An unconventional News Portal.

ಟ್ರಾಫಿಕ್ ಎಂಬ ನಿತ್ಯ ನರಕದಲ್ಲಿ ‘ಬೈಕ್ ಟ್ಯಾಕ್ಸಿ’: ಸಮಸ್ಯೆಯೋ? ಪರಿಹಾರನೋ?

ಟ್ರಾಫಿಕ್ ಎಂಬ ನಿತ್ಯ ನರಕದಲ್ಲಿ ‘ಬೈಕ್ ಟ್ಯಾಕ್ಸಿ’: ಸಮಸ್ಯೆಯೋ? ಪರಿಹಾರನೋ?

ಸಿಲಿಕಾನ್ ಸಿಟಿಯ ನಗರ ಸಾರಿಗೆ ವ್ಯವಸ್ಥೆಯಲ್ಲಿ ಆ್ಯಪ್ ಆಧಾರಿತ ದ್ವಿಚಕ್ರ ವಾಹನಗಳ ಸೇವೆ ಸ್ಥಿತಿ ಡೋಲಾಯಮಾನವಾಗಿದೆ.

ದ್ವಿ ಚಕ್ರ ವಾಹನಗಳನ್ನು ಟ್ಯಾಕ್ಸಿ ರೀತಿಯ ಸೇವೆಗೆ ಬಳಸಿಕೊಳ್ಳಬೇಕಾದರೆ ಸಾರಿಗೆ ಇಲಾಖೆ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಆರ್ಟಿಓ ಹೇಳುತ್ತಿದೆ. ಆದರೆ, ದ್ವಿ ಚಕ್ರ ವಾಹನಗಳ ಮೂಲಕ ಟ್ಯಾಕ್ಸಿ ಸೇವೆ ಕೊಡಲು ಮುಂದಾದ ಓಲಾ, ಉಬರ್ ರೀತಿಯ ಕಂಪನಿಗಳು ಈವರೆಗೆ ಅನುಮತಿ ಕೋರಿಲ್ಲ ಎಂದು ಇಲಾಖೆ ಮೂಲಗಳು ಹೇಳುತ್ತಿವೆ.

ಈ ಕುರಿತು ‘ಸಮಾಚಾರ’ ಜತೆ ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ, “ದ್ವಿ ಚಕ್ರ ವಾಹನಗಳನ್ನು ಬಾಡಿಗೆಗೆ ಅಥವಾ ಟ್ಯಾಕ್ಸಿ ಸೇವೆಗೆ ಬಳಸುವುದಾದರೆ ಪ್ರತ್ಯೇಕ ನಮೂನೆಯಲ್ಲಿ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ರಸ್ತೆ ಸಾರಿಗೆ ಇಲಾಖೆ ವಿಭಾಗಗಳಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ, ಈವರೆಗೆ ಯಾವುದೇ ಕಂಪನಿಗಳು ಅರ್ಜಿ ಸಲ್ಲಿಸಿಲ್ಲ,” ಎಂದು ತಿಳಿಸಿದ್ದಾರೆ.

ಟ್ರಾಫಿಕ್ ಪರಿಹಾರ:

BangaloreTraffic-1

ಬೆಂಗಳೂರು ನಗರ ಸಿಲಿಕಾನ್ ಸಿಟಿಯ ಸ್ವರೂಪ ಪಡೆದುಕೊಳ್ಳುತ್ತಿದ್ದ ಹಾಗೆಯೇ, ಅದರ ನೇರ ಪರಿಣಾಮ ಬೀರಿದ್ದು ಇಲ್ಲಿನ ರಸ್ತೆಗಳ ಮೇಲೆ. 2015ರ ಅಂಕಿಅಂಶವೊಂದರ ಪ್ರಕಾರ ಸದ್ಯ ಬೆಂಗಳೂರಿನಲ್ಲಿರುವ ವಾಹನಗಳ ಸಂಖ್ಯೆಯೇ 55. 60 ಲಕ್ಷ. ಇದರಲ್ಲಿ ಸುಮಾರು 38. 41 ಲಕ್ಷದಷ್ಟು ದ್ವಿ ಚಕ್ರ ವಾಹನಗಳಿವೆ. ಸಮೂಹ ಸಾರಿಗೆ ವ್ಯವಸ್ಥೆಗಳಾದ ಬಿಎಂಟಿಸಿ, ಅರ್ಧಂಬರ್ಧ ಮೆಟ್ರೊ, ಆಟೋ ಹಾಗೂ ಟ್ಯಾಕ್ಸಿಗಳು ಜನರಿಗೆ ಸೇವೆ ಸಲ್ಲಿಸುತ್ತಿವೆ. ಹೀಗಿದ್ದೂ, ಇಲ್ಲಿನ ಸಾರಿಗೆ ವ್ಯವಸ್ಥೆಯ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.

