An unconventional News Portal.

ತುಂಬಾ ‘ಒತ್ತಡ’ ಅನ್ನಿಸುತ್ತಿದೆಯಾ? ಹೊಸ ಸಂಶೋಧನೆಗಳು ಮುಂದಿಟ್ಟಿವೆ ಸರಳ ಪರಿಹಾರ!

ತುಂಬಾ ‘ಒತ್ತಡ’ ಅನ್ನಿಸುತ್ತಿದೆಯಾ? ಹೊಸ ಸಂಶೋಧನೆಗಳು ಮುಂದಿಟ್ಟಿವೆ ಸರಳ ಪರಿಹಾರ!

ಅದೊಂದು ಸಮಸ್ಯೆಯನ್ನು ನಾವೇ ಸೃಷ್ಟಿಸಿಕೊಂಡಿರುತ್ತೇವೆ. ಅದು ಹೇಗೆ ಹುಟ್ಟಿಕೊಂಡಿತು, ಹೇಗೆ ಬೆಳೆಯಿತು ಎಂದು ಯೋಚಿಸುವ ಮುನ್ನವೇ ಬಹಿರಂಗಗೊಂಡು ಭಾರಿ ಇರುಸುಮುರುಸು ಉಂಟು ಮಾಡಲು ಶುರು ಮಾಡಲಾರಂಭಿಸಿರುತ್ತದೆ. ಈ ಸಮಯದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋಗಿ, ಸುತ್ತಮುತ್ತಲಿನ ಇಡೀ ವಾತಾವರಣವೇ ನಮಗೆ ವಿರುದ್ಧವಾಗಿ ಇರುವಂತೆ ಅನ್ನಿಸಲು ಶುರುವಾಗುತ್ತದೆ.

ನಮ್ಮವರು ಅಂತ ಯಾರೂ ಇಲ್ಲ, ನಮ್ಮದೂ ಅಂತ ಯಾವುದೂ ಇಲ್ಲ. ಇಷ್ಟು ದಿನಗಳ ಬದುಕೇ ವ್ಯರ್ಥ ಅಂತೆಲ್ಲಾ ಮನಸ್ಸು ತನ್ನದೇ ಯೋಚನೆಗಳ ಸುಳಿಯಲ್ಲಿ ಸಿಲುಕಿ ಗಿರಕಿ ಹೊಡೆಯ ತೊಡಗುತ್ತದೆ. ಇವತ್ತೊಂದು ರಾತ್ರಿ ಕಳೆದು ನಾಳೆ ಹೊಸ ಮುಂಜಾನೆಯಲ್ಲಿ ಮತ್ತೆ ಇದೇ ಮುಖವನ್ನು ತೆಗೆದುಕೊಂಡು ಗೊತ್ತಿರುವವರ ಮುಂದೆ ಬರೋದಾದರೂ ಹೇಗೆ ಎಂಬ ಪ್ರಶ್ನೆಗಳು ಸುರಳಿ ಸುರಳಿಯಾಗಿ, ಕೊನೆಗೆ ಸಿಕ್ಕು ಸಿಕ್ಕಾಗಿ, ಬಿಡಿಲಾಗರ ಗಂಟಾಗಿ ಪರಿವರ್ತನೆಗೊಂಡು ಮನಸ್ಸಿನ ಲಯವನ್ನು ಕೆಡಿಸಿ ಬಿಟ್ಟಿರುತ್ತವೆ.

mental-health-1

ಈ ಸಮಯದಲ್ಲಿ ಅದೊಂದು ಫೋನ್ ಕರೆ ಬರುತ್ತದೆ. ನೀವು ನಿಮ್ಮ ಮನಸ್ಥಿತಿಯನ್ನು ಹೇಳಿಕೊಂಡು ಬಿಡುತ್ತೀರಿ. ತಾಳ್ಮೆಯಿಂದ ಕೇಳಿಸಿಕೊಂಡ ಆ ಕಡೆಯ ಮನಸ್ಸೊಂದು ಕೊನೆಯಲ್ಲಿ, “ಲೆಟ್ ಇಟ್ ಬಿ…ಬಿಟ್ಟಾಕು. ಇದೆಲ್ಲಾ ಜೀವನದಲ್ಲಿ ಚಿಕ್ಕ ವಿಚಾರಗಳು. ಇದನ್ನು ಮೀರಿದ್ದು ಇನ್ನೂ ಏನೇನೋ ಬರುತ್ತವೆ. ಜೀವನದ ತಿರುವುಗಳೇ ಹೀಗಿರುತ್ತವೆ. ಇದನ್ನು ದಾಟುವುದೇ ಬದುಕು,” ಎನ್ನುತ್ತದೆ. ಅಷ್ಟೆ…

