An unconventional News Portal.

ಮಮತಾ ಬ್ಯಾನರ್ಜಿ ಎಂಬ ಗಟ್ಟಿಗಿತ್ತಿಯ ಬದುಕಿನ 5 ಪ್ರಮುಖ ತಿರುವುಗಳು ಮತ್ತು ಸವೆಸಿದ ಹಾದಿ!

ಮಮತಾ ಬ್ಯಾನರ್ಜಿ ಎಂಬ ಗಟ್ಟಿಗಿತ್ತಿಯ ಬದುಕಿನ 5 ಪ್ರಮುಖ ತಿರುವುಗಳು ಮತ್ತು ಸವೆಸಿದ ಹಾದಿ!

  • ಈಕೆ ಗಟ್ಟಿಗಿತ್ತಿ; ಹೆಸರು ಮಮತಾ ಬ್ಯಾನರ್ಜಿ!

mamata-banerjee-1ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ತನ್ನ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಗಳಿಸುವ ಮೂಲಕ ಮಮತಾ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 34 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಪಿಎಂ ‘ಕೆಂಪು ಕೋಟೆ’ಯನ್ನು ಒಡೆದು ಹಾಕಿ 2011ರಲ್ಲಿ ಅಧಿಕಾರಕ್ಕೇರಿದ ಅವರದ್ದು ವಿಭಿನ್ನ ಹಿನ್ನೆಲೆ ಹಾಗೂ ಹಠಮಾರಿತನಗಳಿಂದ ಕೂಡಿರುವ ಬದುಕಿನ ಹಾದಿ.


  • 1955ರ ಜನವರಿಯಲ್ಲಿ ಕೋಲ್ಕತ್ತಾದಲ್ಲಿ ಹುಟ್ಟಿದ ಮಮತಾ 15ರ ಹರೆಯದಲ್ಲಿಯೇ ರಾಜಕೀಯದೆಡೆಗೆ ಆಕರ್ಷಿತರಾದವರು. ಅವತ್ತಿನ ಕಾಂಗ್ರೆಸ್ (ಐ) ಪಕ್ಷದ ಸ್ಟೂಡೆಂಟ್ ಯೂನಿಯನ್ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದರು. ಮುಂದೆ 1977ರಲ್ಲಿ ಪಶ್ಚಿಮ ಬಂಗಾಳದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗುವ ಮೂಲಕ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಅಖಾಡಕ್ಕೆ ಇಳಿದರು.

1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವತ್ತು ಸಿಪಿಎಂ ಪಕ್ಷದ ಹಿರಿಯ ನಾಯಕ ಸೋಮನಾಥ್ ಚಟರ್ಜಿ ಎದುರಿಗೆ ಸೆಣೆಸಿ ಗೆದ್ದರು. ಆಗ ಮಮತಾ ದೇಶದ ಅತೀ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಅಲ್ಲಿಂದಾಚೆಗೆ, ಕೇಂದ್ರದ ನಾನಾ ಇಲಾಖೆಗಳಲ್ಲಿ ಸಚಿವೆಯಾಗಿ ಕೆಲಸ ಮಾಡಿದರು. ಪಿ. ವಿ. ನರಸಿಂಹ ರಾವ್ ಪ್ರಧಾನಿ ಮಂತ್ರಿಯಾಗಿದ್ದ ಸಮಯದಲ್ಲಿ ಕೇಂದ್ರ ಕ್ರೀಡಾ ಇಲಾಖೆಯನ್ನು ಮಮತಾ ಹೊಣೆಗೆ ನೀಡಲಾಗಿತ್ತು. 1997ರಲ್ಲಿ ಕೇಂದ್ರ ಸರಕಾರ ಕ್ರೀಡಾ ಅಭಿವೃದ್ಧಿಗೆ ತಾನು ನೀಡಿದ ಶಿಫಾರಸುಗಳನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ನಿಂದ ಹೊರಬಂದರು ಮಮತಾ.


  • ಅಲ್ಲಿಂದ ಮುಂದೆ ಅವರು ನಡೆಸಿದ್ದು ಅಕ್ಷರಶಃ ಏಕಾಂಗಿ ಹೋರಾಟ. ಪಶ್ಚಿಮ ಬಂಗಾಳದ ಸಿಪಿಎಂ ವಿರುದ್ಧ ಹೋರಾಡಲು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಹುಟ್ಟು ಹಾಕಿದರು. ಅದರಲ್ಲಿ ಮಮತಾ ಹೊರತು ಪಡಿಸಿದರೆ ಹೇಳಿಕೊಳ್ಳುವ ಜನಪ್ರಿಯ ನಾಯಕರೂ ಇರಲಿಲ್ಲ. ಅಂತಹ ಸಮಯದಲ್ಲಿ ಸಿಪಿಎಂ ತನ್ನ ಉತ್ತುಂಗದ ಸ್ಥಿತಿಯಲ್ಲಿತ್ತು.

West bengalಈ ಸಮಯದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆಗಳಾದವು. ಮಮತಾ ಚಿಕ್ಕದೊಂದು ಸಭೆ ನಡೆಸುವುದೂ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಅದಲ್ಲದೆ, ಹೆಚ್ಚು ಯೋಚನೆ ಮಾಡುವ ನಗರವಾಸಿ ಬಂಗಾಳಿಗರು ಮಮತಾರನ್ನು ತಮ್ಮೊಳಗೆ ಸುಲಭಕ್ಕೆ ಬಿಟ್ಟುಕೊಳ್ಳಲಿಲ್ಲ. ಗ್ರಾಮೀಣ ಭಾಗದಲ್ಲಿ ಸಿಪಿಎಂ ಗಟ್ಟಿ ಬುನಾದಿ ಹಾಕಿಕೊಂಡಿತ್ತು. ಈ ಸಮಯದಲ್ಲಿ ಸ್ವತಂತ್ರ ಪಕ್ಷ ಕಟ್ಟಿಕೊಂಡಿದ್ದ ಮಮತಾ ಅಕ್ಷರಶಃ ದಣಿವರಿಯದ ಹೋರಾಟದ ಅಖಾಡಕ್ಕೆ ಇಳಿದಿದ್ದರು.