ಮಹಾನಗರದಲ್ಲಿ ಹೆಚ್ಚುತ್ತಿರುವ ಸಾರಿಗೆ ಬೇಡಿಕೆಯ ಹಿನ್ನೆಲೆಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ ಹಾಗೂ ಉಬರ್ ಕಂಪನಿಗಳೂ ಕಳೆದ ಮಾರ್ಚ್ ತಿಂಗಳಿನಲ್ಲಿ ದ್ವಿ ಚಕ್ರ ವಾಹನಗಳ ಟ್ಯಾಕ್ಸಿ ಸೇವೆಯನ್ನು ನೀಡುವುದಾಗಿ ಘೋಷಿಸಿದವು. ಇದಕ್ಕಾಗಿ ಪೈಲಟ್ ಪ್ರಾಜೆಕ್ಟ್ ಹೆಸರಿನಲ್ಲಿ ಬೈಕ್, ಮೊಪೆಡ್ ಹಾಗೂ ಸ್ಕೂಟರ್ಗಳನ್ನು ಇವು ಬಾಡಿಗೆಗೆ ಇವೆ ಎಂದು ತಿಳಿಸಿದವು. ಆದರೆ, ಸಾರಿಗೆ ಇಲಾಖೆ ಬೈಕ್ ಟ್ಯಾಕ್ಸಿಗಳನ್ನು ಜಪ್ತಿ ಮಾಡುವ ಮೂಲಕ ತಂತ್ರಜ್ಞಾನ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳಿಗೆ ಬಿಸಿ ಮುಟ್ಟಿಸಿತು. ಕೊನೆಗೆ, ಘೋಷಿಸಿದಷ್ಟೆ ವೇಗವಾಗಿ ಸದರಿ ಕಂಪನಿಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ಹಿಂತೆಗೆದುಕೊಂಡವು.

ಸಮಸ್ಯೆಗೆ ಪರಿಹಾರ?:

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ನೀಡುವ ಮೂಲಕ ಜನರಿಗೆ ಕಡಿಮೆ ಬೆಲೆಯಲ್ಲಿ ಸಾರಿಗೆ ಸೇವೆ ಲಭ್ಯವಾಗುತ್ತದೆ. ಜತೆಗೆ, ಈ ಟ್ರಾಫಿಕ್ ಜಂಜಾಟದಲ್ಲಿ ಸಮಯಯವೂ ಉಳಿಯುತ್ತದೆ ಎಂದು ಒಂದು ವರ್ಗ ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಆದರೆ, “ಸದ್ಯ ನಮ್ಮ ರಸ್ತೆಗಳು ಈಗಿರುವ ವಾಹನಗಳನ್ನೇ ಭರಿಸುವುದು ಕಷ್ಟವಾಗುತ್ತಿದೆ. ಒಂದು ವೇಳೆ, ಓಲಾ ಅಥವಾ ಉಬರ್ ರೀತಿಯ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಮತಿ ನೀಡಿದ್ದೇ ಆದರೆ, ಲಕ್ಷಾಂತರ ಬೈಕ್, ಸ್ಕೂಟರ್ ಹಾಗೂ ಮೊಪೆಡ್ಗಳು ರಸ್ತೆಗೆ ಇಳಿಯುತ್ತವೆ. ಆಮೇಲೆ ಇವುಗಳ ನಿಯಂತ್ರಣ ಕಷ್ಟವಾಗುತ್ತದೆ,” ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು.

