An unconventional News Portal.

ಕನ್ನಡದ ವಾಹಿನಿಗಳಲ್ಲಿ ವಲಸೆ, ಸ್ಥಾನ ಪಲ್ಲಟ: ಜನಶ್ರೀ ಕಾಯಕಲ್ಪದ ವಿಚಾರದಲ್ಲಿ ರೆಡ್ಡಿ ನಿಲುವು ಸ್ಪಷ್ಟ!

ಕನ್ನಡದ ವಾಹಿನಿಗಳಲ್ಲಿ ವಲಸೆ, ಸ್ಥಾನ ಪಲ್ಲಟ: ಜನಶ್ರೀ ಕಾಯಕಲ್ಪದ ವಿಚಾರದಲ್ಲಿ ರೆಡ್ಡಿ ನಿಲುವು ಸ್ಪಷ್ಟ!

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ತಯಾರಿಯ ಭಾಗವಾಗಿ, ರಾಜ್ಯದ ಮಾಧ್ಯಮಗಳಲ್ಲಿ ಮತ್ತೊಂದು ಸುತ್ತಿನ ವಲಸೆ, ಪಲ್ಲಟಗಳು ನಡೆಯಲಿವೆ.

ಇದಕ್ಕೆ ಕಾರಣ, ತಮ್ಮ ಜನಶ್ರೀ ಸುದ್ದಿವಾಹಿನಿಗೆ ಹೊಸತಾಗಿ ಕಾಯಕಲ್ಪ ನೀಡಲು ಗಣಿಧಣಿ ಜನಾರ್ಧನ ರೆಡ್ಡಿ ತೆಗೆದುಕೊಂಡಿರುವ ತೀರ್ಮಾನ. ಇದನ್ನು ಅವರ ಕುಟುಂಬದ ಮೂಲಗಳು ‘ಸಮಾಚಾರ’ಕ್ಕೆ ಖಚಿತಪಡಿಸಿವೆ.

“ಸದ್ಯ ಜನಶ್ರೀ ಟಿವಿಯನ್ನು ಮತ್ತೆ ಒಂದು ಹಂತಕ್ಕೆ ತೆಗೆದುಕೊಂಡು ಬರಲು ಯೋಚಿಸಿದ್ದೇವೆ. ಇದಕ್ಕಾಗಿ ಈಗಾಗಲೇ ನಾಲ್ವರು ಹೂಡಿಕೆದಾರರು ಮುಂದೆ ಬಂದಿದ್ದಾರೆ. ಚಾನಲ್ಗೆ ಒಂದು ಮಟ್ಟಿನ ಕಾಯಕಲ್ಪ ಸಿಕ್ಕ ನಂತರ ನಾವೇ ಅದನ್ನು ಮುನ್ನಡೆಸಲಿದ್ದೇವೆ,” ಎಂದು ಜನಾರ್ಧನ ರೆಡ್ಡಿ ತಮ್ಮ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಮುಂಬರುವ ಚುನಾವಣೆ ಭಾಗವಾಗಿ ನಡೆಯುತ್ತಿರುವ, ಜನಶ್ರೀಗೆ ಕಾಯಕಲ್ಪ ನೀಡುವ ತಯಾರಿಯ ಸುತ್ತ ಎದ್ದಿರುವ ಗಾಳಿಸುದ್ದಿಯನ್ನು ‘ಸಮಾಚಾರ’ ಅವರ ಮುಂದಿಟ್ಟಾಗ ಸಿಕ್ಕ ಉತ್ತರವಿದು. “ಜನಶ್ರೀ ಬಿಟ್ಟೂ ನಮ್ಮ ಬಳಿ ಒಟ್ಟು 6 ಚಾನಲ್ಗಳಿಗೆ ಪರವಾನಿಗೆ ಇದೆ. ಮುಂದಿನ ದಿನಗಳಲ್ಲಿ ಸಿನಿಮಾ, ಭಕ್ತಿ, ಇನ್ಫೊಟೈನ್ಮೆಂಟ್ ಚಾನಲ್ ಹೀಗೆ ಹೊಸ ವಾಹಿನಿಗಳನ್ನು ತರುವ ಯೋಜನೆ ಇದೆ,” ಎಂದವರು ಹೇಳಿದರು.

ವಲಸೆ ಶುರುವಾಯ್ತು:

ಕೆಲವು ದಿನಗಳ ಹಿಂದೆ ಹಿರಿಯ ಪತ್ರಕರ್ತ ಅನಂತ್ ಚಿನಿವಾರ್ ಜನಶ್ರೀ ಬಳಗವನ್ನು ಸೇರಿಕೊಂಡಿದ್ದ ಸುದ್ದಿಯನ್ನು ‘ಸಮಾಚಾರ’ ಪ್ರಕಟಿಸಿತ್ತು. ನಂತರ, ಸ್ವತಃ ಚಿನಿವಾರ್ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಸ್ಪಷ್ಟಪಡಿಸಿದ್ದರು. ಚಿನಿವಾರ್ ಜನಶ್ರೀಗೆ ಸಂಪಾದಕ ಸಲಹೆಗಾರರಾಗಿ ಸೇರಿಕೊಳ್ಳುತ್ತಿದ್ದಂತೆ (ಅವರು ಹೇಳಿದ ಪ್ರಕಾರ ಇದು 2 ತಿಂಗಳ ಅವಧಿಗೆ ಮಾತ್ರ!) ಸುದ್ದಿ ವಾಹಿನಗಳಿಂದ ವಲಸೆ ಪ್ರಕ್ರಿಯೆ ಮತ್ತೆ ಶುರುವಾಗಿದೆ.

