An unconventional News Portal.

ಯಾರು ಈ ರಾಜಲಕ್ಷ್ಮಿ? ಡಿಜಿಪಿ ಜತೆ ಆಕೆಗಿದ್ದ ಸಂಬಂಧವೇನು?

ಯಾರು ಈ ರಾಜಲಕ್ಷ್ಮಿ? ಡಿಜಿಪಿ ಜತೆ ಆಕೆಗಿದ್ದ ಸಂಬಂಧವೇನು?

DGP-FORWARD_MSGಡಿಜಿಪಿ ಪುತ್ರನ ವಿರುದ್ಧ ಕಿರುಕುಳ ಆರೋಪದ ಮೇಲೆ ದೂರು ನೀಡಲು ಬಂದ ರಾಜಲಕ್ಷ್ಮಿಗೂ ಡಿಜಿಪಿ ಓಂಪ್ರಕಾಶ್ ಅವರಿಗೂ ಹಿಂದೆಯೇ ಪರಿಚಯವಿತ್ತು ಎಂಬುದಕ್ಕೆ ದಾಖಲೆಯೊಂದು ಇದೀಗ ಲಭ್ಯವಾಗಿದೆ.

‘ಸಮಾಚಾರ’ಕ್ಕೆ ಸಿಕ್ಕಿರುವ ಮೊಬೈಲ್ ಮೆಸೇಜ್ ಒಂದು ಇದನ್ನು ಸಾಭೀತು ಪಡಿಸುತ್ತಿದೆ. 2015ರ ಡಿಸೆಂಬರ್ 7ರಂದು ಡಿಜಿಪಿ ಅವರ ಮೊಬೈಲ್ ನಂಬರ್ನಿಂದ, ರಾಜಲಕ್ಷ್ಮಿ ಕುಟುಂಬದ ಸದಸ್ಯರೊಬ್ಬರಿಗೆ ಫಾರ್ವರ್ಡ್ ಮಾಡಿರುವ ಮೆಸೇಜ್ ಇದು. ಇದನ್ನು ರಾಜಲಕ್ಷ್ಮಿ ಡಿಜಿಪಿ ಓಂಪ್ರಕಾಶ್ ಅವರಿಗೆ ಕಳುಹಿಸಿದ್ದರು ಎಂಬುದನ್ನು ಮೂಲಗಳು ಸ್ಪಷ್ಟಪಡಿಸಿವೆ.

‘ಯಾರತ್ರ ಏನು ಹೇಳಿದರೂ ಅಷ್ಟೆ, ನಿನ್ನ ನಿನ್ನ ಮಗನ್ನ ಬಿಡಲ್ಲ. ಮೋಸ ಮಾಡಿದ್ಯಾ, ಹೊರಗೆ ತಂದೆ ತರ್ತೀನಿ. ಕಾನೂನು ಎಲ್ಲರಿಗೂ ಒಂದೇ ಮಿ. ಓಂಪ್ರಕಾಶ್. ಇನ್ನು ಮುಂದೆ ನೋಡಿ..’ ಎಂದು ರಾಜಲಕ್ಷ್ಮಿ ಓಂಪ್ರಕಾಶ್ ಅವರಿಗೆ ಮೆಸೇಜ್ ಕಳುಹಿಸಿದ್ದಳು.

ಇದನ್ನು ಆಕೆಯ ಕುಟುಂಬದ ಸದಸ್ಯರೊಬ್ಬರಿಗೆ ಸ್ವತ ಓಂಪ್ರಕಾಶ್ ಫಾರ್ವರ್ಡ್ ಮಾಡಿ, “ಆಕೆಗೆ ಸ್ವಲ್ಪ ಬುದ್ದಿ ಹೇಳಿ. ನಾನೀಗ ಗೌರವಯುತ ಹುದ್ದೆಯಲ್ಲಿದ್ದೀನಿ,” ಎಂದು ವಿನಂತಿಸಿಕೊಂಡಿದ್ದರು ಎಂಬುದು ಸದ್ಯಕ್ಕೆ ಸಿಗುತ್ತಿರುವ ಮಾಹಿತಿ.

ಒಂದು ವೇಳೆ, ಇದು ರಾಜಲಕ್ಷ್ಮಿ ಕಡೆಯಿಂದ ಧಮಕಿಯೇ ಆಗಿದ್ದರೆ, ಸ್ವತಃ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಓಂಪ್ರಕಾಶ್ ಯಾಕೆ ದೂರು ನೀಡಲಿಲ್ಲ? ಕಾನೂನು ಅಡಿಯಲ್ಲಿ ಕ್ರಮಕ್ಕೆ ಯಾಕೆ ಮುಂದಾಗಲಿಲ್ಲ? ಎಂಬ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ.