  • ಮುಂದೆ, ತೃಣಮೂಲ ಕಾಂಗ್ರೆಸ್ ಮೂಲಕ ಗೆದ್ದು ಲೋಕಸಭೆಗೆ ಹೋಗಿ, ಎನ್ ಡಿಎ ಸರಕಾರದಲ್ಲಿ ಕೇಂದ್ರ ಸಚಿವರಾದರು. ಮೊದಲ ಮಹಿಳಾ ರೈಲ್ವೆ ಸಚಿವೆ ಎನ್ನಿಸಿಕೊಂಡರು. ಆದರೆ, ಅವರ ಹೋರಾಟದ ದೃಷ್ಟಿ ಇದ್ದದ್ದು ಬಂಗಾಳದ ಮೇಲೆಯೇ. ಯಾವಾಗ ಬಂಗಾಳದ ಸಿಂಗೂರಿನಲ್ಲಿ ಟಾಟಾ ನ್ಯಾನೋ ಘಟಕಕ್ಕೆ ಸಿಪಿಎಂ ಪಕ್ಷ ಜಮೀನು ನೀಡುವ ತೀರ್ಮಾನಕ್ಕೆ ಜನ ತಿರುಗಿ ಬಿದ್ದರೋ, ಮಮತಾ ತಳಮಟ್ಟದಲ್ಲಿ ನಾಯಕತ್ವ ನೀಡಿದರು. ಜಮೀನು ನೀಡುವ ಪ್ರಕ್ರಿಯೆಗೆ ತೃಣಮೂಲ ಕಾಂಗ್ರೆಸ್ ಮೂಲಕ ಭಾರಿ ವಿರೋಧವನ್ನು ಒಡ್ಡಿದರು.

ಈ ಸಮಯದಲ್ಲಿ ನಡೆದ ದಾಳಿಗಳಲ್ಲಿ ಟಿಎಂಸಿಯ ಅನೇಕ ಕಾರ್ಯಕರ್ತರು ಹಲ್ಲೆಗೆ ಒಳಗಾದರು. ಒಂದು ಹಂತದಲ್ಲಿ ಮಮತಾ ಮೇಲೆಯೂ ದಾಳಿಗಳು ನಡೆದವು. ಆದರೆ, ತಮ್ಮ ಅಳಿವು ಉಳಿವಿನ ಹೋರಾಟಕ್ಕೆ ಇಳಿದಿದ್ದ ಮಮತಾ ಸಿಂಗೂರಿನಿಂದ ಟಾಟಾ ನ್ಯಾನೋ ಕಾರು ಉತ್ಪಾದನಾ ಘಟಕ ವಾಪಾಸಾಗುವಂತೆ ಮಾಡಿದರು. ಈ ಹಿನ್ನೆಲೆಯಲ್ಲಿಯೇ ನಡೆದ 2011ರ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜಯ ದಾಖಲಿಸಿತು. ಮಮತಾ ಬಂಗಾಳದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.


  • ಅಧಿಕಾರಕ್ಕೇರಿದ ಮೇಲೆಯೂ ಮಮತಾ ತಮ್ಮ ಸರಳತನವನ್ನು ಕಳೆದುಕೊಳ್ಳಲಿಲ್ಲ. ಚಿಕ್ಕದೊಂದು ನಿವಾಸ, ಹಳೆಯ ಕಾರಿನಲ್ಲಿಯೇ ಮುಖ್ಯಮಂತ್ರಿಯಾಗಿ ಬದುಕು ಸಾಗಿಸತೊಡಗಿದರು. ಅದಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಹೊಸ ಯೋಜನೆಗಳನ್ನು ರೂಪಿಸಿದರು. ಇವೆಲ್ಲವೂ ಬಂಗಾಳಿಗರ ಮನದಲ್ಲಿ ಮಮತಾ ಪರ ಅಲೆಯನ್ನು ಎಬ್ಬಿಸಿದವು ಎಂಬುದಕ್ಕೆ ಈಗ ಮತ್ತೊಮ್ಮೆ ವಿಜಯದ ಮೆಟ್ಟಿಲೇರಿರುವುದೇ ಸಾಕ್ಷಿಯಾಗಿದೆ.

ಮಮತಾ ಹಠಮಾರಿ. ಸ್ವಂತ ನಿರ್ಧಾರಗಳ ಮೇಲೆಯೇ ರಾಜಕೀಯ ಮಾಡುವ ಹೆಣ್ಣು ಮಗಳು ಎಂಬ ಮಾತುಗಳಿವೆ. ಈಕೆಯ ಜಿಗುಟುತನ ಹಾಗೂ ದಣಿವರಿಯದ ಹೋರಾಟಗಳಿಂದಾಗಿ, ಆಕೆ ಬಂಗಾಳದ ಗ್ರಾಮೀಣ ಭಾಗಗಳಲ್ಲಿ ಇವತ್ತು ದೇವತೆಯ ಮಟ್ಟಕ್ಕೆ ಏರಿದ್ದಾರೆ.


 

Leave a comment

FOOT PRINT

Top