An unconventional News Portal.

ಕಳೆದ 24 ಗಂಟೆಯಲ್ಲಿ ಇಬ್ಬರು ಪತ್ರಕರ್ತರ ಹತ್ಯೆ: ಭಾರತದಲ್ಲಿ ಪತ್ರಕರ್ತರ ಸುರಕ್ಷತೆ ಕುರಿತು ಚರ್ಚೆ

ಕಳೆದ 24 ಗಂಟೆಯಲ್ಲಿ ಇಬ್ಬರು ಪತ್ರಕರ್ತರ ಹತ್ಯೆ: ಭಾರತದಲ್ಲಿ ಪತ್ರಕರ್ತರ ಸುರಕ್ಷತೆ ಕುರಿತು ಚರ್ಚೆ

ಕಳೆದ 24 ಗಂಟೆಗಳಲ್ಲಿ ನಮ್ಮ ದೇಶದ ಇಬ್ಬರು ಪತ್ರಕರ್ತರ ಹತ್ಯೆ ನಡೆದಿದೆ.

ಹಿಂದಿ ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿದ್ದ ರಾಜ್ದೇವ್ ರಂಜನ್ ಬಿಹಾರದ ಸಿವಾನ್’ನಲ್ಲಿ ಹತ್ಯೆಗೀಡಾದರೆ, ಸ್ಥಳೀಯ ಟಿವಿ ಚಾನಲ್ ವರದಿಗಾರ ಅಖಿಲೇಶ್ ಪ್ರತಾಪ್ ಸಿಂಗ್ ಜಾರ್ಖಂಡ್ನಲ್ಲಿ ಅಪರಿಚಿತರ ದಾಳಿಗೆ ಜೀವ ತೆತ್ತಿದ್ದಾರೆ.

ಶುಕ್ರವಾರ ಸಂಜೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಹಿಂದಿ ದೈನಿಕ ‘ಹಿಂದೂಸ್ಥಾನ್’ ಬ್ಯೂರೋ ಚೀಫ್ ರಾಜ್ದೇವ್ ರಂಜನ್’ರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಕಳೆದ 20ವರ್ಷಗಳಿಂದ ಪತ್ರಿಕೋದ್ಯಮದಲ್ಲಿರುವ ರಾಜ್ದೇವ್ ಸಿವಾನ್ ರೈಲ್ವೇ ನಿಲ್ದಾಣದ ಬಳಿ ಬರುತ್ತಿದ್ದಾಗ ತುಂಬಾ ಹತ್ತಿರದಿಂದ ಗುಂಡಿಕ್ಕಲಾಗಿದ್ದು, ಒಂದು ಬುಲೆಟ್ ತಲೆಗೆ ಹೊಕ್ಕಿದೆ. ಇನ್ನೊಂದು ನೇರವಾಗಿ ಎದೆ ಭಾಗವನ್ನು ಛೇದಿಸಿಕೊಂಡು ಒಳ ನುಗ್ಗಿದೆ.

ರಾಜ್ದೆವ್ರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಸಿವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, “ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಅವರು ಯಾರೊಂದಿಗೂ ವೈಯಕ್ತಿಕ ದ್ವೇಷ ಇಟ್ಟುಕೊಂಡಿರಲಿಲ್ಲ,” ಎಂದು ತಿಳಿಸಿದ್ದಾರೆ. ರಂಜನ್ ಸ್ಥಳೀಯ ಕಾನೂನು ಉಲ್ಲಂಘಿಸುವವರ ವಿರುದ್ಧ ಬಹಳ ಹಿಂದಿನಿಂದಲೂ ಬರೆಯುತ್ತಿದ್ದರು ಎನ್ನಲಾಗಿದೆ. ಈ ಘಟನೆ ಬೆನ್ನಲ್ಲೇ ಬಿಹಾರ ಪತ್ರಕರ್ತರು ಪ್ರತಿಭಟನೆಗೂ ಇಳಿದಿದ್ದಾರೆ.

