An unconventional News Portal.

ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲಿ ಬದಲಾವಣೆ ಅಗತ್ಯವಿಲ್ಲ: ಸುಪ್ರಿಂ ಮಹತ್ವದ ತೀರ್ಪು

ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲಿ ಬದಲಾವಣೆ ಅಗತ್ಯವಿಲ್ಲ: ಸುಪ್ರಿಂ ಮಹತ್ವದ ತೀರ್ಪು

rahul-subramaniyan-1‘ಲ್ಯಾಂಡ್ ಮಾರ್ಕ್’ ಎಂದು ಕರೆಯಬಹುದಾದ ತೀರ್ಪೊಂದನ್ನು ನೀಡಿರುವ ಸುಪ್ರಿಂ ಕೋರ್ಟ್ ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂದು ಶುಕ್ರವಾರ ತಿಳಿಸಿದೆ.

ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕಾನೂನುಗಳನ್ನು (ಐಪಿಸಿ 499, 500) ಸುಧಾರಣೆ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.

ಇದು ರಾಜಕಾರಣಿಗಳು, ಹೋರಾಟಗಾರರು ಹಾಗೂ ಪತ್ರಕರ್ತರ ಮೇಲೆ ನೇರ ಪರಿಣಾಮ ಬೀರುಲಿರುವ ತೀರ್ಪು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಐಪಿಸಿ 499 ಅಡಿಯಲ್ಲಿ ಮಾನಹಾನಿಕರ ಭಾಷಣ ಅಥವಾ ವ್ಯಕ್ತಿಗತ ಹಾನಿಯ ಉದ್ದೇಶದಿಂದ ನಡೆಸುವ ಕ್ರಿಯೆಗಳನ್ನು ಕ್ರಿಮಿನಲ್ ಮಾನನಷ್ಟ ಪ್ರಕರಣ ಎಂದು ಪರಿಗಣಿಸಲು ಕಾನೂನು ಅವಕಾಶ ನೀಡಿದೆ. ಐಪಿಸಿ 500 ಅಡಿಯಲ್ಲಿ ಇಂತಹ ಪ್ರಯತ್ನಗಳಿಗೆ ಶಿಕ್ಷೆ ವಿಧಿಸಬಹುದಾಗಿದೆ.

ರಾಹುಲ್ ಗಾಂಧಿ ಹಾಗೂ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಚುನಾವಣಾ ಪ್ರಚಾರ ಭಾಷಣಗಳ ಹಿನ್ನೆಲೆಯಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ಇಬ್ಬರೂ, ಇದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೂಲಕ ಬ್ರಿಟಿಷರ ಕಾಲದ ಈ ಕಾನೂನುಗಳಲ್ಲಿ ಸುಧಾರಣೆ ತರುವಂತೆ ಅರ್ಜಿ ಸಲ್ಲಿಸಿದ್ದರು.

ಇದೀಗ ವಿಚಾರಣೆ ನಡೆಸಿದ ನ್ಯಾಯಪೀಠ, ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂದು ಹೇಳಿದೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸದರಿ ಕಾನೂನುಗಳ ಅಡಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸಮಯದಲ್ಲಿ ನಿತಿನ್ ಗಡ್ಕರಿ ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಕೇಜ್ರಿವಾಲ್, ಕ್ರಿಮಿನಲ್ ಮಾನನಷ್ಟ ಪ್ರಕರಣಗಳನ್ನು ‘ಮನುಷ್ಯನ ತಪ್ಪು’ಗಳು ಎಂದು ಪರಿಗಣಿಸಿ, ಕಾನೂನಿನ ತೀವ್ರತೆಯನ್ನು ಕಡಿಮೆ ಮಾಡಬೇಕು ಎಂದು ಕೋರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೇಂದ್ರ ಸರಕಾರ ಕಾನೂನಿನಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿಯೇ ಪ್ರತ್ಯೇಕ ಕಾನೂನು ಇರುವುದನ್ನು ಅದು ಒತ್ತಿ ಹೇಳಿತ್ತು.

Leave a comment

FOOT PRINT

Top