ಯವೂ ಒಂದು. ರಾತ್ರಿ ವೇಳೆ ಫೋನ್ ಮಾಡಿ ಎಷ್ಟೋ ‘ಬಾಸ್’ಗಳು ತಲೆ ತಿನ್ನುತ್ತಾರೆ. ಫೋನ್ ಇಡುವಂತೆಯೂ ಇಲ್ಲ, ಮಾತಾಡುವಂತೆಯೂ ಇಲ್ಲ. ಇನ್ನು ಆಫೀಸ್ನಲ್ಲಿ ಮುಖ್ಯಸ್ಥರು ಸಲುಗೆಯಿಂದ ವರ್ತಿಸುವುದು, ಕಾಫಿಗೋ ಊಟಕ್ಕೋ ಕರೆಯುವ ಸಂದರ್ಭಗಳು ಆಗಾಗ ಬರುತ್ತವೆ. “ನನ್ನನ್ನು ಐಸ್ ಕ್ರೀಂ ತಿನ್ನೋಕೆ ಒತ್ತಾಯ ಮಾಡಿದ ಒಂದೇ ಕಾರಣಕ್ಕೆ ಕೆಲಸ ಬಿಟ್ಟೆ,” ಅಂತ ಈಗ ಸ್ವಂತದೊಂದು ವೆಬ್ ತಾಣವನ್ನು ನಡೆಸುತ್ತಿರುವ ಪತ್ರಕರ್ತೆಯೊಬ್ಬರು ಹೇಳುತ್ತಾರೆ.

ಈ ಕುರಿತು ಅಧ್ಯಯನ ಮಾಡಿರುವ ‘ಇಂಟರ್ನ್ಯಾಷನಲ್ ವುಮೆನ್ಸ್ ಮೀಡಿಯಾ ಫೌಂಡೇಷನ್’ನ ವರದಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಮತ್ತಷ್ಟು ಒಳನೋಟಗಳನ್ನು ನೀಡುತ್ತದೆ. ಅದರ ಪ್ರಕಾರ ಪ್ರತಿ ಮೂವರಲ್ಲಿ ಒಬ್ಬ ಪತ್ರಕರ್ತೆ ದೌರ್ಜನಕ್ಕೆ ಒಳಗಾಗುತ್ತಾರೆ. ಇವರೆಲ್ಲಾ ಕೆಲಸದ ವೇಳೆಯಲ್ಲಿ ಪುರುಷರು ಸಹೋದ್ಯೋಗಿಗಳಿಂದ ದೌರ್ಜನ್ಯಗಳನ್ನು ಎದುರಿಸುತ್ತಾರೆ ಎಂದು ವರದಿ ಮುಂದಿಡುತ್ತದೆ. ಇವರಲ್ಲಿ ಹೆಚ್ಚಿನ ಸಂದರ್ಭ ದೌರ್ಜನ್ಯ ‘ಬಾಸ್’ನಿಂದಲೇ ನಡೆಯುತ್ತವೆ. ದೌರ್ಜನ್ಯಕ್ಕೊಳಗಾದವರಲ್ಲಿ ಅರ್ಧದಷ್ಟು ಜನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಹೀಗಿದ್ದೂ ಇದನ್ನೆಲ್ಲಾ ಹೊರಗೆ ಹೇಳಿಕೊಳ್ಳುವುದಿಲ್ಲ ಎಂಬ ಅಘಾತಕಾರಿ ಮಾಹಿತಿಯನ್ನು ವರದಿ ಮುಂದಿಡುತ್ತದೆ.

ಇಲ್ಲಿ ಪಟ್ಟಿ ಮಾಡಿದ ಸಂಗತಿಗಳ ಆಳದಲ್ಲಿ ಚಿತ್ರ ವಿಚಿತ್ರ ಕತೆಗಳು ಸಿಗುತ್ತವೆ. ಆದರೆ, ಅದು ಕತೆಯಾಚೆಗೆ ವೈಯುಕ್ತಿಕ ಬದುಕೂ ಆಗಿರುವುದರಿಂದ ಆ ಕುರಿತು ಚರ್ಚೆಗೆ ಹೊರಡುವ ಅಗತ್ಯವಿಲ್ಲ. ಎಲ್ಲವೂ ಬದಲಾದಂತೆ, ಪತ್ರಕರ್ತೆಯರ ಸಂಕಷ್ಟಗಳೂ ಬದಲಾಗಲಿ ಎಂಬುದಷ್ಟೆ ನಮ್ಮ ಹಾರೈಕೆ.

Leave a comment

FOOT PRINT

Top