ಆಗ ಮನಸ್ಸಿನಲ್ಲಿ ಸಮಾಧಾನ ಮೊಳಕೆಯೊಡೆಯುತ್ತದೆ. ಎದುರಿಗಿರುವ ಕಾರ್ಮೋಡಗಳು ಒಂದೇ ಏಟಿಗೆ ಕರಗಿ ಹೋದಂತಾಗುವ ಅನುಭವವನ್ನು ಆಗುತ್ತದೆ. ಕೆಲವು ಕ್ಷಣಗಳ ಮುಂಚೆ, ಯಾವುದನ್ನು ಬದುಕಿನ ಅತೀ ದೊಡ್ಡ ಕಂದಕ ಎಂದು ಕೊಂಡುರುತ್ತೀವೋ, ಅದನ್ನು ಅರಾಮಾಗಿ ದಾಟಿ ಮುಂದೆ ಬಂದು ಬಿಟ್ಟಿರುತ್ತೇವೆ. ಹಾಗೆ ಸಮಾಧಾನ ಹೇಳುವವರು ಮನಃಶಾಸ್ತ್ರಜ್ಞರೇ ಆಗಬೇಕು ಅಂತಿಲ್ಲ. ತತ್ವಜ್ಞಾನಿಗಳೇ ಆಗಬೇಕು ಅಂತಿಲ್ಲ.

ಇತ್ತೀಚಿನ ಹೊಸ ಸಂಶೋಧನೆಗಳು ನಮ್ಮ ಸಾಮಾನ್ಯ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸುತ್ತಮುತ್ತಲಿನ ಸಂಬಂಧಗಳೇ ಸಾಕಾಗುತ್ತವೆ ಎಂದು ಹೇಳುತ್ತಿವೆ. ಜೀವನದ ಸಂಕಷ್ಟಗಳ ತಿರುವುಗಳಲ್ಲಿ ಆಪ್ತರು ನೀಡುವ ಸಾಂತ್ವಾನ, ಸಮಾಧಾನ, ಸ್ಫೂರ್ತಿಯ ಮಾತುಗಳೇ ಔಷಧಿಗಳಂತೆ ಕೆಲಸ ಮಾಡುತ್ತವೆ ಎನ್ನುತ್ತಿವೆ. ಹೀಗಾಗಿ, ನಮ್ಮ ಸುತ್ತಲಿನ ಸಂಬಂಧಗಳ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದು ಮುಖ್ಯ.

ಆಧುನಿಕ ಜೀವನ ಶೈಲಿಗಳಿಂದಾಗಿ ಒತ್ತಡದ ಬದುಕು ಈಗ ಸಾಮಾನ್ಯ ಎಂಬಂತಾಗಿದೆ. ಆದರೆ ಜನರ ಮಾನಸಿಕ ಚಿಕಿತ್ಸೆಯ ಬೇಡಿಕೆಯನ್ನು ಪೂರೈಸುವಷ್ಟು ಮಃನಶಾಸ್ತ್ರಜ್ಞರ ಸಂಖ್ಯೆ ಇಲ್ಲ. ಹೀಗಾಗಿ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಇಂತಹ ಸರಳ ಸೂತ್ರಗಳನ್ನು ಸೈಕಾಲಜಿ ಕ್ಷೇತ್ರ ಮುಂದಿಡುತ್ತಿದೆ.

ಕೊಂಚ ಸೂಕ್ಷ್ಮವಾಗಿದ್ದರೆ ನಾವು ಇನ್ನೊಬ್ಬರ ಒತ್ತಡಗಳನ್ನು ನಿವಾರಿಸುವ ವಾಹಕರಾಗಿ ಕೆಲಸ ಮಾಡಬಹುದು. ಅಥವಾ ನಾವು ಅಂತಹ ಒತ್ತಡ ಸ್ಥಿತಿಯಲ್ಲಿರುವಾಗ ನಮ್ಮ ಸುತ್ತಲಿನ ಯಾರಾದರೂ ಸಮಾಧಾನ ನೀಡಬಹುದು. ಇದೊಂತರ ಕೊಡು ಕೊಳ್ಳುವಿಕೆಯ ಪ್ರಕ್ರಿಯೆ. ಅಂತಿಮವಾಗಿ ಮನಸ್ಸುಗಳು ಸೃಷ್ಟಿಸುವ ಮಾಯೆ.

Leave a comment

FOOT PRINT

Top