ಮೂಲಗಳ ಪ್ರಕಾರ, “ಕಳೆದ ಮೂರು ವರ್ಷಗಳಿಂದ ಓಂಪ್ರಕಾಶ್ ಕೇವಲ ರಾಜಲಕ್ಷ್ಮಿ ಮಾತ್ರವಲ್ಲ, ಆಕೆಯ ಕುಟುಂಬ ಸದಸ್ಯರ ಜತೆಗೂ ಸಂಪರ್ಕದಲ್ಲಿದ್ದರು. ಕಳೆದ ವರ್ಷ ರಾಜಲಕ್ಷ್ಮಿ ಹಾಗೂ ಅವರ ನಡುವೆ ಘರ್ಷಣೆ ಶುರುವಾದ ಸಮಯದಲ್ಲಿ ಡಿಜಿಪಿ ಪುತ್ರ ಕಾರ್ತಿಕೇಶ ಮಧ್ಯ ಪ್ರವೇಶಿಸಿದ್ದಾರೆ. ನಂತರ ಇಬ್ಬರ ನಡುವಿನ ಕದನ ಇನ್ನಷ್ಟು ತೀವ್ರವಾಗಿದೆ,” ಎನ್ನಲಾಗುತ್ತಿದೆ.

ಯಾರು ಈಕೆ?: 

“ರಾಜಲಕ್ಷ್ಮಿ ಓದಿದ್ದು ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ. ಪತ್ರಕರ್ತೆ ಆಗಬೇಕು ಎಂಬ ಕನಸಿತ್ತು. ಆದರೆ ನಾವೇ ಆಕೆಯನ್ನು ಒತ್ತಾಯ ಮಾಡಿ ಮದುವೆ ಮಾಡಿದೆವು. ಆತ ಈಕೆಗೆ ಮೋಸ ಮಾಡಿದ. ಹೀಗಾಗಿ ಮದುವೆ ಸಂಬಂಧದಿಂದ ಹೊರ ಬರ ಬೇಕಾಯಿತು. ಆಕೆ ವಿಚಿತ್ರ ಹುಡುಗಿ. ಬೀದಿಯಲ್ಲಿ ಭಿಕ್ಷುಕರು ಕಂಡರೆ ಕೈಲಿದ್ದ ದುಡ್ಡನ್ನು ಕೊಟ್ಟು ಬರುತ್ತಿದ್ದಳು. ಸ್ವಲ್ಪ ಮುಂಗೋಪಿ ಅನ್ನೋದು ಬಿಟ್ಟರೆ, ಸರಿ ಯಾವುದು ತಪ್ಪು ಯಾವುದು ಎಂಬುದನ್ನು ಮೀರಿ ಮನುಷ್ಯರನ್ನು ನಂಬುತ್ತಿದ್ದಳು,” ಎನ್ನುತ್ತಾರೆ ಆಕೆಯ ಕುಟುಂಬದ ಸದಸ್ಯರು.

ವ್ಯವಸ್ಥಿತ ಅಪಪ್ರಚಾರ:

ರಾಜಲಕ್ಷ್ಮಿ ಬೀದಿಗೆ ಬರುತ್ತಿದ್ದಂತೆ ಆಕೆಯ ಚಾರಿತ್ರ್ಯವಧೆಯ ಪ್ರಕ್ರಿಯೆಗಳಿಗೂ ಜೀವ ನೀಡಲಾಗಿದೆ. “ಆಕೆಗೆ ಅನೇಕರ ಜತೆ ಸಂಬಂಧಗಳಿದ್ದವು. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಗಾಂಧಿನಗರದಲ್ಲಿ ಎಲ್ಲಿರಿಗೂ ಈಕೆ ಗೊತ್ತು,” ಎಂಬ ಆಧಾರಗಳಿಲ್ಲದ ಗಾಳಿಸುದ್ದಿಗಳು ಹರಿದಾಡುತ್ತಿವೆ.

ಆದರೆ, ಇಂತಹ ಗಾಳಿಮಾತುಗಳನ್ನು ಬದಿಗಿಟ್ಟು ನೋಡಿದರೆ, ಒಂಟಿ ಹೆಣ್ಣು ಇವತ್ತು ಎದುರು ಹಾಕಿಕೊಂಡಿರುವುದು ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನು. ಅಧಿಕಾರ ಸ್ತರದ ಎತ್ತರದಲ್ಲಿರುವವರು ಈಗಾಗಲೇ ಆಕೆಯ ಮೇಲೆ ‘ಬಹ್ಮಾಸ್ತ್ರ’ ಪ್ರಯೋಗಿಸಿದ್ದಾರೆ. ಆಕೆಯೂ ಹೋರಾಟದ ಹಾದಿ ಹಿಡಿಯುವ ಸ್ಪಷ್ಟ ಸೂಚನೆ ನೀಡಿದ್ದಾಳೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಾದಾಗ ಅಕ್ಕಪಕ್ಕ ಕಾಣಿಸುವ ಮಹಿಳಾ ಮುಖಂಡರು, ಹೋರಾಟಗಾರರು ಇಲ್ಲಿ ಕಾಣಿಸುತ್ತಿಲ್ಲ ಎಂಬುದನ್ನು ಗಮನಿಸಬೇಕಿದೆ.

ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Leave a comment

FOOT PRINT

Top