ಅಖಿಲೇಶ್ ಪ್ರತಾಪ್ ಸಿಂಗ್

ಅಖಿಲೇಶ್ ಪ್ರತಾಪ್ ಸಿಂಗ್

ಅತ್ತ ಜಾರ್ಖಂಡ್ನಲ್ಲೂ ಇಂಥಹದ್ದೇ ಪ್ರಕರಣ ವರದಿಯಾಗಿದೆ.  ಗುರುವಾರ ರಾತ್ರಿ ಜಾರ್ಖಂಡ್ನ ಛತ್ರ ಜಿಲ್ಲೆಯ ದೇವಾರಿಯದಲ್ಲಿ ಅಖಿಲೇಶ್ ಪ್ರತಾಪ್ ಸಿಂಗ್ ಎಂಬ ಸ್ಥಳೀಯ ವಾಹಿನಿಯ ಪತ್ರಕರ್ತನನ್ನು ಹತ್ಯೆ ಮಾಡಲಾಗಿದೆ. 35 ವರ್ಷದ ಪತ್ರಕರ್ತನನ್ನು ಗ್ರಾಮ ಕಾರ್ಯಾಲಯದ ಸಮೀಪವೇ ಕೊಲೆ ಮಾಡಲಾಗಿದೆ. ಈ ಘಟನೆಯನ್ನು ಮುಖ್ಯಮಂತ್ರಿ ರಘುವರ್ ದಾಸ್ ಖಂಡಿಸಿದ್ದು, ಪೊಲೀಸ್ ಮಹಾ ನಿರ್ದೇಶಕ ಡಿಕೆ ಪಾಂಡೆಗೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ತಾಕೀತು ಮಾಡಿದ್ದಾರೆ. ಪತ್ರಕರ್ತನ ಕೊಲೆ ವಿರೋಧಿಸಿ ನಿನ್ನೆ(ಶುಕ್ರವಾರ) ಛತ್ರ ಜಿಲ್ಲೆಯಲ್ಲಿ ಬಂದ್ ನಡೆಸಲಾಗಿದೆ. ಪತ್ರಕರ್ತರ ತಂಡ ಅರೋಪಿಗಳ ಬಂಧನಕ್ಕೆ ಒತ್ತಾಯಿಸಿ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ. ಮಾತ್ರವಲ್ಲ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

24 ವರ್ಷಕ್ಕೆ 38, ಐದೇ ತಿಂಗಳಿಗೆ 3 ಪತ್ರಕರ್ತರ ಹತ್ಯೆ!

24 ಗಂಟೆಗಳ ಅವಧಿಯಲ್ಲಿ ನಡೆದ ಇಬ್ಬರು ಪತ್ರಕರ್ತರ ಹತ್ಯೆಗಳು ಭಾರತದಲ್ಲಿಯೂ ಹೆಚ್ಚುತ್ತಿರುವ ಪತ್ರಕರ್ತರ ಮೇಲಿನ ಹಲ್ಲೆಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಪತ್ರಕರ್ತರ ಸುರಕ್ಷತೆ ಕುರಿತು ವರದಿ ಮಾಡುವ ‘ವರ್ಲ್ಡ್ ಪ್ರೆಸ್ ಇಂಡೆಕ್ಸ್’ನಲ್ಲಿ ಭಾರತ 180 ದೇಶಗಳ ಪೈಕಿ 133ನೇ ಸ್ಥಾನದಲ್ಲಿದೆ. ಇದೇ ಪಟ್ಟಿಯಲ್ಲಿ ನೆರೆಯ ರಾಷ್ಟ್ರಗಳಾದ ನೇಪಾಳ, ಅಫ್ಘಾನಿಸ್ತಾನದಂಥ ದೇಶಗಳೇ ನಮಗಿಂತ ಉತ್ತಮ ಸ್ಥಾನದಲ್ಲಿವೆ. ಪತ್ರಕರ್ತರ ಮೇಲಿನ ಹಲ್ಲೆ, ಹತ್ಯೆಯ ಘಟನೆಗಳನ್ನು ಮೂಲವಾಗಿಟ್ಟುಕೊಂಡು ಈ ವರದಿ ತಯಾರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಶೋಚನೀಯವಾಗಿದ್ದು, ದೇಶದಲ್ಲಿ ತಿಂಗಳಿಗೆ ಕನಿಷ್ಠ ಒಂದು ದಾಳಿ ನಡೆಯುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಕಮಿಟಿ ಟು ಪ್ರೊಟೆಕ್ಟ್ ಜರನಲಿಸ್ಟ್’ ತಯಾರಿಸಿರುವ ಮತ್ತೊಂದು ವರದಿ ಪತ್ರಕರ್ತರ ಮೇಲಿನ ದಾಳಿಯ ಬಗ್ಗೆ ಇನ್ನಷ್ಟು ಒಳನೋಟಗಳನ್ನು ನೀಡುತ್ತದೆ. 1992ರಿಂದ 2016ರ ಮಧ್ಯೆ ಭಾರತದಲ್ಲಿ ಸಾವಿಗೀಡಾದ ಪತ್ರಕರ್ತರ ಸಂಖ್ಯೆ 38 ಅಂತ ವರದಿ ತಿಳಿಸುತ್ತದೆ. ಇವರಲ್ಲಿ ಶೇಕಡಾ 47 ರಾಜಕೀಯ ಮತ್ತು ಶೇಕಡಾ 37 ಭ್ರಷ್ಟಾಚಾರ ವಿರುದ್ಧ ವರದಿ ಮಾಡಿದವರು ಎಂದು ವರದಿ ವಿವರಿಸುತ್ತದೆ. ಇನ್ನು ಹತ್ಯೆಗೀಡಾದವರಲ್ಲಿ ಶೇ. 58ರಷ್ಟು ವರದಿಗಾರರು ಮತ್ತು ಶೇ. 26 ರಷ್ಟು ಕ್ಯಾಮೆರಾಮನ್ಗಳಿದ್ದಾರೆ.

Leave a comment

FOOT PRINT

Top