ಇವರು ಬರ್ಮಾ ದೇಶದ ಉದಾಹರಣೆಯನ್ನು ಮುಂದಿಡುತ್ತಾರೆ. ಜಗತ್ತಿನಲ್ಲಿ ಟ್ರಾಫಿಕ್ ನಿಯಂತ್ರಣದ ದೃಷ್ಟಿಯಿಂದ ಬರ್ಮಾ ಕೆಲವು ಕ್ರಮಗಳನ್ನು ಕೈಗೊಂಡಿದೆ. “ಇದರಲ್ಲಿ ನಗರದ ಹೃದಯ ಭಾಗಗಳಲ್ಲಿ ದ್ವಿ ಚಕ್ರ ವಾಹನಗಳನ್ನು ನಿಷೇಧಿಸಿರುವುದು ಒಂದು. ಪರ್ಯಾಯವಾಗಿ ಅಚ್ಚುಕಟ್ಟಾದ ಸಮೂಹ ಸಾರಿಗೆ ವ್ಯವಸ್ಥೆಯನ್ನು ಬರ್ಮಾ ನೀಡಿದೆ,” ಎನ್ನುತ್ತಾರೆ ಅವರು.

ಸಮಸ್ಯೆ ಎಲ್ಲಿದೆ?: 

bangalore metro-1ಹಾಗೆ ನೋಡಿದರೆ, ಬೆಂಗಳೂರಿನ ಸಾರಿಗೆ ವ್ಯವಸ್ಥೆ ಬಗ್ಗೆಯೇ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇದರಲ್ಲಿ ಪ್ರಮುಖವಾದುದು ಸಮಗ್ರ ಸಾರಿಗೆ ಹಾಗೂ ಸಂಚಾರಿ ನೀತಿ. ಇದರ ಅಡಿಯಲ್ಲಿ ಬೆಂಗಳೂರಿಗೆ ಕಡಿಮೆ ವೆಚ್ಚದಲ್ಲಿ ಕಮ್ಯೂಟರ್ ರೈಲು ಸೇವೆ, ಬಸ್ ಲೈನ್ ಹೀಗೆ ಅನೇಕ ಯೋಜನೆಗಳನ್ನು ನೀತಿ ಮುಂದಿಟ್ಟಿತ್ತು. ಆದರೆ, ಕಳೆದ 15 ವರ್ಷಗಳಿಂದ ಸಾರಿಗೆ ವೆಚ್ಚದ ಬಹುಪಾಲವನ್ನು ನುಂಗಿ ಹಾಕಿರುವುದು ಮೆಟ್ರೊ ರೈಲು ಯೋಜನೆ. ಇದರಿಂದಾಗಿ ಜನರಿಗೆ ಅನುಕೂಲವಾಗಬಹುದಾದ, ಸರಳ ಹಾಗೂ ಕಡಿಮೆ ವೆಚ್ಚದ ಸಾರಿಗೆ ಯೋಜನೆಗಳು ನನೆಗುದಿಗೆ ಬಿದ್ದಿವೆ. ಇದರ ಜತೆಗೆ, ಬೈಕ್ ಟ್ಯಾಕ್ಸಿ ಹೆಸರಿನಲ್ಲಿ ಇನ್ನೊಂದಿಷ್ಟು ವಾಹನಗಳು ಬೆಂಗಳೂರು ರಸ್ತೆಗೆ ಇಳಿದರೆ, ಟ್ರಾಫಿಕ್ ನಿಯಂತ್ರಣ ಇನ್ನಷ್ಟು ಕ್ಲಿಷ್ಟಕರ ಪರಿಸ್ಥಿತಿಯನ್ನು ಮುಂದು ಮಾಡಲಿದೆ ಎಂಬುದು ತಜ್ಞರ ಅಭಿಪ್ರಾಯ.

ಇದರ ನಡುವೆ, “ಬೈಕ್ ಟ್ಯಾಕ್ಸಿ ಸೇವೆಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಆದರೆ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳು ಇನ್ನೂ ಅರ್ಜಿ ಸಲ್ಲಿಸಿಲ್ಲ,” ಎನ್ನುತ್ತಾರೆ ಇಲಾಖೆ ಆಯುಕ್ತ ರಾಮೇಗೌಡ. ಒಂದು ವೇಳೆ, ಸಾರಿಗೆ ಇಲಾಖೆ ಅನುಮತಿ ನೀಡಿದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.

 

Leave a comment

FOOT PRINT

Top