ಇತ್ತೀಚೆಗಷ್ಟೇ ‘ಈಟಿವಿ ನ್ಯೂಸ್ ಕನ್ನಡ’ದ ಅಸೋಸಿಯೇಟ್ ಎಡಿಟರ್ ಆಗಿ ಹೊಣೆಗಾರಿಕೆ ವಹಿಸಿಕೊಂಡಿದ್ದ ಬಾಲಕೃಷ್ಣ ಉಗೆಲ್ಬೆಟ್ಟು ಏಕಾಏಕಿ ಜನಶ್ರೀ ಸಂಪಾದಕರಾಗಿ ಸೇರಿಕೊಂಡಿದ್ದಾರೆ. ಕಳೆದ ವಾರ ಜನಶ್ರೀ ಸಿಬ್ಬಂದಿಯನ್ನು ಅವರು ಭೇಟಿ ಮಾಡಿದ್ದಾರೆ. ‘ಈಟಿವಿ’ಯಿಂದ ಅಧಿಕೃತವಾಗಿ ಬಿಡುಗಡೆ ಹೊಂದಿದ ನಂತರ ಜನಶ್ರೀಗೆ ಬರುವುದಾಗಿ ತಿಳಿಸಿದ್ದಾರೆ.

‘ಸುವರ್ಣ’ ವಾಹಿನಿಯಲ್ಲಿದ್ದ ಸ್ವಾಮಿ ಮುತ್ತೂರ್ ಕಾರ್ಯಕ್ರಮದ ವಿಭಾಗದ ಮುಖ್ಯಸ್ಥರಾಗಿ ಬಂದಿದ್ದಾರೆ. ಜನಶ್ರೀ ಚಾನಲ್ ಕಚೇರಿಯಲ್ಲಿ ಓಡಾಡುತ್ತಿರುವ ಅವರಿನ್ನೂ ಅಧಿಕೃತವಾಗಿ ಚಾರ್ಜ್ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. “ಇವು ಕೆಲವು ಆರಂಭದ ಹೆಸರುಗಳಷ್ಟೆ. ಮುಂದಿನ ದಿನಗಳಲ್ಲಿ ಜನಶ್ರೀಯ ಹಳೆಯ ತಂಡದಲ್ಲಿದ್ದವರು ಮತ್ತೆ ವಾಪಾಸಾಗಲಿದ್ದಾರೆ. ಸದ್ಯ ಎಲ್ಲರಿಗೂ ಆಹ್ವಾನ ನೀಡಲಾಗಿದ್ದು, ಇನ್ನೂ ಯಾರೆಲ್ಲಾ ಮರಳಿ ಮನೆಗೆ ಬರುತ್ತಾರೆ ಎಂದು ಈಗಲೇ ಹೇಳುವುದು ಕಷ್ಟ,” ಎಂದು ಜನಶ್ರೀಯ ಆಡಳಿತ ಮಂಡಳಿ ಮೂಲಗಳು ಹೇಳುತ್ತಿವೆ.

ಒಂದು ಹಂತದಲ್ಲಿ ಜನಶ್ರೀ ಮುಗಿದೇ ಹೋಯಿತು ಎಂಬ ಸ್ಥಿತಿಗೆ ಬಂದು ನಿಂತಿತ್ತು. ಜನಾರ್ಧನ ರೆಡ್ಡಿ ಜೈಲು ಪಾಲಾಗುವ ಮೂಲಕ ವಾಹಿನಿ ಅವಸಾನದ ಹಾದಿಯಲ್ಲಿ ಸಾಗಿತ್ತು. ಇದಕ್ಕೆ ರೆಡ್ಡಿ ಕುಟುಂಬದ ನಂಬಿಕಸ್ಥರನ್ನು ನಂಬಿ ಆಡಳಿತ ಮಂಡಳಿಯಲ್ಲಿ ಇಟ್ಟಿದ್ದೂ ಕಾರಣ ಎನ್ನಲಾಗಿತ್ತು. ಹೀಗಾಗಿ, ಈ ಬಾರಿ ಹೂಡಿಕೆದಾರರು ಎಂಬ ಹಿಂಬಾಗಿಲ ಮೂಲಕ ಜನಾರ್ಧನ ರೆಡ್ಡಿ ಮತ್ತೆ ವಾಹಿನಿಗೆ ಮರುಹುಟ್ಟು ಕೊಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇವೆಲ್ಲಾ ಬೆಳವಣಿಗೆಳು ಏನೇ ಇರಲಿ, ಕನ್ನಡ ಸುದ್ದಿವಾಹಿನಿಗಳಲ್ಲಿ ಮಂದಿನ ಒಂದಷ್ಟು ದಿನಗಳು ಸ್ಥಾನ ಪಲ್ಲಟಗಳು, ವಲಸೆಗಳಿಗೆ ಸಾಕ್ಷಿಯಾಗಲಿವೆ. ಇದರ ಪರಿಣಾಮ ಈಗ ಇರುವ ವಾಹಿನಿಗಳಿಗೂ, ಇನ್ನೂ ಆರಂಭವಾಗಬೇಕಿರುವ ವಾಹಿನಿಗಳೂ ತಟ್ಟಲಿದೆ ಎಂಬುದು ಸದ್ಯದ ‘ಸುದ್ದಿ’!

Leave a comment

FOOT PRINT

Top